ಉತ್ತಮ ಹಾಗೂ ಆರೋಗ್ಯಕರ ವಿಶ್ವಕ್ಕಾಗಿ ಒಗ್ಗೂಡೋಣ

ಉತ್ತಮ ಹಾಗೂ ಆರೋಗ್ಯಕರ ವಿಶ್ವಕ್ಕಾಗಿ ಒಗ್ಗೂಡೋಣ

‘ಆರೋಗ್ಯವೇ ಭಾಗ್ಯ’ ಎನ್ನುವ ಮಾತೊಂದಿದೆ. ಇದು ನೂರು ಶೇಕಡಾ ಸತ್ಯ ವಿಷಯ. ನಮ್ಮಲ್ಲಿ ಆರೋಗ್ಯ ಇರುವಾಗ ನಾವು ಹಣ, ಆಸ್ತಿಯ ಹಿಂದೆ ಓಡುತ್ತೇವೆ. ಯಾವಾಗ ನಮ್ಮ ಬಳಿ ಸಕಲ ಸಂಪತ್ತು ಇರುತ್ತದೆಯೋ ಆಗ ನಮ್ಮ ಶರೀರ ರೋಗಗಳ ಗೂಡಾಗಿರುತ್ತದೆ. ನಾವು ಆರೋಗ್ಯವನ್ನೂ ಲೆಕ್ಕಿಸದೇ ದುಡಿದ ಹಣ ನಮ್ಮ ಆರೋಗ್ಯವನ್ನು ಖರೀದಿಸಲಾರದು. ಹೆಚ್ಚೆಂದರೆ ನಮ್ಮ ಮರಣವನ್ನು ಸ್ವಲ್ಪ ದಿನ ಮುಂದೂಡಬಹುದು ಅಷ್ಟೇ. ಹಣವಿದ್ದವರೆಲ್ಲಾ ಆರೋಗ್ಯವಂತರು ಆಗಿದ್ದರೆ ಮತ್ತು ಹಣದಿಂದ ಆರೋಗ್ಯ ಖರೀದಿಸುವಂತೆ ಆಗಿರುತ್ತಿದ್ದರೆ ಯಾವ ಶ್ರೀಮಂತನೂ ರೋಗ ರುಜಿನದಿಂದ ಬಳಲುತ್ತಿರಲಿಲ್ಲ. ನೀವು ಸಮಾಜದಲ್ಲಿ ಗಮನಿಸಿದರೆ ಅತ್ಯಂತ ಅಧಿಕ ಶ್ರೀಮಂತನೇ ಅತ್ಯಂತ ದೊಡ್ದ ರೋಗಿ ಆಗಿರುತ್ತಾನೆ. ಭೀಕರ ರೋಗಗಳು ನಮ್ಮನ್ನು ಮುತ್ತಿದಾಗ ನಮ್ಮ ಹಣ ಆ ರೋಗದಿಂದ ನಮಗೆ ಮುಕ್ತಿ ದೊರಕಿಸಿಕೊಡಲಾರದು ಎಂದು ಅರಿವಾದಾಗ ತುಂಬಾನೇ ತಡವಾಗಿರುತ್ತದೆ. ನಾವೇನೇ ದುಡಿದರೂ ಸಾಯುವಾಗ ಅದನ್ನು ಇಲ್ಲೇ ಬಿಟ್ಟು ಹೋಗಬೇಕು. ಈ ಸತ್ಯ ನೆನಪಿನಲ್ಲಿ ಇಟ್ಟುಕೊಂಡರೆ ನೀವು ಧನ-ಕನಕಗಳ ಹಿಂದೆ ಓಡುವುದಿಲ್ಲ.

ಎಪ್ರಿಲ್ ೭ ವಿಶ್ವ ಆರೋಗ್ಯ ದಿನ. ನಿಜಕ್ಕೂ ನಮಗೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ, ಕಳಕಳಿ ಇದ್ದಿದ್ದರೆ ಈ ದಿನದ ಆಚರಣೆಯ ಅಗತ್ಯವಿತ್ತೇ? ಎಂದು ಅನಿಸುವುದು. ಆದರೂ ಕೆಲವೊಂದು ರೋಗಗಳು ನಮ್ಮನ್ನು ಕೇಳದೇ ಬಂದು ಬಿಡುತ್ತವೆ. ಆರೋಗ್ಯದ ಬಗ್ಗೆ ಎಷ್ಟೇ ಜಾಗ್ರತೆ ತೆಗೆದುಕೊಳ್ಳುವವನಿಗೂ ಅನಾರೋಗ್ಯ ಕಾಡಬಹುದು, ಮಾರಣಾಂತಿಕ ಕಾಯಿಲೆ ಬರಬಹುದು. ಆ ನಿಟ್ಟಿನಲ್ಲಿ ಆರೋಗ್ಯ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು (WHO) ಪ್ರತೀ ವರ್ಷ ಎಪ್ರಿಲ್ ೭ರಂದು ‘ವಿಶ್ವ ಆರೋಗ್ಯ ದಿನ' ಎಂದು ಆಚರಿಸುತ್ತದೆ. ಈ ದಿನದಂದು ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಯಾವೆಲ್ಲಾ ಕಾರಣಗಳಿಂದ ನಮ್ಮ ಆರೋಗ್ಯ ಕೆಡುತ್ತದೆ ಮತ್ತು ಅವುಗಳಿಂದ ರಕ್ಷಿಸಿಕೊಳ್ಳಲು ನಾವು ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಪ್ರಚಾರ ಮಾಡುತ್ತದೆ.

ಕಳೆದ ವರ್ಷದಿಂದ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಕೆಲವೊಮ್ಮೆ ಕೊರೋನಾ ಕಮ್ಮಿ ಆದಂತೆ ಕಂಡರೂ ಮತ್ತೆ ಎರಡನೇ, ಮೂರನೇ ಅಲೆಗಳ ರೂಪದಲ್ಲಿ ಮರಳಿ ಬರುತ್ತಿದೆ. ಜನರ ಸಹಜ ಜೀವನ ಹಾಗೂ ಅರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಈ ಎಲ್ಲಾ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಪ್ರಸ್ತುತ ಕಾಲಮಾನದಲ್ಲಿ ಆರೋಗ್ಯ ದಿನದ ಮಹತ್ವ ಅರಿವಾಗುತ್ತದೆ. ನಮ್ಮ ಪರಿಸರದಲ್ಲಿ ನೈರ್ಮಲ್ಯತೆ, ನಾವು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಸ್ವಚ್ಚತಾ ಕಾರ್ಯಕ್ರಮಗಳು, ನೀರಿನ ಸಂರಕ್ಷಣೆ, ಅರಣ್ಯ ರಕ್ಷಣೆ ಮತ್ತು ಸೂಕ್ತ ಕಾಲಕ್ಕೆ ನಾವು ತೆಗೆದುಕೊಳ್ಳಬೇಕಾದ ಔಷಧ ಹಾಗೂ ಮುನ್ನೆಚ್ಚರಿಕೆಗಳು ಇವು ಈಗಿನ ಸಮಯಕ್ಕೆ ಅತ್ಯಂತ ಅವಶ್ಯಕವಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯು ಬಹಳ ಹಿಂದೆ ಅಂದರೆ ೧೯೫೦ರಂದೇ ಎಪ್ರಿಲ್ ೭ನ್ನು ವಿಶ್ವ ಆರೋಗ್ಯ ದಿನ ಎಂದು ಘೋಷಣೆ ಮಾಡಿತ್ತು. ಆ ಸಮಯದಲ್ಲಿ ಬಹಳಷ್ಟು ಮಾರಣಾಂತಿಕ ಕಾಯಿಲೆಗಳು ವಿಶ್ವವನ್ನು ಕಂಗೆಡಿಸಿದ್ದವು. ಈಗಿನಂತೆ ಸೂಕ್ತ ಔಷಧೋಪಚಾರಗಳು, ಲಸಿಕೆಗಳು ಲಭ್ಯವಿರಲಿಲ್ಲ. ಆ ಕಾರಣದಿಂದ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿತ್ತು. ಪ್ರತೀ ವರ್ಷ ಆರೋಗ್ಯ ಸಂಸ್ಥೆ ಒಂದು ಧ್ಯೇಯ ವಾಕ್ಯವನ್ನು ನೀಡುತ್ತದೆ. ಈ ವರ್ಷದ ಧ್ಯೇಯ ವಾಕ್ಯ ‘ಉತ್ತಮ ಮತ್ತು ಆರೋಗ್ಯಕರ ಜಗತ್ತಿಗಾಗಿ ಒಗ್ಗೂಡೋಣ' ಎಂಬುದಾಗಿದೆ. ಈಗಿನ ಕೋವಿಡ್ ಕಾಲದಲ್ಲಿ ಈ ವಾಕ್ಯ ಅತ್ಯಂತ ಸೂಕ್ತವೂ ಹಾಗೂ ಸಮಂಜಸವೂ ಆಗಿದೆ.

ನಮ್ಮಲ್ಲಿ ಈಗ ಅತ್ಯಂತ ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳು, ಅತ್ಯುತ್ತಮ ವೈದ್ಯರು, ಆಧುನಿಕ ತಂತ್ರಜ್ಞಾನ ಎಲ್ಲವೂ ಇದೆ. ಆದರೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಈ ಆರೋಗ್ಯ ಸೇವೆಗಳು ತಲುಪುತ್ತಿವೆಯಾ? ಅವನ ಆರ್ಥಿಕ ಪರಿಸ್ಥಿತಿಗೆ ಸರಿಯಾಗಿ ನಮ್ಮ ವೈದ್ಯಕೀಯ ವ್ಯವಸ್ಥೆ ಆತನಿಗೆ ದೊರಕುತ್ತಿದೆಯಾ? ಯೋಚಿಸಬೇಕಾದ ಸಂಗತಿ. ದುಬಾರಿ ಬೆಲೆಯ ಔಷಧೋಪಚಾರಗಳು ಅವನನ್ನು ಆರೋಗ್ಯ ಸೇವೆಯಿಂದ ವಂಚಿತನನ್ನಾಗಿ ಮಾಡುತ್ತಿವೆಯಾ? ಉತ್ತರ ಹೌದು ಎಂದಾದರೆ ನಾವಿನ್ನೂ ಸರ್ವರಿಗೂ ಸಲ್ಲುವ ಆರೋಗ್ಯ ಸೇವೆಯನ್ನು ನೀಡಲು ಸಿದ್ಧರಾಗಿಲ್ಲ ಎಂದು ಅನಿಸುತ್ತದೆ. ಆದರೂ ಸಾಧ್ಯವಾದಷ್ಟು ಮಟ್ಟಿಗೆ ಭಾರತ ದೇಶ ಸರಕಾರೀ ವ್ಯವಸ್ಥೆಯ ಒಳಗೆ ಆರೋಗ್ಯ ಸೇವೆ ಒದಗಿಸಲು ಪ್ರಯತ್ನ ಪಡುತ್ತಿದೆ. ಅದರೆ ನಮ್ಮ ವ್ಯವಸ್ಥೆಯ ಒಳಗಿನ ಭ್ರಷ್ಟಾಚಾರ, ಲಂಚಗುಳಿತನಗಳು ನಮ್ಮನ್ನು ನಿರೀಕ್ಷಿತ ಮಟ್ಟಕ್ಕೆ ತಲುಪಲು ಬಿಡುತ್ತಿಲ್ಲ.

ನಮ್ಮ ಆರೋಗ್ಯ ಹಾಳಾಗಲು ನಮ್ಮ ಜೀವನ ಶೈಲಿಯೇ ಬಹುಮಟ್ಟಿಗೆ ಕಾರಣ. ಇಂದಿನ ಆಧುನಿಕ ಸಮಾಜಕ್ಕೆ ಹೊಂದಿಕೊಳ್ಳುವ ಭರದಲ್ಲಿ, ಹಣ ಸಂಪಾದನೆಯ ದಾರಿಯಲ್ಲಿ ನಾವು ಆರೋಗ್ಯದತ್ತ ಕಮ್ಮಿ ಗಮನ ಹರಿಸುತ್ತಿದ್ದೇವೆ. ರಾಸಾಯನಿಕ ಭರಿತ ಆಹಾರ, ನಿದ್ರಾಹೀನತೆ ಕಾರಣಗಳಿಂದ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಆಧುನಿಕತೆಯ ಭರಾಟೆಯಲ್ಲಿ ನಾವು ಬಾಯಿಗೆ ರುಚಿಸುವ ತಿಂಡಿಗಳನ್ನು ತಿನ್ನುತ್ತೇವೆ. ಬಾಯಿಗೆ ರುಚಿ ಕೊಡುವ ಆಹಾರ ಹೊಟ್ಟೆಗೆ ಅಪಾಯಕಾರಿ. ನಿರಂತರ ಇದೇ ಆಹಾರ ಸೇವನೆಯಿಂದ ನಮ್ಮ ದೇಹ ಕಾಯಿಲೆಗೆ ತುತ್ತಾಗುತ್ತದೆ. ಕಲುಷಿತ ಆಹಾರದ ನಿರಂತರ ಸೇವನೆಯಿಂದ ಕ್ಯಾನ್ಸರ್ ಮುಂತಾದ ಭೀಕರ ಕಾಯಿಲೆಗಳೂ ಬರಬಹುದು. ನಮ್ಮ ಈಗಿನ ಜೀವನ ಶೈಲಿಯಲ್ಲಿನ ಕೆಲಸದ ಒತ್ತಡದಿಂದ ಅತಿ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯವೆಂಬಂತೆ ಎಲ್ಲರಲ್ಲೂ ಕಂಡು ಬರುತ್ತಿವೆ. ವ್ಯಾಯಾಮವಿಲ್ಲದ ಕೆಲಸ, ದಿನವಿಡೀ ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವುದರಿಂದ ಬೊಜ್ಜು, ಕಣ್ಣಿನ ದೃಷ್ಟಿ ಸಮಸ್ಯೆಗಳು ಬರುತ್ತಿವೆ. 

ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕಾಗಿ ನಾವು ನಮ್ಮ ಜೀವನಶೈಲಿಯನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಬೇಕು. ಮಾಡುತ್ತಿರುವ ಕೆಲಸವನ್ನು ಬಿಡಲು ಸಾಧ್ಯವಿಲ್ಲ. ಆ ಕಾರಣದಿಂದ ನಮ್ಮ ದೈನಂದಿನ ಜೀವನದ ಶೈಲಿಯನ್ನು ಕಾರ್ಯಕ್ರಮದ ಪಟ್ಟಿಯ ರೀತಿ ಹೊಂದಿಸಿಕೊಳ್ಳಬೇಕು. ಸಾಧ್ಯವಾದಷ್ಟು ಮನೆಯ ಆಹಾರ ತೆಗೆದುಕೊಳ್ಳಬೇಕು. ಬಿಡುವು ದೊರೆತಾಗ ಸಣ್ಣ ವಾಕಿಂಗ್, ವ್ಯಾಯಾಮ ಮಾಡಬಹುದು. ಯೋಗ ಮಾಡುವತ್ತಲೂ ಗಮನ ಹರಿಸಬಹುದಾಗಿದೆ. ನಮ್ಮ ಜೀವನದಲ್ಲಿ ಉತ್ತಮ ಆರೋಗ್ಯಕರ, ಪೌಷ್ಟಿಕ ಆಹಾರ, ನಿಗದಿತ ಸಮಯದಲ್ಲಿ ನಿದ್ರಿಸುವುದು, ಮಾನಸಿಕ ಒತ್ತಡಗಳನ್ನು ನಿವಾರಣೆ ಮಾಡಿಕೊಳ್ಳುವುದು, ಸಣ್ಣ ಪುಟ್ಟ ದೈಹಿಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಪಡೆದುಕೊಳ್ಳುವುದು ಹಾಗೂ ನಿಯಮಿತವಾಗಿ ವ್ಯಾಯಾಮ, ಯೋಗವನ್ನು ಮಾಡುವುದು. ಇವೆಲ್ಲವನ್ನು ಸರಿಯಾಗಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಕಮ್ಮಿ ಕಾಯಿಲೆ ಬೀಳುತ್ತೀರಿ. ಧೂಮಪಾನ, ಮದ್ಯಪಾನ, ಮಾದಕ ಪದಾರ್ಥಗಳ ಸೇವನೆ ಮಾಡುತ್ತಿದ್ದರೆ ಅದನ್ನು ತ್ಯಜಿಸಿದರೆ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಳವಾಗುತ್ತದೆ. 

ಈ ಆರೋಗ್ಯ ದಿನದ ಸಂದರ್ಭದಲ್ಲಿ ‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿ' ಎಂಬ ಮಾತಿನಂತೆ ಜೀವನ ಸಾಗಿಸಬೇಕಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ, ನೀರು ಹಾಗೂ ಗಾಳಿಯನ್ನು ಸ್ವಚ್ಚವಾಗಿಡುವ ಪ್ರಯತ್ನ ನಾವು ಮಾಡುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ