ಉತ್ತರದಾಯಿತ್ವ ಅಗತ್ಯ

ಉತ್ತರದಾಯಿತ್ವ ಅಗತ್ಯ

ಸಮಾಜದ ಕೊರತೆಗಳನ್ನು ನಿವಾರಿಸಿ, ಶಕ್ತಿಯನ್ನು ವರ್ಧಿಸಲು ಸರ್ಕಾರೇತರ ಸಂಸ್ಥೆಗಳು (ಎನ್ ಜಿ ಒ) ಬೇಕು ಎಂಬುದೇನೋ ಸರಿಯೇ. ಅಲ್ಲದೆ, ಇಂಥ ಸಾಕಷ್ಟು ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತ ಬದಲಾವಣೆಯ ಪಥದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವುದು ಸುಳ್ಳಲ್ಲ. ಆದರೆ ಕೆಲ ಎನ್ ಜಿ ಒ ಗಳು ‘ಸಮಾಜ ಸೇವೆ' ಯ ಸೋಗು ಹಾಕಿಕೊಂಡು ಅವ್ಯವಹಾರದಲ್ಲಿ ತೊಡಗಿರುವುದು, ರಾಷ್ಟ್ರಘಾತಕ ಕೆಲಸಗಳಿಗೆ ಕೈಜೋಡಿಸುತ್ತಿರುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಇಂಥ ಸಂಸ್ಥೆಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಂಡಾಗ ಮಾತ್ರ ಸಮಾಜದಲ್ಲಿ ಅಪಾಯಕಾರಿ ಬೇರುಗಳನ್ನು ವಿಸ್ತರಿಸುತ್ತಿರುವ ಶಕ್ತಿಗಳನ್ನು ನಿಯಂತ್ರಿಸಲು ಸಾಧ್ಯ.

ವಿದೇಶಿ ದೇಣಿಗೆ ಸ್ವೀಕರಿಸಲು ಅಗತ್ಯವಾದ ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಷನ್ ಆಕ್ಟ್ (ಎಫ್ ಸಿ ಆರ್ ಎ) ಪ್ರಕಾರ ಪಡೆಯಬೇಕಾದ ಪರವಾನಗಿ ನವೀಕರಿಸದ ಕಾರಣ ೧೨,೦೦೦ಕ್ಕೂ ಹೆಚ್ಚು ಎನ್ ಜಿ ಒಗಳ ಎಫ್ ಸಿ ಆರ್ ಎ ಪರವಾನಗಿಗಳನ್ನು ಶನಿವಾರ (ಜನವರಿ ೧, ೨೦೨೨) ರದ್ದುಪಡಿಸಲಾಗಿದೆ. ಪರವಾನಗಿ ನವೀಕರಣಕ್ಕೆ ಡಿ.೩೧ ಮಧ್ಯರಾತ್ರಿ ಗಡುವು ಇದ್ದ ೬,೦೦೦ಕ್ಕೂ ಹೆಚ್ಚು ಎನ್ ಜಿ ಒಗಳು ಅರ್ಜಿ ಸಲ್ಲಿಸದ ಕಾರಣ ರದ್ದುಗೊಂಡಿವೆ. ಒಟ್ಟಾರೆಯಾಗಿ ೧೨,೦೦೦ಕ್ಕೂ ಹೆಚ್ಚು ಎನ್ ಜಿ ಒಗಳು ಪರವಾನಗಿ ಕಳೆದುಕೊಂಡಿವೆ. ಸದ್ಯ ೧೬,೮೨೯ ಎನ್ ಜಿ ಒಗಳು ಮಾತ್ರವೇ ಎಫ್ ಸಿ ಆರ್ ಎ ಲೈಸೆನ್ಸ್ ಹೊಂದಿವೆ.

ಇಂಥ ಕ್ರಮ ಇದೇ ಮೊದಲೇನಲ್ಲ. ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ೨೦೨೦ರ ಅಕ್ಟೋಬರ್ ನಲ್ಲಿ ಕಾಶ್ಮೀರ, ಬೆಂಗಳೂರು ಸೇರಿ ದೇಶದ ೧೨ ಕಡೆ ಎನ್ ಜಿ ಓ ಗಳು ಮತ್ತು ಇತರ ಸಂಘಟನೆಗಳ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು. ಇದಕ್ಕೂ ಮುನ್ನವೇ, ವಿದೇಶದಿಂದ ದೇಣಿಗೆ ಪಡೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಎನ್ ಜಿ ಒಗಳಿಗೆ ನೋಟೀಸ್ ನೀಡಿದ್ದ ಕೇಂದ್ರ ಸರಕಾರ ಇಂಥ ಸಾವಿರಾರು ಸಂಸ್ಥೆಗಳಾನುಮತಿಯನ್ನೇ ರದ್ದುಗೊಳಿಸಿತ್ತು ಮತ್ತು ಉಳಿದ ಎನ್ ಜಿ ಒಗಳ ಮೇಲೆ ಕಣ್ಗಾವಲು ಇರಿಸುವ ವ್ಯವಸ್ಥೆ ಜಾರಿಗೊಳಿಸಿತು. ಕರ್ನಾಟಕದಲ್ಲೂ ಎನ್ ಜಿ ಒಗಳ ಅವ್ಯವಹಾರಗಳಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ೨೦೧೮ರಲ್ಲೇ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.

ಈ ದೇಶದಲ್ಲೇ ನೆಲೆಸಿ, ಇಲ್ಲಿನ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡು, ಎನ್ ಜಿ ಒಗಳು ದೇಶಕ್ಕೆ ವಿರುದ್ಧವಾದ ಚಟುವಟಿಕೆಗಳನ್ನು ನಡೆಸುವುದು ಅಕ್ಷಮ್ಯ. ಎನ್ ಜಿ ಒಗಳ ಕಾರ್ಯ ನಿರ್ವಹಣೆ ಪಾರದರ್ಶಿ, ಸಮಾಜಮುಖಿ ಆಗಿರಬೇಕೆ ಹೊರತು ರಾಷ್ಟ್ರವಿರೋಧಿ ತತ್ವಗಳನ್ನು ಬೆಂಬಲಿಸಬಾರದು. ಸ್ವಯಂಸೇವಾ ಸಂಸ್ಥೆಗಳು ಸೇವೆಯ ಶ್ರೇಷ್ಟ ಮಾಧ್ಯಮಗಳಾಗಿ, ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ನೀಡಬೇಕು. ಕೆಲ ಸಂಸ್ಥೆಗಳ ಅಪಸವ್ಯದಿಂದ ಉತ್ತಮ ಕೆಲಸ ಮಾಡುತ್ತಿರುವ ಸಂಸ್ಥೆಗಳು ಕೂಡ ಅನುಮಾನದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ವಿವಿಧ ಕ್ಷೇತ್ರಗಳ ಶ್ರೇಯೋಭಿವೃದ್ಧಿಗೆ ಎನ್ ಜಿ ಒಗಳ ಕೊಡುಗೆ ಅನನ್ಯ. ಅವು ಸುಧಾರಣೆಯ ಪ್ರಬಲ ಮಾಧ್ಯಮಗಳಾಗಿ, ಭರವಸೆಯ ಆಶಾಕಿರಣವಾಗಿ ಹೊಮ್ಮಬೇಕು. ಈ ನಿಟ್ಟಿನಲ್ಲಿ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ, ಇತರ ಚಟುವಟಿಕೆಗಳಲ್ಲಿ ದಕ್ಷತೆ, ಪ್ರಾಮಾಣಿಕತೆ ಹೊಂದುವುದು ಅಗತ್ಯ ಎಂಬುದನ್ನು ಮರೆಯಬಾರದು. ಜನರ ನಂಬಿಕೆ ಕಳೆದುಕೊಂಡರೆ ಅದನ್ನು ಮರಳಿ ಗಳಿಸುವುದು ತುಂಬ ಕಷ್ಟ ಎಂಬ ವಾಸ್ತವವನ್ನು ಸ್ವಯಂಸೇವಾ ಸಂಸ್ಥೆಗಳು ಅರ್ಥಮಾಡಿಕೊಳ್ಳಬೇಕು.

(ಕೃಪೆ: ‘ವಿಜಯವಾಣಿ’ ಸಂಪಾದಕೀಯ ದಿನಾಂಕ ೦೩-೦೧-೨೦೨೨)