ಉತ್ತರವಿಲ್ಲದ ಪ್ರಶ್ನೆ

ಉತ್ತರವಿಲ್ಲದ ಪ್ರಶ್ನೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)

ಸುಮಾರು ೧೯೫೮-೫೯ರ ಸಮಯ. ಬೆಳ್ತಂಗಡಿ ತಾಲೂಕಿನ ಶ್ರೀಮಂತ ಜಮೀನ್ದಾರರೊಬ್ಬರ ಮನೆಯಲ್ಲಿ ಕನ್ನಗಳ್ಳತನವಾಗಿ ಅಮೂಲ್ಯವಾದ ಬೆಳ್ಳಿ ಹಾಗೂ ಚಿನ್ನಾಭರಣಗಳು ಮತ್ತು ನಗದು ಕಳುವಾಗಿತ್ತು.
    ಪೊಲೀಸಿನವರು ತನಿಖೆಯನಂತರ, ಕನ್ನಗಳ್ಳತನ ಮಾಡಿದ್ದ ಮೂವರನ್ನು ಪತ್ತೆ ಮಾಡಿದ್ದರು. ಅವರು ನೀಡಿದ ಮಾಹಿತಿಯನ್ನು ಆಧರಿಸಿ ಗೌರವಾನ್ವಿತನೆಂದು ಖ್ಯಾತನಾಗಿದ್ದ ಗ್ರಾಮದ ಪಟೇಲನು ಕನ್ನಗಳ್ಳರಿಂದ ಖರೀದಿಸಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಪೈಕಿ ಕೆಲವನ್ನು ವಶಪಡಿಸಿಕೊಂಡಿದ್ದರು.
    ಬಂಟ್ವಾಳದಲ್ಲಿ ನಾನು ಮ್ಯಾಜಿಸ್ಟ್ರೇಟ್ ಆಗಿದ್ದಾಗ ಆ ಗ್ರಾಮದ ಪಟೇಲನೂ ಸೇರಿದಂತೆ ಆ ನಾಲ್ವರನ್ನೂ ನನ್ನ ಮುಂದೆ ಹಾಜರುಪಡಿಸಿ, ಪ್ರಕರಣ ದಾಖಲಿಸಲಾಗಿತ್ತು. ಪಟೇಲನು ಜಿಲ್ಲಾನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಮತ್ತು ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ ಮೂವರನ್ನು ನ್ಯಾಯಾಲಯದ ಹಿಂಭಾಗದಲ್ಲಿಯೇ ಇದ್ದ ಸಬ್‌‍ಜೈಲಿನಲ್ಲಿ ಇಡಲಾಗಿತ್ತು.
    ಕೆಲವು ದಿನಗಳನಂತರ ಆ ಮೂವರು ಕನ್ನಗಳ್ಳರು ಹ್ಯಾಕ್‌ಸಾಬ್ಲೇಡಿನ ಸಹಾಯದಿಂದ ಕಬ್ಬಿಣದ ಸರಳುಗಳನ್ನು ಕತ್ತರಿಸುವುದರ ಮೂಲಕ ಸಬ್‍ಜೈಲಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಪರಾರಿಯಾಗಿದ್ದ ಮೂವರ ಪೈಕಿ ಇಬ್ಬರನ್ನು ದಸ್ತಗಿರಿ ಮಾಡಲಾಯಿತು. ಮೂರನೆಯ ಕನ್ನಗಳ್ಳ ತಲೆತಪ್ಪಿಸಿಕೊಂಡಿದ್ದ, ಅಂಥ ತಲೆತಪ್ಪಿಸಿಕೊಂಡಿದ್ದವನ ವಿರುದ್ಧ ಪ್ರತ್ಯೇಕವಾಗಿ ಮೊಕದ್ದಮೆ ದಾಖಲಿಸಿಕೊಂಡ ಹೊರತು ಮೊಕದ್ದಮೆಯನ್ನು ವಿಚಾರಣೆಗೆ ತೆಗೆದುಕೊಳ್ಳುವಂತಿರಲಿಲ್ಲ. ತಲೆತಪ್ಪಿಸಿಕೊಂಡಿದ್ದವನನ್ನು ಹಿಡಿಯಲಾಗುವುದೆಂದು ನಿರೀಕ್ಷಿಸಿ ಎರಡು-ಮೂರು ಸಲ ಮೊಕದ್ದಮೆಯನ್ನು ಮುಂದಕ್ಕೆ ಹಾಕಲಾಗಿತ್ತು.
    ಮುಂದಿನ ಹಿಯರಿಂಗ್‍ನಲ್ಲಿ ಇಬ್ಬರು ಆಪಾದಿತರನ್ನು ನನ್ನ ಮುಂದೆ ಹಾಜರು ಪಡಿಸಿದಾಗ, ಮುಖ್ಯ ಆಪಾದಿತನು ತನ್ನ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬೇಕೆಂದೂ ಶೀಘ್ರವಾಗಿ ವಿಚಾರಣೆ ಮಾಡಬೇಕೆಂದೂ ವಿನಂತಿಸಿದ. ಮೂರನೆಯ ಆಪಾದಿತನನ್ನು ಪತ್ತೆಹಚ್ಚುವತನಕ ಮೊಕದ್ದಮೆ ವಿಚಾರಣೆ ನಡೆಸುವಂತಿಲ್ಲವೆಂದು ಹೇಳಿದೆ. ಹಾಗಾಗಿ ಆತನನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದಿಲ್ಲ ಎಂದು ನಾನು ಉತ್ತರಿಸಿದೆ.
    ಕಾನೂನು ಬಡವರಿಗೂ, ಶ್ರೀಮಂತರಿಗೂ ಒಂದೇ ಆಗಿರುತ್ತದೆ, ಪಟೇಲನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾದರೆ ತನಗೆ ಜಾಮೀನು ನಿರಾಕರಿಸುವುದು ಕಾನೂನಿಗೆ ವಿರುದ್ಧ ಎಂದು ಅವನು ಹೇಳಿದ.
    ನಾನು ತಾಳ್ಮೆ ಕಳೆದುಕೊಂಡೆ. ಕೋಪದಿಂದ “ಸಾಕೋ ನಿನ್ನ ಕಾನೂನು, ನಿನ್ನನ್ನು ಬೇಲ್ ಮೇಲೆ ಬಿಡಲು ಆಗುವುದಿಲ್ಲ” ಎಂದು ಗರ್ಜಿಸಿದೆ.
    ಅವನು “ಕೋರ್ಟ್‍ನಲ್ಲಿ ಕಾನೂನು ಮಾತಾಡದೇ ಬೇರೆ ಎಲ್ಲಿ ಸಾರ್ ಕಾನೂನು ಮಾತಾಡಬೇಕು” ಎಂದು ಕೇಳಿದಾಗ ನಾನು ಸಂಪೂರ್ಣವಾಗಿ ಕಂಗಾಲಾಗಿ ಹೋಗಿದ್ದೆ.