ಉತ್ತರಾಖಂಡದ ಹಿಮಾಲಯನ್ ಬುಲ್ ಬುಲ್

ಉತ್ತರಾಖಂಡದ ಹಿಮಾಲಯನ್ ಬುಲ್ ಬುಲ್

ಹಿಮಾಲಯದ ಚಾರಣಕ್ಕೆಂದು ಹೊರಟ ನಾವು ಉತ್ತರಾಖಂಡ ರಾಜ್ಯದ ರಾಜಧಾನಿ ದೆಹರಾದೂನ್ ತಲುಪಿದೆವು. ಅಲ್ಲಿಂದ ರಸ್ತೆ ಮಾರ್ಗವಾಗಿ ನಮ್ಮ ಪ್ರಯಾಣ ಮುಂದುವರೆಸಿದೆವು. ನಮ್ಮ ಮೊದಲ ಚಾರಣ ರುದ್ರನಾಥ ಎಂಬ ಜಾಗಕ್ಕೆ. ರುದ್ರನಾಥಕ್ಕೆ ಹೋಗಬೇಕಾದರೆ ಚಮೋಲಿ ಜಿಲ್ಲೆಯ ಗೋಪೇಶ್ವರ ಮಾರ್ಗವಾಗಿ ಸಗರ್ ಎಂಬ ಹಳ್ಳಿಯಿಂದ ಕಾಲ್ನಡಿಗೆಯಲ್ಲಿ ಸುಮಾರು ಹದಿನೆಂಟು ಕಿಲೋಮೀಟರ್ ದೂರ ನಡೆದುಕೊಂಡು ಬೆಟ್ಟ ಹತ್ತಬೇಕು. ಮಧ್ಯಾಹ್ನದ ಹೊತ್ತಿಗೆ ನಾವು ಸಗರ್ ಎಂಬ ಹಳ್ಳಿ ತಲುಪಿದೆವು. ಮೊದಲೇ ಗೊತ್ತುಮಾಡಿಕೊಂಡಿದ್ದ ಹೋಂಸ್ಟೇ ಒಂದರಲ್ಲಿ ನಮ್ಮ ಲಗೇಜುಗಳನ್ನು ಇಳಿಸಿ ವಿಶ್ರಾಂತಿ ಪಡೆದುಕೊಂಡೆವು. ರುದ್ರನಾಥ ಚಾರಣಕ್ಕೆ ನಮಗೆ ದಾರಿ ತೋರಿಸಲು ಅಮಿತ್ ಎಂಬ ಹುಡುಗ ನಮಗೆ ಗೈಡ್ ಆಗಿ ಬರಲು ಒಪ್ಪಿಕೊಂಡಿದ್ದ. ಸಂಜೆ ಚಹಾ ಕುಡಿಯುವ ಹೊತ್ತಿಗೆ ಅಮಿತ್ ನಮ್ಮನ್ನು ಕಾಣಲು ಬಂದ. ರುದ್ರನಾಥಕ್ಕೆ ಹೋಗಿ ಬರಲು ಸುಮಾರು ಮೂರು ದಿನದ ಚಾರಣ ಬೇಕಾಗಬಹುದು ಎಂದು ನಮ್ಮ ಪ್ಲಾನ್ ಮಾತನಾಡಿಕೊಂಡೆವು. ಎರಡು ದಿನ ಪ್ರಯಾಣದಲ್ಲಿ ಕುಳಿತು ಹೈರಾಣಾಗಿದ್ದ ನಾವು ಸಂಜೆ ಸ್ವಲ್ಪ ವಾಕಿಂಗ್ ಹೋಗಬೇಕೆಂದು ಯೋಚಿಸುವಾಗ ಇಲ್ಲೇ ಹತ್ತಿರದಲ್ಲಿ ನಮ್ಮೂರಿನ ದೇವಸ್ಥಾನ ಇದೆ, ಚಂದದ ದಾರಿ ಬನ್ನಿ ಹೋಗೋಣ ಎಂದು ಅಮಿತ್ ನಮ್ಮನ್ನು ಆಹ್ವಾನಿಸಿದ. ವಾತಾವರಣವೂ ಚೆನ್ನಾಗಿತ್ತು. ಬೇಗ ತಯಾರಾಗಿ ಹೊರಟೆವು. ಗೋಪೇಶ್ವರದಿಂದ ಚೋಪ್ತಾ ಹೋಗುವ ಮುಖ್ಯರಸ್ತೆಯಲ್ಲಿ ನಾಲ್ಕು ಕಿಲೋಮೀಟರ್ ಚಲಿಸಿದರೆ ಈ ಸಗರ್ ಹಳ್ಳಿ ಸಿಗುತ್ತದೆ. ಮುಖ್ಯ ರಸ್ತೆಯ ಒಂದು ಬದಿಗೆ ಎತ್ತರವಾದ ಬೆಟ್ಟ, ಇನ್ನೊಂದು ಬದಿಗೆ ಆಳವಾದ ಕಣಿವೆ. ರಸ್ತೆಯಲ್ಲಿ ನಡೆಯುವಾಗ ಎರಡೂ ಬದಿಯಲ್ಲಿ ಕಟ್ಟಿದ ಮನೆಗಳು ಸುಂದರವಾಗಿ ಕಾಣುತ್ತಿದ್ದವು. ಇಳಿಜಾರಿನಲ್ಲಿ ಇಳಿಯುತ್ತ ಸಾಗುವ ಪುಟ್ಟ ಕಾಲುದಾರಿಯಲ್ಲಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಕೆಳಗಡೆ ಮೆಟ್ಟಿಲು ಮೆಟ್ಟಿಲು ಗದ್ದೆಗಳ ನಡುವೆ ದೇವಸ್ಥಾನ ಕಾಣಿಸತೊಡಗಿತು. ಗುಂಪಿನಲ್ಲಿ ಕೊನೆಯವನಾಗಿದ್ದ ನಾನು ಪ್ರಕೃತಿಯ ಸೌಂದರ್ಯವನ್ನು ನೋಡುತ್ತ ನಿಧಾನವಾಗಿ ನಡೆಯುತ್ತಿದ್ದೆ. 

ಗದ್ದೆಗಳ ಬದಿಯಲ್ಲಿ ಬೆಳೆದ ಪೊದೆಗಳಿಂದ ಆಟವಾಡುತ್ತಾ ಎರಡು ಹಕ್ಕಿಗಳು ಅಲ್ಲೇ ಹಾದುಹೋಗುವ ವಿದ್ಯುತ್ ತಂತಿಯ ಮೇಲೆ ಕುಳಿತವು. ತಕ್ಷಣ ನೋಡಲು ನಮ್ಮೂರಿನ ಜುಟ್ಟು ಪಿಕಳಾರ ಹಕ್ಕಿಯಂತೆ ಕಾಣಿಸಿತು. ಅರೆ ಜುಟ್ಟು ಪಿಕಳಾರ ಇಲ್ಲೂ ಉಂಟೇ ಎಂದು ನನ್ನ ಬೈನಾಕುಲರ್ ತೆಗೆದು ನೋಡಿದರೆ ಪರಮಾಶ್ಚರ್ಯ. ನಮ್ಮೂರಿನ ಜುಟ್ಟು ಪಿಕಳಾರಕ್ಕಿಂತಲೂ ಸುಂದರವಾದ ಜುಟ್ಟು. ಗಲ್ಲ ಮತ್ತು ಕೆನ್ನೆಯ ಮೇಲೆ ಸುಂದರವಾದ ಬಿಳೀ ಬಣ್ಣ. ಬೆನ್ನು, ರೆಕ್ಕೆ ಮತ್ತು ಬಾಲ ತಿಳಿ ಕಂದು ಬಣ್ಣ. ಹೊಟ್ಟೆಯ ಮೇಲೆ ತಿಳಿ ಬೂದು ಬಣ್ಣ, ಕೊನೆಗೆ ಕುಂಡೆಯ ಭಾಗದಲ್ಲಿ ನಮ್ಮೂರಿನ ಪಿಕಳಾರಗಳಿಗೆ ಕೆಂಪು ಬಣ್ಣ ಇದ್ದರೆ ಈ ಹಕ್ಕಿಗಳಿಗೆ ಚಂದದ ಹಳದಿ ಬಣ್ಣ.

ಸುತ್ತಮುತ್ತಲಿನ ಪೊದೆ ಮರಗಳಲ್ಲಿ ಬೆಳೆದ ಹಣ್ಣು, ಕೀಟಗಳನ್ನು ತಿನ್ನುತ್ತಾ ಆಟವಾಡುತ್ತಿದ್ದವು. ಹಕ್ಕಿ ಕಂಡರೆ ಫೋಟೋ ತೆಗೆಯಬೇಕು ಎಂಬ ಕಾರಣಕ್ಕೇ ಹೊತ್ತುಕೊಂಡು ಹೋಗಿದ್ದ ಕ್ಯಾಮರಾ ಹೊರತೆಗೆದು ಒಂದೆರಡು ಚಿತ್ರ ತಗೆದುಕೊಂಡೆ. ಅಷ್ಟರಲ್ಲಿ ನನ್ನ ಜೊತೆಗಿದ್ದ ಚಾರಣಮಿತ್ರರು ಆಗಲೇ ದೇವಸ್ಥಾನ ತಲುಪಿದ್ದರು. ಶ್ರೀರಾಮಚಂದ್ರನ ಪೂರ್ವಜ ಸಗರ ಮಹಾರಾಜ ಹುಟ್ಟಿದ ಮತ್ತು ತಪಸ್ಸು ಮಾಡಿದ ಸ್ಥಳ ಈ ಹಳ್ಳಿಯಾದ್ದರಿಂದ ಈ ಹಳ್ಳಿಗೆ ಸಗರ್ ಎಂಬ ಹೆಸರು ಬಂದಿದೆ ಎಂದು ತಿಳಿಯಿತು. ದೇವಸ್ಥಾನದಿಂದ ಹಿಂದಿರುಗುವಾಗ ಸಮಯ ಸುಮಾರು ಏಳೂವರೆ ಆಗಿತ್ತು. ಆಶ್ಚರ್ಯ ಎಂಬಂತೆ ಆಗತಾನೇ ಕತ್ತಲಾಗುತ್ತಿತ್ತು. ಹಿಮಾಲಯದಲ್ಲಿ ಕತ್ತಲಾಗುವುದು ತಡವಾಗಿ ಎಂಬುದು ಅನುಭವಕ್ಕೆ ಬಂತು. ಹಿಂದಿರುಗಿ ಬರುವಾಗಲೂ ಬುಲ್ಬುಲ್ ಹಕ್ಕಿ ಅಲ್ಲಲ್ಲಿ ಹಾರಾಡುತ್ತಿತ್ತು. ಮನೆಗೆ ಬಂದು ಹಕ್ಕಿ ಯಾವುದು ಎಂದು ಹುಡುಕಿದಾಗಲೇ ತಿಳಿದದ್ದು ಇದು ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಮಾತ್ರ ಕಾಣಲು ಸಿಗುವ ಹಿಮಾಲಯನ್ ಬುಲ್ ಬುಲ್ ಹಕ್ಕಿ. 

ಇಂಗ್ಲೀಷ್ ಹೆಸರು: Himalayan Bulbul

ವೈಜ್ಞಾನಿಕ ಹೆಸರು: Pycnonotus leucogenys

ಚಿತ್ರ, ಬರಹ : ಅರವಿಂದ ಕುಡ್ಲ, ಬಂಟ್ವಾಳ