ಉತ್ತರಾಯಣ ಮತ್ತು….

ಉತ್ತರಾಯಣ ಮತ್ತು….

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್. ಎಸ್. ವೆಂಕಟೇಶಮೂರ್ತಿ
ಪ್ರಕಾಶಕರು
ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
ಪುಸ್ತಕದ ಬೆಲೆ
ರೂ.೧೦೦/-

ಕನ್ನಡನಾಡಿನಲ್ಲಿ ಮನೆಮಾತಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ ಇದು. ಮಡದಿ ತೀರಿಕೊಂಡ ನಂತರ, ಆ ಅಗಲಿಕೆಯ ನೋವಿನಲ್ಲಿ ೬ ಜನವರಿ ೨೦೦೭ರಿಂದ ೨೬ ಎಪ್ರಿಲ್ ೨೦೦೮ರ ಅವಧಿಯಲ್ಲಿ ಅವರು ಬರೆದ ೨೪ ಭಾಗಗಳ “ಉತ್ತರಾಯಣ" ಮತ್ತು ಇತರ ಹಲವು ಚಿಂತನೆಗೆ ಹಚ್ಚುವ ಕವನಗಳು ಇದರಲ್ಲಿವೆ.

ಈ ಹಿನ್ನೆಲೆಯಲ್ಲಿ, ಕವನ ಸಂಕಲನದ ಆರಂಭದಲ್ಲಿ ಕವಿ ಬರೆದುಕೊಂಡಿರುವ ಮಾತುಗಳ ಆಯ್ದ ಭಾಗ ಹೀಗಿದೆ: “ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತಜೀವ ಶಾಶ್ವತವಾಗಿ ಅಗಲಿಬಿಟ್ಟಾಗ ಶೂನ್ಯಕ್ಕೆ ಬೇರೆಯದೇ ಅರ್ಥ ಹೊಳೆದಂತಾಯಿತು. ಲಕ್ಷೋಪಲಕ್ಷ ನಕ್ಷತ್ರಗಳಿಗೆ ಆಸರೆ ನೀಡಿರುವ ಆಕಾಶವನ್ನು ಶೂನ್ಯವೆಂದು ಕರೆಯಲಾದೀತೆ? ಬೆಳಗ್ಗೆ ಖಾಲಿ ನೀಲಿಯಾಗಿದ್ದ ಗಗನ, ರಾತ್ರಿ ಎಣಿಸಲಾಗದಷ್ಟು ನಕ್ಷತ್ರಗಳನ್ನು ಮಿನುಗಿಸುತ್ತಾ ಶೂನ್ಯದ ಅರ್ಥ ತಿಳಿಯಿತಾ ಎಂದು ಹುಸಿ ನಗುತ್ತದೆ. ಶೂನ್ಯವೆಂದರೆ ಏನೂ ಇಲ್ಲದ್ದು ಅಲ್ಲ; ಎಲ್ಲವೂ ಉಳ್ಳದ್ದು ಎಂಬ ವಿಲಕ್ಷಣ ಅನುಭೂತಿ ಇಂಥ ವೇಳೆ ಮನಸ್ಸನ್ನು ಗಾಳಿಕೈಯಲ್ಲಿ ಸವರಿಕೊಂಡು ಹೋಗುತ್ತದೆ. ……..

ಭೂಮಿಯೂ ಒಂದು ಆಕಾಶವೆಂಬ ನನ್ನ ಕವಿತೆಯಲ್ಲಿ ಸಂಬಂಧಗಳ ಅನಿವಾರ್ಯತೆಯನ್ನೂ, ಮತ್ತೂ ಅದರ ಅಪ್ರಾಕೃತತೆಯನ್ನೂ ಹಿಡಿದಿಡಲು ಯತ್ನಿಸಿದ್ದೇನೆ. ನಾವುಗಳೆಲ್ಲಾ ಮೂಲಭೂತ ನೆಲೆಯಲ್ಲಿ ಒಂಟಿಗಳು ಎಂಬುದನ್ನು ಎಷ್ಟೇ ಕಹಿ ಸತ್ಯವಾದರೂ ಒಪ್ಪಿಕೊಳ್ಳದೆ ವಿಧಿಯಿಲ್ಲ. ಯಾವನೇ ಜೀವಿ ಜಗತ್ತಲ್ಲಿ ಹುಟ್ಟಿದ್ದು ಒಂಟಿಯಾಗಿ; ಜಗತ್ತನ್ನು ಬಿಡಬೇಕಾದ್ದು ಒಂಟಿಯಾಗಿ. ಈ ಎರಡು ಧ್ರುವಗಳ ನಡುವೆ ನಿರಂತರವಾಗಿ ನಡೆಯುವಂಥದ್ದು ಬಿಡಿಬಿಡಿಗಳನ್ನು ಸೂತ್ರೀಕರಿಸುವ ಸಾಮಾಜಿಕ ಸಾಂಸ್ಕೃತಿಕ ಯತ್ನಗಳು. ಗಂಡು-ಹೆಣ್ಣು, ಗಂಡ-ಹೆಂಡತಿ ಆಗುವಲ್ಲಿ ದ್ವೈತಗಳನ್ನು ಅದ್ವೈತಗೊಳಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಹುನ್ನಾರವಿದೆ. ….."

ಈ ಸಂಕಲನಕ್ಕೆ ಪ್ರಸ್ತಾವನೆ ಬರೆದಿದ್ದಾರೆ, ಡಾ. ಚಿಂತಾಮಣಿ ಕೊಡ್ಲೆಕೆರೆ. ಕೆಲವು ಕವನಗಳ ಬಗ್ಗೆ ಅದರಿಂದ ಆಯ್ದ ಭಾಗಗಳು ಇಂತಿವೆ: “ಒಂದು ಹುಲಿ ಬದುಕಬೇಕೆಂದರೆ ಅದು ಅತಿ ಕಡಿಮೆ ವೇಗವಾಗಿ ಓಡುವ ಜಿಂಕೆಯನ್ನು ಬೆನ್ನು ಹತ್ತಬೇಕು, ಒಂದು ಜಿಂಕೆ ಬದುಕಬೇಕೆಂದರೆ ಅತಿ ಹೆಚ್ಚು ವೇಗವಾಗಿ ಓಡುವ ಹುಲಿಯನ್ನು ಹಿಮ್ಮೆಟ್ಟಿಸಬೇಕು” ಎಂಬುದು ಆಫ್ರಿಕಾದ ಸುಪ್ರಸಿದ್ಧ ಗಾದೆ. “ಆಫ್ರಿಕಾದ ಕಾಡಲ್ಲಿ …." ಪದ್ಯದಲ್ಲಿ ಈ ಎರಡು ಪ್ರಾಣಿಗಳಿಗೆ ಅವು ಕಂಡ ದುಃಸ್ವಪ್ನದ ಅನುಭವವಾಗಿ ಮೇಲಿನ ತಿಳಿವಳಿಕೆ ಹುಟ್ಟುತ್ತದೆ. ಈ ಪ್ರಾಣಿಗಳಿಗೆ ಬದುಕಿಗಾಗಿ ಓಟ ಅನಿವಾರ್ಯ. ಪ್ರಾಣಿ ಜೀವನದ ಈ ಪಾಡು ಇಂದು ಉದಾರಿಕರಣದ ನೆಪದಲ್ಲಿ ಒದಗಿ ಬಂದಿರುವ ಹೊಸ ಸವಾಲುಗಳನ್ನೂ ಸೂಚಿಸಬಲ್ಲುದಾಗಿದೆ. ಬಡರಾಷ್ಟ್ರಗಳು , ಬೆಳೆಯುವ ರಾಷ್ಟ್ರಗಳು ಜಿಂಕೆಯಂತೆ ಬದುಕಿಗಾಗಿ ಹೋರಾಟ ನಡೆಸಬೇಕಾಗಿದೆ. ಜಗತ್ತಿನ ವ್ಯವಹಾರಗಳ ಅಂಕುಶವನ್ನೆಲ್ಲ ತಮ್ಮ ಕೈಲಿ ಹಿಡಿದಿರುವ ಬಂಡವಾಳಶಾಹಿ ರಾಷ್ಟ್ರಗಳು ಅತಿ ಕಡಿಮೆ ವೇಗವಾಗಿ ಓಡುತ್ತಿರುವ ಒಂದೊಂದೇ ಜಿಂಕೆಯನ್ನು ಕಬಳಿಸಲು ಹೊಂಚು ಹಾಕಿವೆ. ಇಬ್ಬರಿಗೂ ಇದು ಅಸ್ತಿತ್ವದ ಪ್ರಶ್ನೆಯೇ! ನವನಾಗರಿಕತೆಯ ಈ ದಿನಗಳಲ್ಲಿ ವಿಶ್ವ ವ್ಯವಹಾರ ತಜ್ನರು ಪ್ರಪಂಚ ಜೀವನಕ್ಕೆ ತಂದಿರುವ ಈ "ತಾನು ಉಳಿಯಬೇಕೆಂದರೆ ಇನ್ನೊಬ್ಬನನ್ನು ಕೊಲ್ಲಬೇಕು” ಎಂಬ ಆದಿಮ ನಾಗರಿಕತೆಯ ಕಾಡು ಪ್ರವೃತ್ತಿ ಕುರಿತು ಕವಿತೆ ಯೋಚಿಸಲು ತೊಡಗಿಸುತ್ತದೆ...(ಮೂರು ಪಾರಾ ನಂತರ ಈ ಕವನ ಓದಿಕೊಳ್ಳಬಹುದು.)

“ಆಪ್ತಗಿತ" ಶ್ರೀಕೃಷ್ಣ ಅರ್ಜುನನೊಡನೆ ನಡೆಸಿರುವ ಹೊಸ ಮಾತುಕತೆ. ಐದು ಭಾಗಗಳಲ್ಲಿರುವ ಈ ದೀರ್ಘ ಕವಿತೆಯಲ್ಲಿ ಶ್ರೀಕೃಷ್ಣ ತಾನೊಬ್ಬ ಗೊಲ್ಲನಾಗಿ, ಕ್ಷತ್ರಿಯನಾಗಿ, ತಾತ್ತ್ವಿಕನಾಗಿ, ಸೇವಕನಾಗಿ ವಿವಿಧ ಬಗೆಯಲ್ಲಿ ಬಾಳಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಿದೆ ಎಂಬುದನ್ನು ಅರ್ಜುನನಿಗೆ ವಿವರಿಸುತ್ತಾನೆ. ಆ ಒಂದೊಂದು ಪಾತ್ರ ನಿರ್ವಹಣೆಯಲ್ಲೂ ಅವನು ಅತ್ಯಂತ ಯಶಸ್ವಿ. ಹದವರಿತ ನಡಿಗೆ ಅವನದು. ….. ಕವಿತೆಯ ಕೊನೆಯ ಭಾಗ ಈ ಎಲ್ಲ ಪಾತ್ರಗಳ ಸಮನ್ವಯದಿಂದ ಐದನೆಯ ನೆಲೆಯನ್ನು ಸೃಷ್ತಿಸುತ್ತದೆ. ಚಾತುರ್ವಣ್ಯದ ಪರಿಭಾಷೆಯಲ್ಲಿ “ಪಂಚಮ" ನಿಮ್ನ ಸ್ಥಿತಿಯಾದರೆ ಸಂಗೀತದಲ್ಲಿ ಅದು ಅತಿ ಮಧುರವಾದ ಸ್ವರ. ಕವಿತೆ ಚತುರ್ವರ್ಣಗಳ ಭೇದವನ್ನು ನಿರಾಕರಿಸಿ ಅವು ಒಂದೇ ವ್ಯಕ್ತಿತ್ವದ ನಾಲ್ಕು ನೆಲೆಗಳು ಎಂದು ಸಿದ್ಧಪಡಿಸುತ್ತದೆ. ಈ ಹಂತದಲ್ಲಿ ಕವಿತೆ ಹಠಾತ್ತನೆ ಮಹಾತ್ಮರ ವ್ಯಕ್ತಿತ್ವ, ಸಾಧನೆಗಳನ್ನು ಕಣ್ಣೆದುರು ನಿಲ್ಲಿಸುತ್ತದೆ. ಒಮ್ಮೆ ವರ್ತಮಾನಕ್ಕೆ ಬಂದು ಗಾಂಧಿ ಸಾಧಿಸಿದ ಏಕತೆಯ ಚಿತ್ರಕ್ಕೆ ಬೆಳಕು ಚೆಲ್ಲಿ ಕವಿತೆ, “ಬೆವರಿನಾರದರ್ಥಕ್ಕಿಲ್ಲ ತೃಣಮಾತ್ರ ಪರಮಾರ್ಥ” ಎಂದು ಘೋಷಿಸಿ, ಅರ್ಜುನನನ್ನು ಗಾಂಡೀವ ಕೆಳಗಿರಿಸಿ ಉದ್ದಂಡ ಸೇವಾಕಾರ್ಯ ಕ್ಷೇತ್ರಕ್ಕಿಳಿ ಎಂದು ಪ್ರಚೋದಿಸುತ್ತದೆ. ಹಾಗೆ ಹೇಳುವ ಮೂಲಕ ಶ್ರೀಕೃಷ್ಣನ ಮೊದಲ ಮೂರೂ ಹಂತಗಳು ಸೇವಾವೃತ್ತಿಗೆ ಅವನನ್ನು ಸಿದ್ಧಪಡಿಸಿದವು ಎಂದೂ ಕವಿತೆ ಸಾಧಿಸುತ್ತಿದೆ. ಇದು ಹೊಸಕಾಲಕ್ಕೆ ಸಲ್ಲುವ "ಹೊಸ ಒಡಂಬಡಿಕೆ”. ಇದಕ್ಕಾಗಿ ಕೃಷ್ಣಾರ್ಜುನರು ಪುನಃ ವೇಷ ತೊಡುವುದು ಅನಿವಾರ್ಯವಾಗಿದೆ. …..

“ಒಂದು ಕಥೆ” ಎಚ್. ಎಸ್. ವಿ. ಯವರ ಪತ್ನಿಯ ಸಾವಿನ ಹಿನ್ನೆಲೆಯಲ್ಲಿ ಆ ಬದುಕನ್ನೊಂದು ಕಥೆಯಾಗಿ ಕಟ್ಟುವ ಪ್ರಯತ್ನ. ರಾಮಗಿರಿ ಊರಿನಲ್ಲೊಬ್ಬಳು ಹುಡುಗಿ ರಾಜಮ್ಮ. ಅವಳನ್ನು ಮೆಚ್ಚಿ ಮದುವೆಯಾದ ಒಬ್ಬ ಹುಡುಗ. ಮುಂದೆ ಅವರ "ಹತ್ತಾರು ತಿರುವುಗಳ “ ಜೀವನ “ಉರುಳುರುಳಿ ಸಮೆದಿತ್ತು ಚಕ್ರ". ಕಥೆ ಇನ್ನೂ ಇದೆ ಅನ್ನುವಷ್ಟರಲ್ಲೆ ರಾಜಮ್ಮ ತಣ್ಣಗೆ ಮಲಗಿದ ದೃಶ್ಯವನ್ನು ಕವಿತೆ ತೋರಿಬಿಡುತ್ತದೆ. ಬರೆದಾಯಿತೆಂದು ಕತೆಗಾರ ನೆಟಿಗೆ ಮುರಿದನಂತೆ……”

ಕವನಸಂಕಲನದ “ರಾಸಚಕ್ರ" ಭಾಗದಲ್ಲಿ ಹದಿಮೂರು ಕವಿತೆಗಳಿವೆ. ಇವು ಶ್ರೀಕೃಷ್ಣನ ಬಾಲ್ಯದ ತುಂಟಾಟಗಳನ್ನು ಮತ್ತು ಮಗ, ಪ್ರಿಯಕರ ಎಂಬಿತ್ಯಾದಿ ಆತನ ವಿವಿಧ ಪಾತ್ರಗಳನ್ನು ಆಪ್ತವಾಗಿ ಕಟ್ಟಿಕೊಡುತ್ತವೆ. ಇವುಗಳಿಗೆ ಸಂವಾದಿಯಾಗಿ ಶ್ರೀಕೃಷ್ಣನ ಮಾಗಿದ ವ್ಯಕ್ತಿತ್ವವನ್ನು ಕಟ್ಟಿಕೊಡುವ “ಆಪ್ತಗೀತ" ಕವನವನ್ನು ಓದಿಕೊಂಡರೆ, ನಮಗೆ ಹಲವು ಒಳನೋಟಗಳು ದಕ್ಕಬಲ್ಲವು.

ಆಫ್ರಿಕಾ ಕಾಡಲ್ಲಿ…

ಆಫ್ರಿಕಾ ಕಾಡಲ್ಲಿ ಪ್ರತಿದಿನಾ ಬೆಳಗಾಗ
ಒಂದು ಜಿಂಕೆಯು ಧಡಕ್ಕನೆದ್ದು
ದುಃಸ್ವಪ್ನ ಕಂಡಂತೆ ನಡುಗುತ್ತ ಥರ ಥರ
ತನಗೆ ತಾನೇ ಹೀಗೆ ಹೇಳುವುದು:

“ಈ ಕಾಡಿನತ್ಯಂತ ಹೆಚ್ಚು ವೇಗದ ಹುಲಿಯ
ಹಿಂದೆ ಹಾಕಿದೆಯೋ ನೀನು ಗೆದ್ದೆ
ಹಾಕಲಿಲ್ಲಾ ನೀನು ಹುಲಿಯ ಹೊಟ್ಟೆಗೆ ಬಿದ್ದು
ಕಥೆಯ ಮುಗಿಸೋದು ಇದ್ದದ್ದೇ”
2
ಆಫ್ರಿಕಾ ಕಾಡಲ್ಲಿ ಪ್ರತಿದಿನಾ ಬೆಳಗಾಗ
ಒಂದು ಹುಲಿಯೂ ದಢಕ್ಕನೆದ್ದು
ದುಃಸ್ವಪ್ನ ಕಂಡಂತೆ ನಡುಗುತ್ತ ಥರ ಥರ
ತನಗೆ ತಾನೇ ಹೀಗೆ ಹೇಳುವುದು:

“ಈ ಕಾಡಿನತ್ಯಂತ ಕಡಿಮೆ ವೇಗದ ಜಿಂಕೆ
ಬೆನ್ನ ಹತಿದೆಯೋ ನೀನು ಉಳಿಯುತ್ತಿ
ಇಲ್ಲವೋ ನಿನ್ನ ಅರೆಗಣ್ಣ ಮರಿಗಳ ಸಹಿತ
ಉಪವಾಸ ಬಿದ್ದು ಉಸಿರೆಳೆಯುತ್ತಿ”
3
ಆಫ್ರಿಕಾ ಕಾಡಲ್ಲಿ ಇರುವುದೊಂದೇ ಮಂತ್ರ
ಪೂರ್ವದ ಕಾಡಲ್ಲಿ ಕೆಂಪಾಯಿತಾ ನೋಡು
ಒಂದು ಜೀವದ ಹಿಂದೆ ಅಥವಾ ಜೀವದ ಮುಂದೆ
ಮುಖಾ ಮಾರೆ ನೋಡದೆ ಓಡು