ಉತ್ತರ ಕರ್ನಾಟಕದ ಬನಶಂಕರಿ ಜಾತ್ರಿ ಸಂಭ್ರಮ..
ನಾನು ಹುಟ್ಟಿದ್ದು ಬೆಳೆದಿದ್ದು ಹುಬ್ಬಳ್ಳಿಯೊಳಗ, ನನ್ನ ಮದವಿಮಾಡಿಕೊಟ್ಟಿದ್ದು ಬಾಗಲಕೋಟಿ ಹತ್ರ ಇರೊ ಕೇರೂರ ಅನ್ನೊ ಸಣ್ಣ ಹಳ್ಳಿಗೆ,ಈಗ ಕೇರೂರು ಯಾವ ಶಹರಕ್ಕು ಕಡಿಮಿ ಇಲ್ಲಾ ಹಂಗ ಬೇಳದದ. ನಾ ಬೆಳೆದ ಬಂದ ವಾತಾವರಣಕ್ಕು ಮತ್ತ ಈ ಹಳ್ಳಿ ವಾತಾವರಣಕ್ಕು ಭಾಳ ಫರಕ ಇತ್ತು. ಮದವಿ ಆದ ಹೊಸದಾಗೆ ನಂಗ ಅಲ್ಲಿಯ ಜೀವನಾ ಭಾಳ ಮಜಾ ಅನಿಸ್ತಿತ್ತು.ನಮಗೆಲ್ಲಾ ದೊಡ್ಡೂರಾಗ ಬಾಗಲಾ ಹಾಕ್ಕೊಂಡ ಕೂತು ರೂಢಿ ಇತ್ತು. ಆಜು ಬಾಜು ಮನಿಯವರನ್ನ ಆಸಿಗ್ಗೊಮ್ಮೆ ಬ್ಯಾಸಿಗೊಮ್ಮೆಭೆಟ್ಟಯಾಗತಿದ್ವಿ. ಆದ್ರ ಇಲ್ಲೆ ಹಳ್ಳಿ ಊರಾಗ ಹಂಗಲ್ಲಾ ಮುಂಜಾನೆ ಎದ್ರ್ಯಾ,ಚಹಾ ಆತಾ ಅನ್ನೊದ್ರಿಂದ ಹಿಡಕೊಂಡ ರಾತ್ರಿ ಊಟಾ ಆತೆನು ಮಲ್ಕೊಂಡ್ರ್ಯಾ ಅನ್ನೊ ತನಕಾ ಒಬ್ಬರಿಗೊಬ್ಬರ ಬಗ್ಗೆ ವಿಚಾರಿಸಿಕೊಳ್ಳತಾರ. ನಂಗ ಇದೆಲ್ಲಾ ಹೊಸಾ ಅನುಭವ.ನಮ್ಮ ಮನಿ ಕಿಲ್ಲಾದಾಗ ಅದ, ಅಲ್ಲೆಲ್ಲಾ ಒಂಟಗ್ವ್ಯಾಡಿ ಮನಿಗೊಳು, ಅಂದ್ರ ಕಂಪೌಂಡ ಇರಂಗಿಲ್ಲಾ ಆಜುಬಾಜು ಮನಿ ಇರ್ತಾವ,ಹಿಂಗಾಗಿ ಹಗಲ ಹನ್ನೆರಡ ತಾಸು ಮಂದಿ ಮಾರಿ ನೋಡಬೇಕು.ನನಗ ಸ್ವಲ್ಪ ಮಂದಿನ ಮಾತಾಡಿಸಿ ರೂಢಿ ಇದ್ದಿದ್ದಿಲ್ಲಾ ಅದಕ್ಕ ನಾ ಎನ ಯಾರನು ಛಾ ಆತೆನು ಊಟಾತೆನು ಅಂತೇನ ಕೇಳತಿದ್ದಿದ್ದಿಲ್ಲಾ. ಹಿಂಗಾಗಿ ಹೊದ ಹೊಸದಾಗಿ ನಂಗ ಎಲ್ಲಾರು “ಅಯ್ಯ ದೇಸಾಯರ ಸೊಸಿ ದೊಡ್ಡ ಊರಾಕಿ ಭಾಳ ಸೊಕ್ಕಿನಾಕಿದಾಳ ಎದರಿಗೆ ಬಂದ್ರ ಛಂದಾಗಿ ಊಟಾತೆನು,ಕೆಲಸಾತೆನು ಅಂತ ಸುಧ್ಧಾ ಮಾತಾಡ್ಸಂಗಿಲ್ಲಾ ಮಂದಿನ ಕಾಣಲಾರದಾಕಿದ್ದಾಳ ಅಂತ ಆಡಕೊಳ್ಳತಿದ್ರು.(ಆದ್ರ ಈಗೆನ ಹಂಗಿಲ್ಲಾ 'ಇದ್ರ ದೇಸಾಯರ ಹೀರೆ ಸೂಸಿ ಹಂಗ ಇರಬೇಕ ಅಂತ ಅಂತಾರ ಬೇಕಂದ್ರ ಬಂದ ಕೆಳ್ರಿ)ಅದಕ್ಕ ಒಂದಿನಾ ನಮ್ಮ ಅತ್ತಿಯವರು ' ನಮ್ದಿದು ಹಳ್ಳಿ ಊರವ್ವಾ,ನಮ್ದ ವಝನಿ ಮನೆತನ ಅದ,ನಮ್ಮ ನಡೆನುಡಿ ಮ್ಯಾಲೆ ಮಂದಿ ಕಣ್ಣ ಭಾಳ ಇರ್ತದ,ಸ್ವಲ್ಪ ಎನರೆ ಹೆಚ್ಚು ಕಮ್ಮಿ ಆದ್ರ ದೇಸಾಯರ ಮನ್ಯಾಗ ಹಿಂಗ ಅಂತ ಇದ್ದದ್ದ ಇರಲಾರದ ಹುಟ್ಟಿಸಿ ಊರಸುದ್ದಿ ಮಾಡ್ತಾರ ಅದಕ್ಕ ನೀ ಸ್ವಲ್ಪ ಮಂದಿನ ಹಚ್ಕೊ,ಯಾರರೇ ಮಾತಾಡಿಸಿದ್ರ ಛಂದಾಗಿ ಉತ್ರಾ ಕೊಡು ಅಂತ ಹೇಳಿದ್ರು.ಇದನ್ನೆಲ್ಲಾ ದೊಡ್ಡೂರಾಗಿನ ಮಂದಿಗೆ ಹೇಳಿದ್ರ ಇನ್ನೊಬ್ಬರ ಉಸಾಬರಿ ನಮಗ್ಯಾಕ ಸುಳ್ಳ ಟೈಮ ವೇಸ್ಟ ಅಂತಾರ,ಆದ್ರ ಲಕ್ಷ ಕೊಟ್ಟ ಹಳ್ಳಿಯ ಸಾಮಾಜೀಕ ಜೀವನದಾಗ ಹಣಿಕಿ ಹಾಕಿ ನೋಡಿದ್ರ ಎಷ್ಟ ಛಂದ ಇರ್ತದ. ಅದರಾಗಂತು ನಮ್ಮ ಉತ್ತರಕರ್ನಾಟಕದ ಹಳ್ಳಿಗಳೊಳಗಂತು ಮಂದಿನ ಹಚ್ಕೊಳಿಕ್ಕೆ,ಅತಿಥಿ ಸತ್ಕಾರಕ್ಕ ಭಾಳ ಮುಂದ. ಯಾರ ಆಗ್ಲಿ ಊಟಕ ಕೂತಾಗ ಅಥವಾ ಚಹಾ ನಾಷ್ಟಾಕ ಕುತಾಗ ಬರೆ ಮನಿ ಮುಂದ ಹಾದ ಹೊಂಟಿದ್ರು 'ಬರ್ರಿ ಊಟಾ ಮಾಡೊಣು, ನಾಷ್ಟಾ ಮಾಡೊಣು ಅಂತ ಪ್ರೀತಿಯಿಂದ ಕರಿತಾರ,ಅದಕ್ಕ 'ತಗೊರಿ ಭಾಳ ಮಂದಿಯಾಗ್ಲಿ,ತುತ್ತಿಗೆ ನೂರ ಮಂದಿಯಾಗ್ಲಿ'ಅಂತ ಕಳಕಳಿಯ ಹಾರೈಕಿ ಸಿಗ್ತದ. ನಮ್ಮ ಕಡೆ ಹಳ್ಳಿ ಮಂದಿ ಯಾರದರೆ ಊರಿಗೆ ಹೊಗಬೇಕಾದ್ರ ಬುತ್ತಿ ಕಟಗೊಂಡ ಹೋಗೊದ ಒಂದ ದೊಡ್ಡ ಸಂಭ್ರಮನ ಇರ್ತದ.
ಎಷ್ಟ ನಮೂನಿ ಅಡಗಿ ಮಾಡಿರ್ತಾರ ಅಂದ್ರ ನೋಡಿದ್ರ ಖುಷಿ ಅನಿಸ್ತದ,ಎಲ್ಲಾ ಜವಾರಿ ಊಟಾ ಅಂದ್ರ 'ಜ್ವ್ಯಾಳದ ರೊಟ್ಟಿ,ಸಜ್ಜಿ ರೊಟ್ಟಿ,ಚಪಾತಿ,ಮುಳ್ಳಗಾಯಿ ತುಂಬಗಾಯಿ ಪಲ್ಯೆ,ಕಾಳ ಪಲ್ಯೆ,ಪುಂಡ ಪಲ್ಯೆ,ಹೆಸರ ಹಿಟ್ಟಿನ ಝುಣಕದ ವಡಿ,ಕೆಂಪ ಚಟ್ನಿ,ಹಸೆ ಕಾಯಿ ಚಟ್ನಿ,ಗುರೆಳ್ಳ ಹಿಂಡಿ,ಶೆಂಗಾ ಹಿಂಡಿ,ಅಗಸಿ ಹಿಂಡಿ,ಬಳ್ಳೊಳ್ಳಿ ಖಾರಾ,ಪುಠಾಣಿ ಚಟ್ನಿಪುಡಿ,ಉಪ್ಪಿನಕಾಯಿ,ಶೇಂಗಾ ಹೊಳಿಗಿ,ಎಳ್ಳ ಹೊಳಿಗಿ,ಬೆಣ್ಣಿ,ಮೊಸರು,ಮತ್ತ ಬಳ್ಳೊಳ್ಳಿ ಒಗ್ಗರಣಿ ಹಾಕಿದ ಮೊಸರು ಅನ್ನ,ಇಷ್ಟೆಲ್ಲಾ ತಾವು ಹೊದ ಸಂಬಂಧಿಕರ ಮನಿ ಆಜುಬಾಜು ಮನಿಯವರಿಗು ಹಂಚೊ ಅಷ್ಟು ಕಟಗೊಂಡ ಹೊಗಿರ್ತಾರ. ಅದಕ್ಕ ನಮ್ಮ ಮಾಮಾ ಹಳ್ಳಿಕಡೆನ ಛಂದ ಇರ್ತದ ನಮ್ಮ ಕಡೆ ಎನದ ಸುಟ್ಟ ಕೈ ಬಗಲಾಗ ಇಟಗೊಂಡ ಬರ್ತಾವ ಅಂತಿರತಾನ.
ಹಿಂಗ ಒಂದಿನಾ ನಮ್ಮನಿ ಮೊಸರು ಕೊಡುವಾಕಿ 'ಅವ್ವಾರ ನಾ ನಾಳಿಂದ 4 ದಿನಾ ಮೊಸರ ಕೊಡಂಗಿಲ್ಲರಿ ಮನ್ಯಾಗ ಹೆಪ್ಪ ಹಾಕ್ಕೊರಿ, ಮತ್ತ ನಮ್ಮನ್ಯಾಗ ನಾವೆಲ್ಲಾರು ಬಂಡಿ ಕಟಗೊಂಡು ಶಂಕರಿ ಜಾತ್ರಿಗೆ ಹೋಗ್ತೇವಿ ರಿ ಅಲ್ಲೆ ವಸತಿ ಇರ್ತೆವಿ ರಿ ಅಂದ್ಲು. ಆಕಿ ಹೊದಮ್ಯಾಲೆ ನಾ ನಮ್ಮತ್ತಿಯವರನ್ನ ಕೇಳಿದೆ' ಅಮ್ಮಾ ಮತ್ತ ಮಸರನ್ಯಾಕಿ ಹೇಳಿದ್ಲು ಆಕಿ ನಾಳಿಂದ ಬರಂಗಿಲ್ಲಂತ ಜಾತ್ರಿಗೆ ಹೋಗ್ತಾಳಂತ, ಅಲ್ಲಾ ಬಂಡ್ಯಾಗ ಹೇಂಗ ಹೊಗ್ತಾರ,ಮತ್ತ ಅಲ್ಲೇ 4 ದಿನಾ ಎಲ್ಲಿರತಾರ ಅಂತ, ಅದಕ್ಕ ಅವರಂದ್ರು 'ಬನದಹುಣ್ಣಿಮು ಮುಂದ ಬನಶಂಕರಿ ಜಾತ್ರಿ ಆಗತದ ಭಾಳ ದೊಡ್ಡ ಜಾತ್ರಿ ಆಗತದ,1 ತಿಂಗಳ ತನಕಾ ಇರ್ತದ,ಎಲ್ಲೆಲ್ಲಿಂದೊ ಜನಾ ಬರ್ತದ,ನೋಡಬೇಕ ಆ ಛಂದಾನ,ಸುತ್ತಮುತ್ತಲ ಹಳ್ಳ್ಯಾಗಿನ ಮಂದಿ ಬಂಡಿ ಕಟಗೊಂಡ ಜಾತ್ರಿ ಮಾಡಲಿಕ್ಕೆ ಬರತಾರ. ಬಂಡಿಯೊಳಗ ವ್ಯವಸ್ಥಾ ಹೆಂಗಿರತದ ಗೊತ್ತೇನ ಈಗಿನ ನಿಮ್ಮ ವಿಮಾನದಾಗ ಹೊದ್ರು ಅದರಷ್ಟ ಆರಾಮ ಅನಸಂಗಿಲ್ಲ,ಬಂಡ್ಯಾಗ ಮೆತ್ತಗ ಹುಲ್ಲ ಹಾಸಿ ಮ್ಯಾಲೆ ಜಮಖಾನಿ ಹಾಸಿ ಕುಡಲಿಕ್ಕೆ ಎಷ್ಟ ಮಸ್ತ ಮೆತ್ತಗ ಹಾಸಿಗಿ ಮಾಡಕೊಂಡಿರತಾರ' ಮತ್ತ ಅಡಗಿ ಮಾಡಲಿಕ್ಕೆ ಎನೇನು ಸಾಮಾನು ಬೇಕಾಗಗ್ತದ ಅದನ್ನೆಲ್ಲಾ ವ್ಯವಸ್ಥಿರ ಕಟಗೊಂಡ ಹೋಗಿರತಾರ. ಅಲ್ಲೆ 3 ಕಲ್ಲ ಇಟ್ಟು ಒಲಿ ಹೂಡಿ ಅಡಗಿ ಮಾಡ್ಕೊತಾರ,ಅಲ್ಲೆ ಸರಸ್ವತಿ ಹಳ್ಳದಾಗ ಸ್ನಾನಾ ಮಾಡತಾರ,ಮುಂಜಾನೆಲ್ಲಾ ಜಾತ್ರ್ಯಾಗ ಅಡ್ಡ್ಯಾಡಿ ತಮಗ ಎನೇನ ಬೇಕ ಖರಿದಿ ಮಾಡ್ತಾರ ಮತ್ತ ರಾತ್ರಿ ನಾಟಕ,ಟೆಂಟ್ನ್ಯಾಗ ಸಿನೇಮಾ ನೋಡ್ತಾರ. ಈ ಹಳ್ಳಿ ಮಂದಿ ಭಾಳ ಮುಗ್ಧ ಇರತಾರ ಇವರ ಜೀವನಾ ಭಾಳ ಸೀಮಿತ ಇರ್ತದ,ಮತ್ತ ಇವರಿಗೆಲ್ಲಾ ಹಗಲೆಲ್ಲಾ ಪ್ಯಾಟಿಗೆ ಹೋಗಬೇಕು, ಶಾಪಿಂಗ ಮಾಡಬೇಕು, ಬ್ಯಾರೆ ಬ್ಯಾರೆ ಊರಿಗೆ ಹೋಗಬೇಕು ಎನರೆ ಹೊಸಾದನ್ನ ನೋಡಬೇಕು,ಅನ್ನೊಹಂತಾ ಯಾವ ಆಶಾನು ಇರಂಗಿಲ್ಲಾ ತಾವಾತು ತಮ್ಮ ದುಡಕ್ಯಾತು ನಿಶ್ಚಿಂತಿಯಿಂದ ಅರಾಮಾಗಿ ಇರ್ತಾರ. ಅವರೆಲ್ಲಾ ತಮ್ಮ ಸಣ್ಣ ಪುಟ್ಟ ಆಸೆಗಳನ್ನೆಲ್ಲಾ ತಿರಿಸಿಕೊಳ್ಳೊದು ಈ ಬನಶಂಕರಿ ಜಾತ್ರಿಯೊಳಗನ,ಮನಿಗೆ ಎನರೆ ತಗೊಳೊದ ಇರಲಿ, ಹೊಲಮನಿಗೆ ಬೇಕಾದ ಸಾಮಾನ ಇರಲಿ, ಅರವಿ ಅಂಚಡಿ ಆಗಲಿ, ಮತ್ತ ಹೆಣ್ಣ ಮಕ್ಕಳ ಅಲಂಕಾರದ ವಸ್ತುಗಳಾಗಲಿ,ಸಣ್ಣ ಮಕ್ಕಳ ಆಟಿಗಿಸಾಮಾನು,ಅದೇನ ಅವರ ಜೀವನಾವಶ್ಯಕ ವಸ್ತುಗಳ ಖರೀದಿ ಅವರು ಈ ಶಂಕರಿ ಜಾತ್ರಯೋಳಗ ಮಾಡ್ತಾರ,ಮತ್ತ ವರ್ಷಪೂರ್ತಿ ದುಡದದ್ದರಾಗ ಸ್ವಲ್ಪ ರೊಕ್ಕಾ ಬನಶಂಕರಿ ಜಾರ್ತ್ಯಾಗ ಖರ್ಚ ಮಾಡಬೇಕಂತ ಕೂಡಿಸಿಟ್ಟಿರತಾರ. ಮಕ್ಕಳೇನರ ಹಟಾ ಮಾಡ್ಲಿಕತ್ತಿದ್ರ ಶಂಕರಿ ಜಾತ್ರ್ಯಾಗ ಕೊಡಸ್ತೆನೇಳ ಅಂತ ರಮಸ್ತಾರ. ಹೀಂಗ ನಮ್ಮತ್ತಿಯವರು ನಂಗ ಈ ಜಾತ್ರಿ ಅನ್ನೊದು ಇಲ್ಲಿಯ ಜನರಿಗೆ ಎಷ್ಟ ಮಹತ್ವದ್ದು ಅಂತ ಹೆಳಿದ್ರು ಅದನ್ನ ಕೇಳಿ ಖರೆನ ಎಷ್ಟ ಛೊಲೊ ಅನಿಸ್ತು.ಹಂಗ ಈ ಜಾತ್ರಿಗು ಹೋಗಬೇಕನಿಸ್ತು.
ನಾ ಧಾರವಾಡದಾಗ ನವರಾತ್ರಿ ಯೊಳಗ ನಡಿಯೊ ಶ್ರೀ ಲಕ್ಷೀನಾರಾಯಣನ ಗುಡಿ ಜಾತ್ರಿ ನೋಡಿದ್ದೆ,ಆದ್ರ ಬನಶಂಕರಿ ಜಾತ್ರಿ ಹಂತಾ ದೊಡ್ಡ ಪ್ರಮಾಣದ ಜಾತ್ರಿ ನೋಡಿದ್ದಿಲ್ಲ, ಎಲ್ಲೆ ನೋಡಿದ್ರು ಜನಾ ಜಾತ್ರಿ. ಖರೆ ನಾ ಭಾಳ ಆಶ್ಚರ್ಯದಿಂದ ಪ್ರತಿಯೊಂದನ್ನು ನೋಡ್ಕೊತ ಹೊಂಟಿದ್ದೆ. ಜಾತ್ರಿ ಪೂರ್ತಿ ಭರ್ಜರಿಯಾಗಿ ತುಂಬಿ ತುಳಕಾಡತಿತ್ತು. ಎಲ್ಲೇಲ್ಲಿಂದನೊ ಮಂದಿ ತಾಯಿ ಬನಶಂಕರಿ ದರ್ಶನಕ್ಕ ಬಂದಿದ್ರು. ಭಜಿ ಮಿರ್ಚಿ ಅಂಗಡಿ,ಅವರದಂತು ಜೋರ ವ್ಯಾಪಾರ ನಡದಿತ್ತು.ಒಂದ 7,8 ನಾಟಕ ಕಂಪನಿಗೊಳ ಬಂದಿದ್ವು,ಸ್ಟೆಷನರಿ ಅಂಗಡಿ,ಭಾಂಡಿಸಾಮಾನ ಅಂಗಡಿ,ಅರವಿ ಅಂಗಡಿ,ಮಕ್ಕಳಿಗೆ ಆಡ್ಲಿಕ್ಕೆ ಜೋಕಾಲಿ,ಚಕ್ರ,ಮತ್ತ ಒಂದೆರಡ ಸಿನೇಮಾ ಟೆಂಟ್ ಗೊಳು, ಮತ್ತ ಇದೆಲ್ಲಾದರ ನಡುವ ಹಳ್ಳಿ ಹೆಣ್ಣಮಕ್ಕಳು ತಲಿ ಮ್ಯಾಲೆ ರೊಟ್ಟಿ,ಪಲ್ಲೆ ಬುಟ್ಟಿ ಇಟಗೊಂಡ ಊಟಾ ಮಾಡಬರ್ರಿ ಅಂತ ಕರಿಲಿಕತ್ತಿದ್ರು. ಹಿಂಗ ಒಬ್ಬಾಕಿ ನಮ್ಮನ್ನ ಊಟಾ ಮಾಡಬರ್ರಿ ಅಂತ ಕಾಡಿಸಿ ಕರಕೊಂಡ ಹೋಗಿ ಒಂದ ಕಡೆ ನೆರಳ ಇದ್ದ ಜಾಗಾ ನೋಡಿ ಕುಡಿಸಿದ್ಲು. ಆಕಿ ರೊಟ್ಟಿ ಬುಟ್ಟಿ ನೊಡಿದ್ರ ಮನ್ಯಾಗ ಊಟಕ ಕುತೆವೆನೊ ಅಂತ ಅನಿಸ್ತಿತ್ತು. ಜ್ವಾಳದ ರೊಟ್ಟಿ ಎರಡ ಥರದ ಪಲ್ಯಾ,ಎಳ್ಳ ಹೊಳಿಗಿ,ಕೆಂಪಚಟ್ನಿ,ಜೊಡಿ ಮೆಂತೆ ಪಲ್ಯಾ,ಮೂಲಂಗಿ,ಇಷ್ಟೆಲ್ಲಾದರ ಜೊಡಿಗೆ ಮೊಸರಿನ ಗಡಗಿ ತಂದಿದ್ಲು. ಮಸ್ತ ಊಟಾ ಮಾಡಿ ಮತ್ತ ಜಾತ್ರ್ಯಾಗ ಅಡದಡ್ಯಾಡಲಿಕ್ಕೆ ಹೊದ್ವಿ. ಜಾತ್ರ್ಯಾಗ ಶೇ75% ರಷ್ಟು ಸುತ್ತಮುತ್ತಲಿನ ಹಳ್ಳಿ ಮಂದಿನ ಇದ್ರು ಅವರ ಮುಖದಾಗಿನ ಸಡಗರ ನೋಡಿದ್ರ ಭಾಳ ಖುಷಿ ಅನಿಸ್ತಿತ್ತು.ಹಂಗ ಅಕಸ್ಮಾತ ಗುಡಿ ಹಿಂದ ಹೊದ್ವಿ ಅಲ್ಲೇ ಭಾಳಷ್ಟ ಟೆಂಟ್ ಗುಡಸಲಾ ಹಾಕ್ಕೊಂಡ ಮಂದಿ ಇದ್ರು ಅವರ ಹತ್ರ ಹೋಗಿ ಮಾತಾಡಿಸಿದ್ರ ಗೊತ್ತಾತು ಅವರು ಜಾತ್ರ್ಯಾಗ ಅಂಗಡಿ ಹಾಕಿದವರು ಅಂತ.ಎಲ್ಲಿಂದೊ ದೂರದ ಊರಿಂದ ಸಂಸಾರ ಸಮೇತ ಬಂದು ಇಲ್ಲೇ ಆಟಗಿ ಸಾಮಾನು,ಬಳೆ ಸರಗಳ ,ಭಾಂಡಿಸಾಮಾನು,ಬಟ್ಟಿ,ರಗ್ಗುಚಾದರ ಅಂಗಡಿ,ಚಹಾದಂಗಡಿಗಳನ್ನ ಹಾಕಿ ಜಾತ್ರ್ಯಾಗ ವ್ಯಾಪಾರಮಾಡ್ಕೊತ ತಿಂಗಳಾನಗಟ್ಟಲೆ ಜಾತ್ರ್ಯಗ ದಿನ ಕಳಿತಾರ ಈ ಮಂದಿ. ಅಲ್ಲೇ ಟೆಂಟ್ ನ್ಯಾಗ ಅಡಗಿ ಮಾಡ್ಕೊಂಡ ಅಲ್ಲೆ ಹಳ್ಳದಾಗ ತಮ್ ದಿನ ನಿತ್ಯದ ಕಾರ್ಯಗಳನ್ನ ಮುಗಿಸಿಕೊಂಡ ಭಾಳ ಖುಷಿಯಿಂದ ಇರತಾರ.ತನ್ನ ಮಡಿಲಿಗೆ ಬಂದ ಯಾರನ್ನು ಆ ತಾಯಿ ಬನಶಂಕರಿ ನಿರಾಶೆ ಮಾಡಿ ಬರೆ ಕೈಯಿಂದ ಕಳಸಂಗಿಲ್ಲಾ. ಹೀಂಗ ಹಗಲೆಲ್ಲಾ ಜಾತ್ರ್ಯಾಗ ಅಡ್ಡ್ಯಾಡಿದ್ವಿ. ಜಾತ್ರಿಗೆ ಬಂದು ಮಿರ್ಚಿ ಮತ್ತ ಚುನಮರಿ ಗಿರಮಿಟ್ಟ್ ತಿನ್ಲಿಲ್ಲಂದ್ರ ಅದು ಜಾತ್ರಿ ಮಾಡಿಧಂಗ ಅಲ್ಲೆ ಅಲ್ಲಾ ಮತ್ತ,ಬಿಸಿ ಬಿಸಿ ಮಿರ್ಚಿ ತಿಂದು ಚಹಾ ಕುಡದು ಸಂಜಿಮುಂದ ನಾಟಕ ನೋಡಿದ್ವಿ. ರಾತ್ರಿ ಬೆಳತನಕಾ ಮಂದಿ ಜಾತ್ರ್ಯಾಗ ಅಡ್ಡ್ಯಾಡತಾರ. ಹಳ್ಳಿಯ ಮಂದಿ ವರ್ಷಕ್ಕೊಮ್ಮೆ ಸಿಗುವ ಈ ಮನರಂಜನೆಯ ಅವಕಾಶಾನ ಮನಃಸ್ಪೂರ್ತಿ ಅನುಭವಿಸ್ತಾರ. ನಾನು ಜಾತ್ರಿಯ ಸುದ್ದಿ ಮೆಲಕ ಹಾಕ್ಕೊತ ವಾಪಸ ಊರಿಗೆ ಬಂದೆ ಆವತ್ತಿಂದ ಇವತ್ತಿ ತನಕ ಪ್ರತಿ ವರ್ಷ ಜಾತ್ರಿಗೆ ಹೋಗೊದನ್ನ ಮಾತ್ರ ನಾ ಮರಿಯಂಗಿಲ್ಲಾ.ಪ್ರತಿ ವರ್ಷ ಅದ ಜಾತ್ರಿನ ಇರ್ತದ ಆದ್ರ ಮತ್ತು ಎನೋ ಹೊಸಾದ ಅನಿಸ್ತದ. ಎಷ್ಟ ಹೇಳಿದ್ರು ಮುಗಿಯಂಗಿಲ್ಲಾ ಈ ಜಾತ್ರಿ ಸಂಭ್ರಮಾ ಮತ್ತ ಅವಕಾಶ ಸಿಕ್ರ ನಿಮ ಜೋತಿ ಎಲ್ಲಾನು ಹಂಚ್ಕೊತೇನಿ. ನೀವು ಎಲ್ಲಾರು ಬರ್ರಿ ನಮ್ಮ ಬದಾಮಿ ಶ್ರೀ ಬನಶಂಕರಿ ಜಾತ್ರಿಗೆ. ಬಂದ ನೊಡ್ರಿ ಇಲ್ಲಿಯ ಜಾತ್ರಿ ಗಮ್ಮತ್ತು....
Comments
ಗ್ರೇಟ್ ! ಗ್ರೇಟ್! ... ಜಾತ್ರಿ
In reply to ಗ್ರೇಟ್ ! ಗ್ರೇಟ್! ... ಜಾತ್ರಿ by sasi.hebbar
ಥ್ಯಾಂಕ್ಯೂ ರಿ... ಈಗನು ಜಾತ್ರಿ
In reply to ಥ್ಯಾಂಕ್ಯೂ ರಿ... ಈಗನು ಜಾತ್ರಿ by Suman Desai
ಒಟ್ಟಾಗ್ ಬನಶ0ಕರಿ ಜಾತ್ರಿ
In reply to ಥ್ಯಾಂಕ್ಯೂ ರಿ... ಈಗನು ಜಾತ್ರಿ by Suman Desai
ಒಟ್ಟಾಗ್ ಬನಶ0ಕರಿ ಜಾತ್ರಿ
ಮೇಡಂ ವಂದನೆಗಳು
ನಿಮ್ಮ್ ಬರಹದ ಶೈಲಿ ಚೆನ್ನಾಗಿದೆ,
ಅವ್ವಾರssss...ಭಾಳ ಛಂದ ಬರ್ದಿರಿ.