ಉತ್ತರ ಕರ್ನಾಟಕ ಅಭಿವೃದ್ದಿಗೆ ಮುಖ್ಯಮಂತ್ರಿಯಿಂದ ಟಾನಿಕ್

ರಾಜಕೀಯ ಗದ್ದಲ, ಪ್ರತಿಭಟನೆ, ಕೋಲಾಹಲಗಳೊಂದಿಗೆ ೧೦ ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನ, ಉತ್ತರ ಕರ್ನಾಟಕ ಭಾಗಕ್ಕೆ ಪೂರಕವಾದ ೮ ಪ್ರಮುಖ ಘೋಷಣೆಗಳೊಂದಿಗೆ ಸಮಾಪನಗೊಂಡಿದೆ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಟಾನದ ಫಲಶ್ರುತಿ ಅಧ್ಯಯನಕ್ಕೆ ಉನ್ನತಾಧಿಕಾರ ಸಮಿತಿ, ಕೈಗಾರಿಕಾ ವಸಾಹತುಗಳ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ, ಸಹಕಾರಿ ಬ್ಯಾಂಕ್ ಗಳಿಗೆ ಸಾಲದ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳುವ ಮೂಲಕ ಆ ಭಾಗಕ್ಕೆ ಹೊಸ ‘ಟಾನಿಕ್' ನೀಡಿದ್ದಾರೆ. ಈ ಅಧಿವೇಶನದಲ್ಲಿ ಬರ, ನೀರಾವರಿ, ಭ್ರೂಣ ಹತ್ಯೆ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ, ಜತೆಗೆ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕುವ, ವಕೀಲರ ಮೇಲೆ ಹಲ್ಲೆ ನಡೆದರೆ ಶಿಕ್ಷಿಸುವ ಮಸೂದೆಗಳು ಸೇರಿದಂತೆ ಹಲವಾರು ವಿಧೇಯಕಗಳು ಅಂಗೀಕಾರವಾಗಿದೆ. ರಾಜಕೀಯ ಜಟಾಪಟಿ ನಡುವೆಯೂ ಉತ್ತರ ಕರ್ನಾಟಕದ ಕುರಿತ ಚರ್ಚೆಗೆ ಅವಕಾಶವೇನೋ ಸಿಕ್ಕಿದೆ. ಆದರೆ ಗದ್ದಲಕ್ಕೆ ದೊರೆತಷ್ಟು ಅಲ್ಲ. ಬೆಳಗಾವಿಯಲ್ಲಿ ಈ ರೀತಿ ಅಧಿವೇಶನ ನಡೆಯುತ್ತಿರುವುದು, ಇಡೀ ಸರ್ಕಾರವೇ ಅಲ್ಲಿಗೆ ೧೦ ದಿನಗಳ ಕಾಲ ಸ್ಥಳಾಂತರಗೊಳ್ಳುವುದು ಹಲವು ವರ್ಷಗಳಿಂದ ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ. ಆದರೆ ಉತ್ತರ ಕರ್ನಾಟಕದ ನಿರೀಕ್ಷೆಯನ್ನು ಈ ಅಧಿವೇಶಗಳು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಆಗಿಲ್ಲ ಎಂಬುದು ವಾಸ್ತವ.
ಬೆಳಗಾವಿಯಲ್ಲಿ ನಡೆಯುವ ಕಲಾಪದಲ್ಲಿ ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತದೆ ಎಂದು ಜನಸಾಮಾನ್ಯರು ಅಪಾರ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಅದು ಸಹಜ ಕೂಡ. ಪ್ರತಿ ಬಾರಿ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಸಿಗುತ್ತದೆಯಾದರೂ, ಹೆಚ್ಚಿನ ಕಾಲಾವಕಾಶ ದೊರೆಯುವುದಿಲ್ಲ. ಕೆಲವರನ್ನು ಹೊರತುಪಡಿಸಿ ಆ ಭಾಗದ ಎಲ್ಲ ಶಾಸಕರು ಕೂಡ ಅತ್ಯುತ್ಸಾಹವನ್ನು ತೋರುವುದಿಲ್ಲ. ಈ ಬಾರಿ ೧೦ ದಿನಗಳ ಕಲಾಪದಲ್ಲಿ ೧೧ ಗಂಟೆ ಮಾತ್ರ ಉತ್ತರ ಕರ್ನಾಟಕ ಬಗ್ಗೆ ಚರ್ಚೆಯಾಗಿದೆ. ೪೨ ಶಾಸಕರು ಮಾತ್ರ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ ಎಂಬುದೇ ಇದನ್ನು ತೋರಿಸುತ್ತದೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿತ್ತು. ಅಂದ ಹಾಗೆ ಬೆಳಗಾವಿಯಲ್ಲಿ ಕಲಾಪ ನಡೆದಾಗ ಮಾತ್ರ ಉತ್ತರ ಕರ್ನಾಟಕ ಬಗ್ಗೆ ಚರ್ಚೆಯಾಗಬೇಕು ಎಂದೇನಿಲ್ಲ. ಬೆಂಗಳೂರಿನಲ್ಲಿ ನಡೆವ ಅಧಿವೇಶನದಲ್ಲೂ ಶಾಸಕರು ದನಿ ಎತ್ತಬೇಕು. ಆದ್ರೆ ಹಾಗಾಗುತ್ತಿಲ್ಲ. ಇದೀಗ ಈ ಅಧಿವೇಶನದಲ್ಲಿ ಸಿ ಎಂ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಅವು ತ್ವರಿತವಾಗಿ ಜಾರಿಗೆ ಬರಬೇಕಾಗಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೬-೧೨-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ