ಉತ್ಸವ ಮೂರ್ತಿಗಳು

ಉತ್ಸವ ಮೂರ್ತಿಗಳು

 

ಸಾಮಾನ್ಯವಾಗಿ ವಾರಾಂತ್ಯಗಳು ಶುಕ್ರವಾರ ಪ್ರಾರಂಭವಾಗಿ ರವಿವಾರ ರಾತ್ರಿ ದುಃಖಭರಿತವಾಗಿ ಕಳೆದು ಹೋಗೋದು ಸರ್ವೆ ಸಾಮಾನ್ಯ. ಈವಾಗ ಕೆಲವು ದಿನಗಳಿಂದ ವಾರಾಂತ್ಯ ಎನ್ನುವುದು ತುಂಭಾ ಬೇಸರವಾಗಿ ಹೋಗಿತ್ತು. ಹೆಂಡತಿ ಬೇರೆ ಊರಲಿದ್ದಳು, ಇನ್ನು ಅವಳು ಬರೋದಕ್ಕೆ ಕನಿಷ್ಠ ಆರು ತಿಂಗಳಾದರೂ ಆಗಬಹುದೇನೋ ಎನ್ನುವುದನ್ನ ನೆನೆದಾಗಂತು ಇನ್ನೂ ಬೇಸರ ಉಕ್ಕೂಕ್ಕಿ ಬರುತಿತ್ತು. ಮನೆ ಅಂತಾ ಕರಿಯುವ ನಾನು ವಾಸ ಮಾಡುವ ಬಾಡಿಗೆ ಮನೆಯಲ್ಲಿ ಸಧ್ಯಕ್ಕೆ ನಾನು ಮತ್ತು ನಾನು ಹೊಸದಾಗಿ ಕೊಂಡುತಂದ ಗಣಕಯಂತ್ರಗಳು ಮಾತ್ರ. ನನಗೆ ಅಂತರ್ಜಾಲದಲ್ಲಂತೂ ಅದೇನು ಆಸಕ್ತಿ ಅಂದರೆ, ಒಮ್ಮೆ ಅದರಲ್ಲಿ ಮುಳುಗಿದನೆಂದರೆ ಸಮಯ ಹೋದದ್ದೇ ಗೊತ್ತಾಗಲ್ಲ.

ಹೀಗೆ ಆದಿನ ಶುಕ್ರವಾರ ರಾತ್ರಿ ಅಂತರ್ಜಾಲದಲ್ಲಿ ಮುಳುಗಿದ್ದಾಗ ನಮ್ಮ ಮಾವನ ಮಗಳು ದೂರವಾಣಿ ಕರೆ ಮಾಡಿ ರವಿವಾರ ಊಟಕ್ಕೆ ಬರ ಹೆಳಿದ್ದಳು. ಅವರಿಗೆ ನಾನೊಬ್ಬನೇ ಇದ್ದಿನಿ ಅಂತಾ ಬೇಸರವಾದರೆ, ನನಗೆ ಅಲ್ಲಿಗೆ ಹೋಗಬೇಕಲ್ಲ ಅಂತಾ ಬೇಸರ. ಆದರೂ ಕೊನೆಯಲ್ಲಿ ರವಿವಾರ ಅವಳ ಮನೆಗೆ ಹೊರಡೋಣ ಅಂತ ನಿಶ್ಚಯಿಸಿದೆ. ಅವರಿರೋದು ಕಮಲಾನಗರದಲ್ಲಾದರೆ ನಾನಿರೋದು ಜೇ. ಪಿ. ನಗರದಲ್ಲಿ. ಎರಡೂ ಪ್ರದೇಶಗಳ ನಡುವಿನ ಅಂತರ 20 ರಿಂದ 25 ಕಿ.ಮಿ. ಆದರೂ ಇಲ್ಲಿಂದ ಅಲ್ಲಿಗೆ ಹೋಗಲು ಕನಿಷ್ಠ ಒಂದುವರೆ ತಾಸುಗಳು ಬೇಕಿದ್ದವು. ಅಷ್ಟೊಂದು ಟ್ರಾಪಿಕ್. ಆದಿನ ರವಿವಾರ ಆಗಿರೋದ್ರಿಂದ ಅಷ್ಟೊಂದು ಟ್ರಾಪಿಕ್ ಇರಲಾರದು ಅನ್ನೋ ಧೈರ್ಯದಿಂದ ಹೊರಟೆ. ಅದ್ರಷ್ಟವಶಾತ್ ಆದಿನ ಅಷ್ಟೊಂದು ಟ್ರಾಪಿಕ್ ಇರಲಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಬಸ್ಸಲ್ಲಿ ಕುಳಿತು ನನ್ನ ಪ್ರಯಾಣವನ್ನ ಜೇ. ಪಿ. ನಗರದಿಂದ ಪ್ರಾರಂಭಿಸಿದೆ. ಬಸ್ಸು ಆಗಲೇ ಜಯನಗರ ಮತ್ತು ಲಾಲಬಾಗ ಪಶ್ಚಿಮ ಧ್ವಾರವನ್ನ ದಾಟಿ ಮಿನರ್ವ ವ್ರತ್ತದ ಕಡೆ ಸಾಗಿತ್ತು. ಯಾವಾಗಲು ಪ್ರಯಾಣಿಸುವಾಗ ಕಿಟಕಿ ಬದಿಯ ಆಸನದಲ್ಲಿ ಕುಳಿತು ರಸ್ತೆಯ ಇಕ್ಕಲಗಳಲ್ಲಿ ಏನಿದೆ ಎಂದು ನೋಡೋದು ನನ್ನ ಅಭ್ಯಾಸ. ಅದು ಆಗಾಗ ಪಯಣಿಸುವ ಪರಿಚಯದ ರಸ್ತೆಯೇ ಇರಲಿ ಅಥವಾ ಮೊದಲ ಭಾರಿಗೆ ಪಯಣಿಸುವ ರಸ್ತೆಯೇ ಇರಲಿ.

ಎಂದಿನಂತೆಯೇ ಹಾಗೆ ವಿಕ್ಷಿಸುತ್ತಾ ಸಾಗುವಾಗ ರಸ್ತೆಯ ಪಕ್ಕದಲ್ಲಿ ಕಂಡುಬಂದಿದ್ದು ಗಣೇಶನ ವಿಗ್ರಹಗಳ ಸಾಲು-ಸಾಲು. ಚಿಕ್ಕ ಇಲಿ ಗಾತ್ರದಿಂದ ಆನೆ ಗಾತ್ರದವರೆಗೂ ಇರುವ ಮೂರ್ತಿಗಳ ಸಾಲುಗಳು. ಆಗಲೇ ಗಣೇಶ ಚತುರ್ಥಿಗೆ ಇನ್ನೂ 2 ತಿಂಗಳು ಬಾಕಿ ಇರುವಾಗಲೇ ಅಷ್ಟೊಂದು ಮೂರ್ತಿಗಳು. ಮೈಮೇಲೆ ಬಣ್ಣ ಬಿಟ್ಟರೆ ಬೇರೆ ಯಾವುದೇ ಅಲಂಕಾರಗಳಿಲ್ಲ, ಹೂಗಳಿಲ್ಲ, ಗಂಧ ಇಲ್ಲ, ಜನ ಜಂಗುಳಿಗಲ್ಲ, ಗಣೇಶನಗಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲ, ನಮಸ್ಕಾರ ಹಾಕಿ ಪೂಜೆ ಸಲ್ಲಿಸುವ ಜನರಿಲ್ಲ, ಪಠಾಕ್ಷಿಗಳ ಅಬ್ಬರಗಳಿಲ್ಲ, ಎಂಥಾ ವಿಚಿತ್ರ ನೋಡಿ. ನೋಡಿ ನಗೆ ಬಂತು 

ಆದರೆ ಇದೇ ಮೂರ್ತಿಗಳಿಗೆ ಚೌತಿ ಪ್ರಾರಂಭವಾದರೆ ಸಾಕು, ಎಲ್ಲಿಲ್ಲದ ಬೇಡಿಕೆ. ಎಲ್ಲೋ ರಸ್ತೆಯ ಮೂಲೆಯಲ್ಲಿ ಇದ್ದ ಗಣೇಶನ ಮೂರ್ತಿಗಳು ರಾಜಮರ್ಯಾಧೆಯೋಂದಿಗೆ, ವೈಭವೋಪ್ರೇತವಾದ ಸಿಂಹಾಸನವೇರುತ್ತವೆ ಥೇಟ್ ನಮ್ಮ ರಾಜಕಾರಣಿಗಳ ಥರ. ಪೂಜೆ ಪುರಸ್ಕಾರಗಳಾಗುತ್ತದೆ. ರಸ್ತೆ ಬದಿಯಲ್ಲಿ ಯಾರ ಕಣ್ಣಿಗೂ ಬಿಳz ಸಾಮಾನ್ಯ ವ್ಯಕ್ತಿಯೊಬ್ಬ ಚುನಾವಣೆ ಗೆದ್ದು ಸಿಂಹಾಸನ ವೇರಿದರೆ ಯಾವ ಮರ್ಯಾಧೆ ಸಿಗುತ್ತದೋ ಅದೇ ರೀತಿ ಆ ಗಣೇಶ ಮೂರ್ತಿಗಳಿಗೂ ಸಹ ಎಲ್ಲಿಲ್ಲದ ರಾಜ ಮರ್ಯಾಧೆ. ಬೆಂಗಳೂರಲ್ಲಂತೂ ಬಿಡಿ, ಬಾದ್ರಪದ ಚೌಥಿಯಿಂದ ಪ್ರಾರಂಭವಾದ ಗಣೇಶೋತ್ಸವ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದೊಂದಿಗೆ ಮುಖ್ತಾಯ ಗೊಳ್ಳುತ್ತದೆ. ಆ ಮೇಲೆ ಜನವರಿ ಕೊನೆವರೆಗೂ ರಾಜ್ಯೋತ್ಸವದ ಸರದಿ. 

ಒಂದೊಂದು ದಿನಾ ಒಂದೊಂದು ಬೀದಿಯಲ್ಲಿ ಗಣೇಶೋತ್ಸವ, ಅದೂ ಸಂಗೀತ ಸಂಜೆಯಿದ್ದರೆ ಮಾತ್ರ. ಯಾವಾಗ ಸಂಗೀತ ಸಂಜೆ ನಡೆಸುವ ತಂಡ ಸಿಗುತ್ತದೋ ಅಲ್ಲಿವರೆಗೂ ಕಾದು , ಅದು ಸಿಕ್ಕೊಡನೆ ಗಣೇಶನ ಪ್ರತಿಷ್ಟಾಪನೆ. ಒಂದು ಕಡೆ ಗಣೇಶನ ವಿಗ್ರಹ ರಾರಾಜಿಸುತ್ತಿದ್ದರೆ, ಅದರ ಪಕ್ಕದಲ್ಲೆ ಸಂಗೀತ ಸಂಜೆಯ ಕರ್ಕಶ ಸಂಗೀತ, 'ಬಾರೋ, ಬಾರೋ ಕಲ್ಯಾಣ ಮಂಟಪಕ್ಕೆ ಬಾರೋ' ಅಂತಾ. ಪಾಪ ಆ ಬ್ರಹ್ಮಚಾರಿ ಗಣೇಶ ಯಾರ ಮದುವೆಗೆ ಬರಬೇಕೋ ಅಂತ ಗೊತ್ತಿಲ್ಲ. ಹಾಗೇ ಕನ್ನಡ ರಾಜ್ಯೋತ್ಸವದ ದಿನ 'ಅಪ್ಪುಡ ಪೋಡ, ಪೋಡ' ಅನ್ನುವ ತಮಿಳು ಸಂಗೀತ. ಇದು ನಮ್ಮ ಬೆಂಗಳೂರಿನ ಸದ್ಯದ ಪರಿಸ್ಥಿತಿ. 

ಉತ್ಸವಗಳು ಪ್ರಾರಂಭಾಗುತ್ತಿದ್ದ ಹಾಗೆ ಚಂದಾ ವಸುಲಿಗಾರರ ಹಾವಳಿ ಪ್ರಾರಂಭವಾಗುತ್ತದೆ. ಉತ್ಸವದ ಪ್ರಾರಂಭಕ್ಕೆ ಇನ್ನೂ ಒಂದು ವಾರ ಇದೆ ಅನ್ನುವಾಗ ಕೈಯಲ್ಲಿ ಒಂದು ರಸೀದಿ ಪುಸ್ತಕ ಹಿಡಿದು, ಅದರ ಮೊದಲ ಕೆಲವು ಹಾಳೆಗಳಲ್ಲಿ 5000 ರೂ, 2000 ರೂ. ಅಂತಾ ಬರೆದು ಮನೆ ಸುತ್ತುವುದು. ಅಷ್ಟೇ ಹಣವನ್ನು ಮನೆಯವರು ಕೊಡಲಿ ಅನ್ನುವುದು ಅವರ ಉದ್ದೇಶ. ಕೆಲವರಿದ್ದಾರೆ ಬಿಡಿ, ತಮ್ಮ ಒಣ ಪ್ರತಿಷ್ಟೆಯನ್ನು ಕಾಪಾಡಿಕೊಂಡು ಬರುವವರು. ಅಂತವರು ಇದನ್ನೆಲ್ಲ ನಂಬಿಯೋ ಅಥವಾ ತಮ್ಮ ಪ್ರತಿಷ್ಟೆ ಎಲ್ಲಿ ಕಳೆಗುಂದಿ ಹೋಗತ್ತೋ ಅಂತಾ ತಿಳಿದು ಕೇಳಿದಷ್ಟು ಹಣ ಕೊಡುವವರು ಇದ್ದಾರೆ. ಇಂತವರಿಗೆಲ್ಲ ನಾವೇನು ಮಾಡಕ್ಕಾಗಲ್ಲ. ಇರುಳು ಕಂಡ ಬಾವಿಗೆ ಹಗಲಲ್ಲಿ ಬಿಳುವಂತವರಿಗೆ ನಾವೇನು ಮಾಡಕ್ಕಾಗಲ್ಲ.

ಈ ಚಂದಾ ವಸುಲಿ ಮಾಡುವವರ ವಿಷಯ ಬಂದಾಗ ಕಳೆದ ವರ್ಷದ ಒಂದು ಚಂದಾ ವಸುಲಿಯ ಪ್ರಸಂಗ ನೆನಪಾಯಿತು. ಆಗಲೇ ಚೌತಿ ಕಳೆದು ಒಂದು ತಿಂಗಳಾಗಿತ್ತು. ನಾನು ಬೆಳಿಗ್ಗೆ ಎದ್ದು ಸ್ನಾನಮಾಡಿ ಕಛೇರಿಗೆ ಹೋಗುವ ಸಿದ್ದತೆಯಲ್ಲಿದ್ದಾಗಲೇ ಯಾರೋ ಬಾಗಿಲು ತಟ್ಟಿದಂತಾಗಿ, ಹೋಗಿ ಬಾಗಿಲು ತೆರೆದರೆ ನಾಲ್ಕಾರು ಹುಡುಗರು. ಮನೆಯಲ್ಲಿ ನಾನೊರ್ವನೇ ಇದ್ದುದರಿಂದ ಸ್ವಲ್ಪ ಹೆದರಿಕೆ ಆದರೂ ಧೈರ್ಯವಾಗಿ ಯಾರು ಅಂತಾ ಕೇಳಿದಾಗ, ತಾವು ಪಕ್ಕದ ಬೀದಿಲಿ ನಾಡಿದ್ದು ಗಣೇಶನ ಉತ್ಸವ ಮಾಡ್ತಾ ಇದ್ದೀವಿ, ಅದಕ್ಕೆ ಚಂದಾ ಕೇಳಲು ಬಂದಿದ್ದಿವಿ ಅಂದರು. ಆಗ ನನ್ನ ಕಿಸೆಯಲ್ಲಿ ಇದ್ದುದು 100 ರೂಪಾಯಿ ಮತ್ತು ಏ.ಟಿ.ಎಮ್. ಕಾರ್ಡ ಮಾತ್ರ. ಕಛೇರಿಗೆ ಹೋಗುವ ಗಡಿಬಿಡಿ ಬೇರೇ ಇದ್ದುದರಿಂದ, ಏ.ಟಿ.ಎಮ್. ಅಲ್ಲಿ ಆಮೇಲೆ ಹಣ ತೆಗೆದು ಕೊಂಡರಾಯಿತು ಅಂತಾ ತಿಳಿದು ಆ ಇದ್ದ ನೂರು ರೂಪಾಯಿಯನ್ನು ಅವರಿಗೆ ಕೊಡಲು ಹೊರಟೆ, ಅವರು ಹಣವನ್ನು ತೆಗೆದು ಕೊಳ್ಳದೆ ಅವರ ಕೈಯಲ್ಲಿದ್ದ ರಸೀದಿ ಪುಸ್ತಕ ತೋರಿಸಿ ನಾನು ಕನಿಷ್ಟ 500 ರೂಪಾಯಿ ಕೊಡಬೇಕು ಅಂತಾ ಕೇಳಿಕೊಂಡರು. ನಾನು ಅಷ್ಟು ಹಣ ನನ್ನ ಹತ್ತಿರ ಇಲ್ಲಾ ಅಂದಿದ್ದಕ್ಕೆ ಆ ನೂರು ರೂಪಾಯಿಯನ್ನು ತೆಗೆದು ಕೊಳ್ಳದೇ ಹೊರಟು ಹೋದರು. ನನಗೆ ಆ ನೂರು ರೂಪಾಯಿ ಉಳಿಯಿತಲ್ಲ ಅಂತಾ ಸಂತೋಷದಿಂದ ಕಛೇರಿಗೆ ಹೊರಟೆ.

ಮಾರನೇ ದಿನ ಶನಿವಾರ ವಾದದ್ದರಿಂದ ಮನೆಯಲ್ಲೇ ಇದ್ದೆ. ಸಾಯಂಕಾಲ ಸುಮಾರು ಐದು ಗಂಟೆಯ ಸಮಯ ಏನೋ ಓದುತ್ತಾ ಕುಳಿತಿದ್ದೆ, ಯಾರೋ ಬಾಗಿಲು ಬಡಿದ ಸದ್ದಾಗಿ, ಬಾಗಿಲು ತೆಗದರೆ ಮತ್ತೆ ಅದೇ ಚಂದಾದಾರರು. ಆದರೆ ನಿನ್ನೆ ರಸೀದಿ ಪುಸ್ತಕ ಹಿಡಿದವನು ಇವತ್ತು ಕೆಳಗಡೆ ನಿಂತು ತನ್ನ ಸ್ನೇಹಿತರನ್ನ ಮೇಲೆ ಕಳಿಸಿದ್ದ. ಆಗ ನನ್ನ ಹತ್ತಿರ ಇದ್ದುದು ಕೇವಲ 50 ರೂಪಾಯಿ, ಅದನ್ನೇ ತಂದು ಕೊಟ್ಟೆ. ಒಂದು ಮಾತಿಲ್ಲದೆ ಆ 50 ರೂಪಾಯಿ ತೆಗೆದು ಕೊಂಡು ಜಾಗ ಖಾಲಿ ಮಾಡಿದರು. 

ತಮ್ಮ ಒಣ ಪ್ರತಿಷ್ಟೆಗಾಗಿ, ಹುಚ್ಚು ಉತ್ಸಾಹಕ್ಕಾಗಿ ಯಾವುದಾದರು ಒಂದು ಉತ್ಸವ ಮಾಡಿ ಹಣ ಪೋಲು ಮಾಡುವುದು. ಒಂದು ಕಡೆ ಜನ ಸರಿಯಾದ ಹೊಟ್ಟೆಗೆ ಸರಿಯಾಗಿ ಊಟವಿಲ್ಲದೇ, ತೊಟ್ಟು ಕೊಳ್ಳಲು ಬಟ್ಟೇಗಳಿಲ್ಲದೇ ಜೀವನ ಸಾಗಿಸುತಿದ್ದರೆ, ಇನ್ನೊಂದು ಕಡೆ ಇವರ ಹುಚ್ಚು ದರ್ಭಾರು.


       ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ!