ಉದಯಗೀತೆ
ಬರಹ
ಗದಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ, ಹುಯಿಲಗೋಳರ ಕ್ಷಮೆ ಕೋರಿ, ಉದಯಗೀತೆ :
ಉದಯವಾಗಿದೆ ನಮ್ಮ ಚೆಲುವ ಕನ್ನಡನಾಡು
ಬದುಕು ಬಲು ಕಷ್ಟಕರವೆನಿಪ ಗೋಳಿನ ಗೂಡು
ರಾಜಕಾರಣದಿ ಕಿತ್ತಾಡುವರ ನೆಲೆವೀಡು
ಆಜನ್ಮ ವೈರಿಸದೃಶರು ಸೆಣೆಪ ರಣನಾಡು
ಓಜೆಯಿಂ ಹಿರಿದುಂಡ ಶಾಸಕರ ನಡೆ ಸೂಡು
ಭೋಜನದಿ ಮೈಮರೆತ ಅಧಿಕಾರಿಗಳ ಬೀಡು
ಸೊಕ್ಕಿಗ ಬಕಾಸುರರು ಬೆಳೆದು ಮೆರೆದಿಹ ನಾಡು
ಲೆಕ್ಕ ತೋರಿಸದೆ ಹಣ ಬಚ್ಚಿಡುವವರ ಗೂಡು
ಚೊಕ್ಕ ಕೈಗಳ ಹೊಂದಿದವರಿಗಿದು ಬೆಂಗಾಡು
ಬೊಕ್ಕಸದ ಲೂಟಿಯೈ ಇಲ್ಲಿ ನಡೆದಿದೆ ನೋಡು
ಪಾವನರು ಪರಭಾಷಿಕರು ಅವರದೀ ನಾಡು
ಈ ನೆಲದ ಮೂಲಭಾಷಿಕರಿಗಿದು ಹೊರನಾಡು
ಯಾವ ಕಾಲಕ್ಕೋ ಇದೆಲ್ಲ ಕಳೆವುದು ಕೇಡು?
ಕಾವನೇ ವೀರನಾರಾಯಣನು ಈ ನಾಡು?