ಉದಯವಾಯಿತು ವಿಜಯನಗರ
ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉಪಯುಕ್ತ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿನಲ್ಲಿ ವಿಂಗ್ ಕಮಾಂಡರ್ ಬಿ ಎಸ್ ಸುದರ್ಶನ್ ಅವರು ಬರೆದ ‘ಉದಯವಾಯಿತು ವಿಜಯನಗರ' ಪುಸ್ತಕ ನಿಲ್ಲುತ್ತದೆ. ಈ ಪುಸ್ತಕಕ್ಕೆ ಹೆಸರಾಂತ ಕಾದಂಬರಿಕಾರರಾದ ಸದ್ಯೋಜಾತ ಭಟ್ಟ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಾದ ‘ಕನ್ನಡಿಗ ಕುಲಕೆ ರತ್ನ ಕನ್ನಡಿ' ಎನ್ನುವ ಬರಹದಲ್ಲಿ ಬರೆದ ಕೆಲವೊಂದು ಸಾಲುಗಳು ಇಲ್ಲಿವೆ…
“ಭಾರತಕ್ಕೆ ವಿದೇಶಿಗರ ಆಗಮನವೇ ಹಾಗೆ. ಯಾವುದೋ ಕಲ್ಪನೆಯಲ್ಲಿ ಬಂದವರಿಗೆ ಇಲ್ಲಿನ ಜನರ ಆಚಾರ, ವಿಚಾರ, ಸಂಸ್ಕೃತಿ ಸಂಪ್ರದಾಯಗಳು ಹೊಸದಾದ ಜಗತ್ತನ್ನೇ ತೆರೆದಿಡುತ್ತವೆ. ಜಗತ್ತಿನ ಯಾವುದೇ ದೇಶ ಗಮನಿಸಿ. ಆ ದೇಶದಲ್ಲಿ ಇಲ್ಲಿನ ಸಾಂಸ್ಕೃತಿಕ ಬದುಕು ಕಾಣ ಸಿಗಲಿಕ್ಕಿಲ್ಲ. ಅದು ಈ ನೆಲದ ಗುಣ. ಆದುದರಿಂದಲೇ ಇಂಡೋ-ಗ್ರೀಕ್ ದೊರೆ ಎನ್ನಿಸಿಕೊಂಡ ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ ನ ರಾಯಭಾರಿ ಹೆಲಿಯೋಡೋರಸ್ ಎಂಬಾತನು ಕ್ರಿಸ್ತಪೂರ್ವ ೧೧೩ರಲ್ಲಿ ಮಧ್ಯ ಭಾರತದ ವಿದಿಶಾದಲ್ಲಿ ರಾಯಭಾರಿಯಾಗಿ ಬಂದಿದ್ದ. ಹಾಗೆ ಬಂದವನು ಇಲ್ಲಿನ ಆಚಾರ ವಿಚಾರ ಸಂಸ್ಕಾರಗಳಿಗೆ ಮನಸೋತು ಇಲ್ಲಿನ ಸಂಸ್ಕಾರ ಪಡೆದು, ಪರಮ ವೈಷ್ಣವ ಭಾಗವತ ತಾನು ಎನ್ನುತ್ತಾ ಗರುಡಗಂಭದ ಶಿಲಾ ಶಾಸನವನ್ನು ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯಲ್ಲಿ ಹಾಕಿಸುತ್ತಾನೆ. ಅಂದರೆ ಈ ನೆಲದ ಗುಣ ಅದ್ಯಾವುದೋ ನಮಗೆ ಗೊತ್ತಿರದ ಕಾಲದಿಂದಲೂ ಜಗತ್ತನ್ನೇ ಆಕರ್ಷಿಸಿದೆ. ಈ ದೇಶ ಎಂದೂ ಭಿಕ್ಷೆ ಬೇಡಿದ್ದಿಲ್ಲ ದೇಹೀ ಎಂದವರಿಗೆ ಕೊಟ್ಟಿದೆ.
ಈ ಕೃತಿಯಲ್ಲಿ ಅಲ್ಲಲ್ಲಿ ಕೃತಿಕಾರ ವಿಂಗ್ ಕಮಾಂಡರ್ ಸುದರ್ಶನ್ ಅವರು ರಾಜಧರ್ಮವನ್ನು ಹೇಳುತ್ತಾರೆ. ಅವರು ಚುಟುಕಾಗಿ ಹೇಳಿದರೂ ಅರ್ಥ ವೈಶಾಲ್ಯ ಬಹಳ ಚೆನ್ನಾಗಿದೆ. ರಾಜಧರ್ಮದಲ್ಲಿ ಹಿಂಸೆಗೆ ಅರ್ಥವಿಲ್ಲ ಎನ್ನುವ ಅವರ ಅಭಿಪ್ರಾಯ ಪ್ರಾಚೀನ ಕಾಲದಿಂದ ಬಂದಿದೆ. ರಾಜನಾದವನಿಗೆ ಯಾವುದೇ ಧರ್ಮವಿಲ್ಲ. ಆತ ಸರ್ವಧರ್ಮ ಸಮನ್ವಯಿ ಮತ್ತು ಅವನದ್ದೇ ಧರ್ಮ ಪಾಲನೆ ಮಾಡಬೇಕೆನ್ನುವ ಮಾತು ಕೃತಿಯನ್ನು ಉತ್ತುಂಗಕ್ಕೊಯ್ಯುತ್ತದೆ.”
ತಮ್ಮ ಕೃತಿಯ ಬಗ್ಗೆ ವಿಂಗ್ ಕಮಾಂಡರ್ ಸುದರ್ಶನ್ ಹೇಳುವುದು ಹೀಗೆ “ ವಿದ್ಯಾರಣ್ಯರ ಸೋದರಿ ಸಿಂಗಳಾಂಬಿಕೆಯು ತನ್ನ ಸಹೋದರರ ವರ್ಣನೆಯಿಂದ ಪ್ರಾರಂಭವಾಗಿ ಸಂಗಮ ವಂಶದ ಕೊನೆಯ ಪ್ರಮುಖ ದೊರೆ ಇಮ್ಮಡಿ ದೇವರಾಯನ ಕಾಲಘಟ್ಟದಲ್ಲಿ ಪರ್ಯಾಯಗೊಳ್ಳುವ ಈ ಕೃತಿಯಲ್ಲಿ ಸರಳವಾಗಿ ಕೆಲವು ಪಾತ್ರಗಳ ಮೂಲಕ ಕಥೆಯನ್ನು ಹೆಣೆಯಲಾಗಿದೆ. ಇಲ್ಲಿ ಸಂಗಮ ವಂಶದ ಕಾಲಘಟ್ಟದ ಪ್ರಸಂಗಗಳು ಮಾತ್ರ ಬರುತ್ತವೆ. ವಿಜಯನಗರದ ಬಗ್ಗೆ ಇನ್ನೂ ಮಾಹಿತಿ ಸಂಗ್ರಹವಾಗುತ್ತಲೇ ಇದೆ. ಸಾಯಣಾರ್ಯರಂತಹ ಕೆಲವು ವಿಶೇಷ ವ್ಯಕ್ತಿಗಳ ಮತ್ತು ಅಂದಿನ ಕೆಲವು ಕುತೂಹಲಕಾರಿ ಮತ್ತು ಮಹತ್ತರ ವ್ಯವಸ್ಥೆಗಳ ಮಾಹಿತಿಯ ಹುಡುಕಾಟವೂ ನಡೆಯುತ್ತಿದೆ.” ಎಂದು ಹೇಳುವ ಮೂಲಕ ಇನ್ನೊಂದು ಪುಸ್ತಕ ಹೊರತರುವ ಆಶಯ ವ್ಯಕ್ತಪಡಿಸಿದ್ದಾರೆ.
ಲೇಖಕರು ಈ ಪುಸ್ತಕದಲ್ಲಿನ ಅಧ್ಯಾಯಗಳ ಕಿರು ಪರಿಚಯವನ್ನು ವಿವರವಾಗಿ ನೀಡಿರುವುದು ಉತ್ತಮ ನಡೆ ಎನ್ನಬಹುದು. ವಿಜಯನಗರದ ಏಕಶಿಲಾನಗರದ ಕಥೆ, ಕಂಪಲಿಯ ಕಥೆ ಮತ್ತು ಉದಯವಾಯಿತು ವಿಜಯನಗರ, ಆನೆಗೊಂದಿಯ ಸಂದಿಗೊಂದಿಗಳಲ್ಲಿ, ಸಾಯಣಾಚಾರ್ಯರ ಸಾನ್ನಿಧ್ಯ, ಮಧುರ ವಿಜಯ, ಶ್ರೀರಂಗದ ರಂಗನಾಥ, ಕೆರೆಯಕಟ್ಟಿಸು ಬಾವಿಯಂಸವೆಸು, ಗಜಬೇಂಟೆಕಾರ, ಪದ್ಮಾವತಿ ದೇವಿಯ ಪ್ರಲಾಪ, ವಿರೂಪಾಕ್ಷ ದೇವಸ್ಥಾನದಲ್ಲಿ ವಿರಾಟಪರ್ವ, ವೆನಿಸ್ಸಿನ ವರ್ತಕ ಮತ್ತು ಹೇರಾತಿನಿಂದ ಬಂದ ಅತಿಥಿ...ಎನ್ನುವ ಅಧ್ಯಾಯಗಳಲ್ಲಿ ವಿಜಯನಗರದ ಸಮಗ್ರ ಇತಿಹಾಸವನ್ನು ಕಥಾ ರೂಪಕದಲ್ಲಿ ಹೇಳುತ್ತಾ ಹೋಗಿರುವುದರಿಂದ ಓದಲು ಸುಲಭವಾಗಿದೆ.
ಸುಮಾರು ೧೧೩ ಪುಟಗಳ ಈ ಪುಸ್ತಕವನ್ನು ಲೇಖಕರು ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಡಾ. ಎಸ್ ಎಲ್ ಭೈರಪ್ಪನವರಿಗೆ ಸಮರ್ಪಣೆ ಮಾಡಿದ್ದಾರೆ.