ಉದಯೋನ್ಮುಖ ವರ್ಣಚಿತ್ರ ಪ್ರತಿಭೆ - ಶ್ವೇತಾ




ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಕುಮಾರಿ ಶ್ವೇತ, ನನಗೆ ಇತರೆಲ್ಲರಂತೆ ಅತ್ಯಾಪ್ತ ಶಿಷ್ಯೆ. ಈಗ ಹಿರಿಯ ವಿದ್ಯಾರ್ಥಿನಿಯಾಗಿದ್ದರೂ ಪ್ರೀತಿಯಿಂದ ಏಕವಚನದಲ್ಲಿಯೇ ಅವಳನ್ನು ಆದರಿಸಿ ಉಲ್ಲೇಖಿಸುತ್ತಿರುವೆ. ಬಿಎಸ್ಸಿ ಸ್ನಾತಕ ಪದವಿಯಲ್ಲಿ ವಿಶೀಷ್ಠ ಶ್ರೇಣಿಯ ಸನಿಹದಲ್ಲೇ ಅರಳಿ ನಿಂತ ಸ್ವಚ್ಛ ಮನದ ಬಾಲೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅರಸುವ ಕ್ಷೇತ್ರ ವೈದ್ಯಕೀಯ, ಇಂಜಿನಿಯರಿಂಗ್ ಅಥವಾ ಹೆಚ್ಚು “ಗಳಿಸಲು” ಅವಕಾಶವಿರುವ ವೃತ್ತಿ ಪರ ಕೋರ್ಸ್‌ಗಳನ್ನು ಎಂದಾಗ ಹಲವರಿಗೆ ಅಸಮಾಧಾನ ಆಗಬಹುದು. ಆದರೆ ನಮ್ಮ ಶ್ವೇತಾಳ ಆಯ್ಕೆಯ ಕ್ಷೇತ್ರ ವಿಭಿನ್ನ ಎಂಬುದೇ ಆಕೆಯಲ್ಲಿರುವ ವಿಶಿಷ್ಠ ಗುಣ.
ಚಿತ್ರ ಕ್ಷೇತ್ರವೇ ಶ್ವೇತಾಳ ಆಸಕ್ತಿ ಮತ್ತು ಆಯ್ಕೆಯ ಹೆಮ್ಮೆಯ ಕ್ಷೇತ್ರ. ಕಿರಿಯ ವಯಸ್ಸಿನಿಂದಲೇ ಆಕೆ ಬಿಡಿಸುತ್ತಿರುವ ಕಲಾತ್ಮಕ ವರ್ಣ ಚಿತ್ರಗಳು ಚಿತ್ತಾಕರ್ಷಕ, ಅರ್ಥಪೂರಿತ ಮತ್ತು ಭಾವನಾತ್ಮಕ. ಚಿತ್ರಕಲೆಯಲ್ಲಿ ಹಿರಿದೆತ್ತರಕ್ಕೇರುವ ಎಲ್ಲ ಗುಣಗಳೂ ಅವಳ ಪ್ರಾಥಮಿಕ ಚಿತ್ರಗಳಲ್ಲೇ ವಿಪುಲವಾಗಿ ಗೋಚರಿಸುತ್ತಿದ್ದುವು. ವಿವಿಧ ಪ್ರಕಾರಗಳ ಚಿತ್ರಗಳನ್ನು ಬಿಡಿಸುವ ಅವಳ ಕೈಚಳಕ ಎಲ್ಲರನ್ನೂ ಪುಳಕಿತರನ್ನಾಗಿಸುತ್ತದೆ. ಚಿತ್ರ ರಚನೆ ಅವಳಲ್ಲಿ ಹಾಸುಹೊಕ್ಕಾಗಿ ಬೆಳೆದುನಿಂತಿದೆ.
“ಕಲಾ ಸಾಹಿತ್ಯ ವಿಹೀನಃ ಪಶುಃ, ಪುಚ್ಛ ವಿಷಾಣ ವಿಹೀನಃ” ಎಂಬ ಮಾತಿದೆ. ವ್ಯಕ್ತಿಯೊಬ್ಬನು ಶಕ್ತಿಯಾಗಿ ಮೂಡಿ ಬರಲು ಯಾವುದಾದರೂ ಕಲೆಯಲ್ಲಿ ತೊಡಗಬೇಕು, ತೊಡಗದವರು ಬಾಲ ಮತ್ತು ಕೋಡುಗಳಿಲ್ಲದ ಮೃಗದಂತೆ ಎಂಬುದನ್ನು ಆಳವಾಗಿ ಅರ್ಥೈಸಿರುವ ಶ್ವೇತಾ ಕಲಿಕೆಯೊಂದಿಗೆ ವರ್ಣ ಚಿತ್ರಕಲೆಯನ್ನು ತನ್ನ ಉಸಿರಾಗಿ ಆಯ್ದು ಕೊಂಡಳು. ಆಕೆಯ ನಡೆಯನ್ನು ಮತ್ತು ಆಯ್ಕೆಯನ್ನು ಕಲಾ ಪ್ರೇಮಿಗಳು ಶ್ಲಾಘಿಸಲೇ ಬೇಕು.
ಕಾಸರಗೋಡಿನ ಪೆರ್ಲ ಹತ್ತಿರದಲ್ಲೇ ಗಾಳಿಗೋಪುರದ ನಿವಾಸಿಯಾದ ಶ್ವೇತಳನ್ನು ಮಾತನಾಡಿಸಿದರೆ ಬಹಳ ಮೃದುವಾಗಿಯೇ ಬೆರಗುಗೊಳಿಸುವ ಮಾತುಗಳನ್ನು ಹೇಳುತ್ತಾ ತನ್ನ ಭಾರೀ ಗಾತ್ರದ ಕನಸನ್ನು ತೆರೆದಿಡುತ್ತಾಳೆ. ಚಿತ್ರಕಾರ ಸಾಮಾನ್ಯರಲ್ಲಿ ಸಾಮಾನ್ಯ, ಸಮಾಜದಲ್ಲಿ ಚಿತ್ರಕಾರನಿಗೆ ಉನ್ನತ ಸ್ಥಾನ ಮಾನ ದೊರಕಿದರೆ ಅದು ಮಹಾ ಪವಾಡವೇ ಸರಿ. ಯಾರಾದರೂ ಮಾತನಾಡಿಸುವಾಗ ಕೇಳುವುದಿದೆ: “ನೀನೇನು ಮಾಡುತ್ತಿರುವೆ?”. “ಚಿತ್ರ” ವೆಂದು ಉತ್ತರಿಸಿದರೆ, “ಚಿತ್ರವೋ!!” ಎಂದು ಹೇಳಿ ಬೆರಗುಗಣ್ಣುಗಳಿಂದ ಹೀನವಾಗಿ ದೃಷ್ಟಿಸುತ್ತಾರೆ. ಚಿತ್ರ ಬಿಡಿಸುವುದು ಕಳಪೆ, ಘನ ಘೋರ ಅಪರಾಧ ಎಂಬ ಅವರ ಮುಖ ಭಾವವು ಚಿತ್ರಕಾರನನ್ನು ಕುಗ್ಗಿಸಿಬಿಡುತ್ತದೆ. ಚಿತ್ರಗಳ ಮತ್ತು ಚಿತ್ರ ಕಲಾವಿದರ ಬಗ್ಗೆ ಜನರು ಹೊಂದಿರುವ ನಿಕೃಷ್ಟವಾದ ಮನೋ ಧೋರಣೆಯಿಂದಾಗಿ , “ಚಿತ್ರಗಾತಿ” ಎನ್ನಲೂ ಈಗೀಗ ಮನಸ್ಸು ಹಿಂದೇಟು ಹಾಕುತ್ತಿದೆ ಎಂಬ ಆಕೆಯ ಮನದ ಮೌನವಾದ ಅಳಲು ಚಿತ್ರಾಸಕ್ತರನ್ನು ನೋಯಿಸದಿರದು. ನೆಟ್ಟಗೆ ಗೆರೆ ಎಳೆಯಲು ಗೊತ್ತಿರದವರಿಗೂ ಚಿತ್ರವೆಂದಾಗ ಇಂತಹ “ಸಸಾರ” ಮನೋವೃತ್ತಿ ಯಾಕೆ? ಎಂಬುದು ಉತ್ತರವಿರದ ಜಟಿಲ ಪ್ರಶ್ನೆ.
ಹವ್ಯಾಸವಾಗಿ ತಾನು ಬೆಳೆಸಿಕೊಂಡ, ತನ್ನ ಎಳೆಯ ಕೈಗಳಲ್ಲೇ ಮೂಡಿ ಬಂದ ; ತನಗೆ ಮನೋಲ್ಲಾಸ ನೀಡಿದ ನೂರಾರು ಚಿತ್ರಗಳ ಸಂಗ್ರಹವಿದ್ದರೂ ಶ್ವೇತ, ಅದನ್ನು ನೋಡುಗರ ಮುಂದೆ ತೆರೆದಿಡಳು.
“ಎಲ್ಲಿ ಹೀಗಳೆವರೋ?” ಎಂಬ ಶಂಕೆ ಒಂದೆಡೆಯಾದರೆ, ಒಲ್ಲದ ಮನಸ್ಸಿಗೆ ಒತ್ತಡದ ಹೊರೆ ಯಾಕೆ? ಎಂದು ಮನಮಿಡಿಯುವಳು. ಒಬ್ಬನ ಪರಿಶ್ರಮವನ್ನು ಬೆಂಬಲಿಸಬೇಕಾದುದು, ಬೆನ್ನು ತಟ್ಟಿ ಶಹಬ್ಬಾಸ್ ಎನ್ನ ಬೇಕಾದುದು ಮಾನವ ಧರ್ಮ. ಇದರಿಂದ ವ್ಯಕ್ತಿಯ ಮನೋಬಲ ಹೆಚ್ಚುತ್ತದೆ; ಅವನ ಸುಪ್ತ ಸಾಮರ್ಥ್ಯಗಳು ಬೆಳಕು ಕಾಣುತ್ತವೆ. ಮನದೊಳಗೆ ಹುದುಗಿರುವ ಕಲಾ ಪ್ರೌಢಿಮೆ ದಷ್ಟ ಪುಷ್ಟವಾಗಿ ಬೆಳೆಯುತ್ತದೆ. ಇದರಿಂದ ಸಮಾಜಕ್ಕೂ ಉಪಯೋಗ ಜೊತೆಗೆ ಗೌರವ. ವ್ಯಕ್ತಿಯ ಸಾಮರ್ಥ್ಯಗಳನ್ನು ಮುದುಡಿಸುವುದು ಮೂರ್ಖತನ, ಬೆಂಬಲಿಸಿ ದುಡಿಸುವುದು ದೈವತ್ವ. ಒಬ್ಬ ಚಿತ್ರಕಾರನಿಗೆ ನಮ್ಮ ಬೆಂಬಲ ಹೇಗೆ ನೀಡಬಹುದು? ಆತನಿಂದ ಅಥವಾ ಆಕೆಯಿಂದ ಪ್ರತೀ ವರ್ಷ ಒಂದರೆಡು ಚಿತ್ರ ಮಾಡಿಸಿ ಮನೆಯ ಗೋಡೆಯಲ್ಲಿ ತೂಗು ಹಾಕಿದರೆ ಅಲಂಕಾರವೂ ಆಗುತ್ತದೆ, ಪ್ರೋತ್ಸಾಹವೂ ಒದಗುತ್ತದೆ. ಚಿತ್ರ ವೀಕ್ಷಕರ ಮನಸ್ಸು ಪ್ರಫುಲ್ಲಿತವಾಗುತ್ತದೆ.
ಚಿತ್ರಗಳು ಮನೆಯ ಗೋಡೆಯಲ್ಲಿ ಬೇಡವೆಂದಾದರೆ ಶಾಲೆಯ, ಮಠ ಮಂದಿರಗಳ ಗೋಡೆಗಳಿಗೆಂದು ಮಾಡಿಸೋಣ. ಉಪನಯನ, ವಿವಾಹ, ಹುಟ್ಟು ಹಬ್ಬ ಮೊದಲಾದ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ವರ್ಣ ಚಿತ್ರದ ಉಡುಗೊರೆ ಕೊಡೋಣ. ಕೊಡುಗೆ ನೀಡಿದರೆ…. ವರ್ಣ ಚಿತ್ರ ಉಡುಗೊರೆ ನಿಡುವ ಮನಸ್ಸು ಮಾಡಿದರೆ ಅದುವೇ ಚಿತ್ರಕಾರರನ್ನು ಗುರುತಿಸುವ, ಗೌರವಿಸುವ, ಉತ್ತೇಜಿಸುವ ದೈವಿಕತೆ. ಇಂತಹ ದೈವಿಕ ಮನಸ್ಸುಗಳು ಹೆಚ್ಚಲಿ. ಶ್ವೇತಳಂತಹ ನೂರಾರು ಕಲಾವಿದರಿಗೆ ನಾವೆಲ್ಲರೂ ಭುಜವಾಗಲೇ ಬೇಕು.
ಕಲೆಯು ಸಂಸ್ಕಾರದ ಬಹಳ ಪ್ರಮುಖ ಭಾಗ. ಒಂದು ಚಿತ್ರವು ಸಾವಿರ ಸಾವಿರ ಕಥೆಗಳನ್ನು ಘಟನೆಗಳನ್ನು ಹಾಗೂ ಆಶಯಗಳನ್ನು ವಿವರಿಸಿ ಹೇಳುತ್ತದೆ, ಹತ್ತು ಹಲವು ಮೌಲ್ಯಗಳನ್ನು ಮೌನವಾಗಿ ಬಿಂಬಿಸುತ್ತದೆ. ಕಲಾವಿದರ ಸ್ವರಚಿತ ಚಿತ್ರಗಳನ್ನು ಅವಲೋಕಿಸಿ, ಅಭಿನಂದಿಸಿ ಸ್ಫೂರ್ತಿಯ ಮಾತುಗಳನ್ನಾದರೂ ಹೇಳೋಣ. ಕಿಂಚಿತ್ ಗೌರವ ಧನವನ್ನೋ, ಸಂಭಾವನೆಯನ್ನೋ ಕೊಟ್ಟು ಚಿತ್ರಗಳನ್ನು ಖರೀದಿಸುವ ಮನಸ್ಸು ಮಾಡೋಣ.
ಚಿತ್ರ - ಬರಹ : ರಮೇಶ ಎಂ. ಬಾಯಾರು, ಬಂಟ್ವಾಳ