ಉದ್ದಾಳು, ಅಡ್ಡಾಳು ಮತ್ತು ದೂರನೋಟದಾಳು

ಉದ್ದಾಳು, ಅಡ್ಡಾಳು ಮತ್ತು ದೂರನೋಟದಾಳು

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬನೇ ಮಗ. ಒಂದು ದಿನ ರಾಜ ಮಗನನ್ನು ಕರೆದು ಹೇಳಿದ, “ರಾಜಕುಮಾರ, ನಾನು ತೀರಿಕೊಳ್ಳುವ ಮುಂಚೆ ನಿನ್ನ ಮದುವೆ ಆಗಬೇಕೆಂಬುದು ನನ್ನಾಶೆ. ಈ ಚಿನ್ನದ ಬೀಗದಕೈ ತೆಗೆದುಕೋ. ಅರಮನೆಯ ಎತ್ತರದ ಗೋಪುರದ ತುದಿಯ ಕೋಣೆಗೆ ಹೋಗಿ ಬಾ.”

ರಾಜಕುಮಾರ ಆ ಕೋಣೆಗೆ ಹೋದಾಗ ಅಲ್ಲಿ ಹನ್ನೆರಡು ಫಲಕಗಳು ಕಾಣಿಸಿದವು. ಅವನು ಒಂದೊಂದೇ ಫಲಕವನ್ನು ನೋಡಿದ. ಅವೆಲ್ಲವೂ ರೂಪವತಿಯರ ಚಿತ್ರಗಳು. ಹನ್ನೆರಡನೆಯ ಚಿತ್ರದಲ್ಲಿತ್ತು ಒಬ್ಬಳು ಅದ್ಭುತ ರೂಪವತಿಯ ಚಿತ್ರ. ಅವಳು ಬಿಳಿಯುಡುಗೆ ಹಾಗೂ ಮುತ್ತುಗಳ ಕಿರೀಟ ಧರಿಸಿದ್ದಳು. ಆ ಚಿತ್ರ ನೋಡುತ್ತಲೇ ರಾಜಕುಮಾರ ಮೋಹಿತನಾದ. ಅವಳನ್ನೇ ಮದುವೆಯಾಗಲು ನಿರ್ಧರಿಸಿ, ತನ್ನ ತಂದೆಗೆ ಅದನ್ನೇ ತಿಳಿಸಿದ.

ಮಹಾರಾಜ ಹೇಳಿದ, “ನಾನು ಯೋಚಿಸಿದಂತೆಯೇ ಆಯಿತು. ಅವಳೊಬ್ಬ ರಾಜಕುಮಾರಿ. ಆದರೆ ಅವಳನ್ನು ಒಬ್ಬ ದುಷ್ಟ ಮಾಂತ್ರಿಕ ಒಂದು ತನ್ನ ಕೋಟೆಯಲ್ಲಿ ಬಂಧಿಸಿಟ್ಟಿದ್ದಾನೆ. ಹಲವಾರು ರಾಜಕುಮಾರರು ಅವಳನ್ನು ಅಲ್ಲಿಂದ ಬಿಡುಗಡೆ ಮಾಡುತ್ತೇವೆಂದು ಹೋಗಿದ್ದಾರೆ. ಆದರೆ ಅವರು ಯಾರೂ ಹಿಂತಿರುಗಿ ಬಂದಿಲ್ಲ."

ಆದರೆ ರಾಜಕುಮಾರ ಅವಳನ್ನೇ ಮದುವೆಯಾಗೋದಾಗಿ ದೃಢ ನಿರ್ಧಾರ ಮಾಡಿದ್ದ. ಅವತ್ತೇ ಅವನು ಕುದುರೆಯೇರಿ ರಾಜಕುಮಾರಿಯಿದ್ದ ಕೋಟೆ ಹುಡುಕಲು ಹೊರಟ. ದಟ್ಟ ಕಾಡಿನೊಳಗೆ ಸಾಗಿದ.

ರಾಜಕುಮಾರ ಹಾಗೆ ಮುಂದೆ ಸಾಗುತ್ತಿದ್ದಾಗ, ಅವನನ್ನು ಯಾರೋ ಕರೆದರು. ಆತ ಹಿಂದಕ್ಕೆ ತಿರುಗಿ ನೋಡಿದಾಗ ಅಲ್ಲೊಬ್ಬ ಉದ್ದದ ವ್ಯಕ್ತಿ ನಿಂತಿದ್ದ. “ರಾಜಕುಮಾರ, ನನ್ನನ್ನು ನಿನ್ನ ಜೊತೆ ಕರೆದೊಯ್ದರೆ ನಿನಗೆ ಸಹಾಯ. ನನ್ನ ಹೆಸರು ಉದ್ದಾಳು. ನೋಡೀಗ, ಆ ಎತ್ತರದ ಮರದ ತುದಿಯಲ್ಲಿರುವ ಹಕ್ಕಿ ಗೂಡನ್ನು ನಿನಗೆ ತೆಗೆದು ಕೊಡ್ತೇನೆ” ಎಂದ. ಆತ ಹೆಚ್ಚೆಚ್ಚು ಉದ್ದಕ್ಕೆ ಬೆಳೆಯುತ್ತಾ ಆ ಮರದೆತ್ತರಕ್ಕೆ ಬೆಳೆದು,  ಅದರ ತುದಿಯ ಹಕ್ಕಿ ಗೂಡನ್ನು ಕೈಯಲ್ಲೆತ್ತಿ, ನಂತರ ಮುಂಚಿನಂತೆಯೇ ಆದ.

ಇದನ್ನು ಕಂಡು ರಾಜಕುಮಾರನಿಗೆ ಅಚ್ಚರಿಯಾಯಿತು. ಆ ಕಾಡಿನಿಂದ ಹೊರಗೆ ಹೋಗುವ ದಾರಿ ತೋರಿಸಬೇಕೆಂದು ಅವನು ಉದ್ದಾಳಿಗೆ ಹೇಳಿದ. ಅವನು ಪುನಃ ಮರಗಳಿಗಿಂತ ಎತ್ತರಕ್ಕೆ ಬೆಳೆದು ಅತ್ತಿತ್ತ ನೋಡಿದ. ಹೊರಹೋಗುವ ದಾರಿ ಕಂಡುಕೊಂಡ.

ಆ ದಾರಿಯಲ್ಲಿ ಅವರು ಕಾಡಿನಿಂದ ಹೊರಬಂದು, ಬಯಲಿನಲ್ಲಿ ಮುಂದುವರಿದರು. ಆಗ ದಪ್ಪಗಿನ ವ್ಯಕ್ತಿಯೊಬ್ಬ ಅವರಿಗೆ ಎದುರಾದ. ಉದ್ದಾಳು ಹೇಳಿದ, “ರಾಜಕುಮಾರ, ಇವನು ನನ್ನ ಗೆಳೆಯ, ಅಡ್ಡಾಳು. ಇವನನ್ನೂ ಜೊತೆಗೆ ಕರೆದೊಯ್ಯೋಣ." ಆಗ ಅಡ್ಡಾಳು ಹೇಳಿದ, "ನನ್ನಿಂದ ನಿಮಗೆ ಸಹಾಯವಾಗುತ್ತದೆ. ಯಾಕೆಂದರೆ ನಾನು ಭಾರೀ ದಪ್ಪವಾಗಿ ಬೆಳೆಯಬಲ್ಲೆ, ನೋಡಿ” ತಕ್ಷಣವೇ ಅವನು ಉಸಿರೆಳೆದುಕೊಂಡು ಹತ್ತಡಿಗಿಂತ ಜಾಸ್ತಿ ದಪ್ಪಕ್ಕೆ ಬೆಳೆದು ತೋರಿಸಿದ.

ಅನಂತರ ಅವರು ಮೂವರೂ ಅಲ್ಲಿಂದ ಮುಂದುವರಿದರು. ಸ್ವಲ್ಪ ದೂರ ಹೋದಾಗ ಅವರಿಗೆ ಮತ್ತೊಬ್ಬ ವ್ಯಕ್ತಿ ಎದುರಾದ. ಅವನು ಎರಡೂ ಕಣ್ಣುಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡಿದ್ದ. "ಇವನು ನಮ್ಮ ಗೆಳೆಯ ದೂರನೋಟದಾಳು. ಅವನು ಬಹಳ ದೂರಕ್ಕೆ ನೋಡಬಲ್ಲ. ಅವನ ಕಣ್ಣುಗಳಿಗೆ ಅವನು ಕಪ್ಪು ಪಟ್ಟಿ ಕಟ್ಟಿಕೊಳ್ಳದಿದ್ದರೆ ಅವನ ನೋಟಕ್ಕೆ ಸಿಕ್ಕಿದ ಎಲ್ಲವೂ ಸುಟ್ಟು ಹೋಗುತ್ತದೆ ಅಥವಾ ಹುಡಿಹುಡಿಯಾಗುತ್ತದೆ” ಎಂದರು ಉದ್ದಾಳು ಮತ್ತು ಅಡ್ಡಾಳು. ದೂರನೋಟದಾಳು ಕೂಡ ಅವರನ್ನು ಸೇರಿಕೊಂಡ.

ಅಷ್ಟರಲ್ಲಿ ಉದ್ದಾಳು ಹೇಳಿದ, “ನೀವು ಮೂವರನ್ನೂ ಕೆಲವೇ ನಿಮಿಷಗಳಲ್ಲಿ ರಾಜಕುಮಾರಿಯ ಕೋಟೆಗೆ ತಲಪಿಸುತ್ತೇನೆ." ಹಾಗೆನ್ನುತ್ತಾ ಆತ ಎತ್ತರೆತ್ತರಕ್ಕೆ ಬೆಳೆದ. ಅನಂತರ ಮೂವರನ್ನೂ ಎತ್ತಿಕೊಂಡು ಹತ್ತೇ ಹೆಜ್ಜಿಗಳಲ್ಲಿ ಅವರನ್ನು ಆ ಕೋಟೆಯಲ್ಲಿ ಇಳಿಸಿದ. ಆತ ಹಾಗೆ ಮಾಡದಿದ್ದರೆ, ಆ ಕೋಟೆ ತಲಪಲು ಅವರಿಗೆ ಒಂದು ವಾರವೇ ತಗಲುತ್ತಿತ್ತು.

ಆ ಕೋಟೆಯೊಳಗೆ ಹಲವಾರು ರಾಜಕುಮಾರರು ಕಲ್ಲಿನ ಮೂರ್ತಿಗಳಾಗಿ ನಿಂತಿದ್ದರು. ಅವರೆಲ್ಲರೂ ರಾಜಕುಮಾರಿಯನ್ನು ಬಿಡುಗಡೆ ಮಾಡಲು ಬಂದು ದುಷ್ಟ ಮಾಂತ್ರಿಕನ ಕೈಗೆ ಸಿಕ್ಕಿಬಿದ್ದವರು. ಆದರೂ ರಾಜಕುಮಾರ ಧೈರ್ಯದಿಂದ ಮುನ್ನಡೆದ.

ಅಷ್ಟರಲ್ಲಿ ಅಲ್ಲಿ ನೀಲಿ ಹೊಗೆ ಕಾಣಿಸಿಕೊಂಡಿತು. ದುಷ್ಟ ಮಾಂತ್ರಿಕ ಮತ್ತು ರಾಜಕುಮಾರಿ ಅಲ್ಲಿ ಕಾಣಿಸಿಕೊಂಡರು. ಆ ಮಾಂತ್ರಿಕ ಹೇಳಿದ, “ನೀವು ಯಾಕೆ ಇಲ್ಲಿಗೆ ಬಂದಿದ್ದೀರೆಂದು ನನಗೆ ಗೊತ್ತಿದೆ. ಇನ್ನು ಮೂರು ರಾತ್ರಿ ನೀವು ರಾಜಕುಮಾರಿಯನ್ನು ಈ ಕೋಣೆಯಲ್ಲಿ ರಕ್ಷಿಸಿದರೆ, ನೀವು ಅವಳನ್ನು ಕರೆದೊಯ್ಯಬಹುದು. ನಾಲ್ಕನೆಯ ಮುಂಜಾನೆ ನಾನು ಹಿಂತಿರುಗಿದಾಗ ಅವಳು ಇಲ್ಲಿರದಿದ್ದರೆ ನೀವೆಲ್ಲರೂ ಕಲ್ಲಿನ ಮೂರ್ತಿಗಳಾಗಿ ಬದಲಾಗುತ್ತೀರಿ.” ಹಾಗೆನ್ನುತ್ತಲೇ ಹೊಗೆಯ ಮರೆಯಲ್ಲಿ ಆತ ಕಣ್ಮರೆಯಾದ.

ನಾಲ್ವರೂ ರಾಜಕುಮಾರಿಯನ್ನು ರಕ್ಷಿಸಲು ತಯಾರಾದರು. ಅಡ್ಡಾಳು ದಪ್ಪಗಾಗಿ ಆ ಕೋಣೆಯ ಬಾಗಿಲನ್ನು ಆವರಿಸಿದ. ಉದ್ದಾಳು ಉದ್ದವಾಗಿ ತನ್ನ ದೇಹವನ್ನು ಇಡೀ ಕೋಣೆಯೊಳಗೆ ಸುತ್ತಿ ಇಟ್ಟ. ದೂರನೋಟದಾಳು ಕಣ್ಣುಗಳಿಗೆ ಕಪ್ಪು ಪಟ್ಟಿ ಹಾಕಿಕೊಂಡೇ ಕಾಯತೊಡಗಿದ. ಆದರೆ ಅವರಿಗೆ ರಾತ್ರಿಯಿಡೀ ಎಚ್ಚರದಿಂದಿರಲು ಸಾಧ್ಯವಾಗಲಿಲ್ಲ. ಅವರು ನಿದ್ದೆಗೆ ಜಾರಿದರು.

ಮರುದಿನ ಮುಂಜಾನೆ ರಾಜಕುಮಾರನಿಗೆ ಎಚ್ಚರವಾದಾಗ ರಾಜಕುಮಾರಿ ಅಲ್ಲಿರಲಿಲ್ಲ. ಅವನು ಗಾಬರಿಯಿಂದ ಇತರ ಮೂವರನ್ನೂ ಎಬ್ಬಿಸಿದ. ಕಿಟಕಿಯಿಂದ ಹೊರಗೆ ನೋಡುತ್ತಾ “ನಾನು ಅವಳನ್ನು ಕಾಣ ಬಲ್ಲೆ” ಎಂದ ದೂರನೋಟದಾಳು. "ಅವಳು ಇಲ್ಲಿಂದ ನೂರು ಮೈಲು ದೂರದಲ್ಲಿ ಒಂದು ಕಾಡಿನಲ್ಲಿದ್ದಾಳೆ. ಅವಳನ್ನು ಒಂದು ಮರದ ಬೀಜವಾಗಿ ಮಾಡಿ, ಆ ಕಾಡಿನ ಅತ್ಯಂತ ಎತ್ತರದ ಓಕ್ ಮರದ ತುದಿಯಲ್ಲಿ ಇರಿಸಲಾಗಿದೆ” ಎಂದು ತಿಳಿಸಿದ.

ಉದ್ದಾಳು ಕೆಲವೇ ಹೆಜ್ಜೆಗಳನ್ನಿಟ್ಟು ಆ ಕಾಡು ತಲಪಿದ; ಅಲ್ಲಿನ ಅತ್ಯಂತ ಎತ್ತರದ ಮರದ ತುದಿಯಲ್ಲಿದ್ದ ಬೀಜವನ್ನು ತಗೊಂಡು ವಾಪಾಸು ಬಂದು ಅದನ್ನು ರಾಜಕುಮಾರನಿಗಿತ್ತ. ಆಗಲೇ ಮಾಂತ್ರಿಕ ಅಲ್ಲಿಗೆ ಬಂದ. ರಾಜಕುಮಾರ ಬೀಜವನ್ನು ನೆಲಕ್ಕೆ ಎಸೆದಾಗ ರಾಜಕುಮಾರಿ ಅಲ್ಲಿ ಎದ್ದು ನಿಂತಳು. ಮಾಂತ್ರಿಕ ಸಿಟ್ಟಿನಿಂದ ಆ ಕೋಣೆಯಿಂದ ಹೊರ ನಡೆದ.

ಎರಡನೆಯ ರಾತ್ರಿಯೂ ನಾಲ್ವರು ರಾಜಕುಮಾರಿಯನ್ನು ರಕ್ಷಿಸಲು ಸಿದ್ಧರಾದರು. ಆದರೆ ಅವತ್ತೂ ಅವರು ನಿದ್ದೆಗೆ ಜಾರಿದರು. ಮರುದಿನ ಮುಂಜಾನೆ ರಾಜಕುಮಾರನಿಗೆ ಎಚ್ಚರವಾದಾಗ ಪುನಃ ರಾಜಕುಮಾರಿ ಅಲ್ಲಿರಲಿಲ್ಲ. ಅವನು ಇತರ ಮೂವರನ್ನೂ ಎಬ್ಬಿಸಿದ. ದೂರನೋಟದಾಳು ಹೊರಕ್ಕೆ ನೋಡಿ ಹೇಳಿದ, “ರಾಜಕುಮಾರಿ ಇಲ್ಲಿಂದ ಇನ್ನೂರು ಮೈಲು ದೂರದಲ್ಲಿದ್ದಾಳೆ. ಅವಳನ್ನು ಒಂದು ಆಭರಣವಾಗಿಸಿ ಒಂದು ಕಲ್ಲಿನೊಳಗೆ ಇಡಲಾಗಿದೆ.”

ತಕ್ಷಣವೇ ಉದ್ದಾಳು ದೂರನೋಟದಾಳನ್ನು ಹೊತ್ತುಕೊಂಡು ಅಲ್ಲಿಗೆ ತಲಪಿದ. ದೂರನೋಟದಾಳು ಆ ಕಲ್ಲನ್ನು ದಿಟ್ಟಿಸಿ ನೋಡಿದಾಗ ಅದು ಹುಡಿಹುಡಿಯಾಯಿತು. ಕೂಡಲೇ ಅದರೊಳಗಿದ್ದ ಆಭರಣವನ್ನು ಎತ್ತಿ ತಂದು ರಾಜಕುಮಾರನಿಗೆ ಕೊಟ್ಟರು. ಮಾಂತ್ರಿಕ ಕೋಣೆಯೊಳಗೆ ಬರುತ್ತಿದ್ದಂತೆಯೇ ರಾಜಕುಮಾರ ಆಭರಣವನ್ನು ನೆಲಕ್ಕೆಸೆದ. ಆಗ ಅಲ್ಲಿ ರಾಜಕುಮಾರಿ ಎದ್ದು ನಿಂತಳು. ಪುನಃ ಮಾಂತ್ರಿಕ ಕೋಪದಿಂದ ಆ ಕೋಣೆಯಿಂದ ಹೊರ ನಡೆದ.

ಮೂರನೆಯ ದಿನವೂ ಹಾಗೆಯೇ ಆಯಿತು. ಮರುದಿನ ಮುಂಜಾನೆ ದೂರನೋಟದಾಳು ಹೊರಕ್ಕೆ ನೋಡಿ ಹೇಳಿದ, “ಇಲ್ಲಿಂದ ಮುನ್ನೂರು ಮೈಲು ದೂರದಲ್ಲಿ ಸಮುದ್ರದ ಆಳದಲ್ಲಿ ಇದ್ದಾಳೆ ರಾಜಕುಮಾರಿ. ಅಲ್ಲಿ ಒಂದು ಚಿಪ್ಪಿನೊಳಗಡೆ ಅವಳನ್ನು ಚಿನ್ನದ ಉಂಗುರವಾಗಿ ಬದಲಾಯಿಸಿ ಇಡಲಾಗಿದೆ.”

ಈಗ ಉದ್ದಾಳು ಉಳಿದ ಇಬ್ಬರನ್ನೂ ಎತ್ತಿಕೊಂಡು ಆ ಸಮುದ್ರದ ತೀರ ತಲಪಿದ. ಆತ ಸಮುದ್ರದಾಳಕ್ಕೆ ಕೈಚಾಚಿದರೂ ಆ ಚಿಪ್ಪು ಕೈಗೆ ಸಿಗಲಿಲ್ಲ. ಆಗ ಅಡ್ಡಾಳು ಅಡ್ಡಕ್ಕೆ ಹಾಗೂ ದೊಡ್ಡದಾಗಿ ಬೆಳೆದ. ಒಂದೇ ಉಸಿರಿಗೆ ಒಂದು ಮೈಲು ಉದ್ದಗಲದ ಸಮುದ್ರದ ನೀರನ್ನು ಕುಡಿದ. ಆ ಕ್ಷಣದಲ್ಲಿ ಉದ್ದಾಳು ಕೈಚಾಚಿದಾಗ ಆ ಚಿಪ್ಪು ಕೈಗೆ ಸಿಕ್ಕಿತು. ಅದರೊಳಗಿನ ಉಂಗುರವನ್ನು ತಗೊಂಡು ಅವರು ವಾಪಾಸು ಹೊರಟರು. ಆದರೆ ಅವರು ಅರ್ಧ ಹಾದಿ ಬರುವಷ್ಟರಲ್ಲಿ ಮಾಂತ್ರಿಕ ಕೋಣೆಯೊಳಗೆ ಬಂದ. ತಕ್ಷಣವೇ ಉದ್ದಾಳು ತನ್ನ ಉದ್ದ ಕೈ ಬೀಸಿ, ಆ ಉಂಗುರವನ್ನು ಕೋಣೆಯೊಳಗೆ ಎಸೆದ. ಅದು ಕೋಣೆಯ ನೆಲಕ್ಕೆ ಬಿದ್ದೊಡನೆ ಅಲ್ಲಿ ರಾಜಕುಮಾರಿ ಎದ್ದು ನಿಂತಳು.

ಅಂತೂ ಮಾಂತ್ರಿಕನ ಮ್ಯಾಜಿಕ್ ನಿಷ್ಪಲವಾಗಿತ್ತು. ಹತಾಶನಾದ ಆತ ಒಂದು ದೊಡ್ಡ ಕಪ್ಪು ಕಾಗೆಯಾಗಿ ಅಲ್ಲಿಂದ ಹಾರಿ ಹೋದ. ಅಲ್ಲಿದ್ದ ಕಲ್ಲಿನ ಮೂರ್ತಿಗಳೆಲ್ಲ ಪುನಃ ಬೇರೆಬೇರೆ ರಾಜ್ಯಗಳ ರಾಜಕುಮಾರರಾಗಿ ಬದಲಾದರು.

ರಾಜಕುಮಾರಿ ಹಲವು ವರುಷಗಳ ಬಂಧನದಿಂದ ಬಿಡುಗಡೆಯಾಗಿದ್ದಳು. ತನ್ನನ್ನು ಬಂಧಮುಕ್ತಗೊಳಿಸಿದ ರಾಜಕುಮಾರನೊಂದಿಗೆ ಅವನ ಅರಮನೆಗೆ ಬಂದು, ಅವರಿಬ್ಬರೂ ಮದುವೆಯಾಗಿ ಸುಖಶಾಂತಿಯಿಂದ ಬಾಳಿದರು.

ಉದ್ದಾಳು, ಅಡ್ಡಾಳು ಮತ್ತು ದೂರನೋಟದಾಳು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಿಕ್ಕಾಗಿ ತಮ್ಮ ಸುತ್ತಾಟ ಮುಂದುವರಿಸಿದರು.