ಉದ್ಯೋಗಿಗಳಿಗೆ ಮಾದರಿ ಸಂಸ್ಥೆ
ಉದ್ಯೋಗಿಗಳು ಕೆಲಸ ಮಾಡುವ ಯಂತ್ರಗಳಲ್ಲ. ಅವರೂ ಮನುಷ್ಯರು. ಅವರಿಗೂ ಭಾವನೆಗಳಿವೆ, ಕುಟುಂಬವಿದೆ, ಅವಶ್ಯಕತೆಗಳು ಇವೆ. ಅದನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಆದರೆ ವಾಸ್ತವ. ಅದಕ್ಕೆ ಮಾದರಿಯಾಗಿ ಇರುವ ಒಂದು ಸಂಸ್ಥೆ ಗೂಗಲ್. ಉದ್ಯೋಗಿಗಳ ಹಿತರಕ್ಷಣೆ ಸೇರಿ ಒಂದು ನಾಗರಿಕ ಸಮಾಜದ ಅತ್ಯುತ್ತಮ ಔದ್ಯೋಗಿಕ ಸಂಸ್ಥೆಗಳಲ್ಲಿ ವಿಶ್ವದ ಅತ್ಯುತ್ತಮ ಗುಣಮಟ್ಟದ ಸಂಸ್ಥೆ ಎಂದು ಹೆಸರಾಗಿದೆ. ನನಗೆ ದೊರೆತ ಮಾಹಿತಿಯ ಆಧಾರದಲ್ಲಿ...
ಗೂಗಲ್ ಉದ್ಯೋಗಿಗಳ ನೇಮಕಾತಿಯಲ್ಲಿ ಅತ್ಯಂತ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಅತಿಹೆಚ್ಚಿನ ಮಹತ್ವ ಕೊಡುತ್ತದೆ. ಉದ್ಯೋಗದ ಮೊದಲ ಮಾನದಂಡವಾದ ಸಂಬಳದ ವಿಷಯದಲ್ಲಿ ಇಡೀ ಕುಟುಂಬ ಮತ್ತು ಅವಲಂಬಿತರ ಸಂಪೂರ್ಣ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುತ್ತದೆ. ಅವರು ಕೊಡುವ ಸಂಬಳ ಉದ್ಯೋಗಿಯ ಸಾಮಾನ್ಯ ಬೇಕು ಬೇಡಗಳನ್ನು ಪೂರೈಸುವಂತಿರಬೇಕು. ಆಗ ಉದ್ಯೋಗಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಕೆಲಸದಲ್ಲಿ ತೊಡಗಿಸಲು ಸಾಧ್ಯ ಎಂಬ ನಿಲುವು.. ಇಲ್ಲದಿದ್ದರೆ ಸಂಬಳದ ಅತೃಪ್ತಿ ತನ್ನ ಕಾರ್ಯಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ದೂರದೃಷ್ಟಿ.
ಹಾಗೆಯೇ ಅವಲಂಬಿತರ ಸಂಖ್ಯೆ, ಅವರ ವಯಸ್ಸು ಆರೋಗ್ಯ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಉದ್ಯೋಗಿಗೆ ವಯಸ್ಸಾದ ತಂದೆ, ತಾಯಿ, ಅಜ್ಜ, ಅಜ್ಜಿ ಅಥವಾ ಚಿಕ್ಕ ಮಕ್ಕಳು ಅಥವಾ ವಿಶೇಷ ಚೇತನ ಮಕ್ಕಳು ಮುಂತಾದವರು ಇದ್ದರೆ ಅವರ ಜವಾಬ್ದಾರಿ ಅದನ್ನು ನಿರ್ವಹಿಸುವ ವ್ಯವಸ್ಥೆ, ಈ ಉದ್ಯೋಗಿಯ ಅನುಪಸ್ಥಿತಿಯಲ್ಲಿ ಅದನ್ನು ಹೇಗೆ ನಿಭಾಯಿಸುತ್ತಾರೆ ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ ಮತ್ತು ಅದಕ್ಕೆ ಪೂರಕ ವ್ಯವಸ್ಥೆಯನ್ನು ಮಾಡಲು ಸಹಾಯ. ಮಾಡುತ್ತಾರೆ.
ಅಷ್ಟೇ ಅಲ್ಲ ಉದ್ಯೋಗಿಯ ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದರೆ ಅದಕ್ಕೆ ಬೇಕಾದ ಅನುಕೂಲಗಳ ಬಗ್ಗೆ ಸಹ ಗಮನ ಹರಿಸುತ್ತಾರೆ. ಉದಾಹರಣೆಗೆ ಅವರ ಮನೆಯಲ್ಲಿ ನಾಯಿ ಇದ್ದು ಅದನ್ನು ನೋಡಿಕೊಳ್ಳಲು ಜನ ಇಲ್ಲದಿದ್ದರೆ ಆಫೀಸಿನಲ್ಲಿಯೇ ಇವರ ಕೆಲಸದ ಸಮಯದಲ್ಲಿ ಅದಕ್ಕೆ ಒಂದು ವ್ಯವಸ್ಥೆ ಮಾಡುತ್ತಾರೆ. ಮತ್ತೆ ಉದ್ಯೋಗಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಶ್ರಮದ ಜೊತೆಗೆ ಮನರಂಜನೆ ಮತ್ತು ವಿಶ್ರಾಂತಿಯ ಸಮಯವನ್ನು ಸಹ ನೀಡಲಾಗುತ್ತದೆ. ನಡೆಯುತ್ತಾ ಕೆಲಸ ಮಾಡುವ ಆಸಕ್ತಿ ಇದ್ದರೆ ಟ್ರೆಡ್ ಮಿಲ್ ( walking machine ) ಸೌಕರ್ಯ ಸಹ ಒದಗಿಸಲಾಗುತ್ತದೆ ಎಂದು ಪತ್ರಿಕೆಗಳಲ್ಲಿ ಸುದ್ದಿ ಓದಿದ್ದೇನೆ. ಹೀಗೆ ಉದ್ಯೋಗಿಯ ಸಮಗ್ರ ಮಾಹಿತಿ ಸಂಗ್ರಹಿಸಿ ಆತನ ಒತ್ತಡವನ್ನು ಕಡಿಮೆ ಮಾಡಿ ಆತ ಸಂಪೂರ್ಣ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬೇಕಾದ ಪೂರಕ ವಾತಾವರಣ ಕಲ್ಪಿಸಲಾಗುತ್ತದೆ.
ಆದರೆ ನಮ್ಮಲ್ಲಿ ಬಹುತೇಕ ಕಂಪನಿಗಳಲ್ಲಿ ಇದಕ್ಕೆ ವಿರುದ್ಧ ವ್ಯವಸ್ಥೆ ಇದೆ. ಆತ ಎಷ್ಟೇ ವಿದ್ಯಾವಂತನಾಗಿದ್ದರೂ ಎಷ್ಟು ಕಡಿಮೆ ಸಂಬಳಕ್ಕೆ ಆತನನ್ನು ಒಪ್ಪಿಸಬಹುದು ಎಂಬುದೇ ಅವರ ಮೊದಲ ಆದ್ಯತೆಯಾಗಿರುತ್ತದೆ. ನಿರುದ್ಯೋಗಿಯ ಅಸಹಾಯಕತೆ ಮತ್ತು ಅನಿವಾರ್ಯತೆಯನ್ನು ಎಷ್ಟು ಸಾಧ್ಯವೋ ಅಷ್ಟು ಶೋಷಿಸಲಾಗುತ್ತದೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಸಹ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತದೆ. ಉದ್ಯೋಗಿಯ ಹಿತಾಸಕ್ತಿ ಅವರಿಗೆ ಲೆಕ್ಕವೇ ಇಲ್ಲ, ಕೇವಲ ತಮ್ಮ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ.
ಒಬ್ಬ ವ್ಯಕ್ತಿ ಕುಟುಂಬ ಸಮೇತ ಬದುಕಲು ಎಷ್ಟು ಹಣದ ಅವಶ್ಯಕತೆ ಇರುತ್ತದೆ ಎಂಬುದನ್ನು ಕೇಳಿಸಿಕೊಳ್ಳುವ ತಾಳ್ಮೆಯೇ ಇರುವುದಿಲ್ಲ. ಕೇಳಿಸಿಕೊಂಡರು ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಉದ್ಯೋಗಿಯ ಗುಣಮಟ್ಟಕ್ಕಿಂತ ಕಡಿಮೆ ಸಂಬಳದ ಮಾನದಂಡವೇ ಬಹುತೇಕ ಉತ್ಪಾದನಾ ವಲಯದಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಅದರಿಂದಾಗಿಯೇ ಭಾರತದ ಉದ್ಯೋಗಿಗಳ ಗುಣಮಟ್ಟ ಐ ಟಿ ಹೊರತುಪಡಿಸಿ ಕೆಲವು ವಲಯಗಳಲ್ಲಿ ತುಂಬಾ ಕುಸಿದಿದೆ. ಅದರ ಫಲವಾಗಿ ಕೌಶಲ್ಯ ಅಭಿವೃದ್ಧಿ ಎಂಬ ಇಲಾಖೆಯನ್ನೇ ರಚಿಸಲಾಗಿದೆ.
ಉದ್ಯೋಗಿಯ ಯಾವುದೇ ರೀತಿಯ ಅತೃಪ್ತಿ ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಎಂಬ ಪ್ರಜ್ಞೆ ಪ್ರತಿಯೊಬ್ಬರಿಗೂ ಇರಬೇಕು. ಅದರಲ್ಲೂ ಅತಿಹೆಚ್ಚು ಜನಸಂಖ್ಯೆಯ ಸ್ಪೋಟದ ಕಾರಣದಿಂದ ಬಳಲುತ್ತಿರುವ ನಮ್ಮ ದೇಶದಲ್ಲಿ ಈ ಬಗ್ಗೆ ಅತ್ಯಂತ ಹೆಚ್ಚು ಗಮನಹರಿಸಬೇಕಿದೆ. ಒಂದು ವೇಳೆ ಗೂಗಲ್ ಕಂಪನಿಯಲ್ಲಿ ಮೇಲೆ ವಿವರಿಸಿದಷ್ಟು ಸೌಕರ್ಯಗಳು ಇಲ್ಲದಿದ್ದರೂ ಒಂದು ನಾಗರಿಕ ಸಮಾಜದಲ್ಲಿ ಕನಿಷ್ಠ ಪ್ರಮಾಣದ ಈ ರೀತಿಯ ವ್ಯವಸ್ಥೆ ಇರಲೇಬೇಕು. ಭಾರತದ ಮಾನವೀಯ ಮೌಲ್ಯಗಳು ಮತ್ತು ವ್ಯಕ್ತಿಯ ಗೌರವ ಹಾಗು ಜೀವನಮಟ್ಟ ಸುಧಾರಣೆ ಆಗಬೇಕಾದರೆ ಉದ್ಯೋಗಿಗಳನ್ನು ಶೋಷಿಸದೆ ಅವರ ಸಾಮರ್ಥ್ಯಕ್ಕೆ ಮತ್ತು ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಸಂಬಳ ನೀಡುವ ವ್ಯವಸ್ಥೆ ಬರಬೇಕು.
ಇದು ಅಷ್ಟು ಸುಲಭವಲ್ಲ ನಿಜ. ಸರ್ಕಾರಿ ಸೇವೆಯಲ್ಲಿ ಒಂದಷ್ಟು ಉತ್ತಮ ಸಂಬಳ ಇದೆ. ಆದರೆ ವಿಶ್ವದಲ್ಲೇ ಅತಿಹೆಚ್ಚು ಅಸಂಘಟಿತ ಕಾರ್ಮಿಕ ವಲಯ ಇರುವ ನಮ್ಮ ದೇಶದಲ್ಲಿ ಈ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ನಮ್ಮ ಮಕ್ಕಳ ಕಾಲಕ್ಕಾದರೂ ಇದು ಒಂದಷ್ಟು ಸುಧಾರಣೆ ಕಾಣುವಂತಾಗಲಿ ಎಂದು ಆಶಿಸುತ್ತಾ....
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ