ಉಪ್ಪು ತಿಂದ ಮೇಲೆ . . . 2/3

ಉಪ್ಪು ತಿಂದ ಮೇಲೆ . . . 2/3

ಹಿಂದಿನ ಕಥೆಗೆ ಲಿಂಕ್:  http://sampada.net/%E0%B2%89%E0%B2%AA%E0%B3%8D%E0%B2%AA%E0%B3%81-%E0%B2%...

ಮುಂದಕ್ಕೆ: 

     ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯ ವೇಳೆಗೆ ಪೋಲಿಸ್ ಜೀಪು ಮನೆ ಮುಂದೆ ಬಂದು ನಿಂತಿತು. ಮನೆಯ ಒಳಗೆ ಬಂದ ಸಬ್ಬಿನಿಸ್ಪೆಕ್ಟರ್, ಗಾಬರಿಯಾಗಿದ್ದ ರಾಜಮ್ಮ, ಕಿರಣರನ್ನು ಕುರಿತು 'ಸಣ್ಣಸ್ವಾಮಿ ಬಂದರೇನಮ್ಮಾ?" ಎಂದು ಕೇಳಿದರು. ಇಲ್ಲವೆಂದು ತಲೆಯಾಡಿಸಿದಾಗ, 'ನಿನ್ನೆ ಹೊರಗೆ ಹೋಗುವಾಗ ಯಾವ ಬಟ್ಟೆ ಹಾಕಿಕೊಂಡಿದ್ದರು?' ಎಂಬ ಪ್ರಶ್ನೆಗೆ, ರಾಜಮ್ಮನಿಂದ, 'ನಶ್ಯದ ಬಣ್ಣದ ಶರಟು, ಬೂದು ಬಣ್ಣದ ಪ್ಯಾಂಟು ಹಾಕಿಕೊಂಡು ಹೋಗಿದ್ದರು' ಎಂಬ ಉತ್ತರ ಬಂತು. 'ಸ್ವಲ್ಪ ನಮ್ಮ ಜೊತೆ ಬನ್ನಿಮ್ಮಾ' ಎಂದು ರಾಜಮ್ಮನನ್ನೂ, ಜೊತೆಗೆ ಕಿರಣನನ್ನೂ ಕರೆದುಕೊಂಡು ಹೋದ ಜೀಪು ಸೀದಾ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ನಿಂತಿತು. ರಾಜಮ್ಮ ಕೆಟ್ಟದನ್ನು ನೆನೆಸಿಕೊಂಡು ಅಳಲೂ ಆಗದೆ ಗಾಬರಿಯಾಗಿ ತೇಲುಗಣ್ಣು ಮಾಡಿದ್ದರು. ಸಬ್ಬಿನಿಸ್ಪೆಕ್ಟರರು, 'ಗಾಬರಿಯಾಗಬೇಡಿರಮ್ಮಾ. ನೋಡಿ ಅಲ್ಲಿ ಒಂದು ಬಾಡಿ ಇದೆ. ನಿಮ್ಮ ಮನೆಯವರದು ಅಲ್ಲದೆಯೂ ಇರಬಹುದು. ನೋಡಿ ಹೇಳೀಮ್ಮಾ' ಎಂದರು. ರಾಜಮ್ಮ ಆ ದೇಹವನ್ನು ನೋಡಿದೊಡನೆಯೇ ಮೂರ್ಛೆ ತಪ್ಪಿಬಿದ್ದರು. ಅದು ಸಣ್ಣಸ್ವಾಮಿಯದೇ ದೇಹವಾಗಿತ್ತು. 

     ಊರಿನ ಹೊರವಲಯದಲ್ಲಿ ಸ್ಮಶಾಣದ ಸಮೀಪದ ಪೊದೆಯಲ್ಲಿ ಕೆಲವು ನಾಯಿಗಳು ಗೋಣೀಚೀಲವನ್ನು ಎಳೆದಾಡುತ್ತಿದ್ದು, ಹರಿದ ಚೀಲ ಒಳಗಿಂದ ಹೊರಗೆ ಇಣುಕಿದ್ದ ಕೈಯನ್ನು ಕಚ್ಚಿ ತಿನ್ನುತ್ತಿದ್ದವು. ಇದನ್ನು ಗಮನಿಸಿದ ಬೆಳಗಿನ ವಾಕಿಂಗಿಗೆ ಹೋಗಿಬರುತ್ತಿದ್ದ ಕೆಲವರು  ನಾಯಿಗಳನ್ನು ಓಡಿಸಿ ಪೋಲಿಸ್ ಠಾಣೆಗೆ ಫೋನು ಮಾಡಿದ್ದರು. ಪೋಲಿಸರು ಧಾವಿಸಿ ಮಹಜರ್ ಮಾಡಿ, ಫೋಟೋಗಳನ್ನು ತೆಗೆದುಕೊಂಡು ಶವವನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ತಂದಿದ್ದರು. ಅನುಮಾನದ ಮೇಲೆ ಸಣ್ಣಸ್ವಾಮಿಯ ಮನೆಗೆ ಹೋಗಿ ವಿಚಾರಿಸಿದ್ದರು. ಅನುಮಾನ ಧೃಢಪಟ್ಟಿತ್ತು. ಹೆಚ್ಚಿನ ವಿಚಾರಣೆಗಾಗಿ ರಾಜಮ್ಮ ಮತ್ತು ಕಿರಣರನ್ನು ಠಾಣೆಗೆ ಕರೆದೊಯ್ದಿದ್ದರು. ರಾಜಮ್ಮ ಅಂದು ದಿನಪೂರ್ತಿ ಮನೆಯಲ್ಲೇ ಇದ್ದುದನ್ನು ಅಕ್ಕಪಕ್ಕದ ಮನೆಯವರು ಖಚಿತಪಡಿಸಿದರು. ಕಿರಣ ಅಂದು ತಿರುಮಲೂರಿಗೆ ಹೋಗಿ ತನ್ನೊಂದಿಗೇ ಸಾಯಂಕಾಲದವರೆಗೂ ಇದ್ದುದನ್ನು ಅಲ್ಲಿನ ಗಣೇಶಪ್ಪ ಹೇಳಿದರು. ಪೆಟ್ರೋಲ್ ಬಂಕಿನ ಮಾಲಿಕನೂ ಕಿರಣ ಕೆಲಸ ಕೇಳಿ ತಮ್ಮ ಮನೆಗೆ ಬಂದಿದ್ದನೆಂದು ಹೇಳಿಕೆ ಕೊಟ್ಟರು. ಸಣ್ಣಸ್ವಾಮಿ ಕೊಲೆಯಾಗುವ ಮುನ್ನ ಅವರನ್ನು ಕಂಡಿದ್ದವರು ಅವರ ಪತ್ನಿ ರಾಜಮ್ಮ ಮಾತ್ರ. ಹೀಗಾಗಿ ಎಷ್ಟೋ ಪ್ರಕರಣಗಳನ್ನು ಭೇದಿಸಿದ್ದ ಸಬ್ಬಿನಿಸ್ಪೆಕ್ಟರರಿಗೆ ಇದೊಂದು ಕಗ್ಗಂಟಾಗಿತ್ತು. ತಮಗೆ ತಿಳಿಸದೆ ಊರನ್ನು ಬಿಟ್ಟು ಹೋಗಬಾರದೆಂದು, ಕರೆಕಳಿಸಿದಾಗ ಕೂಡಲೇ ಬರಬೇಕೆಂದು ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದರು.

* * * *

     ಸಣ್ಣಸ್ವಾಮಿಯ ಪತ್ನಿ ರಾಜಮ್ಮಳಿಗೆ ಬರಬೇಕಾದ ಬಾಕಿ ಸಂಬಳ, ಕುಟುಂಬ ಪಿಂಚಣಿ, ಗ್ರಾಚುಯಿಟಿ, ರಜಾ ಸಂಬಳ, ಸಮೂಹ ವಿಮೆ ಹಣ, ಇತ್ಯಾದಿಗಳು ಇತ್ಯರ್ಥವಾಗಲು ಆರು ತಿಂಗಳು ಹಿಡಿಯಿತು. ಸಲೀಮನೂ ಇದಕ್ಕಾಗಿ ಓಡಾಡಿ ಸಹಾಯ ಮಾಡಿದ್ದ. ನಂತರದ ಒಂದು ದಿನ ಸಲೀಮನ ಮನೆಯಲ್ಲಿ ಸೇರಿ ಮಾತನಾಡುವುದೆಂದು ಕಿರಣ, ಸಲೀಮ ಮಾತನಾಡಿಕೊಂಡಿದ್ದಂತೆ ಅಂದು ಸಾಯಂಕಾಲ ಸೇರಿದ್ದರು. ಕಿರಣನೇ ಶುರು ಮಾಡಿದ: 'ಸಲೀಮ, ನಾವು ಅವತ್ತು ಮಾತನಾಡಿಕೊಂಡಿದ್ದಂತೆ ಬರುವ ಹಣದಲ್ಲಿ ಮೂವತ್ತು ಪರ್‍ಸೆಂಟ್ ತಂದಿದೀನಿ. ನೋಡು, ಈ ಬ್ಯಾಗಲ್ಲಿ ಮೂರೂವರೆ ಲಕ್ಷ ಇದೆ. ಲೆಕ್ಕ ಹಾಕಿಕೋ'. ಸಲೀಮ, "ಪ್ರಾವಿಡೆಂಟ್ ಫಂಡಿಂದ ಏಳೂವರೆ ಲಕ್ಷ ಬಂತಲ್ಲಾ, ಅದರಲ್ಲಿ ಮೂವತ್ತು ಪರ್‍ಸೆಂಟ್ ಕೊಡಲಿಲ್ಲವಲ್ಲಾ? ಇನ್ನೂ ಇನ್ಶೂರೆನ್ಸ್ ಹಣ ಬರಬೇಕು ಅಲ್ಲವಾ?" ಕಿರಣ ರೇಗಿದ, "ಪ್ರಾವಿಡೆಂಟ್ ಹಣ ನಮ್ಮಪ್ಪ ಕೂಡಿಟ್ಟ ಹಣ. ಇನ್ಶೂರೆನ್ಸ್ ಹಣಾನೂ ಅಷ್ಟೆ, ಅಪ್ಪ ಸಂಬಳದಿಂದ ಕಟ್ಟಿದ್ದ ಹಣ. ಅದರಲ್ಲಿ ಹೇಗೋ ಕೊಡಕ್ಕಾಗತ್ತೆ? ನೀನು ಹೊಸ ತರಲೆ ಮಾಡಬೇಡ". ಸಲೀಮ, "ನನಗೆ ಅದೆಲ್ಲಾ ಗೊತ್ತಿಲ್ಲ. ನನಗೆ ಎಲ್ಲದರಲ್ಲೂ ಪಾಲು ಬರಲೇಬೇಕು". ಇಬ್ಬರಲ್ಲೂ ಬಹಳ ಹೊತ್ತು ಜಟಾಪಟಿ ನಡೆಯಿತು. ಜೋರು ಜೋರಾಗಿ ಮಾತು ನಡೆದಾಗ, ಕೈ ಮಿಲಾಯಿಸುವ ಹಂತಕ್ಕೂ ಬಂದಿದ್ದಾಗ ಒಂದೆರಡು ಸಲ ಸಲೀಮನ ಪತ್ನಿ ಶಾಕಿರಾಬಾನು ಆತಂಕದಿಂದ ಇಣಕಿ ನೋಡಿ ಹೋಗಿದ್ದಳು. ಕೊನೆಯಲ್ಲಿ ಇನ್ನೂ ನಾಲ್ಕು ಲಕ್ಷ ಸಲೀಮನಿಗೆ ಕೊಡುವುದೆಂದು ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಒಪ್ಪಿದ. ಕಿರಣ ಈ ನಾಲ್ಕು ಲಕ್ಷವನ್ನೂ ಒಮ್ಮೆಗೇ ಕೊಡದೆ ಕಂತಿನಲ್ಲಿ ಹಾಗೂ ಹೀಗೂ ಸಲೀಮನಿಗೆ ತಲುಪಿಸುವಾಗ ನಾಲ್ಕೈದು ತಿಂಗಳು ತಡ ಮಾಡಿದ್ದ. ಅಷ್ಟರಲ್ಲಿ ಕಿರಣನಿಗೆ ಅನುಕಂಪದ ಮೇಲೆ ಗ್ರಾಮಲೆಕ್ಕಿಗನಾಗಿ ಹತ್ತಿರದ ಹಳ್ಳಿಗೆ ನೇಮಿಸಿ ಆದೇಶವೂ ಬಂದಿತು.

     ಸಲೀಮನಿಗೆ ಕಿರಣ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಂಡಿದ್ದ. ಆಗಾಗ್ಗೆ ಐದು ಸಾವಿರ, ಎರಡು ಸಾವಿರ, ಹೀಗೆ ಕೇಳಿ ಪಡೆಯುತ್ತಿದ್ದ. ಇಷ್ಟವಿಲ್ಲದಿದ್ದರೂ, 'ಇದೇ ಕೊನೆ ಸಲ' ಎಂದು ಹೇಳಿ ಕೊಡುತ್ತಿದ್ದ ಕಿರಣ, ಅವನ ಕಾಟ ತಡೆಯದಾದಾಗ, 'ಸಲೀಮ, ನೋಡು, ನೀನು ಐದು ಸಾವಿರ ಕೇಳ್ತಾ ಇದೀಯಾ, ತೊಗೋ, ಹತ್ತು ಸಾವಿರ ಕೊಡ್ತಾ ಇದೀನಿ. ಇನ್ನು ಮುಂದೆ ನೀನು ನನ್ನನ್ನು ಮಾತನಾಡಿಸುವುದಕ್ಕೆ ಬರಲೇಬಾರದು. ಅರ್ಧಕ್ಕಿಂತ ಹೆಚ್ಚು ಹಣ ನಿನಗೇ ಕೊಟ್ಟಿದೀನಿ. ನಿನಗೆ ಇನ್ನೂ ತೃಪ್ತಿ ಇಲ್ಲವಲ್ಲಾ. ನೀನು ಏನು ಮಾಡ್ತೀಯೋ ಮಾಡಿಕೋ ಹೋಗು. ಇನ್ನು ಮುಂದೆ ನಾನು ಒಂದು ಪೈಸೆ ಕೊಡಲ್ಲ' ಎಂದಿದ್ದ. ಸಲೀಮ ಮಾತನಾಡದೆ ನಗುತ್ತಾ ಹಣ ಪಡೆದು ಹೋಗಿದ್ದ.

     ನಂತರ ಒಂದು ತಿಂಗಳು ಕಾಣಿಸಿಕೊಳ್ಳದಿದ್ದ ಸಲೀಮ, ಒಂದು ದಿನ ಇದ್ದಕ್ಕಿದ್ದಂತೆ ಬಂದವನು, "ಕಿರಣ, ಇದೇ ಕೊನೆ ಸಲ. ಮತ್ತೆ ಇನ್ನು ಯಾವತ್ತೂ ಬರೋದೇ ಇಲ್ಲ. ಹತ್ತು ಸಾವಿರ ತುರ್ತಾಗಿ ಬೇಕಾಗಿದೆ. ಹೊಸ ಟ್ಯಾಕ್ಸಿ ಸಾಲದ ಕಂತು ಕಟ್ಟಲು ಸಾಲದಾಗಿದೆ. ಇಲ್ಲ ಅನ್ನಬೇಡ" ಅಂದ. ಕಿರಣ, "ಕೊಡಕ್ಕಾಗಲ್ಲ. ಏನು ಬೇಕಾದರೂ ಮಾಡಿಕೋ" ಅಂದ. ಸಲೀಮ, "ಹೋಗಲಿ ಬಿಡು. ಇನ್ಸ್‌ಪೆಕ್ಟರ್ ಹತ್ರ ಹೋಗ್ತೀನಿ. ನಡೆದಿದ್ದೆಲ್ಲಾ ಹೇಳಿಬಿಡ್ತೀನಿ" ಎಂದ. ಕಿರಣ. "ಏನು ಹೆದರಿಸ್ತೀಯಾ? ನಿನ್ನೂ ಒದ್ದು ಒಳಗೆ ಹಾಕ್ತಾರೆ" ಅಂದ. "ನನ್ನನ್ನು ಯಾಕೆ ಹಾಕ್ತಾರೆ? ಅಪ್ಪ ಮಗ ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಂಡಿದ್ದರು. ದಾರಿಯಲ್ಲಿ ಹೋಗ್ತಾ ಮಗ ಅಪ್ಪನ್ನ ಸಾಯಿಸಿದ. ವಿಷಯ ಬಾಯಿ ಬಿಟ್ಟರೆ ನನ್ನನ್ನೂ ಮುಗಿಸಿಬಿಡ್ತೀನಿ ಅಂತ ಹೆದರಿಸಿದ. ಹೆದರಿ ಸುಮ್ಮನಿದ್ದೆ ಅಂತ ಹೇಳ್ತೀನಿ". ಕಿರಣ ನಡುಗಿಬಿಟ್ಟ. "ದಮ್ಮಯ್ಯ ಅಂತೀನಿ. ಪ್ರಾಣ ಹಿಂಡಬೇಡ ಕಣೋ. ನಿನಗೆ ಹಣ ಸುರಿಯಕ್ಕೆ ದೇವರಂಥಾ ಅಪ್ಪನ್ನ ಕೊಂದುಬಿಟ್ಟೆನಲ್ಲಾ. ಎಂಥಾ ಪಾಪಿ ಆಗಿಬಿಟ್ಟೆ ನಾನು. ಆಯ್ತು. ಹತ್ತು ಸಾವಿರ ಸಾಯಂಕಾಲ ಕೊಡ್ತೀನಿ. ನಿನ್ನ ಕಾಲಿಗೆ ಬೇಕಾದ್ರೆ ಬೀಳ್ತೀನಿ. ಇನ್ನು ಮುಂದೆ ನನ್ನನ್ನು ಹೀಗೆಲ್ಲಾ ಕಾಡಬೇಡ ಕಣೋ" ಎಂದ ಕಿರಣನಿಗೆ ಅಭಯ ಕೊಟ್ಟು ಸಲೀಮ ಕಾಲ್ಕಿತ್ತ.

     'ಅಂದು ಹತ್ತು ಸಾವಿರ ತೆಗೆದುಕೊಂಡು ಹೋಗಿದ್ದವನು ಇವತ್ತು ಮತ್ತೆ ಐದು ಸಾವಿರ ಕೇಳ್ತಾ ಇದಾನೆ. ಇವತ್ತು ಕೊಟ್ಟರೂ ಮತ್ತೆ ಕೇಳಲ್ಲಾ ಅನ್ನುವುದು ಏನು ಗ್ಯಾರಂಟಿ?' ಎಂದು ಯೋಚಿಸುತ್ತಿದ್ದ ಕಿರಣನಿಗೆ ತಲೆ ಚಿಟ್ಟು ಹಿಡಿದುಹೋಯಿತು. 'ಹಣದ ಆಸೆಗೆ ಅಪ್ಪನನ್ನೇ ಕೊಂದೆ. ಆದರೆ ಹಣ ಸಲೀಮನ ಕೈಸೇರುತ್ತಿದೆ' ಎಂದು ಅವನ ಮೇಲೆ ಸಿಟ್ಟು ಉಕ್ಕಿಬರುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದ. ಸಂಜೆ ಸ್ಟೇಡಿಯಮ್ಮಿನ ಹತ್ತಿರ ಹೋದಾಗ ಸಲೀಮ ಅವನಿಗಿಂತ ಮುಂಚೆಯೇ ಬಂದು ಮಾಮೂಲು ಜಾಗದಲ್ಲಿ ಕುಳಿತಿದ್ದುದನ್ನು ಕಂಡು ಮೈ ಉರಿದುಹೋದರೂ ತೋರ್ಪಡಿಸಿಕೊಳ್ಳದೆ ಪಕ್ಕ ಹೋಗಿ ಕುಳಿತ. ಕಿರಣನೇ, "ಸಲೀಮ, ನೀನು ಕೇಳಿದ್ದಕ್ಕಿಂತಲೂ ಹೆಚ್ಚು ದುಡ್ಡು ನಿನಗೆ ಸಿಕ್ಕಿದೆ. ಆದರೂ ಈರೀತಿ ಗೋಳುಗುಟ್ಟಿಸೋದು ಸರೀನಾ? ನಿನ್ನ ಭಾಮೈದಂಗೆ ಆಕ್ಸಿಡೆಂಟ್ ಅಂತ ಸುಳ್ಳು ಬೇರೆ ಹೇಳ್ತೀಯಲ್ಲಾ, ಅವನು ಈಗ ನಾನು ಬರುವಾಗ ದಾರಿಯಲ್ಲೇ ಸಿಕ್ಕಿದ್ದ. ಹಿಂಗೆ ಯಾಕೆ ಮಾಡ್ತೀಯಾ?" ಸಲೀಮನ ನಗುವೇ ಅವನ ಉತ್ತರವಾಗಿತ್ತು. "ದುಡ್ಡಿದೆ ಅಂತ ಏನೇನೋ ಹಲ್ಲಂಡೆ ವ್ಯವಹಾರ ಮಾಡಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದೀನಿ ಕಣೋ. ಹಾಕಿರೋ ದುಡ್ಡು ಉಳಿಸಿಕೊಳ್ಳೋದಕ್ಕಾದರೂ ಖರ್ಚು ಮಾಡಬೇಕು. ಅದಕ್ಕೇ ನಿನ್ನನ್ನು ಕೇಳಿದ್ದು ಕಣೋ. ನಿನ್ನ ಮೇಲಾಣೆ, ಇನ್ನು ನಿನ್ನ ಹತ್ತಿರ ಮತ್ತೆ ದುಡ್ಡು ಕೇಳಲ್ಲ" ಅಂದ. ಸ್ವಲ್ಪ ಹೊತ್ತಿನ ಮೌನದ ನಂತರ ಕಿರಣ ಐದು ಸಾವಿರ ರೂ. ಕೊಡುತ್ತಾ ಹೇಳಿದ, "ನನಗೆ ಬೆಂಗಳೂರಿನಲ್ಲಿ ಸ್ವಲ್ಪ ಕೆಲಸ ಇದೆ. ನಿನಗೆ ಅನುಕೂಲ ಆದಾಗ ನಿನ್ನ ಟ್ಯಾಕ್ಸೀಲೇ ಹೋಗಿಬರೋಣ. ಯೋಚನೆ ಮಾಡಬೇಡ, ಡೀಸೆಲ್ ನಿನಗೂ ಹಾಕಿಸ್ತೀನಿ, ನಿನ್ನ ಗಾಡಿಗೂ ಹಾಕಿಸ್ತೀನಿ". ಸಲೀಮ ನಗುತ್ತಾ, "ಅದನ್ನು ಹೇಳಬೇಕಾ? ನನಗೂ ಬೆಂಗಳೂರಿನಲ್ಲಿ ಕೆಲಸ ಇದೆ. ಈ ಭಾನುವಾರ ಹೋಗೋಣ". ತಿನ್ನುತ್ತಿದ್ದ ಕಡಲೆಕಾಯಿಯೂ ಮುಗಿಯಿತು. ಅವರ ಮಾತುಕತೆಗಳೂ ಮುಗಿದು ಇಬ್ಬರೂ ಜಾಗ ಖಾಲಿ ಮಾಡಿದರು.

. . . .(ಮುಂದುವರೆಯುವುದು)

ಚಿತ್ರಕೃಪೆ: http://commons.wikimedia.org/wiki/File:Cat_eyes_2007-1.jpg

Comments

Submitted by nageshamysore Mon, 04/21/2014 - 21:38

ಪಾಪ ಮಾಡಿ ತಪ್ಪಿಸಿಕೊಳ್ಳಲಷ್ಟು ಸುಲಭವೆ? ಸಲೀಮನ ರೂಪದಲಿ ಕಾಡಿತ್ತು ಪಾಪದ ಫಲ. ಅದನ್ನು ನಿವಾರಿಸಲು ಇನ್ನೆಷ್ಟು ಪಾಪ ಮಾಡಬೇಕಿದೆಯೊ...?