ಉಬ್ಬರವಿಳಿತದಿಂದ ವಿದ್ಯುತ್ ಉತ್ಪಾದನೆ

ಉಬ್ಬರವಿಳಿತದಿಂದ ವಿದ್ಯುತ್ ಉತ್ಪಾದನೆ

ಇಂದು ಪೆಟ್ರೋಲಿಯಂ ಮತ್ತು ಕಲ್ಲಿದ್ದಲಿನಂತಹ ಶಕ್ತಿ ಸಂಪನ್ಮೂಲಗಳು ಮುಗಿದು ಹೋಗುವ ಅಪಾಯವನ್ನು ಎದುರಿಸುತ್ತಿವೆ. ಅದಕ್ಕಾಗಿ ಪರ್ಯಾಯ ಶಕ್ತಿಯ ಮೂಲವನ್ನು ಹುಡುಕುತ್ತಲೇ ಇದ್ದೇವೆ. ನವೀಕರಿಸಬಹುದಾದ ಶಕ್ತಿಯ ಮೂಲಗಳಲ್ಲಿ ನೀರು ಬಹುಮುಖ್ಯವಾದದ್ದು. ಸಮುದ್ರದ ನೀರಿನಲ್ಲಿ ಉಂಟಾಗುವ ದೊಡ್ದ ದೊಡ್ದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ “ತಂತ್ರಜ್ಞಾನ"ಕ್ಕೆ ಇಂದು ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಅಂದರೆ ಸಮುದ್ರದ ಅಲೆಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ರಾಷ್ಟ್ರಗಳಲ್ಲಿ ಇಂದು ಬ್ರಿಟನ್ ಅಗ್ರಸ್ಥಾನದಲ್ಲಿದೆ. ಬ್ರಿಟನ್ ತನ್ನ ವಿದ್ಯುತ್ತಿನ ಅಗತ್ಯದಲ್ಲಿ ಶೇಕಡಾ ೨೦ರಷ್ಟನ್ನು ಸಮುದ್ರದ ಅಲೆಗಳಿಂದ ಉತ್ಪಾದಿಸುತ್ತಿದೆ.

ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಅಷ್ಟು ಸುಲಭವಾದುದಲ್ಲ. ಇಂತಹ ಸ್ಥಾವರವನ್ನು ಅಲೆಗಳ ಶಕ್ತಿ ಸ್ಥಾವರ ಎಂದು ಕರೆಯುತ್ತಾರೆ. ಇದಕ್ಕಾಗಿ ಸಮುದ್ರದಲ್ಲಿ ಒಡ್ಡುಗಳನ್ನು ಅಥವಾ ದೊಡ್ಡ ಕಟ್ಟೆಗಳನ್ನು ಕಟ್ಟಬೇಕಾಗುತ್ತದೆ. 

ಇದು ಹೇಗೆ ಕೆಲಸ ಮಾಡುತ್ತದೆ?: ಅಲೆಗಳ ಶಕ್ತಿ ಸ್ಥಾವರಗಳಲ್ಲಿ ಸಮುದ್ರದಲ್ಲಿ ಉಂಟಾಗುವ ಉಬ್ಬರವಿಳಿತಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಅಲೆಗಳ ಶಕ್ತಿ ಸ್ಥಾವರಗಳಲ್ಲಿ ‘ಜಲ ವಿದ್ಯುತ್' ರೀತಿಯಲ್ಲಿಯೇ ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ ಇಲ್ಲಿ ಕಟ್ಟುವ ಒಡ್ಡು ಅಥವಾ ಕಟ್ಟೆ ಇನ್ನು ಸ್ವಲ್ಪ ದೊಡ್ಡದಾಗಿರುತ್ತದೆ. ಇಂತಹ ಸ್ಥಾವರಗಳಲ್ಲಿ ನದಿ ಸಮುದ್ರ ಸೇರುವ ಜಾಗದಲ್ಲಿ (ಕೊಲ್ಲಿ) ಒಂದು ದೊಡ್ಡ ಕಟ್ಟೆ ಅಥವಾ ಡ್ಯಾಂ ಅನ್ನು ನಿರ್ಮಿಸಲಾಗುತ್ತದೆ. ಇಂತಹ ಡ್ಯಾಂಗಳಲ್ಲಿ ಅನೇಕ ಸುರಂಗ ಕೊಳವೆಗಳನ್ನು ನಿರ್ಮಿಸಲಾಗುತ್ತದೆ.

ಇಂತಹ ಅಲೆಗಳು ದಿನದಲ್ಲಿ ಎರಡು ಬಾರಿ ಅಪಾರ ಪ್ರಮಾಣದಲ್ಲಿ ನೀರನ್ನು ಕೊಳವೆಗಳ ಮೂಲಕ ಹರಿಯುವಂತೆ ಮಾಡುತ್ತವೆ. ಇಂತಹ ಭಾರಿ ಕೊಳವೆಗಳ ಮಧ್ಯದಲ್ಲಿ ಟರ್ಬೈನ್ ಗಳನ್ನು ಅಳವಡಿಸಲಾಗಿರುತ್ತದೆ. ನೀರಿನಲ್ಲಿ ಉಂಟಾಗುವ ಭಾರೀ ಉಬ್ಬರವಿಳಿತಗಳು ಈ ಟರ್ಬೈನನ್ನು ತಿರುಗಿಸಿ ವಿದ್ಯುತ್ ಅನ್ನು ಉತ್ಪಾದಿಸುತ್ತವೆ. ಪ್ರಪಂಚದ ಅತಿ ದೊಡ್ದ ಅಲೆಗಳ ವಿದ್ಯುತ್ ಸ್ಥಾವರ ಫ್ರಾನ್ಸ್ ನ ಸೈಂಟ್ ಮಾಲೋದಲ್ಲಿದೆ. ಇದನ್ನು ೧೯೬೬ರಲ್ಲಿ ನಿರ್ಮಿಸಲಾಯಿತು.

ಅನುಕೂಲಗಳು: 

* ಇದನ್ನು ಒಂದು ಬಾರಿ ನಿರ್ಮಿಸಿದರೆ ಸಾಕು ನಿರಂತರವಾಗಿ ಅಲೆಗಳ ವಿದ್ಯುತ್ ದೊರೆಯುತ್ತಾ ಹೋಗುತ್ತದೆ.

* ಇದರಿಂದ ಪರಿಸರಕ್ಕೆ ಯಾವುದೇ ಅಪಾಯಕಾರಿ ಅನಿಲಗಳ ಬಿಡುಗಡೆ ಇಲ್ಲ. ಇದು ಪರಿಸರ ಸ್ನೇಹಿ.

* ಇದಕ್ಕೆ ನೀರನ್ನು ಬಿಟ್ಟರೆ ಯಾವುದೇ ಇಂಧನದ ಅವಶ್ಯಕತೆ ಇಲ್ಲ.

* ತುಂಬು ಭರವಸೆಯಿಂದ ಈ ವಿಧಾನದಲ್ಲಿ ವಿದ್ಯುತ್ತನ್ನು ಪಡೆಯಬಹುದು. ಇವುಗಳ ನಿರ್ವಹಣೆ ಅಷ್ಟು ವೆಚ್ಚದಾಯಕವಲ್ಲ.

* ಅಲೆಗಳ ಮೆಲೆ ನೀವು ತುಂಬಾ ಭರವಸೆಯನ್ನು ಇಡಬಹುದು. ಯಾವುದೇ ಸಂದರ್ಭದಲ್ಲಿ ಇವು ಕೈಕೊಡುವುದಿಲ್ಲ.

* ಈ ಸ್ಥಾವರಗಳಲ್ಲಿ ನಿರ್ಮಿಸುವ ಟರ್ಬೈನ್ ಗಳು ಲಂಬ ಅಕ್ಷ ನೇರದ ಟರ್ಬೈನ್ ಗಳಾಗಿದ್ದು, ಇವುಗಳ ನಿರ್ಮಾಣ ಅಷ್ಟು ವೆಚ್ಚದಾಯಕವಲ್ಲ.

ಅನನುಕೂಲಗಳು:

* ಸಮುದ್ರದ ದಡದಲ್ಲಿ (ಕೊಲ್ಲಿ) ಇವುಗಳ ನಿರ್ಮಾಣವಾಗಿದ್ದರಿಂದ ಇದರ ನಿರ್ಮಾಣ ತುಂಬಾ ದೊಡ್ಡದಾಗಿದ್ದು ಅತ್ಯಂತ ವೆಚ್ಚದಾಯಕವಾಗಿದೆ.

* ಇದು ಅತ್ಯಂತ ದೊಡ್ದ ನಿರ್ಮಾಣವಾಗಿರುವುದರಿಂದ ಸಮುದ್ರದಲ್ಲಿ ಅನೇಕ ಕಿಲೋಮೀಟರ್ ಗಳವರೆಗೆ ಏರಿಳಿತದಲ್ಲಿ ಸಮತೋಲನ ತಪ್ಪಬಹುದು.

* ಸಮುದ್ರದ ದಡದ ನೀರು ಕದಡುವುದರಿಂದ ದಡದಲ್ಲಿ ವಾಸಿಸುವ ಪಕ್ಷಿಗಳ ‘ಸಮುದ್ರದ ಆಹಾರ'ಕ್ಕೆ (ಮೀನು ಮುಂತಾದ ಸಣ್ಣ ಜಲಚರಗಳು) ತೊಂದರೆಯಾಗಬಹುದು.

* ಸಮುದ್ರದ ಮೀನುಗಳು ಸ್ಥಾನಾಂತರಗೊಳ್ಳಲು ಇಷ್ಟಪಡುವುದಿಲ್ಲ. ಇದರಿಂದಾಗಿ ಸ್ಥಾವರಗಳ ಬಳಿ ‘ಮೀನು ಬಲೆ' ಸ್ಥಾಪನೆ ಅಗತ್ಯ.

* ಇಂತಹ ಸ್ಥಾವರಗಳು ದಿನಕ್ಕೆ ಸುಮಾರು ೧೦ ಗಂಟೆಗಳ ಕಾಲ ಮಾತ್ರ ವಿದ್ಯುತ್ ಉತ್ಪಾದಿಸಬಲ್ಲವು.

* ಈ ಸ್ಥಾವರಕ್ಕಾಗಿ ವಿಶೇಷ ರೀತಿಯ ‘ಡ್ಯಾಂ’ ಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ.

ಅಲೆಗಳ ವಿದ್ಯುತ್ ಸ್ಥಾವರಗಳು ನವೀಕರಿಸಬಹುದಾದಶಕ್ತಿಯ ಮೂಲವಾಗಿರುವುದರಿಂದ ಇಂದು ಪ್ರಪಂಚದ ಅನೇಕ ರಾಷ್ಟ್ರಗಳು ಇವುಗಳ ನಿರ್ಮಾಣದಲ್ಲಿ ತೊಡಗಿವೆ. ಇಂದು ಕೆನಡಾ, ಚೀನಾ, ರಷ್ಯಾ, ಫ್ರಾನ್ಸ್, ದಕ್ಷಿಣ ಕೊರಿಯಾ, ಬ್ರಿಟನ್ ರಾಷ್ಟ್ರಗಳು ಇವುಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿವೆ. ಭಾರತವು ಕೂಡ ಗುಜರಾತ್ ನಲ್ಲಿರುವ ಅರಬ್ಬೀ ಸಮುದ್ರದ ಕಛ್ ಕೊಲ್ಲಿಯಲ್ಲಿ ೫೦ ಮೆಗಾ ವ್ಯಾಟ್ ಸಾಮರ್ಥ್ಯದ ಇಂಥ ಸ್ಥಾವರದ ನಿರ್ಮಾಣ ಮಾಡಿದೆ.

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ