ಉರಿಯ ಗದ್ದುಗೆ

ಉರಿಯ ಗದ್ದುಗೆ

ಪುಸ್ತಕದ ಲೇಖಕ/ಕವಿಯ ಹೆಸರು
ಬಿ ಆರ್ ಪೋಲೀಸ್ ಪಾಟೀಲ
ಪ್ರಕಾಶಕರು
ವಾತ್ಸಲ್ಯ ಪ್ರಕಾಶನ, ಜಮಖಂಡಿ, ವಿಜಾಪುರ
ಪುಸ್ತಕದ ಬೆಲೆ
ರೂ. ೩೬೦.೦೦, ಮುದ್ರಣ: ೨೦೨೪

‘ಉರಿಯ ಗದ್ದುಗೆ’ ಬಿ.ಆರ್. ಪೊಲೀಸ್ ಪಾಟೀಲ ಅವರ ಕಾದಂಬರಿಯಾಗಿದೆ. ಇದಕ್ಕೆ ಶಶಿಕಾಂತ ಪಟ್ಟಣ ಅವರ ಬೆನ್ನುಡಿ ಬರಹವಿದೆ; ವಿರಕ್ತಪೀಠ ಪರಂಪರೆಯ ತಾಯಿಬೇರು ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು. ಅವರ ಬಳಿವಿಡಿದು ಬಂದ ಮಠ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ. ಈ ಮಠದ ೧೯ನೇ ಪೀಠಾಧಿಕಾರಿಗಳಾಗಿ ೧೯೭೪ ಜುಲೈ ೨೯ ರಂದು ಅಧಿಕಾರ ವಹಿಸಿಕೊಂಡ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಮೊದಲ ದಿನದಿಂದಲೇ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪೀಠಕ್ಕೆ ಬರುವ ಮೊದಲು ಹೊಯ್ದಾಟವಿದ್ದರೂ ಬಂದು ಹೊಣೆಹೊತ್ತ ಮೇಲೆ ದೃಢ ನಿಶ್ಚಯ ತಾಳಿ ಈ ಮಠದ, ಭಕ್ತರ ಶ್ರೇಯೋಭಿವೃದ್ಧಿಗೆ ಅಹರ್ನಿಶಿಯಾಗಿ ಶ್ರಮಿಸಿದ್ದಲ್ಲದೆ ಅಶಕ್ತ, ಅವಕಾಶವಂಚಿತ ಅನೇಕ ಸಮುದಾಯಗಳ ಉನ್ನತಿಗಾಗಿ, ನಾಡು, ನುಡಿ, ಗಡಿ ಸಂವರ್ಧನೆಗಾಗಿ, ಪ್ರಾಣಿ, ಪರಿಸರ, ಜಲ ಸ್ಥಿರತೆಗಾಗಿ ತುಂಬ ಗಟ್ಟಿಯಾದ ಧ್ವನಿ ಎತ್ತಿದರು. ಈ ಜೀವಪರ ಕಾಳಜಿಯನ್ನು ಕಂಡ ನಾಡಜನತೆ ಇವರು ನಮ್ಮವರು ಎಂದು ಹಂಬಲಿಸಿ ಶ್ರೀ ಮಠದತ್ತ ಹರಿದು ಬರತೊಡಗಿದರು. ಜನಮನದ ಶಕ್ತಿಯ ಸ್ವರೂಪಕ್ಕೆ ಶಿವರೂಪವನ್ನಿತ್ತ ಪೂಜ್ಯರು ಸಾಮಾನ್ಯರಲ್ಲಿ ಸಾಮಾನ್ಯರಾದವರಿಂದ ಅಸಾಮಾನ್ಯ ಕಾರ್ಯಗಳು ನೆರವೇರುವಂತೆ ಪ್ರೇರೇಪಿಸಿದರು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ದೇವು ಪತ್ತಾರ. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

“ಕವಿ ಸಿದ್ಧರಾಮರು ಬಯಲ ಬೆಳಕಾದುದು.ತಮ್ಮ ಲಾವಣಿಗಳ ಮೂಲಕ ಜನಪ್ರಿಯರಾಗಿರುವ ಕವಿ, ಲೇಖಕ ಬಾಪುಗೌಡ ಪೋಲಿಸ್‌ಪಾಟೀಲರು ನೂರಾರು ನಾಟಕಗಳ ಮೂಲಕ ರಂಜಿಸಿದವರು. ಅವರಿಗೆ ಗದ್ಯ ಮತ್ತು ಪದ್ಯಗಳೆರಡೂ ನೀರು ಕುಡಿದಷ್ಟೆ ಸರಳ ಮತ್ತು ಸರಾಗ. ಕವಿಯಾಗಿ ಚಿರಪರಿಚಿತರಿರುವ ಪಾಟೀಲರು ಕಾದಂಬರಿ ರಚನೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಬೆಳಗಾವಿ ನಾಗನೂರು ಮಠದ ಶಿವಬಸವ ಸ್ವಾಮಿಗಳ ಜೀವನ ಆಧಾರಿತ 'ಮಹಾವೃಕ್ಷ' ಎಂಬ ಕಾದಂಬರಿ ಬರೆದಿದ್ದ ಪಾಟೀಲರು ಸದ್ಯ ಗದುಗಿನ ತೋಂಟದ ಸಿದ್ಧಲಿಂಗ ಶ್ರೀಗಳ ಬದುಕು-ಸಾಧನೆ ಆಧರಿಸಿ 'ಉರಿಯ ಗದ್ದುಗೆ' ಕೃತಿಯ ಮೂಲಕ ನಮ್ಮ ಮುಂದಿದ್ದಾರೆ. ನಾಗನೂರು ಶ್ರೀಗಳ ಬದುಕನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದ ಪಾಟೀಲರ ಪದಕುಂಚವು ಸಿದ್ಧಲಿಂಗ ಶ್ರೀಗಳ ಕುರಿತ ಬರವಣಿಗೆಯಲ್ಲಿ ಹೃದಯಂಗಮವಾಗಿದೆ. ಪಾಟೀಲರಿಗೆ 'ಗುರುಗಳು' ಹೊರಗಿನವರಲ್ಲ. ಒಳಗಿನವರೇ ಆಗಿರುವುದು ಅಥವಾ ಒಳಗೆ ಮಾಡಿಕೊಂಡದ್ದು ಕಾರಣ ಇರಬಹುದು. ಈ ಕಾದಂಬರಿಯ ತಂತ್ರವೇ ಅದಕ್ಕೆ ಸಾಕ್ಷಿ.

ಪ್ರಮುಖ ಪಾತ್ರವೇ ತನ್ನ ಕತೆ ಹೇಳಿಕೊಳ್ಳುವ ತಂತ್ರವನ್ನು ಪಾಟೀಲರು ಈ ಕಾದಂಬರಿಯಲ್ಲಿ ಬಳಸಿದ್ದಾರೆ. ಆದರೆ, ಕೇವಲ ಆತ್ಮಕಥನಾತ್ಮಕ ತಂತ್ರ ಅಲ್ಲ. ಅಥವಾ ಪ್ರಜ್ಞಾಪ್ರವಾಹ ಮಾದರಿಯ ತಂತ್ರವೂ ಅಲ್ಲ. ಕೇಂದ್ರ ಪಾತ್ರವು ತನ್ನ ಕತೆ ಹೇಳುತ್ತದೆ. ಅದು ತಾನಾಗಿ ಹೇಳುವುದಿಲ್ಲ. ಅದಕ್ಕೊಂದು ಸಮಯ-ಸಂದರ್ಭವನ್ನು ಪಾಟೀಲರು ಸೃಷ್ಟಿಸಿದ್ದಾರೆ. ವಿಜಯದಶಮಿಯ ರಾತ್ರಿ ನಡೆಯುವ ಘಟನೆಗಳ ಮೂಲಕ ಆರಂಭವಾಗುವ ಹೇಳುವ ಕತೆಯ ಕೇಳುಗ ಬೇರಾರೂ ಅಲ್ಲ 'ಕಾಲಪುರುಷ'. ತೋಂಟದ ಸಿದ್ಧಲಿಂಗಶ್ರೀಗಳು ಕಾಲಪುರುಷನೊಂದಿಗೆ ಮುಖಾಮುಖಿ ಆಗುತ್ತ ಸಂವಾದ ನಡೆಸಿದ ಮಾದರಿಯಲ್ಲಿ ಇಡೀ ಕಾದಂಬರಿಯ ಕತೆಯನ್ನು ಹೆಣೆದಿದ್ದಾರೆ. ಲೇಖಕರ ಕಲ್ಪನೆಯ ಮೂಸೆಯಲ್ಲಿ ಅವರು ಕಂಡು ಕೇಳಿದ. ಓದಿ ತಿಳಿದ, ನೋಡಿ ಅನುಭವಿಸಿದ್ದು ಸೇರಿದಂತೆ ಹಲವು ರೀತಿಯಲ್ಲಿ ಗ್ರಹಿಸಿದ ಸಂಗತಿಗಳನ್ನು ಕಲ್ಪನೆಯ ಪಾತ್ರೆಯ ಮೂಲಕ ಹಾಯಿಸಿ ಕತೆಯಾಗಿಸಿದ್ದಾರೆ. ಇದು ನಮ್ಮ ಜೊತೆ ಬದುಕಿದ ಜೀವಂತ ವ್ಯಕ್ತಿತ್ವವೊಂದು ಅಸಾಧಾರಣ ಸಾಧನೆ ಮಾಡಿ 'ಕತೆ'ಯಾದ ಸೋಜಿಗ. ನಮ್ಮ ಮುಂದೆಯೇ ನಡೆದ ಪವಾಡವೊಂದನ್ನು ಅಚ್ಚರಿ ಮೂಡಿಸುವ ಹಾಗೆ ಕಟ್ಟಿದ್ದು ಪಾಟೀಲರ ಲೇಖನಿಯ ವಿಶೇಷ.

ಪಾಟೀಲರು ಕಾದಂಬರಿಯಲ್ಲಿ ಕಟ್ಟಿದ ತೋಂಟದ ಸಿದ್ಧಲಿಂಗ ಶ್ರೀಗಳ ಬದುಕು-ಸಾಧನೆಗಳ ಸೊಬಗು-ಸೊಗಸು ಕಣ್ಮನ ತಣಿಸುವಂತಿದೆ. ವಟುವಾಗಿದ್ದ ಸಿಂದಗಿಯ ಹಿರೇಮಠದ ಸಿದ್ಧರಾಮ ಸಾಗಿ ಬಂದ ಹಾದಿ ಸರಳ- ನೇರವಾದುದೇನಾಗಿರಲಿಲ್ಲ. ಕಾವ್ಯ-ಸಾಹಿತ್ಯ ಮತ್ತು ಜೀವನ ಪ್ರೀತಿಯ ಮೂಲಕ ಕಟ್ಟುವ ಪ್ರಕ್ರಿಯೆಯಲ್ಲಿ ಅಪಾರ ನಂಬುಗೆ ಇಟ್ಟುಕೊಂಡಿದ್ದ ಯುವಜೀವ. ಪೂರ್ವಾಶ್ರಮದ ವಿವರಗಳನ್ನು ಹೇಳುವಾಗ ಯಾವುದೇ ರೀತಿಯ ಭಾವೋದ್ವೇಗಕ್ಕೆ ಒಳಗಾಗುವುದಿಲ್ಲ. ತಣ್ಣನೆಯ ಮಂದ್ರಸ್ವರದಲ್ಲಿ ಸಂಗೀತ ಸಾಗಿದ ಹಾಗೆ, ಅಬ್ಬರಸಿ ಬೊಬ್ಬಿರಿಯದೆ ಶಾಂತ ರೀತಿಯಲ್ಲಿ ನದಿಯೊಂದು ಹರಿದ ಹಾಗೆ ಕಾದಂಬರಿಯ ಓಘ ಮತ್ತು ಓಟವಿದೆ. ಕಾದಂಬರಿ ಬಯಸುವ ತರ್ಕಬದ್ಧ ಸಂಗತಿಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಹಾಗೆಯೇ 'ಜೀವಂತ' ವ್ಯಕ್ತಿತ್ವಕ್ಕೆ 'ಅನ್ಯಾಯ'ವಾಗ ಬಾರದು ಎಂಬ ಎಚ್ಚರವೂ ಪಾಟೀಲರ ಜೊತೆಗೆ ಇದೆ. ಇದರಿಂದಾಗಿ ಅದು 'ಜೀವನ ಚರಿತ್ರೆ'ಯಾಗಿ ಬಿಡುವ ಅಪಾಯದಿಂದ ಪಾರಾಗಿದೆ. ಅದು ಆತ್ಮಕತೆಯೂ ಆಗದಂತಹ ಎಚ್ಚರವನ್ನು ಲೇಖಕರು ವಹಿಸಿದ್ದಾರೆ. ಹಾಗಂತ ಅದು ಕೇವಲ ಸಂದರ್ಶನ ಮಾದರಿಯ ಮಾತುಕತೆಯೂ ಅಲ್ಲ. ಕಟ್ಟುವ ಹಂತದಲ್ಲಿ ಪಾಟೀಲರು ತೆಗೆದುಕೊಂಡ ಸ್ವಾತಂತ್ರ್ಯ ಮತ್ತು ಎಚ್ಚರಗಳು ಕಾದಂಬರಿ ಓದನ್ನು ಸರಾಗಗೊಳಿಸಿವೆ. ಗೊಂದಲಕ್ಕೆ ಎಡೆಯಿಲ್ಲದಂತಿರುವ ಬರವಣಿಗೆಯು ಸಂಕೀರ್ಣವೂ ಆಗಿಲ್ಲ. ಓದುಗ ಆರಂಭಿಸಬೇಕಷ್ಟೆ, ತಾನಾಗಿ ಮುಗಿದುಬಿಡುತ್ತದೆ. ಮುಗಿದಾಗ. 'ಅಯ್ಯೋ ಮುಗಿದೇ ಹೋಯಿತಲ್ಲ. ಅದು ಇಷ್ಟುಬೇಗ' ಎಂದೂ ಅನಿಸುತ್ತದೆ. ಪಿಯುಸಿಯ ದಂಡಯಾತ್ರೆಯ ದಿನಗಳಲ್ಲಿ ಮಠಕ್ಕೆ ಹಲವು ಬಾರಿ ಹೋಗಿದ್ದೆ. ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶ ದೊರೆತಿದ್ದವು. ತಲೆಮಾಸದ ನನ್ನ ಮಾತುಗಳನ್ನು ಅವರ ಜೊತೆಗೆ ಆಡಿದ ಬಗ್ಗೆ ಈಗ ಸೋಜಿಗವಾಗುತ್ತಿದೆ. ಮೂಗಿನ ನೇರಕ್ಕೆ ಸರಿ ಎನ್ನುವಂತಹ ತಕರಾರಿನವನಾಗಿದ್ದ ನಾನು ಅದನ್ನ ಭೀಡೆಯಿಲ್ಲದೆ ಹೇಳಿಬಿಡುತ್ತಿದ್ದೆ. ಅದನ್ನವರು ಇಷ್ಟಪಡುತ್ತಿದ್ದರು. ಆ ಮಾತುಗಳ ಮಿತಿ-ಕೊರತೆಯನ್ನೊಮ್ಮೆ ನನಗವರು ತೋರಿಸಿದರು. ಕನ್ನಡಿ ಹಿಡಿದರು. ಕಾಣಿಸಿತು. ಆಗ ಅಣ್ಣ ಅಜೇಂದ್ರ ಜೊತೆಗಿದ್ದರು. ಸಿದ್ದು ಕೂಡ. ಮಠಗಳ ಬಗೆಗಿನ ಅಭಿಪ್ರಾಯ ಬದಲಾಗಲು ಗದುಗಿನ ಶ್ರೀಗಳೇ ಕಾರಣ. ಇಂತಹವರೂ ಇರುತ್ತಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡರೆ 'ಇದ್ದಾರಲ್ಲ' ಎಂಬ ಉತ್ತರವೂ ಕಾಣಿಸಿಕೊಳ್ಳುತ್ತಿತ್ತು. ಈ ಅವಧಿಯಲ್ಲಿ ನಾನು ಹಲವಾರು ಬಾರಿ ಮಠಕ್ಕೆ ಭೇಟಿ ನೀಡಿದೆ. ಶ್ರೀಗಳನ್ನು ಕಂಡ ಪ್ರತಿ ಭೇಟಿಯಿಂದಲೂ ಬೆಳೆಯುತ್ತ ಹೋದ ಅನುಭವ ನನ್ನದಾಗಿತ್ತು.

ವರ್ತಮಾನದ ಅಂದರೆ ವ್ಯಕ್ತಿಯ ಸಮಕಾಲೀನರು ಬದುಕಿದ್ದ ಅವಧಿಯಲ್ಲಿಯೇ ಸೃಜನಶೀಲ ಕೃತಿ ರಚಿಸುವ ಸವಾಲಿಗೆ ಪಾಟೀಲರು ಎದುರಾಗಿದ್ದಾರೆ. ಹೌದು, ನಿಜವಾಗಿಯೂ ಸವಾಲಿನ ಸಂಗತಿಯೇ. ಅಂತಹ ಸವಾಲಿಗೆ ಮುಖಾಮುಖಿಯಾಗಿ ನಿಂತು ಕಟ್ಟಿದ ಆಕೃತಿಯು ತನ್ನ ಸೊಗಸುಗಾರಿಕೆಯಿಂದ ಗಮನ ಸೆಳೆಯುತ್ತದೆ. ನೀರಸ ವಿವರಗಳ 'ಕಂತೆ'ಯಾಗಬಹುದಾಗಿದ್ದ ಮಾಹಿತಿಯನ್ನು ತಮ್ಮ ಕಸುಬುಗಾರಿಕೆಯ ಕಥನವಾಗಿಸಿ ಸೈ ಎನ್ನಿಸಿಕೊಂಡಿದ್ದಾರೆ. ದುಬಾಕೆ

ಶ್ರೀಗಳು ಬದುಕಿದ್ದು 69 ವರ್ಷ. ಅಷ್ಟೇ ಸಂಖ್ಯೆಯ ಅಧ್ಯಾಯ ಅಥವಾ ಘಟಕಗಳಲ್ಲಿ ಚಿತ್ರ ಕಟ್ಟಿಕೊಟ್ಟಿದ್ದಾರೆ. ವಾಚ್ಯ-ಸೂಚ್ಯಗಳೆರಡನ್ನೂ ಬಳಸಿಕೊಂಡಿರುವುದು ಈ ಪುಸ್ತಕದ ವಿಶೇಷ ವಾಚ್ಯವಾಗುತ್ತಿದೆ ಎಂದು ಅನ್ನಿಸುವ ಹೊತ್ತಿಗೇ ಕಾಣಿಸಿಕೊಳ್ಳುವ ಕಾವ್ಯ, ಕಾವ್ಯಾತ್ಮಕ ಸಾಲು ಮತ್ತು ಸೂಚ್ಯವಾಗಿ ಕಟ್ಟಿ ಕೊಡುವ ಕ್ರಮ ಲೇಖಕರ ಕಾಳಜಿಗೆ ದ್ಯೋತಕವಾಗಿವೆ. ಘನ ಗಂಭೀರ ಚರ್ಚೆಗಳ ವಿವರಗಳು ಕೂಡ ಹೃದ್ಯವಾಗುವಂತೆ ಮಾಡಿದ್ದು ಪಾಟೀಲರ ಹೆಚ್ಚುಗಾರಿಕೆ. ಇಡೀ ಕಾದಂಬರಿಯಲ್ಲಿ ಒಂದೆರಡು ಪ್ರಸಂಗಳು ಕಣ್ಣಾಲಿ ತುಂಬಿ ಬರುವಂತಿವೆ. ಅವು ಕಾದಂಬರಿಯ ರಸಘಟ್ಟಿಗಳೆಂದೇ ಹೇಳಬೇಕು.

ಈ ಕಾದಂಬರಿಯ 'ನಾಯಕ' ಗದುಗಿನ ತೋಂಟದ ಸಿದ್ದಲಿಂಗ ಶ್ರೀಗಳು. ಕಾದಂಬರಿ ಪ್ರಕಾರವೂ ಸೇರಿದಂತೆ ನಾಟಕ-ಮಹಾಕಾವ್ಯಗಳು 'ಪ್ರತಿನಾಯಕ' ಅಥವಾ 'ಖಳನಾಯಕ'ರನ್ನು ಬಯಸುತ್ತವೆ. ಖಳರನ್ನು ಮೆಟ್ಟಿ, ಮಟ್ಟಹಾಕುವ ಮೂಲಕವೇ ನಾಯಕನ ಹೆಗ್ಗಳಿಕೆ ದಾಖಲಾಗುತ್ತದೆ. ಸಾಹಿತ್ಯ ಕೃತಿಗಳಲ್ಲಿ ಇದೊಂದು ಸೆಟ್ ಪ್ಯಾಟರ್ನ್. ಸಾಮಾನ್ಯವಾಗಿ ಕಂಡು ಬರುವ ಈ ಅಂಶ ಪಾಟೀಲರ ಈ ಕಾದಂಬರಿಯಲ್ಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿದೆ. ಈ ಕಾದಂಬರಿಯಲ್ಲಿ ಪ್ರತಿನಾಯಕ ಅಥವಾ ಖಳನಾಯಕ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಇರುವ ಒಂದೆರಡು ಪಾತ್ರಗಳೂ (ವ್ಯಕ್ತಿಗಳು) ಪಾಟೀಲರ ಒಳ್ಳೆಯತನದ ಬೆಂಕಿಯಲ್ಲಿ ಬೆಂದು ದ್ರವವಾಗಿ ಬಿಡುತ್ತವೆ. ಖಳನಾಗುವ ಗುಣದಿಂದ ಆ ಪಾತ್ರಗಳನ್ನು ಬಿಡುಗಡೆ ಮಾಡಿದ್ದು 'ಗೌಡ'ರ ದೊಡ್ಡತನ.” ೩೭೪ ಪುಟಗಳ ಈ ಸುದೀರ್ಘ ಕಾದಂಬರಿ ಓದುಗರಿಗೆ ಮುದ ನೀಡುತ್ತದೆ.