ಉಲುಘ್ ಬೇಗ್ : ಒಂದು ಸಂಕ್ಷಿಪ್ತ ಪರಿಚಯ!

ಉಲುಘ್ ಬೇಗ್ : ಒಂದು ಸಂಕ್ಷಿಪ್ತ ಪರಿಚಯ!

ಉಠಾ ನ ಶೀಶ ಗಿರಾನ್-ಎ-ಫರಂಗ್ ಕೆ ಎಹ್ಸಾನ್;

ಸಿಫಾಲ್-ಎ-ಹಿಂದ್ ಸೆ ಮೀನಾ-ಓ-ಜಾಮ್ ಪೈದ ಕರ್!

-ಅಲ್ಲಾಮ ಇಕ್ಬಾಲ್ (ಕವಿ ಮತ್ತು ವಿದ್ವಾಂಸರು)

'ಉಲುಘ್ ಬೇಗ್' [1394 – 1449] ಖ್ಯಾತಿಯ 'ಮಿರ್ಜಾ ಮುಹಮ್ಮದ್ ಬೇಗ್' ಒಬ್ಬರು ಸುಪ್ರಸಿದ್ಧ ತೈಮೂರಿಡ್ ಸುಲ್ತಾನರು ಮತ್ತು ಅತಿಪ್ರತಿಷ್ಠಿತ ಅರಸ ತೈಮೂರಿನ ಮೊಮ್ಮಗನು. ಉಝ್ಬೇಕಿಸ್ತಾನದ ರಾಜವಂಶದಲ್ಲಿ ಹುಟ್ಟಿ ಬೆಳೆದರೂ, ಶ್ರೀಯುತರಲ್ಲಿ ಇದ್ದ ಸಂಕಲ್ಪ ಶಕ್ತಿ ಮತ್ತು ಸಂಶೋಧನೆಯ ಉತ್ಸುಕತೆ, ಅವರನ್ನು ನಿಪುಣ ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞಗೊಳಿಸಿತು. ಬಾಲ್ಯದಲ್ಲಿ, ಬೇಗ್ ಅವರು ಮರಗೆ (Maragheh Observatory) ಖಗೋಳ ಸಮೀಕ್ಷಾ ಮಂದೀರಕ್ಕೆ ಭೇಟಿ ನೀಡಿದಾಗ, ಅವರಲ್ಲಿ ಖಗೋಳಶಾಸ್ತ್ರದ ಉತ್ಸುಕತೆ ಕೆರಳಿಸಿತು. ಅದನ್ನನುಸರಿಸಿ, ಬೇಗ್ ಅವರು ವಿವಿಧ ವೈಜ್ಞಾನಿಕ ಕ್ಷೇತ್ರಗಳಲ್ಲಿ ವಿಶೇಷತಃ ಖಗೋಳಶಾಸ್ತ್ರದಲ್ಲಿ ಗಾಢ ಅಧ್ಯಾಯನ ನಡೆಸಿ, ಸುಪ್ರಸಿದ್ಧ ಖಗೋಳ ಶಾಸ್ತ್ರಜ್ಞರಾದರು!

ಹದಿಹರೆಯದಲ್ಲೇ ಆಡಳಿತಗಾರನಾದ ಉಲುಘ್ ಬೇಗ್ ಅವರು ತಮ್ಮ ಆಳ್ವಿಕೆಯಡಿಯಿರುವ ನಗರಗಳನ್ನು ಸಾಮ್ರಾಜ್ಯದ ಬೌದ್ಧಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಹಗಲಿರುಳು ದುಡಿದರು. ಪ್ರತಿಫಲವಾಗಿ, ಉಝ್ಬೇಕಿಸ್ತಾನದ ನಗರಗಳನ್ನು ಕಲಿಕೆಯ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿ ಅವರು ಸ್ಥಾಪಿಸಿದರು. ಉಲುಘ್ ಬೇಗ್ ಅವರು ತಮ್ಮ ಆಳ್ವಿಕಾವಧಿಯಲ್ಲಿ ತೈಮೂರಿಡ್ ಸಾಮ್ರಾಜ್ಯವನ್ನು ಅಭಿವೃದ್ಧಿಗೋಳಪಡಿಸಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ತುಂಗಕ್ಕೇರಲು ನೆರವಾದರು. ಅವರು 1424 ಮತ್ತು 1429ರ ನಡುವೆ ಸಮರಖಂಡದಲ್ಲಿ ಬೃಹತ್ ಉಲುಘ್ ಬೇಗ್ ವೀಕ್ಷಣಾಲಯವನ್ನು ಸ್ಥಾಪಿಸಿದರು. ತಜ್ಞರು ಆ ವೀಕ್ಷಣಾಲಯವನ್ನು ಆ ಕಾಲದ ಅತ್ಯುತ್ತಮ ವೀಕ್ಷಣಾಲಯಗಳಲ್ಲಿ ಒಂದಾಗಿತ್ತು ಮತ್ತು ಸಮಗ್ರ ಏಷ್ಯಾ ಖಂಡದ ಅತ್ಯಂತ ವಿಶಾಲವಾದ ವೀಕ್ಷಣಾಲಯವೆಂದು ಪರಿಗಣಿಸಿದ್ದಾರೆ.

ಉಲುಘ್ ಬೇಗ್ ಅವರು ಖಗೋಳಶಾಸ್ತ್ರಕ್ಕೆ ಸಂಬಂಧಿತ ಗಣಿತಶಾಸ್ತ್ರವಾದ ತ್ರಿಕೋನಮಿತಿ (Trigonometry) ಮತ್ತು ಗೋಲಾಕಾರದ ರೇಖಾಗಣಿತಕ್ಕೆ (Spherical Geometry) ಕರುಣಿಸಿದ ಅದ್ವಿತೀಯ ಕಲಿಕೊಡುಗೆಗಳಿಂದ ನುಡಿದ ಕ್ಷೇತ್ರದಲ್ಲಿ ಗಮನಾರ್ಹರಾದರು; ಅದರೊಂದಿಗೆ, ಅವರಲ್ಲಿದ್ದ ಕಲೆ, ಸಂಸ್ಕೃತಿ ಮತ್ತು ಬೌದ್ಧಿಕ ಚಟುವಟಿಕೆಗಳು ಅವರ ಘನತೆಯನ್ನು ಬಾನೆತ್ತರಕ್ಕೆ ಏರಿಸಿತು. ಅವರಿಗೆ ಐದು ಭಾಷೆಗಳಾದ ಅರೇಬಿಕ್, ಪರ್ಷಿಯನ್, ಟರ್ಕಿಕ್, ಮಂಗೋಲಿಯನ್ ಮತ್ತು ಚೈನೀಸ್ ಭಾಷೆಯಲ್ಲಿ ಏಕಪ್ರಕಾರ ಹಿಡಿತವಿದ್ದು, ನುಡಿದ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು.

ಅವರು ಸಮರಖಂಡ (ಪ್ರಸ್ತುತ ಉಝ್ಬೇಕಿಸ್ತಾನ್‌ನಲ್ಲಿ]) ಮತ್ತು ಬುಖಾರಾದಲ್ಲಿ ಉಲುಗ್ ಬೇಗ್ ಅವರು ಮದರಸಾಗಳನ್ನು (1417-1420) ನಿರ್ಮಿಸಿದರು; ಆ ಮದರಸಾಗಳಲ್ಲಿ ಇಸ್ಲಾಮಿನ ಶಿಕ್ಷಣವಾದ ಕುರಾನ್, ಹದೀಸ್ ಸಾಹಿತ್ಯ, ಅಖೀದಃ ಇತ್ಯಾದಿಗಳೊಂದಿಗೆ ಖಗೋಳಶಾಸ್ತ್ರ, ಗಣಿತಶಾಸ್ತ್ರ, ರಾಸಾಯನಿಕಶಾಸ್ತ್ರ ಇತ್ಯಾದಿಗಳ ಪಾಠಗಳು ನಡೆಸಲಾರಂಭಿಸಿದರು. ತರುವಾಯ, ಅವುಗಳು ಖ್ಯಾತ ವಿಶ್ವವಿದ್ಯಾಲಯಗಳಾಗಿ ಪರಿವರ್ತಗೊಂಡವು. ಬೇಗ್ ಅವರು ತಮ್ಮ ಕಾಲದ ಪ್ರಸಿದ್ಧ ಇಸ್ಲಾಮಿಕ್ ಖಗೋಳಶಾಸ್ತ್ರಜ್ಞರು ಮತ್ತು ಗಣಿತಶಾಸ್ತ್ರಜ್ಞರನ್ನು ಅಲ್ಲಿಗೆ ಸಂಶೋಧನೆಯನ್ನು ನಡೆಸಲು ಆಹ್ವಾನಿಸಿ, ಅವರಿಂದ ಕಲಿಕೊಡುಗೆಗಳನ್ನು ಸ್ವೀಕರಿಸಲಾರಂಭಿಸಿದರು. ರಶಿಯಾದ ಪುರಾತತ್ವಶಾಸ್ತ್ರಜ್ಞರು ಆ ಮದರಸಾಗಳ ಕಟ್ಟಡಗಳು ಇಂದಿಗೂ ಉಳಿದುಕೊಂಡಿದೆ ಎಂದು ಪುರಾವೆ ಸಮೇತ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

ಸುಪ್ರಸಿದ್ಧ ಖಗೋಳಶಾಸ್ತ್ರಜ್ಞರು ಖಾಝಿ ಝ್ಯಾದ ಅಲ್-ರೂಮಿ ಅವರು ಉಲುಗ್ ಬೇಗ್‌'ರವರ ಮದ್ರಸಾದಲ್ಲಿ ಶಿಕ್ಷಕರಾಗಿದ್ದರು. ಉಲುಗ್ ಬೇಗ್ ಅವರ ನೆಚ್ಚಿನ ಶಿಷ್ಯರಾದ ಅಲಿ ಖುಶ್ಜಿ ಅವರು ಖಗೋಳಶಾಸ್ತ್ರಕ್ಕೆ ಕರುಣಿಸಿದ ಕಲಿಕೊಡುಗೆಗಳಿಂದ ಅಪಾರ ಖ್ಯಾತಿಗಳಿಸಿದರು. ಬೇಗ್ ಅವರಿಂದ ಪ್ರೇರಿತಗೊಂಡಿದ್ದ ಖಗೋಳಶಾಸ್ತ್ರಜ್ಞ ಜಮ್ಶಿದ್ ಅಲ್-ಖಾಶಿ ನುಡಿದ ವೈಜ್ಞಾನಿಕ ಕ್ಷೇತ್ರದಲ್ಲಿ ದುಡಿದು ಹೆಸರುಗಳಿಸಿದರು. ಗಣಿತಶಾಸ್ತ್ರದಲ್ಲಿ, ಉಲುಗ್ ಬೇಗ್ ಅವರು ತ್ರಿಕೋನಮಿತಿಯ ಕೋಷ್ಟಕಗಳ - ವಿಶೇಷತಃ 'Sine Theta' ಮತ್ತು 'Tangent Theta'ಗಳ - ಮೌಲ್ಯಗಳನ್ನು ನಿಖರವಾದ ಕನಿಷ್ಠ ಎಂಟು ದಶಮಾಂಶ ಸ್ಥಾನಗಳಿಗೆ ಸರಿಯಾಗಿ ಬರೆದಿದ್ದಾರೆ. ಶ್ರೀಯುತರು, ಸ್ಥಾಪಿಸಿದ ಇರಾನಿನ ಮರಾಘೆಹ್‌ನಲ್ಲಿರುವ ವೀಕ್ಷಣಾಲಯದಲ್ಲಿ ಪ್ರಸಿದ್ಧ ಖಗೋಳಶಾಸ್ತ್ರಜ್ಞ ನಾಸಿರ್ ಅಲ್-ದಿನ್ ಅಲ್-ತುಸಿ ಅವರು ತಮ್ಮ ಸಫಲ ಸಂಶೋಧನೆಯನ್ನು ನೆರವೇರಿಸುತ್ತಿದ್ದರು.

1428ರಲ್ಲಿ, ಬೇಗ್ ಅವರು ಮತ್ತೊಂದು ಅಗಾಧವಾದ ಬೃಹತ್ ಖಗೋಳಸಮೀಕ್ಷಾಮಂದೀರವನ್ನು ನಿರ್ಮಿಸಿದರು. ಬಾಹ್ಯಾಕಾಶದ ಸಂಶೋಧನೆ ನಡೆಸಲು ಆಧುನಿಕ ದೂರದರ್ಶಕಗಳ ಕೊರತೆ ಹುಟ್ಟಿದಾಗ, ಅವರು ಸೆಕ್ಸ್ಟಂಟಿನ (Sextant) ಉದ್ದವನ್ನು ಹೆಚ್ಚಿಸುವ ಮೂಲಕ ನಿಖರತೆಯನ್ನು ವೃದ್ಧಿಸಿಕೊಂಡರು; ಫಕ್ರಿ ಸೆಕ್ಸ್ಟಂಟ್ (Fakhri Sextant) ಎಂದು ಕರೆಯಲ್ಪಡುವ ಇದು ಸುಮಾರು 36 ಮೀಟರ್ (118 ಅಡಿ) ತ್ರಿಜ್ಯವನ್ನು ಹೊಂದಿತ್ತು ಮತ್ತು 180" (ಕಮಾನದ ಸೆಕೆಂಡುಗಳು) ಆಪ್ಟಿಕಲ್ ಪ್ರತ್ಯೇಕತೆಯನ್ನು ಹೊಂದಿತ್ತು. ಇದು ಆ ಕಾಲದ ಅತ್ಯಂತ ಉದ್ದನೆಯ ಸೆಕ್ಸ್ಟೆಂಟ್ ಎಂದು ಖ್ಯಾತಿಗಳಿಸಿತು. ನಕ್ಷತ್ರಗಳ ಸಾಗಣೆ ಎತ್ತರವನ್ನು ಅಳೆಯುವುದು ಫಕ್ರಿ ಸೆಕ್ಸ್ಟಂಟ್‌ನ ಉದ್ದೇಶವಾಗಿತ್ತು. ನುಡಿದ ಸಮೀಕ್ಷಾ ಮಂದೀರದಲ್ಲಿ ಅನೇಕ ಆಧುನಿಕ ಖಗೋಳ ಉಪಕರಣಗಳು ಇದ್ದರೂ, 'ಫಕ್ರಿ ಸೆಕ್ಸ್ಟಂಟ್' ಐರೋಪ್ಯ ಖಗೋಳ ತಜ್ಞರನ್ನು ಬಹಳ ಆಕರ್ಷಿಸಿದ ಸಾಧನವಾಗಿತ್ತು.

ಸಮರ್ಖಂಡಿನ ವೀಕ್ಷಣಾಲಯದಲ್ಲಿರುವ ಉಪಕರಣಗಳೊಂದಿಗೆ, ಬೇಗ್ ಅವರು 1018 ನಕ್ಷತ್ರಗಳನ್ನು ಒಳಗೊಂಡಿರುವ ನಕ್ಷತ್ರ ಕ್ಯಾಟಲಾಗ್ (Star Catalogue)ಅನ್ನು ರಚಿಸಿದರು. ಬೇಗ್ ಅವರು ಅಲ್-ಸೂಫಿಯವರ ಆಯಾಮಗಳನ್ನು ಆಕಾರಗ್ರಂಥವಾಗಿಟ್ಟು ತಮ್ಮ  ಸ್ಟಾರ್ ಕ್ಯಾಟಲಾಗ್ ಅನ್ನು ರಚಿಸಿದರು. ಖಗೋಳಶಾಸ್ತ್ರಜ್ಞನಾಗಿ ತಮ್ಮ  ಬದುಕಿನದುದ್ದಕ್ಕೂ, ಬೇಗ್ ಅವರು ಟಾಲೆಮಿಯ ಕೆಲಸದಲ್ಲಿ ಹಲವಾರು ತಪ್ಪುಗಳನ್ನು ತಿದ್ದುಪಡಿಸಿದರು. ತಮ್ಮದೇ ಸ್ಟಾರ್ ಕ್ಯಾಟಲಾಗ್ ಬಳಸಿ ಅವರು 994 ನಕ್ಷತ್ರಗಳನ್ನು ಒಳಗೊಂಡ 1437 A.Dಯ ಝಿಜ್-ಇ-ಸುಲ್ತಾನಿಯನ್ನು ಸಂಕಲಿಸಿದರು; ಇದನ್ನು ಐರೋಪ್ಯ ತಜ್ಞರು ಟಾಲೆಮಿ ಮತ್ತು ಟೈಕೋ ಬ್ರಾಹೆ ಅವರ ನಕ್ಷತ್ರ ಪಟ್ಟಿ ಎಂದು ಪರಿಗಣಿಸಿದರೂ; ರಶಿಯಾದ ಖಗೋಳ ತಜ್ಞರು ಈ ವಾದವನ್ನು ಅನಧಿಕೃತವೆಂದು ತಳ್ಳಿ, ಪುರಾವೆ ಸಮೇತ ಇದು ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಅವರ ಬುಕ್ ಆಫ್ ಫಿಕ್ಸೆಡ್ ಸ್ಟಾರ್ಸ್'ನಿಂದ ಆಕಾರವಾಗಿದೆಂದು ವಾದಿಸುತ್ತಾರೆ . ಈ ಕ್ಯಾಟಲಾಗ್'ಅನ್ನು ಮೊದಲು ಆಕ್ಸ್ಫರ್ಡ್'ನ ಖಗೋಳ ತಜ್ಞರು ಥಾಮಸ್ ಹೈಡ್ ಅವರು 1665ರಲ್ಲಿ _"Tabulae longitudinis et latitudinis stellarum fixarum ex observatione Ulugbeighi"_ ಎಂಬ ಶೀರ್ಷಿಕೆಯಡಿಯಲ್ಲಿ ಮುದ್ರಿಸಿದರು ಮತ್ತು 1767ರಲ್ಲಿ ಜಿ. ಶಾರ್ಪ್ ಅವರಿಂದ ಮರುಮುದ್ರಣವಾಯಿತು.

1437ರಲ್ಲಿ, ಬೇಗ್ ಅವರು 365.2570370 = 365d 6h 10m 8s (58 ಸೆಕೆಂಡುಗಳ ದೋಷಗಳೊಂದಿಗೆ) ಎಂದು ಸೈಡ್ರಿಯಲ್ ವರ್ಷದ ಉದ್ದವನ್ನು ಪ್ರಾಯೋಗಿಕವಾಗಿ ನಿಶ್ಚಯಿಸಿದರು. ಬೇಗ್ ಅವರು ಭೂಮಿಯ ಅಕ್ಷೀಯ ಓರೆಯನ್ನು ಡಿಗ್ರಿಗಳು, ನಿಮಿಷಗಳು ಮತ್ತು ಸೆಕೆಂಡ್‌ಗಳ 'Sexagesimal'ದ ವ್ಯವಸ್ಥೆಯಲ್ಲಿ 23°30'17" ಎಂದು ನಿರ್ಧರಿಸಿದರು; ಪ್ರಸ್ತುತ ದಿನಗಳಲ್ಲಿ ಈ ಲೆಕ್ಕಾಚಾರ 99.999% ನಿಖರವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

'ಉಲುಘ್ ಬೇಗ್' ಅವರು ಆರ್ಜಿಸಿದ ಘನ ಮಾನ್ಯತೆಗಳು :

* ಜರ್ಮನ್ ಖಗೋಳಶಾಸ್ತ್ರಜ್ಞ ಜೋಹಾನ್ ಹೆನ್ರಿಕ್ ವಾನ್ ಮಾಡ್ಲರ್ ತನ್ನ 1830 ಚಂದ್ರನ ನಕ್ಷೆ (1830 Map of the Moon)ಯಲ್ಲಿ ಚಂದ್ರನ ಮೇಲ್ಮೈಯಲ್ಲಿರುವ ಬಾಂಬುಕುಳಿಯೊಂದನ್ನು 'ಉಲುಘ್ ಬೇಗ್'ನ ಬಾಂಬುಕುಳಿ (The Crater of Ulugh Beg) ಎಂದು ಶ್ರೀಯುತರ ಶುಭನಾಮದಿಂದ ನಾಮಕರಣಗೊಳಿಸಿದರು.

* Crimean Astrophysical Observatoryಯಲ್ಲಿ ರಶಿಯಾದ ಖಗೋಳತಜ್ಞ ಎನ್. ಚೆರ್ನಿಖ್ ಅವರು ತಾವು 1977ರಲ್ಲಿ ಕಂಡುಹಿಡಿದ ಮುಖ್ಯ-ಬೆಲ್ಟಿನ ಕ್ಷುದ್ರಗ್ರಹವೊಂದನ್ನು "2439 Ulugh beg" ಎಂದು ಇವರ ಹೆಸರಿನಿಂದ ಹೆಸರಿಸಿದರು.

* ಡೈನೋಸಾರ್ ಉಲುಗ್ಬೆಗ್ಸಾರಸ್ (Ulugh Beg Saurus)ಅನ್ನು 2021ರಲ್ಲಿ ಶ್ರೀಯುತರ ಹೆಸರನ್ನು ಇಡಲಾಯಿತು.

* ಸಮರ್ಖಂಡ್'ನಲ್ಲಿರುವ ಉಲುಘ್ ಬೇಗ್ ಮದರಸಾವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ (World Heritage Site)  ವೆಂದು ಪರಿಗಣಿಸಿದೆ.

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

ಚಿತ್ರದ ವಿವರ: ಉಜ್ಬೆಕಿಸ್ತಾನದ ಸಮರಖಂಡಿನಲ್ಲಿರುವ ಉಲುಘ್ ಬೇಗ್ ಖಗೋಳ ಸಮೀಕ್ಷಾ ಮಂದಿರದಲ್ಲಿರುವ ಉಲುಘ್ ಬೇಗ್ ಅವರ ಚಿತ್ರ.