ಉಲ್ಲಾಸಕ್ಕೆ ದಾರಿ ನೂರಾರು

ಉಲ್ಲಾಸಕ್ಕೆ ದಾರಿ ನೂರಾರು

ಪುಸ್ತಕದ ಲೇಖಕ/ಕವಿಯ ಹೆಸರು
ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಉಲ್ಲಾಸವಾಗಿ, ಸಂತೋಷವಾಗಿರಲು ಯಾರಿಗೆ ತಾನೇ ಆಸೆಯಿರೋದಿಲ್ಲ? ಕೆಲವೊಂದು ಸರಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ಉಲ್ಲಾಸಮಯ ಜೀವನವನ್ನು ಅನುಭವಿಸಲು ಸಾಧ್ಯವಿದೆ ಎನ್ನುತ್ತಾರೆ ‘ಉಲ್ಲಾಸಕ್ಕೆ ದಾರಿ ನೂರಾರು' ಕೃತಿಯ ಲೇಖಕರಾದ ಅಡ್ಡೂರು ಕೃಷ್ಣ ರಾವ್ ಇವರು. ಕೃಷ್ಣ ರಾವ್ ಇವರು ಈಗಾಗಲೇ ತಮ್ಮ 'ಮನಸ್ಸಿನ ಮ್ಯಾಜಿಕ್' ನಂತಹ ಮನೋವೈಜ್ಞಾನಿಕ ಕೃತಿಯ ಮೂಲಕ ಓದುಗರ ಮನ ಗೆದ್ದವರು. ಬರವಣಿಗೆ ಮತ್ತು ಸಂಘಟನೆಯ ಹಾದಿಯಲ್ಲಿ ಬಹುದೂರ ಸಾಗಿ ಬಂದಿರುವ ಶ್ರೀಯುತರು ನಿವೃತ್ತ ಬ್ಯಾಂಕ್ ಅಧಿಕಾರಿ. ಮಂಗಳೂರಿನ ಬಳಕೆದಾರರ ವೇದಿಕೆಯ ಸಂಚಾಲಕರು. ‘ಜನ ಜಾಗೃತಿಯ ಸಾಧನ’, ‘ಮಾಹಿತಿ ಮಂಥನ’, ;ಬಳಕೆದಾರರ ಸಂಗಾತಿ’, ‘ಹಸುರು ಹೆಜ್ಜೆ’, ‘ಜಲ ಜಾಗೃತಿ’ ಮೊದಲಾದ ಕೃತಿಯ ಲೇಖಕರು. 

ಈ ಕೃತಿಯ ಬೆನ್ನುಡಿಯಲ್ಲಿ ಕಂಡ ಬರಹ ಹೀಗಿದೆ “ಮನುಷ್ಯ ತಾನು ಸುಖವಾಗಿರಬೇಕೆಂದು ಬಯಸುತ್ತಾನೆ. ಅದೇನೂ ತಪ್ಪಲ್ಲ. ಆದರೆ ಉಲ್ಲಾಸದಿಂದ, ಚಟುವಟಿಕೆಯಿಂದ ಇರಬಯಸುವವರು ಕಡಿಮೆ. ಆರೋಗ್ಯವಾಗಿರಲು ದೇಹ-ಮನಸ್ಸುಗಳಿಗೆ ವ್ಯಾಯಾಮ ಬೇಕು. ಇಲ್ಲವಾದಲ್ಲಿ ಜಡತ್ವ ಆವರಿಸುತ್ತದೆ. ನಮ್ಮನ್ನು ಆತಂಕ, ಖಿನ್ನತೆ, ಸಂಕಟ, ನೋವು, ನಿರಾಶೆ ಆಗಾಗ್ಗೆ ಕಾಡುತ್ತಲೇ ಇರುತ್ತದೆ. ಆದರಿಂದ ಹೊರಬಂದು, ಎದುರಿಸಿ ಮನೋಲ್ಲಾಸದಿಂದ ಇರಬೇಕಾದರೆ ಏನು ಮಾಡಬೇಕು? ನಮ್ಮಿಂದ ಸಾಧ್ಯವೇ? ಖಂಡಿತಾ ಸಾಧ್ಯ! ದಿನವೂ ಹೊಸ ಹೊಸ ವಿಧಾನಗಳಿಂದ ಮನಸ್ಸನ್ನು ಹತೋಟಿಯಲ್ಲಿರಿಸಿ, ದೇಹದ ಆರೋಗ್ಯ ವೃದ್ಧಿಸಿಕೊಳ್ಳುತ್ತಾ ಉಲ್ಲಾಸದಿಂದ ಇರಲು ಹಲವು ಮಾರ್ಗೋಪಾಯಗಳು ಈ ಪುಸ್ತಕದಲ್ಲಿವೆ.” ಬದುಕಿನಲ್ಲಿ ಹಣ ಸಂಪಾದನೆಯೊಂದೇ ದಾರಿಯಲ್ಲ. ಅದು ಕ್ಷಣಿಕ ಸಮಯಕ್ಕೆ ಸುಖ ನೀಡಿದರೂ ಜೀವನವಿಡೀ ಹಣ ಖುಷಿ ಕೊಡುವುದಿಲ್ಲ. ಹಣ ಹೆಚ್ಚಾದಂತೆ ಮನಸ್ಸಿನಲ್ಲಿ ಗಾಬರಿ ತುಂಬಿಕೊಳ್ಳುತ್ತದೆ. ಹೆದರಿಕೆ ಶುರುವಾಗುತ್ತದೆ. ಆದರೆ ಉಲ್ಲಾಸದಿಂದ ಇರಬೇಕಾದಲ್ಲಿ ಸರಳವಾಗಿ ಇಲ್ಲಿ ನೀಡಿರುವ ವಿಷಯಗಳನ್ನು ಮನನ ಮಾಡಿ ಬದುಕಿನಲ್ಲಿ ಅಳವಡಿಸಿಕೊಂಡರಾಯಿತು.

ಕೃತಿಯ ಲೇಖಕರಾದ ಅಡ್ಡೂರು ಕೃಷ್ಣ ರಾವ್ ಅವರು ತಮ್ಮ ‘ಲೇಖಕರ ಮಾತು' ಇಲ್ಲಿ ಬರೆದ ಸಾಲುಗಳು ಹೀಗಿವೆ- “ದಿನದಿನವೂ ಕ್ಷಣಕ್ಷಣವೂ ಉಲ್ಲಾಸದಿಂದ ಇರಬೇಕೆಂಬುದು ನಮ್ಮೆಲ್ಲರ ಬಹು ದೊಡ್ದ ಆಶೆ. ಆದರೆ ಬಹುಪಾಲು ವ್ಯಕ್ತಿಗಳಿಗೆ ಹಾಗಿರಲು ಸಾಧ್ಯವಾಗುತ್ತಿಲ್ಲ. ಏನೋ ಸಂಕಟ, ಏನೋ ಆತಂಕ, ಏನೋ ಹತಾಶೆ, ಏನೋ ನಿರಾಶೆ, ಏನೋ ಒತ್ತಡ ನಮ್ಮನ್ನು ಬಾಧಿಸುತ್ತಲೇ ಇರುತ್ತದೆ. ಹಾಗಿರುವಾಗ, ಅವನ್ನೆಲ್ಲ ಎದುರಿಸುತ್ತ, ಅವನ್ನೆಲ್ಲ ನಿಭಾಯಿಸುತ್ತ ಉಲ್ಲಾಸದಿಂದಿರಲು ಏನು ಮಾಡಬೇಕೆಂಬ ಪ್ರಶ್ನೆ ಸುಮಾರು ಇಪ್ಪತ್ತೈದು ವರುಷಗಳಿಂದ ನನ್ನನ್ನು ಕಾಡುತ್ತಿತ್ತು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿಕ್ಕಾಗಿ ಅಧ್ಯಯನ ಶುರು ಮಾಡಿದೆ. ಪುಸ್ತಕಗಳ ಓದು, ಹಿರಿಯರೊಂದಿಗೆ ಸಂವಾದ, ನನ್ನ ಮೇಲೆಯೇ ಪ್ರಯೋಗಗಳು, ನಾನು ಅರ್ಥ ಮಾಡಿಕೊಂಡದ್ದನ್ನೆಲ್ಲಾ ಟಿಪ್ಪಣಿ ಮಾಡಿಕೊಳ್ಳುತ್ತ ಬಂದೆ. ಅವುಗಳ ಆಧಾರದಿಂದ ಮೂರು ವರುಷಗಳಿಂದೀಚೆಗೆ (೨೦೧೮ರಿಂದ) ತಿಂಗಳಿಗೊಂದು ಅಧ್ಯಾಯ ಬರೆಯುತ್ತಾ ಬಂದೆ. “ಉಲ್ಲಾಸಕ್ಕೆ ದಾರಿ ನೂರಾರು" ತೋರಿಸುವ ಆ ನಲವತ್ತು ಬರಹಗಳು ಈಗ ನಿಮಗಾಗಿ ಇಲ್ಲಿವೆ.”

ಲೇಖಕರ ಬರವಣಿಗೆಯು ಬಹಳ ಸರಳ ಮತ್ತು ಎಲ್ಲರೂ ಅರ್ಥೈಸಿಕೊಳ್ಳುವಂತಹ ವಾಕ್ಯ ರಚನೆ ಹೊಂದಿರುವ ಕಾರಣದಿಂದ ಸಾಮಾನ್ಯರಲ್ಲಿ ಸಾಮಾನ್ಯರೂ ಸಹ ಈ ಪುಸ್ತಕದ ನಲವತ್ತು ಅಧ್ಯಾಯಗಳನ್ನು ಓದಿ ಅರ್ಥ ಮಾಡಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಖಂಡಿತಾ ಮಾಡಬಹುದು. ಇಲ್ಲಿ ಲೇಖಕರು ಮಾಹಿತಿಯನ್ನು ಒಂದೊಂದೇ ಪಾಯಿಂಟ್ ರೀತಿಯಾಗಿ ನೀಡಿರುವುದರಿಂದ ಓದಲೂ ಸರಳ. 

ಮೊದಲಿಗೆ ಬಹಳ ಸರಳವಾದ ಕಾರ್ಯಗಳನ್ನು ಮಾಡಲು ಹೇಳುವ ಲೇಖಕರು ನಂತರದ ಅಧ್ಯಾಯಗಳಲ್ಲಿ ಸ್ವಲ್ಪ ಕಠಿಣ ಕಾರ್ಯವನ್ನು ಸರಳ ರೀತಿಯಲ್ಲಿ ಹೇಳುತ್ತಾ ಹೋಗಿದ್ದಾರೆ. ರಾತ್ರಿ ಮಲಗಿ ಸಹಜವಾಗಿ ಎದ್ದು, ದಿನ ನಿತ್ಯದ ಕೆಲಸಗಳನ್ನು ಮುಗಿಸುವುದು, ಕೋಣೆಯ ಕಿಟಕಿ ಬಾಗಿಲುಗಳನ್ನು ತೆರೆದು ಗಾಳಿ, ಬೆಳಕು ಒಳಬರುವಂತೆ ಮಾಡಿ ಮನಸ್ಸನ್ನು ಆಹ್ಲಾದಗೊಳಿಸುವುದು, ಸಂಗೀತ ಕೇಳುವುದು, ಇಷ್ಟದ ದೇವರನ್ನು ಪ್ರಾರ್ಥಿಸುವುದು, ಹಕ್ಕಿಗಳ ಸದ್ದನ್ನು ಆಲಿಸುವುದು, ಸೂರ್ಯೋದಯದ ಬಣ್ಣವನ್ನು ಆನಂದಿಸುವುದು ಮೊದಲಾದ ಬಹಳ ಸರಳವಾದ ಕಾರ್ಯವನ್ನು ಮಾಡಲು ಹೇಳುತ್ತಾರೆ. ಇದೆಲ್ಲಾ ವಿಷಯವನ್ನು ನಾವು ಹಿಂದೆ ಮಾಡಿರಲಿಲ್ಲವೇ? ಇಲ್ಲವೆಂಬ ಉತ್ತರವೇ ಬರುತ್ತದೆ. ಇದಕ್ಕೆ ಕಾರಣ ನಾವು ಸೂರ್ಯನ ಬೆಳಕನ್ನು ಗಮನಿಸಿದ್ದೇವೆ, ಆದರೆ ಅದನ್ನು ಆಸ್ವಾದಿಸಿಲ್ಲ, ಹಕ್ಕಿಯ ಚಿಲಿಪಿಲಿಯನ್ನು ಕೇಳಿದ್ದೇವೆ. ಆದರೆ ಅದನ್ನು ಮನಸ್ಸಿನೊಳಗೆ ಬಿಟ್ಟುಕೊಟ್ಟಿಲ್ಲ. ಇಲ್ಲಿರುವ ಒಂದೊಂದೇ ವಿಷಯವನ್ನು ನೀವು ನಿಮ್ಮ ಮನದಾಳಕ್ಕೆ ತೆಗೆದುಕೊಂಡು ಹೋಗುವಾಗ ನಿಮ್ಮಲ್ಲಿ ಹೊಸದಾದ ಒಂದು ಹುಮ್ಮಸ್ಸು ಮೂಡುತ್ತದೆ. 

ಇಲ್ಲಿ ನೀಡಿದ ಎಲ್ಲಾ ವಿಷಯಗಳು ನಿಮಗೆ ಉಪಕಾರಿಯಾಗಿಯೇ ಇರುತ್ತದೆ ಮತ್ತು ಇವೆಲ್ಲವನ್ನು ನೀವು ಮಾಡಿದರೆ ನೀವು ಜಗತ್ತಿನ ಪರಮ ಸುಖಿ ವ್ಯಕ್ತಿಯಾಗುತ್ತೀರಿ ಎಂಬುದು ಲೇಖಕರ ಅಭಿಮತವಲ್ಲ. ಆದರೆ ಇಲ್ಲಿರುವ ಬಹಳಷ್ಟು ಅಧ್ಯಾಯಗಳನ್ನು ನೀವು ಓದಿ ಅರ್ಥೈಸಿಕೊಂಡಲ್ಲಿ ನೀವು ಈಗ ಬದುಕುವುದಕ್ಕಿಂತ ಸ್ವಲ್ಪ ಬದಲಾದ ಜೀವನವನ್ನು ಬದುಕಲು ಸಾಧ್ಯ. ಬೆಳಗೆದ್ದು ಉತ್ಸಾಹ ತುಂಬಿ ಕೊಳ್ಳುವ ದಾರಿಗಳು, ಮಾನಸಿಕ ಒತ್ತಡ ಪರಿಹಾರಕ್ಕೆ ದಾರಿಗಳು, ಸಮಸ್ಯಾ ಪರಿಹಾರಕ್ಕೆ ಮಾನಸಿಕ ಚಿತ್ರಣಗಳು, ಉಲ್ಲಾಸಕ್ಕೆ ಸರಳ ಜೀವನ, ನನಗೆ ನಾನೇ ಗೆಳೆಯ, ಉಲ್ಲಾಸಕ್ಕಾಗಿ ಉಸಿರಾಟ, ಉದ್ಯಾನದಲ್ಲಿ ಉಲ್ಲಾಸ, ಉಲ್ಲಾಸಕ್ಕಾಗಿ ಗಾಢ ನಿದ್ರೆ, ಕಚೇರಿಯಲ್ಲಿ ಉಲ್ಲಾಸ, ಉಲ್ಲಾಸಕ್ಕೆ ಹತ್ತು ಸೂತ್ರಗಳು ಇವು ಇಲ್ಲಿರುವ ಕೆಲವು ಅಧ್ಯಾಯಗಳು. 

ಇವೆಲ್ಲವನ್ನು ಓದಿದ ಬಳಿಕ, ಇವುಗಳನ್ನು ಅನುಸರಿಸಲು ಪ್ರಾರಂಭಿಸಿದ ನಂತರ, ನಿಮ್ಮ ಮನಸ್ಸಿನಲ್ಲಿ ಉಲ್ಲಾಸದ ಛಾಯೆ ಕಂಡು ಬರುತ್ತದೆ. ಆಗ ನಿಮಗೇ ಅನಿಸುತ್ತದೆ “ಅರೆರೇ, ಉಲ್ಲಾಸಕ್ಕೆ ನೂರಾರಲ್ಲ, ಸಾವಿರಾರು ದಾರಿಗಳಿವೆ" ಎಂದು. ಈ ಚಿಂತನೆ ನಿಮ್ಮ ಮನಸ್ಸಿನೊಳಗೆ ಬಂತೆಂದರೆ ನಿಮ್ಮಲ್ಲಿ ಇನ್ನಷ್ಟು ಉಲ್ಲಾಸ ಮೂಡಿಸುತ್ತದೆ. ೧೨೮ ಪುಟಗಳ ಈ ಪುಸ್ತಕವನ್ನು ಕೈಗೆತ್ತಿಕೊಂಡರೆ ಪೂರ್ತಿ ಮುಗಿಸುವ ತನಕ ಖಂಡಿತಾ ಕೆಳಗಿಡಲಾರಿರಿ.