ಉಳಿತಾಯ ಖಾತೆ ಗೊತ್ತು..ಸಾಲ ಖಾತೆಯೂ ಗೊತ್ತು..ಜಲ ಠೇವಣಿ ಖಾತೆ ಬಗ್ಗೆ ಗೊತ್ತೆ? ಬನ್ನಿ ಕೆ.ವಿ.ಜಿ.ಬಿ.ಗೆ

ಉಳಿತಾಯ ಖಾತೆ ಗೊತ್ತು..ಸಾಲ ಖಾತೆಯೂ ಗೊತ್ತು..ಜಲ ಠೇವಣಿ ಖಾತೆ ಬಗ್ಗೆ ಗೊತ್ತೆ? ಬನ್ನಿ ಕೆ.ವಿ.ಜಿ.ಬಿ.ಗೆ

ಬರಹ

"Nothing can be changed by changing the face, but everything can be changed by facing towards the change"
ವಿಲಿಯಂ ವರ್ಡ್ಸ್ ವರ್ತ್ ಅವರ ಈ ಮಾತಿಗೆ ಏನತೀರಿ?

ಪ್ರಸಕ್ತ ಸಾಲಿನ ಜಲಕ್ಷಾಮ ಅನುಭವಿಸಲಿರುವ ರಾಜ್ಯಗಳ ಪಟ್ಟಿಯಲ್ಲಿ ನಂಬರ್ ೧ ಸ್ಥಾನ ಕರ್ನಾಟಕಕ್ಕೆ! ನಂತರದ ಸ್ಥಾನ ನಂಬರ್ ೨ ತಮಿಳುನಾಡಿಗೆ. ೨ ವರ್ಷಗಳ ಹಿಂದೆ ನಂಬರ್ ೧ ಸ್ಥಾನದಲ್ಲಿದ್ದ ರಾಜಸ್ಥಾನ ಈಗ ನಂ.೩ನೇ ಸ್ಥಾನಕ್ಕೆ ಕುಸಿದಿದೆ. ಕಾರಣ, ರಾಜಸ್ಥಾನದಲ್ಲಿ ಜಲಯೋಧ ಡಾ.ರಾಜೇಂದ್ರಸಿಂಗ್ ಅವರಂತೆ ಪರಿಸರ ಕಾಳಜಿ ಮುಂದಾಳುಗಳಿಂದ ಎಲ್ಲರೂ ಜಲ ಸಾಕ್ಷರರಾಗಿದ್ದರಿಂದ ಹಸಿರಿನ ಹೊನಲು. ಇತ್ತ ನಮ್ಮ ಕರ್ನಾಟಕದಲ್ಲಿ ಉದಾಸೀನ ಧೋರಣೆ, ನೀರಿನ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದು ನಂಬರ್ ೧ ಸ್ಥಾನ ಗಳಿಸಿಕೊಟ್ಟಿದೆ.

ಉಪಗ್ರಹ ಅಧಾರಿತ ಸಮೀಕ್ಷೆಯಿಂದ ಕಂಡುಬಂದ ಈ ಅಧಿಕೃತ ಆದರೆ ಆತಂಕಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದವರು ಜಲತಜ್ನ ಜೆ.ಕೆ.ಜಮಾದಾರ.

ರಾಜ್ಯದಲ್ಲಿ ಒಟ್ಟು ಭೂ ಪ್ರದೇಶದ ೭೬.೮೭% ಭಾಗವನ್ನು ಬರ ಸಂಭವನೀಯ ಪ್ರದೇಶ ಎಂದು ಗುರುತಿಸಲಾಗಿದೆ. ಎರಡನೇ ಸ್ಥಾನದಲ್ಲಿರುವ ತಮಿಳುನಾಡು ತನ್ನ ೬೪.೬೬% ಭೂ ಭಾಗವನ್ನು ಬರ ಸಂಭವನೀಯತೆ ಪಟ್ಟಿಯಲ್ಲಿ ಇಟ್ಟಿದೆ. ಕಳೆದ ೨ ವರ್ಷಗಳ ಕೆಳಗೆ ಶೇಕಡ ೮೦ ಕ್ಕಿಂತ ಹೆಚ್ಚು ಭೂಭಾಗ ಬರಪೀಡಿತವಾಗಿದ್ದ ರಾಜಸ್ಥಾನದ ೬೩.೯೮% ಭಾಗ ಸಧ್ಯ ಬರ ಸಂಭವನೀಯತೆಯಲ್ಲಿದೆ.

ರಾಜಸ್ಥಾನಕ್ಕಿಂತ ಕರ್ನಾಟಕದಲ್ಲಿ ೩ ಪಟ್ಟು ಹೆಚ್ಚು ಮಳೆ ಬಿದ್ದರೂ ಕರ್ನಾಟಕ ಮಾತ್ರ ಈಗ ಮೊದಲ ಸ್ಥಾನದಲ್ಲಿರುವುದು ಆತಂಕಕಾರಿಯಲ್ಲಿವೇ?
"ನಾಗರಿಕತೆಯ ಮುಂದೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ನಾಗರಿಕತೆಯನ್ನು ಹಿಂಬಾಲಿಸುತ್ತವೆ" ಎಂಬ ಡಾ. ಶಿವರಾಮ ಕಾರಂತರ ಮಾತು ಸತ್ಯವೆನಿಸುತ್ತದೆ.

ಜಲ ತಜ್ನ ಶ್ರೀ ಪಡ್ರೆ ಅವರು ಅಭಿಪ್ರಾಯಪಡುವಂತೆ -"ಮಳೆ ಕೊಯ್ಲು ಪದ್ಢತಿ ಅಳವಡಿಸಿಕೊಳ್ಳುವ ಮುನ್ನ ಜಲ ಸಾಕ್ಷರತೆ, ಜಲ ಸಂರಕ್ಷಣೆ, ಜಲ ಜಾಗೃತಿ ಕುರಿತು ಮಾಹಿತಿ ನೀಡಿ, ಶ್ರೀಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಕೆನ್ನೀರಿನ ಹರಿಯುವಿಕೆ ತಡೆಗಟ್ಟುವುದು, ಮಣ್ಣಿನ ಸವಕಳಿ ತಡೆಯುವುದು ಸೇರಿದಂತೆ- ರಾಜ್ಯದ ರೈತರಲ್ಲಿ ಹೇರಳವಾಗಿರುವ ಬರ ನಿರೋಧಕ ಜಾಣ್ಮೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವಂತಾಗಬೇಕು" ಎಂಬ ಮಾತಿಗೆ ನಾವು ಕಿವಿ ಕೊಡಬೇಕಿದೆ.

ಶ್ರೀ ಪಡ್ರೆ ಅವರ ಮಾತಿಗೆ ಬೆಲೆ ಕೊಟ್ಟಂತೆ ದೇಶದ ಅಗ್ರಗಣ್ಯ ಗ್ರಾಮೀಣ ಬ್ಯಾಂಕ್ ಖ್ಯಾತಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉತ್ತರ ಕರ್ನಾಟಕ ಭಾಗದಲ್ಲಿ ಜಲಮೂಲಗಳ ಸಂರಕ್ಷಣೆಯಲ್ಲಿ, ರೈತರ ದೇಸಿ ಬರನಿರೋಧಕ ಜಾಣ್ಮೆಗೆ ದಿಕ್ಕು ತೋರಿಸುವಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ.

ಊರಿನ ಕೆರೆಗಳೆಲ್ಲ ಇತಿಹಾಸದ ಪುಟ ಸೇರಿ ಕೇರಿಗಳಾಗಿವೆ. ಉತ್ತರ ಕರ್ನಾಟಕದ ಬಹುಟೆಕ ಹಳ್ಳಿಗಳಲ್ಲಿ ನಾನು ತಿರುಗಾಡಿದ್ದೇನೆ. ಇದೇ ಪ್ರಕ್ರಿಯೆ ಜಾರಿಯಲ್ಲಿದೆ. ಮುಂದುವರೆಯುತ್ತಿದೆ. ಜಗತ್ತಿನ ಎಲ್ಲ ನಾಗರಿಕತೆಗಳು ಹುಟ್ಟಿದ್ದು ಮತ್ತು ಬೆಳೆದು ಉಚ್ಚ್ರಾಯ ಸ್ಥಿತಿ ತಲುಪಿದ್ದು ನದಿ ಮೂಲದ ದಂಡೆಗಳಲ್ಲಿ ಎಂಬ ಐತಿಹಾಸಿಕ ಸತ್ಯ ನಮಗೆ ಮರೆತಂತೆ ಕಾಣುತ್ತದೆ.

ಜೀವಸೆಲೆಯಾಗಿರುವ ನೀರಿನ ನೆಲೆಗಳನ್ನು ಉಳಿಸಿಕೊಳ್ಳುವಲ್ಲಿ ನಾವು ತೋರುತ್ತಿರುವ ಉದಾಸೀನತೆ, ಅನಾಸ್ಥೆ ಒಂದೆಡೆಯಾದರೆ, ಮಳೆಗಾಲ ಸಮೀಪಿಸುವ ಹೊತ್ತಿನಲ್ಲಿ ಕೆರೆಗಳ ಹೂಳೆತ್ತುವ ಸೌಜನ್ಯವನ್ನು ತೋರದ ನಿಷ್ಕ್ರೀಯತೆ ಮತ್ತೊಂದೆಡೆಗೆ. ನೀರಿನ ಒಳ ಹರಿವಿನ ಪ್ರದೇಶಗಳು ಕಾಂಕ್ರೀಟ್ ಕಾಡಾಗಿ ಪರಿವರ್ತನೆ..ಪರಿಣಾಮ ಗಂಭೀರ ಸ್ಥಿತಿಗೆ ತಲುಪಿದ ಅಂತರ್ಜಲ ಮಟ್ಟ.

ತನ್ನ ೯ ಜಿಲ್ಲೆಗಳ ಕಾರ್ಯ ವ್ಯಾಪ್ತಿಯಲ್ಲಿ ೫,೦೦೦ ಕೋಟಿ ರುಪಾಯಿ ವ್ಯವಹಾರ ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಈ ಬೆಳವಣಿಗೆಗಳನ್ನು ಸೂಕ್ಶ್ಮವಾಗಿ ಅವಲೋಕಿಸಿತು. ತಾನು ಮತ್ತೆ ಕೆರೆಗಳನ್ನು ತೋಡುವ ಸಾಹಸಕ್ಕೆ ಇಳಿಯುವ ಅವಶ್ಯಕತೆ ಇಲ್ಲ. ಇದ್ದ ಕೆರೆಗೆಳಿಗೆ ಕಾಯಕಲ್ಪ ನೀಡಿದರೆ ಸಾಕು. ಎಂದೆಣಿಸಿ ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಕಾಲಗರ್ಭ ಸೇರುವ ತವಕದಲ್ಲಿದ್ದ ಕೆರೆಗಳಿಗೆ ಪುನರುಜ್ಜೀವನ ನೀಡಲು ಸಿದ್ಧವಾಯಿತು. ಬ್ಯಾಂಕಿನ ಅಧಿಕಾರಿಗಳನ್ನು ಜಲಯೋಧರನ್ನಾಗಿಸಲು ಮೊದಲು ತರಬೇತಿ ನೀಡಲಾಯಿತು. ಅವರನ್ನು ಜನರತ್ತ ಕಳುಹಿಸಬೇಕಾಯಿತು. ಅವರೆಲ್ಲರ ಪ್ರಾಮಾಣಿಕ ಪ್ರಯತ್ನ ಇಂದು ಬ್ಯಾಂಕಿಗೆ ಗೌರವ ಸಂಪಾದಿಸಿ ನೀಡಿದೆ.

"ಮನುಷ್ಯ ತಾನು ಯಾವುದನ್ನು ಸೃಷ್ಠಿಸಲಾರನೋ ಅದನ್ನು ನಾಶ ಮಾಡುವ ಹಕ್ಕು ಅವನಿಗಿಲ್ಲ. ನಿಸರ್ಗವನ್ನು ಶೋಷಿಸಲು ಮನುಷ್ಯನೇನು ಪರಕೀಯನಲ್ಲ" ಎಂಬ ಗುರು ಗ್ರಂಥ ಸಾಹೀಬ್ ಹೇಳುವ ಮಾತು ಬ್ಯಾಂಕಿಗೆ ಪ್ರಸ್ತುತವೆನಿಸಿದೆ.
ಖಾನಾಪುರ ತಾಲೂಕಿನ ಗುಂಜಿ ಕೆರೆ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುಂಜಿ ಕೆರೆ ಕುಗ್ರಾಮ. ದಟ್ಟವಾದ ಗುಡ್ಡಗಳಿಂದ, ಕಾಡುಗಳಿಂದ ಆವೃತವಾದ ಸುಂದರ ‘ಹ್ಯಾಮ್ಲೆಟ್’!. ಸ್ಥಳೀಯರ ಪ್ರಕಾರ ನೂರಾರು ಕೆರೆಗಳಿದ್ದು ಹಸುರಿನಿಂದ ಕಂಗೊಳಿಸಿದ್ದ ಗ್ರಾಮಕ್ಕೆ ೩ ವರ್ಷಗಳಿಂದ ತೀವ್ರ ಜಲಕ್ಷಾಮ. ಈ ದಟ್ಟ ಕಾಡಿನ ಮಧ್ಯೆ ಅಲ್ಲಲ್ಲಿ ಕೆರೆಗಳ ಅವಶೇಷಗಳನ್ನು ಮಾತ್ರ ನಾವು ಇಂದಿಗೂ ಕಾಣಬಹುದು.

ಕಾಡಿನ ಮಧ್ಯೆ ಇದ್ದ ಆ ಕೆರೆಗಳು ಗ್ರಾಮದ ಜನರಿಗೆ ಜೀವಸೆಲೆಯಾಗಿದ್ದವು. ಮಾತ್ರವಲ್ಲ..ಕಾಡು ಪ್ರಾಣಿ ಹಾಗು ಪಕ್ಷಿ ಸಂಕುಲಕ್ಕೂ ಆಸರೆಯಾಗಿದ್ದವು. ಇಂತಹ ಕೆರೆಗಳು ಬೇಸಿಗೆಯ ಸಂದರ್ಭದಲ್ಲಿ ಏಕಾಏಕಿ ಬತ್ತಿದವು. ಪರಿಣಾಮ ಸ್ಥಳೀಯ ಜೈವಿಕ ಚಕ್ರದಲ್ಲಿಯೇ ತೀವ್ರ ಅಸಮತೋಲನ. ಹಾಗಾಯಿತು ಕೂಡ.

ಪರಿಸ್ಥಿತಿಯ ಗಾಂಭೀರ್ಯತೆ ಅರಿತ ಗುಂಜಿಯ “ಕೆ.ವಿ.ಜಿ.ಬಿ." ಶಾಖಾ ಪ್ರಬಂಧಕ ಕೆ.ಆರ್.ಬಡಿಗೇರ ಸ್ಥಳೀಯರ ಮನವೊಲಿಸಿ ಅಂತಹ ಒಂದು ಕೆರೆಯ ಕಾಯಕಲ್ಪಕ್ಕೆ ಮುಂದಾದರು. ಬ್ಯಾಂಕ್ ೫ ಸಾವಿರ ರುಪಾಯಿಗಳ ಅನುದಾನ ನೀಡಿತು. ೧೬೦೦ ರುಪಾಯಿಗಳನ್ನು ಸ್ವತ: ಗ್ರಾಮಸ್ಥರೇ ಜೋಡಿಸಿಕೊಂಡರು. ನಿತ್ಯ ೧೨ ತಾಸು ೨೦ ಜನ ೫ ದಿನಗಳ ವರೆಗೆ ನಿರಂತರವಾಗಿ ಶ್ರಮದಾನ ಮಾಡಿದರು.

ಹೀಗೆ ಗುಂಜಿ ಗ್ರಾಮದ ಜನರ ಸಹಕಾರ ದೊರೆಯಿತು. ಕೆರೆಯಲ್ಲಿದ್ದ ಹೂಳು ಎತ್ತಲಾಯಿತು. ಕಸ-ಕಡ್ಡಿ ತೆಗೆದು ಸ್ವಚ್ಛಗೊಳಿಸಲಾಯಿತು. ಈ ಹಂತದಲ್ಲಿ ಹಳ್ಳಿಗರ ನಿರಂತರ ಶ್ರಮದಾನ ಶ್ಲಾಘನೀಯ. ದೂರದ ಗುಡ್ಡದ ಮೇಲ್ಭಾಗದಿಂದ ಝರಿಯೊಂದು ತೊಟ್ಟಿಕ್ಕುತ್ತಿತ್ತು. ತೊರೆ ಕಂಡಿದ್ದೇ ತಡ ಶ್ರಮಜೀವಿಗಳ ಉತ್ಸಾಹ ಇಮ್ಮಡಿಯಾಯಿತು. ಸರಿ. ಮಾಡುವುದೇನು? ಝರಿಯ ಕಾಲು ದಾರಿ ಹಿಡಿದು ಎಲ್ಲರೂ ಹೊರಟರು. ದಾರಿ ಸುಗಮಗೊಳಿಸಿ ಹೂಳೆತ್ತಲಾದ ಕೆರೆಗೆ ನೀರು ಹರಿದು ಬರುವಂತೆ ಮಾಡಲಾಯಿತು. ಸದ್ಯ ಈ ಕೆರೆಯಲ್ಲಿ ಈಗ ನೀರೆ ನೀರು!

ಗೌತಮ ಬುದ್ಧ ಬೋಧಿಸಿದಂತೆ ತನ್ನನ್ನು ಕಡಿಯಲು ಬಂದ ಮರ ಕಡಿಯುವವನಿಗೂ ಆಹುತಿಯಾಗಲಿರುವ ಮರ ನೆರಳು ನೀಡುತ್ತದೆ. ಇದು ನಿಸರ್ಗದ ದೊಡ್ಡಗುಣ. ಮಾನವನ ಎಲ್ಲ ಲೋಭಗಳನ್ನು ಸಹಿಸಿ, ಫಲ ನೀಡುವ ಮರದ ಉದಾತ್ತತೆಯನ್ನು ನಾವು ಗೌರವಿಸಬೇಕು. ವಿಶ್ವ ಆರೋಗ್ಯ ಸಂಸ್ಠೆ ತನ್ನ ಅಧಿಕೃತ ವಾರ್ತಾ ಪತ್ರದಲ್ಲಿ ಹೇಳುವಂತೆ " ಇಂದು ಜಗತ್ತಿನ ಆಸ್ಪತ್ರೆಗಳಲ್ಲಿ ಮಲಗಿರುವ ನಾಲ್ಕು ರೋಗಿಗಳಲಲ್ಲಿ, ಒಬ್ಬಾತ ಕಶ್ಮಲ ನೀರನ್ನು ಸೇವಿಸಿಯೇ ನರಳುತ್ತಿದ್ದಾನೆ. ಪ್ರಗತಿಶೀಲ ರಾಷ್ಟ್ರಗಳ ಹಳ್ಳಿಯು ಪ್ರಜೆಗಳಿಗೆ ಕುಡಿಯಲು ಸುರಕ್ಷಿತ ನೀರು ಬೇಕಾಗಿದೆ. ಸುಲಭವಾಗಿ ಎಲ್ಲರಿಗೂ ಶುದ್ಧ ನೀರು ಸಿಗುವಂತೆ ಮಾಡಲು ಯತ್ನಿಸುವುದೇ ಈ ರಾಷ್ಟ್ರಗಳ ಪ್ರಥಮ ಧ್ಯೇಯವಾಗಬೇಕು" ಈ ಮಾತನ್ನು ಗುಂಜಿಯ ಜನರು ಅರ್ಥ ಮಾಡಿಕೊಂಡಿದ್ದಾರೆ ಎನ್ನಲು ಪುರಾವೆ ನೀಡುವ ಅಗತ್ಯವಿಲ್ಲ.

ತಕ್ಷಣ ಮಳೆ ಬರುವುದನ್ನು ಗಮನಿಸಿ ಒಡ್ಡು ನಿರ್ಮಿಸುವ ಕಾಯಕಕ್ಕೆ ಮುಂದಾಗಲಾಯಿತು. ಝರಿಯ ಒಳ ಹರಿವಿನ ಎಲ್ಲ ಮಗ್ಗಲುಗಳನ್ನು ಶುಚಿಗೊಳಿಸಲಾಯಿತು. ಸದ್ಯ ಗುಂಜಿ ಗ್ರಾಮಕ್ಕೆ ಸಾಕಾಗಿ ಮಿಕ್ಕುವಷ್ಟು ನೀರು ಅಲ್ಲಿದೆ. ಮುಂಗಾರು ಮಳೆ ತಡವಾಗಿ ಪ್ರಾರಂಭವಾದರೂ ಜಲಕ್ಷಾಮ ತಲೆದೋರುವ ಲಕ್ಷಣಗಳಿಲ್ಲ. ಈಗ ಗ್ರಾಮದಲ್ಲಿ ಕೆರೆಯನ್ನು ಪುನರುಜ್ಜೀವಿತಗೊಳಿಸಿದ ಭಗೀರಥರ ಕಥೆ ಹಾಗು ಗುಣಗಾನ. ಜೊತೆಗೆ ಹಣಾಕಾಸಿನ ಸಕಾಲಿಕ ನೆರವನ್ನು ಒದಗಿಸಿದ ಕೆ.ವಿ.ಜಿ.ಬಿಗೆ ಥ್ಯಾಂಕ್ಸ್ ಗಳ ಸುರಿಮಳೆ.

೯ ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿರುವ ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತ ಕೆ.ವಿ.ಜಿ.ಬಿ. ೨೦೦೭-೦೮ನೆಯ ಸಾಲಿನಲ್ಲಿ ೨೦ ಕೆರೆಗೆಳಿಗೆ ಈಗಾಗಲೇ ಕಾಯಕಲ್ಪ ನೀಡಿದೆ. ೨೦೦೮-೦೯ನೇ ಸಾಲಿಗೆ ೧೦೦ ಕೆರೆಗಳನ್ನು ಆಯ್ದುಕೊಳ್ಳಲಾಗಿದೆ. ಬ್ಯಾಂಕಿನ ಅಧ್ಯಕ್ಷ ಎಂ.ಧನಂಜಯ ಅವರು ಹೇಳುವಂತೆ- "ಜಾರ್ಜ ವಿಂಟರ್ ಹೇಳಿರುವಂತೆ ಇನ್ನು ಪರಿಸರವನ್ನು ನಿರ್ಲಕ್ಷಿಸುವ ಕಾಲ ಮುಗಿಯಿತು. ಕೆವಿಜಿಬಿಯ ಜಲಮೂಲ ರಕ್ಶಣೆಗೆ ಹಾಗು ಕೆರೆ ಅಭಿವೃದ್ಧಿ ಕೆಲಸಗಳಿಗೆ ಗ್ರಾಮ ಪಂಚಾಯ್ತಿಗಳು ಪೂರಕವಾಗಿ ಸ್ಪಂದಿಸಿವೆ. ಬ್ಯಾಂಕ್ ಸ್ವತ: ನೇತೃತ್ವವಹಿಸಿದ್ದರಿಂದ ಇಲ್ಲಿ ರಾಜಕೀಯ ಸುಳಿದಿಲ್ಲ. ಗುಂಜಿ ಗ್ರಾಮದಲ್ಲಿ ನಾವು ಕೈಗೊಂಡ ಕೆರೆ ಪುನರುಜ್ಜೀವನ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪಂಚಾಯ್ತಿ ಶ್ಲಾಘಿಸಿದ್ದು ಅಲ್ಲಿನ ಇನ್ನುಳಿದ ಜಲಮೂಲಗಳ ಸಂರಕ್ಷಣೆಗೆ ಜಿ.ಪ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಲಿಂಗ ಮೂರ್ತಿ ೧ ಲಕ್ಷ ರುಪಾಯಿ ಮಂಜೂರು ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಅಶ್ಚರ್ಯದ ವಿಷಯವೆಂದರೆ ಗುಂಜಿ ಗ್ರಾಮದಲ್ಲಿ ಕೆರೆ ಈಗ ಮೈದುಂಬಿ ಕೊಂಡಿರುವುದರಿಂದ, ಸುತ್ತಲಿನ ಹೊಲಗಳಲ್ಲಿ ನೀರಾವರಿ ಆಧಾರಿತ ಬೇಸಿಗೆ ಬೆಳೆ ಬೆಳೆಯುವ ಕುರಿತು ಸ್ಥಳೀಯರು ಚಿಂತನೆ ನಡೆಸಿದ್ದಾರೆ! ನಮ್ಮ ಬ್ಯಾಂಕಿನ ಗುಣಮಟ್ಟದ ಕಾರ್ಯಕ್ಕೆ ಇದು ಹಿಡಿದ ಕನ್ನಡಿ" ಎಂದು ಬೀಗುತ್ತಾರೆ.

"ಸ್ವಚ್ಛ ಕೆರೆ ಊರಿಗೆ..ಶುದ್ಧ ನೀರು ನಮ್ಮೆಲ್ಲರಿಗೆ" ಹಾಗು "ಊರು ನಮ್ಮದು ಕರಯೂ ನಮ್ಮದು..ಬ್ಯಾಂಕೂ ಸಹ ನಮ್ಮದು" ಗುಂಜಿ ಕೆರೆಯ ಕುರಿತು ಸ್ಥಳಿಯರಲ್ಲಿ ‘ನಮ್ಮದು’ ಎಂಬ ಭಾವನೆ ಮೂಡಿಸುವಲ್ಲಿ ಬ್ಯಾಂಕಿನ ಸಂಪರ್ಕಾಧಿಕಾರಿ ಉಲ್ಲಾಸ ಗುನಗ ಅವರ ಶ್ರಮ ಶ್ಲಾಘನೀಯ. ಕೆರೆಯ ದಂಡೆಯ ಮೇಲೆ ಅವರು ಹಾಕಿಸಿರುವ ಫಲಕಗಳು ಅರ್ಥಪೂರ್ಣವಾಗಿವೆ. ಜನರಲ್ಲಿ ನಮ್ಮ ಕೆರೆ ಎಂಬ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿವೆ.ಈ ವಾಕ್ಯಗಳು ಜನರಲ್ಲಿ ಕಳಕಳಿಯ ಭಾವಬಿತ್ತಿ ಸಮುದಾಯದ ಸಹಭಾಗಿತ್ವದ ಸಾಂಘಿಕ ಜೀವನಕ್ಕೆ ಪ್ರೇರಣೆ ನೀಡಿವೆ.

ಬೆಳಗಾವಿ ಜಿಲ್ಲೆಯ ಗುಂಜಿ, ಇಂಚಲ, ವಾಗವಾಡೆ, ಹಮ್ಮಿಗೆ. ಹಾವೇರಿ ಜಿಲ್ಲೆಯ ವನಹಳ್ಳಿ, ಹೂವಿನ ಶಿಗ್ಲಿ, ಚೌಡಿಹಾಳ. ಗದಗ ಜಿಲ್ಲೆಯ ಹಿರೇಮಣ್ಣೂರು. ಉತ್ತರಕನ್ನಡ ಜಿಲ್ಲೆಯ ಮಾದನಹಳ್ಳಿ, ಹುಣಶೆಟ್ಟಿಕೊಪ್ಪ, ತೊಗರಳ್ಳಿ. ದಕ್ಷಿಣ ಕನ್ನಡ ಜಿಲ್ಲೆಯ ಇರುವಳ್ಳಿ. ಧಾರವಾಡ ಜಿಲ್ಲೆಯ ಆರೇಕುರಹಟ್ಟಿ, ಹನುಮನಹಳ್ಳಿ, ಮುಮ್ಮಿಗಟ್ಟಿ, ಕೊಂಕಣ ಕುರಹಟ್ಟಿ. ಬಿಜಾಪುರ ಜಿಲ್ಲೆಯ ಸುನಗಾ, ಧಾರವಾಡ, ಹೊನ್ನಡಗಿ. ಬಾಗಲಕೋಟ ಜಿಲ್ಲೆಯ ಕಳಸನಕೊಪ್ಪ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಮುದಾಯದ ಸಹಭಾಗಿತ್ವದಲ್ಲಿ ಈಗಾಗಲೇ ಕೆರೆ ಸ್ವಚ್ಚತೆ ಕೈಗೊಂಡ ಗ್ರಾಮಗಳು. ನೀವು ನೋಡಿ ಆನಂದಿಸಲೂಬಹುದು!

ಬಟ್ರಾಂಡ್ ರಸೆಲ್ ಹೇಳುವಂತೆ "ಮಾನವ ಪರಿಸರ ವಿರೋಧಿಯಾದರೆ, ಪರಿಸರ ಮಾನವ ವಿರೋಧಿಯಾಗುತ್ತದೆ" ಗುಂಜಿ ಜನಕ್ಕೆ ಬಹುಶ: ರಸೆಲ್ ಗೊತ್ತಿಲ್ಲ. ಆದರೆ ಆತನ ವಿಚಾರ ಮನವರಿಕೆ ಮಾಡಿಕೊಂಡಿದ್ದಾರೆ. ವಿಪರ್ಯಾಸ ನಮಗೆ ಬಟ್ರಾಂಡ್ ರಸೆಲ್ ಗೊತ್ತು! ಆದರೆ..