ಉಳಿಸು ನಿನ್ನುಸಿರಿಗಾಗಿ...

ಉಳಿಸು ನಿನ್ನುಸಿರಿಗಾಗಿ...

ಕವನ

ಅಳಿದಿರುವೆ ನಾನೆಂದು ನೀನಂದುಕೊಂಡಿರುವೆ

ಉಳಿದಿಹುದು ಜೀವವಿದು ಕೊಂಚ ಬುಡದಲ್ಲಿ

 

ಉಸಿರಿರಲು ನನ್ನಲ್ಲಿ ಕುಳಿತಿರೆನು ಬರಿಗೈಲಿ

ಬಸಿರನ್ನು ಹೊತ್ತಿರುವೆ ಸಫಲ ಯತ್ನದಲಿ

 

ದಾರಿಯಲಿ ಅಡ್ಡವಿದು ಬೇಡೆಂದು ಕಡಿದಿರುವೆ

ಬೇರನ್ನು ಉಳಿಸಿದ್ದೆ ನಿನ್ನ ಮರೆವಲ್ಲಿ

 

ಸಾಕಾಯ್ತು ನನಗಷ್ಟು ನೆಲದ ಋಣ ತೀರಿಸಲು

ಈ ಕಾಯಿ ನಿನಗಾಗಿ ಬಳಸು ಸೊಗಸಾಗಿ

 

ಗುಟ್ಟೊಂದು ನುಡಿಯುವೆನು ವೃಕ್ಷಗಳ ಆ ದೇವ

ಇಟ್ಟಿರುವ ಜೀವಿಗಳ ಬದುಕು ಸುಖಕಾಗಿ

 

ಮಾನವನು ಕೆಡಿಸಿರುವ ವಾಯುವಿನ ಕೊಳೆ ತೆಗೆದು

ನಾನದನು ಮರಳಿಸುವೆ ನಿನ್ನುಸಿರಿಗಾಗಿ

 

ನಾವಿತ್ತ ಫಲಗಳನು ಮನಸಾರೆ ತಿಂದುಂಡು

ಸೇವಿಸಿದ ಸುಖ ಮರೆವ ಮನುಜ ಏಕಾಗಿ?

 

ಬಿರುಬಿಸಿಲ ಬೇಗೆಯಲಿ ಬಳಲಿರಲು ಜೀವಿಗಳು

ನೆರಳೀವ ವೃಕ್ಷಗಳ ಉಳಿಸು ನಿಮಗಾಗಿ

 

ಕಳೆಯದಿರು ಅವುಗಳನು, ಕಡಿದೆಸೆದು ವ್ಯಥೆ ಪಡುವೆ

ಬೆಳೆಸುವುದು ಶುರುಮಾಡು ಸರ್ವ ಹಿತಕಾಗಿ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್