ಉಳ್ಳಾಲದ ವೀರರಾಣಿ ಅಬ್ಬಕ್ಕ

ಉಳ್ಳಾಲದ ವೀರರಾಣಿ ಅಬ್ಬಕ್ಕ

ಪುಸ್ತಕದ ಲೇಖಕ/ಕವಿಯ ಹೆಸರು
ವಿಜಯಲಕ್ಷ್ಮಿ ಶಿವಕುಮಾರ ಕೌಟಗೆ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೫೦.೦೦, ಮುದ್ರಣ: ೨೦೨೨

೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ ನಮ್ಮ ಸ್ವಾತಂತ್ರ್ಯದ ಇತಿಹಾಸದ ಪುಟಗಳಲ್ಲಿ ಅಮರಳಾಗಿ ಸೇರಿಹೋದ ಸಂಗತಿ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ಮಹಿಳೆಯರಲ್ಲಿ ಒಬ್ಬರಾದ ಅಬ್ಬಕ್ಕನ ಬಗ್ಗೆ ಬಹುತೇಕರಿಗೆ ತಿಳಿದಿರುವುದು ಅಲ್ಪವೇ. ಪೋರ್ಚುಗೀಸ್ ಸೈನಿಕರ ವಿರುದ್ಧ ವೀರೋಚಿತವಾಗಿ ಹೋರಾಡಿದ ಅಬ್ಬಕ್ಕನ ಬಗ್ಗೆ ತಿಳಿಯಲು ಈ ಪುಸ್ತಕ ಸ್ವಲ್ಪ ಮಟ್ಟಿಗೆ ಸಹಕಾರಿ. 

ಪುಸ್ತಕದ ಲೇಖಕಿಯಾದ ವಿಜಯಲಕ್ಷ್ಮಿ ಇವರು ತಮ್ಮ ‘ಮನಸ್ಸಿನ ಮಾತು' ಎಂಬ ಮುನ್ನುಡಿಯಲ್ಲಿ ಬರೆದ ವಾಕ್ಯಗಳು ಹೀಗಿವೆ..." ಇತಿಹಾಸವನ್ನು ಅವಲೋಕಿಸಿದಂತೆ ನಮಗೆ ಅನೇಕ ವೀರ ಮಹಿಳೆಯರ ಸಾಹಸಗಾಥೆಗಳು ಕಾಣಸಿಗುತ್ತವೆ. ಅಂತಹ ಮಹಿಳೆಯರ ಧೈರ್ಯ, ಸಾಹಸ, ವೀರಾವೇಶದ ಹೋರಾಟ ನಮಗೆ ಆಶ್ಚರ್ಯವನ್ನುಂಟು ಮಾಡುವುದರ ಜೊತೆಗೆ ಸಾಹಸಮಯ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಲು ಮನಸ್ಸಿನ ಮಾರ್ಗವನ್ನು ಬದಲಿಸುವುದರಲ್ಲಿ ಆಶ್ಚರ್ಯವಿಲ್ಲ. ಆದರೆ, ಮಹಾನ್ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೇಳುತ್ತಾ ಹೋದಂತೆ ನಮ್ಮ ಮನಸ್ಸಿನ ತುಡಿತ ಹೆಚ್ಚುತ್ತಾ ಹೋಗುವುದರಲ್ಲಿ ಸಂದೇಹವಿಲ್ಲ. ಅಂತಹ ಪ್ರಮುಖ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೇಳಿ ಬರುವ ಹೆಸರು ಉಳ್ಳಾಲದ ರಾಣಿ ಅಬ್ಬಕ್ಕನದ್ದು. ಈ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರ ರಾಣಿ ಅಬ್ಬಕ್ಕನ ಕುರಿತು ನಾನೇಕೆ ಬರೆಯಬಾರದು ಎಂಬ ಕುತೂಹಲ ನನ್ನೊಳಗೆ ಕಾಡಿತು. ಈಕೆಯ ಕುರಿತು ಹಲವಾರು ಕೃತಿಗಳನ್ನು ಪರಾಮರ್ಶಿಸಿದೆ. ನನಗೆ ವೀರರಾಣಿ ಅಬ್ಬಕ್ಕನ ಶಕ್ತಿ ಅಸಾಮಾನ್ಯ. ಪೋರ್ಚುಗೀಸರ ವಿರುದ್ಧ ಹೋರಾಡಿ ತನ್ನದೇ ಆದ ಕೀರ್ತಿಯನ್ನು ಬೆಳೆಸಿಕೊಂಡು ಮಾದರಿಯಾದವಳು ಎಂದು ಕಂಡಿತು"

ಓದುಗರು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಉಳ್ಳಾಲದಲ್ಲಿ ಆಳಿದ ಇಬ್ಬರು ರಾಣಿಯರ ಹೆಸರೂ ಅಬ್ಬಕ್ಕ ಎಂದೇ ಆಗಿದೆ. ಹಿರಿಯ ರಾಣಿ ಅಬ್ಬಕ್ಕ ದೇವಿಯ ಮಗಳೇ ಕಿರಿಯ ರಾಣಿ ಅಬ್ಬಕ್ಕ ದೇವಿ. ಹಿರಿಯ ರಾಣಿಯೂ ಅಪಾರ ಶೂರತೆಯನ್ನು ಹೊಂದಿದ್ದ ಮಹಿಳೆ. ಆದರೆ ಪೋರ್ಚುಗೀಸ್ ರ ಬೃಹತ್ ಸೈನ್ಯದ ಎದುರು ಸೋಲು ಕಂಡಾಗ ಬೇರೆ ದಾರಿಯಿಲ್ಲದೇ ಪೋರ್ಚುಗೀಸರಿಗೆ ಕಪ್ಪಕಾಣಿಕೆ ಕೊಡಲು ಸಮ್ಮತಿಸುತ್ತಾಳೆ. ಆದರೆ ಆಕೆ ಸಾಯುವ ಸಮಯದಲ್ಲಿ ಕಿರಿಯ ಅಬ್ಬಕ್ಕ ದೇವಿಯ ಈ ವಿಚಾರವನ್ನು ಮಾತನಾಡಿ ಏನಾದರಾಗಲಿ ಉಳ್ಳಾಲ ಸ್ವತಂತ್ರವಾಗಬೇಕು, ನೀನು ಈ ಕೆಲಸವನ್ನು ಮಾಡಲೇಬೇಕು ಎಂದು ಮಾತು ತೆಗೆದುಕೊಳ್ಳುತ್ತಾಳೆ. ಕಿರಿಯ ಅಬ್ಬಕ್ಕ ತನ್ನ ಅಮ್ಮನಿಗೆ ಕೊಟ್ಟ ಭಾಷೆಯನ್ನು ಉಳಿಸಲು ಪೋರ್ಚುಗೀಸರಿಗೆ ಕಪ್ಪ ಕೊಡುವುದನ್ನು ನಿಲ್ಲಿಸಲು ತೀರ್ಮಾನಿಸುತ್ತಾಳೆ. 

ಆದರೆ ಅವಳ ಈ ತೀರ್ಮಾನ ಅವಳ ಗಂಡ ವೀರನರಸಿಂಹನಿಗೆ ತಿಳಿಸಿದಾಗ ಆತ ಅದಕ್ಕೆ ಸಮ್ಮತಿಸುವುದಿಲ್ಲ. ಈ ಕಾರಣದಿಂದ ಆತ ಒಬ್ಬ ಹೇಡಿ ಎಂಬುದು ಅಬ್ಬಕ್ಕನಿಗೆ ತಿಳಿಯುತ್ತದೆ. ಆತ ಪೋರ್ಚುಗೀಸ್ ಸೈನಿಕರಿಗೆ ಅದಾಗಲೇ ಕಪ್ಪ ನೀಡುತ್ತಿದ್ದ. ಮಂಗಳೂರಿನ ಬಂಗಾಡಿಯ ರಾಜನಾಗಿದ್ದ ಆತ ಹೆಸರಿಗಷ್ಟೇ ‘ವೀರ' ನಾಗಿದ್ದ. ಆದರೆ ಆತನಲ್ಲಿ ಒಂದಿಷ್ಟೂ ಹೋರಾಟದ ಕೆಚ್ಚು ಇರಲಿಲ್ಲ. ಆದರೆ ಅಬ್ಬಕ್ಕ ತನ್ನ ಅಮ್ಮನಿಗೆ ನೀಡಿದ ಮಾತನ್ನು ಉಳಿಸಲು ಪೋರ್ಚುಗೀಸರಿಗೆ ಕಪ್ಪ ನೀಡುವುದನ್ನು ನಿಲ್ಲಿಸಿ ಬಿಡುತ್ತಾಳೆ. ಇದರಿಂದ ಕೆರಳಿದ ಅವರು ಯುದ್ಧಕ್ಕೆ ಬರುತ್ತಾರೆ, ಈ ನಡುವೆ ಅಬ್ಬಕ್ಕನ ಗಂಡನೂ ಆಕೆಯನ್ನು ಬಂಧನದಲ್ಲಿಡಲು ಪ್ರಯತ್ನ ಮಾಡುತ್ತಾನೆ. ಆದರೆ ಅಬ್ಬಕ್ಕನ ಶೌರ್ಯವನ್ನು ಕಣ್ಣಾರೆ ಕಂಡ ವೀರನರಸಿಂಹನ ಸೈನಿಕರು ಆಕೆಯನ್ನು ಬಂಧಿಸಲು ಇಷ್ಟ ಪಡುವುದಿಲ್ಲ. 

ಮುಂದೆ ಪೋರ್ಚುಗೀಸರ ವಿರುದ್ಧ ನಡೆದ ಯುದ್ಧದಲ್ಲಿ ಅಬ್ಬಕ್ಕ ಜಯಶಾಲಿಯಾಗುತ್ತಾಳೆ. ಉಳ್ಳಾಲ ರಾಜ್ಯವನ್ನು ಸ್ವತಂತ್ರ ರಾಜ್ಯವನ್ನಾಗಿ ಮಾಡಿ ತನ್ನ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾಳೆ. ಆದರೆ ನಂತರದ ದಿನಗಳ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಿಲ್ಲ. ರಾಣಿಯ ಅಂತ್ಯ ಹೇಗಾಯಿತು. ಯುದ್ಧದಲ್ಲಿ ಸೋತ ಪೋರ್ಚುಗೀಸರು ಮತ್ತೆ ಆಕ್ರಮಣ ಮಾಡಲಿಲ್ಲವೇ? ಈ ಬಗ್ಗೆ ಮಾಹಿತಿಗಳಿಲ್ಲ. ಅಬ್ಬಕ್ಕ ರಾಣಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ಪುಸ್ತಕ ಸಹಕಾರಿಯಾದರೂ ಸಮಗ್ರ ವಿವರಗಳು ಇದರಲ್ಲಿ ಇಲ್ಲ. 

೧೬೨೩ರಲ್ಲಿ ತುಳುನಾಡಿಗೆ ಬಂದ ಇಟಲಿಯ ಪ್ರವಾಸಿ ಪೀತ್ರೋದೆಲ್ಲಾ ವೆಲ್ಲಾ ಅಬ್ಬಕ್ಕರಾಣಿ ಕುರಿತು ವಿವರವಾಗಿ ತಿಳಿಸಿದ್ದಾನೆ. ಅವನು ಹೇಳಿದ ಮಾತುಗಳು ಹೀಗಿವೆ: “ಆಕೆ ರಾಣಿಯಾಗಿದ್ದರೂ ಸಾಮಾನ್ಯ ಸ್ತ್ರೀಯಂತೆ ಸರಳ ಜೀವನ ನಡೆಸುತ್ತಿದ್ದಳು. ಆಕೆಯ ಮಾತಿನಲ್ಲಿ ಮಾಧುರ್ಯವಿತ್ತು. ಹೃದಯವಂತಿಕೆ, ಸದ್ಗುಣ ಸಂಪನ್ನೆ, ಕರುಣಾಮಯಿ,ಮಾತೃಹೃದಯಿ, ವಿವೇಕಿಯಂತೆ ಕಾಣುತ್ತಿದ್ದಳು.”

ಒಂದು ಸಣ್ಣ ನಾಡಿನ ರಾಣಿಯಾಗಿದ್ದರೂ ಅಬ್ಬಕ್ಕ ಬಲು ಸಾಹಸದಿಂದ ತೀರ ಬಲಿಷ್ಟರಾಗಿದ್ದ ಪೋರ್ಚುಗೀಸರನ್ನು ಹೇಗೆ ಓಡಿಸಿಬಿಟ್ಟಳು ಎಂಬ ಕಥೆಯನ್ನು ಚಾರ್ಲ್ಸ್ ಡಾನ್ವರ್ಸ್ ಎಂಬುವನು ‘ಭಾರತದಲ್ಲಿ ಪೋರ್ಚುಗೀಸರು’ ಎಂಬ ಗ್ರಂಥದಲ್ಲಿ ತಿಳಿಸಿದ್ದಾನೆ. ಉಳ್ಳಾಲದ ವೀರರಾಣಿ ಅಬ್ಬಕ್ಕ ಪುಸ್ತಕಕ್ಕೆ ನಾಡೋಜಾ ಪ್ರೊ. ಹಂಪನಾ ಬೆನ್ನುಡಿ ಬರೆದಿದ್ದಾರೆ. ಸುಮಾರು ೭೦ ಪುಟಗಳ ಈ ಪುಸ್ತಕ ಓದಲು ಸೊಗಸಾಗಿದೆ. ಅಬ್ಬಕ್ಕ ಕುರಿತಾದ ಇನ್ನಷ್ಟು ಮಾಹಿತಿಗಳು ಇರಬೇಕಿತ್ತು ಅನಿಸುತ್ತದೆ. ಅಬ್ಬಕ್ಕನ ಹುಟ್ಟು, ಬಾಲ್ಯ, ಮದುವೆ, ಮಗಳ ಬಗ್ಗೆ, ಯುದ್ಧದ ಬಳಿಕದ ಕಥೆ, ಅಂತಿಮ ದಿನಗಳು ಈ ಮಾಹಿತಿಗಳು ಸಂಪೂರ್ಣವಾಗಿ ದೊರೆಯದಿರುವ ಕಾರಣ ಪುಸ್ತಕ ಪೂರ್ಣ ಓದಿದರೂ ಮನಸ್ಸಿಗೆ ಸಂಪೂರ್ಣ ಸಮಾಧಾನ ಸಿಗುವುದಿಲ್ಲ.