ಉಸಿರಿಗೆ ಉಸಿರ ಹಚ್ಚೋಣ
ವಿಶ್ವ ಪರಿಸರ ದಿನವಂತೆ ಇಂದು
ಏ ಬಂಗಾರಿ ನಿನಗೂ ಈ ದುರ್ಗತಿ
ನೈಜ ಸೊತ್ತಿನ ಮೇಲೂ ದುಷ್ಟದೃಷ್ಟಿ
ಮಿತಿಮೀರಿದೆ ಸ್ವಾರ್ಥಿಗಳ ಹಾವಳಿ
ನೀನ್ಯಾಕೆ ಮೌನಿಯಾದೆ ಬಾಲೆ
ಪ್ರಹಾರ ನೀಡಿ ಕಲಿಸಬಾರದೇ ಪಾಠ
ಬಿದ್ದರೂ ಮಣ್ಣಾಗಿಲ್ಲ ಎಂಬ ಕೂಟ
ಕಿಸೆ ತುಂಬಿಸಿ ನಡೆವ ಕೆಟ್ಟಚಟ
ತಾರತಮ್ಯವಿಲ್ಲದ ಜಗದ ಸಿಂಗಾರಿ
ನಮ್ಮೆಲ್ಲರ ಬಾಳಿನ ವಯ್ಯಾರಿ
ತನನ ನಾಟ್ಯವಾಡುವ ಮಯೂರಿ
ಪಂಚಭೂತಗಳಿಗೆ ಸಾಕ್ಷಿ ಕಿಶೋರಿ
ಹಸಿರು ಸಸ್ಯಗಳ ನೆಟ್ಟು ಬೆಳೆಸೋಣ
ಪ್ರಾಣವಾಯುವನು ರಕ್ಷಿಸೋಣ
ಪೀಳಿಗೆಯ ಭವಿಷ್ಯದ ಕೀಲಿಯಾಗೋಣ
ಪ್ರಕೃತಿ ಮಾತೆಯ ಮಡಿಲ ಬೆಳಗೋಣ
ಕಾಡಿದ್ದರೆ ನಾಡು ಖಗಮೃಗಗಳ ಬೀಡು
ಗಿಡಮರ ಬೆಟ್ಟಗುಡ್ಡ ಝರಿಗಳ ತೋಡು
ಧುಮ್ಮಿಕ್ಕುವ ಬೆಳ್ನೊರೆಯ ಸಲಿಲ ಧಾರೆ
ಮೈಮನಕೆ ಆನಂದ ಆಹ್ಲಾದದ ನೀರೆ
ಸುತ್ತಮುತ್ತ ಕೊಳಚೆಯ ಹಾಕದಿರೋಣ
ದುರ್ವಾಸನೆಯ ಅನವರತ ಸೃಷ್ಟಿಸದಿರೋಣ
ತೆರೆದ ಚರಂಡಿಯ ಮುಚ್ಚಿಸೋಣ
ನೊಣ ಸೊಳ್ಳೆ ಜಿರಲೆಗಳುತ್ಪತ್ತಿ ತಡೆಯೋಣ
ಮಕ್ಕಳಿಗೆ ಪರಿಸರದ ಅರಿವು ಮೂಡಿಸೋಣ
ಕಿರುಚಿತ್ರ ಭಾಷಣ ಮಾಹಿತಿ ಹಮ್ಮಿಕೊಳ್ಳೋಣ
ಮನೆಗೊಂದು ಮರ ತಲೆಗೊಂದು ಗಿಡವಿರಲಿ
ಹೂಹಣ್ಣು ನೆರಳು ಗಾಳಿ ಸದಾ ಇರಲಿ
ಉಸಿರಿಗೆ ಉಸಿರ ಹಚ್ಚೋಣ
ಕೈಕೈ ಜೋಡಿಸಿ ಶ್ರಮಿಸೋಣ
ಮಾಲಿನ್ಯಗಳ ತಡೆಯಲು ಪ್ರಯತ್ನಿಸೋಣ
ಸುಂದರ ಸ್ವಚ್ಛ ಪರಿಸರ ನಿರ್ಮಿಸೋಣ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
