ಊಟದ ತಟ್ಟೆಯಲ್ಲಿ ರಾಸಾಯನಿಕ ರಾಕ್ಷಸ
‘ಸತ್ಯಮೇವ ಜಯತೆ’ ಮೇ ೨೦೧೨ರಿಂದ ಅಕ್ಟೋಬರ್ ೨೦೧೪ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ೨೫ ಎಪಿಸೋಡುಗಳ ಅತ್ಯಂತ ಜನಪ್ರಿಯವಾದ ಒಂದು ಟಾಕ್ ಶೋ ಆಗಿತ್ತು. ದೇಶವನ್ನು ಕಾಡುತ್ತಿರುವ ಹಲವಾರು ವಿಷಯಗಳ ಕುರಿತು ಈ ಸರಣಿಯು ಆಳವಾದ ಸಂಶೋಧನೆ ಸಾಕ್ಷ್ಯ ಮತ್ತು ಸಂಬಂಧಿತ ಜನರ ಭಾಗವಹಿಸುವಿಕೆಯನ್ನು ಒಳಗೊಂಡಿತ್ತು. ಈ ಸರಣಿಯ ಸೀಸನ್ ೧, ಎಪಿಸೋಡ್ ೮ರ ‘ವಿಷಯುಕ್ತ ಆಹಾರ’ ಎನ್ನುವ ಕಾರ್ಯಕ್ರಮವು ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕೀಟನಾಶಕಗಳು, ರೈತರು ಅವುಗಳನ್ನು ಬಳಸಲೇ ಬೇಕಾಗಿ ಬಂದ ಅನಿವಾರ್ಯತೆ, ಅವುಗಳಿಂದ ಆಗುವ ವಿನಾಶ, ಉತ್ಪಾದಕರ ದಬ್ಬಾಳಿಕೆ, ಸರಕಾರಗಳ ಉಪೇಕ್ಷೆ - ಇಂಥ ಎಲ್ಲ ಮಗ್ಗಲುಗಳನ್ನು ವಸ್ತುನಿಷ್ಟವಾಗಿ, ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.
ಸತ್ಯಜಿತ್ ಭಟ್ಕಳ್ ನಿರ್ದೇಶಿಸಿರುವ ಈ ಸರಣಿಯ ಪರಿಕಲ್ಪನೆ, ಸೃಷ್ಟಿ ಮತ್ತು ನಿರೂಪಣೆ ಸ್ವತಃ ಆಮೀರ್ ಖಾನ್ ವಹಿಸಿಕೊಂಡಿದ್ದಾರೆ. ಈ ಒಂದು ಎಪಿಸೋಡಿನಲ್ಲಿ ಚರ್ಚಿಸಲಾಗಿರುವ ಸಮಸ್ಯೆ ಒಂದಿಗೂ ಸಂಗತ ಮತ್ತು ಕೀಟನಾಶಕಗಳ ಅನಿಯಂತ್ರಿಕ ಬಳಕೆ ಮೊದಲಿಗಿಂತಲೂ ಹೆಚ್ಚು ಹಾನಿ ಮಾಡುತ್ತಿರುವುದರ ಹಿನ್ನಲೆಯಲ್ಲಿ ಈ ಎಪಿಸೋಡಿನ ವಸ್ತುವನ್ನು ಪುಸ್ತಕವನ್ನಾಗಿ ರೂಪಾಂತರಿಸಿ ಓದುಗರ ಕೈಗೆ ಒಪ್ಪಿಸಿದ್ದಾರೆ ಪ್ರೊ. ಎಂ ಅಬ್ದುಲ್ ರೆಹಮಾನ್ ಪಾಷ.
ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರರಾದ ನಾಗೇಶ್ ಹೆಗಡೆ. ಇವರು ತಮ್ಮ ಮುನ್ನುಡಿಯಲ್ಲಿ “ಕೃಷಿಯಲ್ಲೀಗ ಸಾವಯವ ಕೃಷಿ ಕಾಣೆಯಾಗಿ, ಕೀಟನಾಶಕಗಳನ್ನೇ ನೆಚ್ಚಿಕೊಂಡಿರುವ ಕೃಷಿಯೇ ಹೆಚ್ಚಾಗಿದೆ. ರೈತರ ಮತ್ತು ಶ್ರಮಿಕವರ್ಗದ ಸಂಪರ್ಕಕ್ಕೆ ಬರುವ ಇಂಥ ಅನೇಕ ಕೀಟನಾಶಕಗಳು ತೀರ ಅತ್ಯಲ್ಪ ಪ್ರಮಾಣದಲ್ಲಿ ಗಾಳಿ, ಧೂಳು, ನೀರು, ಆಹಾರ ಅಥವಾ ತ್ವಚೆಯ ಮೂಲಕ ಶರೀರಕ್ಕೆ ಸೇರಿದರೂ ಅದು ರಕ್ತಕ್ಕೆ ಸೇರಿ ಅಲ್ಲೇ ಸಂಚಯವಾಗಿ, ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತವೆ. ಈಗಂತೂ ರೈತಾಪಿ ಜನರಲ್ಲೂ ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಹೃದ್ರೋಗ, ಕ್ಯಾನ್ಸರ್, ಕಿಡ್ನಿ ಸಮಸ್ಯೆ ಇತ್ಯಾದಿ ಹೆಚ್ಚಿಸುತ್ತದೆ. ರೈತಮಿತ್ರ ಎನ್ನಿಸಿಕೊಂಡು ಬಳಕೆಗೆ ಬರುವ ಈ ಜೀವವಿರೋಧಿ ದ್ರವ್ಯಗಳಿಗೆ ಇನ್ನೊಂದು ದುರ್ಗುಣ ಇದೆ. ಅದೇನೆಂದರೆ, ವಿಷದ ವಾಸನೆಯನ್ನು ಪದೇ ಪದೇ ಹೀರುತ್ತಿದ್ದರೂ ಮನಸ್ಸು ಖಿನ್ನವಾಗುತ್ತದೆ. ಬೇಸರ, ನಿರುತ್ಸಾಹ, ಬದುಕಿನಲ್ಲಿ ನಿರಾಸಕ್ತಿ ಕೆಲವೊಮ್ಮೆ ಆತ್ಮಹತ್ಯೆಗೂ ಪ್ರೇರಣೆ ನೀಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಸೊಪ್ಪು, ತರಕಾರಿ, ಹಣ್ಣು ಕಾಯಿ, ಗೆಡ್ಡೆ ಗೆಣಸು ಮತ್ತು ಧಾನ್ಯಗಳಿಗೆ ಸೇರಿದ ಈ ವಿಷವನ್ನು ಅದೆಷ್ಟು ಅಪಾಯಕಾರಿ ಮಟ್ಟದಲ್ಲಿ ನಮ್ಮ ಊಟದ ತಟ್ಟೆಗೂ ಬರಬಹುದು ಎಂಬುದನ್ನು ಈ ಕೃತಿಯಲ್ಲಿ ಹೇಳಲಾಗಿದೆ. ಆಹಾರ ಸರಪಣಿಯ ಮೂಲಕ ನಮಗಷ್ಟೇ ಅಲ್ಲ, ಪಶುಪಕ್ಷಿ, ಜಲಚರಗಳ ಪ್ರಾಣಕ್ಕೂ ಅಪಾಯ ತರುತ್ತದೆ. ಕೇರಳದಲ್ಲಿ ಎಂಡೊಸಲ್ಫಾನ್ ಸಿಂಪಡನೆ ಮಾಡಿದ್ದರಿಂದ ಕಾಡಿನ ಓತಿಕ್ಯಾತ, ಜೇಡ, ಗುಳ್ಳೆ ನರಿ, ಕಲ್ಲಿಪೀರಗಳೂ ಕಣ್ಮರೆ ಆಗಿದ್ದರ ಬಗ್ಗೆ ವರದಿಗಳು ಬಂದಿದ್ದವು. ಗುಬ್ಬಚ್ಚಿ, ರಣಹದ್ದುಗಳೂ ನಿರ್ವಂಶ ಆಗಿದ್ದು ನಮಗೆ ಹೊತ್ತೇ ಇದೆ. ಇಡೀ ಜೀವಲೋಕಕ್ಕೆ ಹೀಗೆ ಅಪಾಯ ತರಬಲ್ಲ ಈ ವಿಷವಸ್ತುಗಳ ಬಳಕೆಯ ಬಗ್ಗೆ ರೈತರಷ್ಟೇ ಅಲ್ಲ, ನಾವೂ ಎಚ್ಚರಿಕೆ ವಹಿಸಬೇಕು” ಎಂದು ಎಚ್ಚರಿಕೆಯ ಮಾತನ್ನು ಆಡಿದ್ದಾರೆ.
ಈ ೬೮ ಪುಟಗಳ ಪುಟ್ಟ ಪುಸ್ರಕದಲ್ಲಿ ಹಲವು ಮಂದಿಯ ಪ್ರಶ್ನೆಗಳು, ಮಾಹಿತಿ, ಉತ್ತರಗಳು ಅಡಕವಾಗಿವೆ. ಪೂರಕ ಛಾಯಾ ಚಿತ್ರಗಳೂ ಇವೆ. ಪುಸ್ತಕದ ಅಲ್ಲಲ್ಲಿ ಬಾಕ್ಸ್ ಐಟಂ ಗಳನ್ನು ಬಹು ಮಾಹಿತಿ ಪೂರ್ಣ ವಿಷಯಗಳನ್ನು ನೀಡಲಾಗಿದೆ.