ಊಟದ ಬಳಿಕ ಬಡೆಸೋಂಪು ಸೇವಿಸಿ

ಊಟದ ಬಳಿಕ ಬಡೆಸೋಂಪು ಸೇವಿಸಿ

ನೋಡಲು ಜೀರಿಗೆಯನ್ನು ಹೋಲುವ ಸೋಂಪು ಅಥವಾ ಬಡೆಸೋಂಪು ಎನ್ನುವ ಈ ಪುಟ್ಟದಾದ ವಸ್ತು ಆರೋಗ್ಯಕ್ಕೆ ಬಹಳ ಉಪಕಾರಿ. ನೀವು ಹೋಟೇಲ್ ಗಳಿಗೆ ಊಟ-ಉಪಹಾರಕ್ಕೆ ಹೋದಾಗ ಕೊನೆಯಲ್ಲಿ ಬಿಲ್ ಕೊಡುವಾಗ ಅದರ ಜೊತೆ ಬಡೆಸೋಂಪು ಕೊಡುವ ಪದ್ಧತಿ ಇದೆ. ಕೆಲವೆಡೆ ಬಡೆಸೋಂಪನ್ನು ಹುರಿದು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ತಿನ್ನಲು ಇನ್ನಷ್ಟು ಚೆನ್ನಾಗಿರುವಂತೆ ನೋಡಿಕೊಳ್ಳುತ್ತಾರೆ. ಅದರ ಜೊತೆ ಹುರಿದ ಕೊತಂಬರಿ ಬೀಜ, ಸಕ್ಕರೆ ಮಿಠಾಯಿ, ಜೀರಿಗೆ ಪೆಪ್ಪರ್ ಮಿಂಟ್ ಸೇರಿಸುತ್ತಾರೆ. ಈ ಬಡೆಸೋಂಪು ಎನ್ನುವ ವಸ್ತು ಅಷ್ಟೊಂದು ಪ್ರಯೋಜನಕಾರಿಯೇ? ಬನ್ನಿ ನೋಡುವ…

ಊಟದ ಬಳಿಕ ಬಾಯಿಗೆ ಒಂದು ಟೀ ಚಮಚ ಬಡೆಸೋಂಪು ಹಾಕಿ ಚೆನ್ನಾಗಿ ಜಗಿಯುವುದರಿಂದ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ನಾವು ತಿಂದ ಆಹಾರವು ಲಾಲಾರಸದೊಂದಿಗೆ ಚೆನ್ನಾಗಿ ಬೆರೆತು ನಮ್ಮ ಜೀರ್ಣಕ್ರಿಯೆ ಸುಲಭವಾಗುತ್ತದೆ. ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದೊಂದು ಉತ್ತಮ ಮೌತ್ ಫ್ರೆಶ್ ನರ್. ನೈಸರ್ಗಿಕ ರೀತಿಯಲ್ಲಿ ಆರೋಗ್ಯಕ್ಕೆ ಹಾನಿಯಾಗದಂತೆ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ನಾವು ಬೀದಿಬದಿಯ ಫಾಸ್ಟ್ ಫುಡ್ ಅಥವಾ ಕರಿದ ಪದಾರ್ಥಗಳನ್ನು ಸೇವಿಸಿದಾಗ ನಮ್ಮ ದೇಹದಲ್ಲಿ ಅನೇಕ ಅನಾರೋಗ್ಯಕರ ಬದಲಾವಣೆಗಳಾಗುತ್ತವೆ. ಅಂತಹ ಸಮಯದಲ್ಲಿ ಈ ಪದಾರ್ಥಗಳ ಜೊತೆ ಬಡೆಸೋಂಪು ಸೇವಿಸಿದರೆ ಆಹಾರ ಚೆನ್ನಾಗಿ ಜೀರ್ಣವಾಗಿ ಅನಾರೋಗ್ಯದ ಲಕ್ಷಣ ದೂರವಾಗುತ್ತದೆ. 

ಬಡೆಸೋಂಪು ಜಗಿಯಲು ಇಷ್ಟಪಡದೇ ಇರುವವರು ಅದರ ನೀರು ಸೇವನೆ ಮಾಡುವುದು ಉತ್ತಮ. ಕೆಲವರಿಗೆ ಬಡೆಸೋಂಪು ಜಗಿಯುವಾಗ ಹಲ್ಲಿನ ಎಡೆಗಳಲ್ಲಿ ಸಿಲುಕಿಕೊಳ್ಳುತ್ತದೆ ಎಂಬ ತಕರಾರು ಇರುತ್ತದೆ. ಅಂತವರು ಒಂದು ಲೋಟೆ ನೀರಿಗೆ ೧ ಟೀ ಚಮಚ ಬಡೆಸೋಂಪು ಬೆರೆಸಿ ೧೦ ರಿಂದ ೧೫ ನಿಮಿಷಗಳ ನಂತರ ಕುಡಿಯಬೇಕು. ಅಜೀರ್ಣ ಮತ್ತು ಆಮ್ಲೀಯ (ಅಸಿಡಿಟಿ) ತೇಗು ಬರುವುದನ್ನು ಇದು ತಡೆಗಟ್ಟುತ್ತದೆ. ಊಟಕ್ಕಿಂತ ಅರ್ಧ ಗಂಟೆ ಮುಂಚೆ ಅಥವಾ ಊಟದ ಬಳಿಕ ಈ ನೀರನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. 

ಬಡೆಸೋಂಪನ್ನು ಬಳಸಿ ಸೊಗಸಾದ ಚಹಾ ಮಾಡಿಕುಡಿಯಬಹುದು. ಬಹಳಷ್ಟು ಮಂದಿಗೆ ಬೆಳಿಗ್ಗೆ ಮತ್ತು ಸಾಯಂಕಾಲ, ಊಟದ ನಂತರ ಚಹಾ ಕುಡಿಯುವ ಅಭ್ಯಾಸ ಇರುತ್ತದೆ. ಇಂಥವರು ಬಡೆಸೋಂಪಿನ ಚಹಾ ಮಾಡಿ ಕುಡಿಯುವುದು ಉತ್ತಮ. ಏಕೆಂದರೆ ಈ ಚಹಾದಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ೨ ಲೋಟ ನೀರಿಗೆ ೧ ಟೀ ಚಮಚ ಸೋಂಪು ಸೇರಿಸಿ ಚೆನ್ನಾಗಿ ಕುದಿಸಬೇಕು. ಇದಕ್ಕೆ ಶುಂಠಿ ಸೇರಿಸಿ. ಇದನ್ನು ಸೋಸಿಕೊಂಡು ಬೇಕಿದ್ದಲ್ಲಿ ಜೇನು ತುಪ್ಪ ಸೇರಿಸಿ ಮಲಗುವ ಮೊದಲು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಉತ್ತಮ. ಇದು ಜೀರ್ಣಕ್ರಿಯೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಉತ್ತಮ ನಿದ್ರೆ ದೊರಕುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. 

ಈಗಿನ ಕಾಲದಲ್ಲಿ ಬಹಳಷ್ಟು ಮಂದಿ ಗಂಭೀರವಾದ ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ಜೇನುತುಪ್ಪದ ಜೊತೆ ಬಡೆಸೋಂಪು ಸೇವಿಸುವುದು ಉತ್ತಮ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಸಣಗಳನ್ನು ಹೊಂದಿದೆ. ಇದನ್ನು ಬಡೆಸೋಂಪಿನ ಜೊತೆ ಬೆರೆಸಿದಾಗ ಅದರ ಪ್ರಯೋಜನಗಳು ದುಪ್ಪಟ್ಟಾಗುತ್ತವೆ. ಮೊದಲಿಗೆ ಒಂದು ಟೀ ಚಮಚ ಬಡೆಸೋಂಪನ್ನು ಚೆನ್ನಾಗಿ ಹುಡಿ ಮಾಡಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಊಟದ ನಂತರ ಈ ಮಿಶ್ರಣದ ಸೇವನೆಯಿಂದ ನಿಮ್ಮ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.

(ಆಧಾರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ