ಊಟದ ವಹಿವಾಟಿಗೆ ವ್ಯಾಪಕ ಅವಕಾಶ

Submitted by addoor on Mon, 02/06/2017 - 08:20

ಸಾಯಿ ಗುಂಡೇವಾರ್ ಭಾರತಕ್ಕೆ ಬಂದದ್ದು ಚಲನಚಿತ್ರ ನಟನಾಗಲಿಕ್ಕಾಗಿ. ಆದರೆ, ಮಕ್ಸೂದ್ ಪಟೇಲ್ ಜೊತೆ ಸೇರಿ ೨೦೧೧ರಲ್ಲಿ ಅವರು ಆರಂಭಿಸಿದ್ದು “ಫೂಡಿಜಂ” ಎಂಬ ಆಹಾರ ಮಳಿಗೆಯನ್ನು.
ಇದೆಲ್ಲ ಹೇಗಾಯಿತು? ಅವರ ಮಾತುಗಳಲ್ಲೇ ಕೇಳಿ. “ನಾನು ಹಲವಾರು ವರುಷ ಆಸ್ಟ್ರೇಲಿಯಾದಲ್ಲಿದ್ದೆ. ಭಾರತಕ್ಕೆ ವಾಪಾಸು ಬಂದ ನಂತರ, ಸಿನೆಮಾಗಳಲ್ಲಿ ನಟಿಸುವಾಗ ನಾನು ಗಮನಿಸಿದ್ದು – ಸಿನೆಮಾ ಸೆಟ್ಟುಗಳಲ್ಲಿ ನಮಗೆ ಕೊಡುವ ಊಟ ಬಹಳ ಕೆಟ್ಟದಾಗಿದೆ ಎಂಬುದನ್ನು. ಒಬ್ಬ ನಟನಾದ ನನಗೆ ಗೊತ್ತಿದೆ – ಸರಿಯಾದ ಆಹಾರ ತಿನ್ನುವುದು ಎಷ್ಟು ಅಗತ್ಯ ಅನ್ನೋದು. ಅದಕ್ಕಾಗಿ, ನಾನೇ ಒಳ್ಳೆಯ ಆಹಾರ ಸರಬರಾಜು ಮಾಡಲು ಶುರು ಮಾಡಿದೆ – ಅದೇ ಫುಡಿಜಂ.” ತಾಜಾ ಮತ್ತು ಆರೋಗ್ಯಕರ ಊಟ ಒದಗಿಸುತ್ತೇವೆ ಎಂಬುದು ಈ ಕಂಪೆನಿಯ ಘೋಷಣೆ. ಮುಖ್ಯವಾಗಿ, ತಾವು ಮಾರಾಟ ಮಾಡುವ ಊಟದ ಕ್ಯಾಲೊರಿ ಪ್ರಮಾಣವನ್ನು ಗ್ರಾಹಕರಿಗೆ ಸೂಕ್ತವಾಗಿಸಲು ಕಾಳಜಿ ವಹಿಸುತ್ತದೆ.
ಹೆಸರುವಾಸಿ ಕಂಪೆನಿಗಳ ಅಧಿಕಾರಿಗಳಿಗೆ ಮತ್ತು ಮುಂಬೈಯ ಬಾಲಿವುಡ್ ನಟರಿಗೆ ಫುಡಿಜಂ ಆಹಾರ ಸರಬರಾಜು ಮಾಡುತ್ತಿದೆ. ಇದರದು ನಾಲ್ಕು ವಿಧದ ಮಾರಾಟ ಯೋಜನೆ: ಕನಿಷ್ಠ ಪ್ಯಾಕೇಜಿನಲ್ಲಿ ಒಂದು ವಾರಕ್ಕೆ ೫ ಊಟ ಸರಬರಾಜು ಹಾಗೂ ಗರಿಷ್ಠ ಪ್ಯಾಕೇಜಿನಲ್ಲಿ ೨೨ ದಿನಗಳಿಗೆ ೨೦ ಊಟ ಸರಬರಾಜು. ಊಟದ ತೂಕ ಮತ್ತು ವರ್ಗ ಆಧರಿಸಿ, ಊಟದ ಬೆಲೆ ರೂ.೯೯ರಿಂದ ರೂ.೨೭೫. ಭಾರತೀಯ ಊಟ ಮತ್ತು ಅಂತರಾಷ್ಟ್ರೀಯ ಊಟ ಲಭ್ಯ –ಇವೆರಡರಲ್ಲೂ ಮಧ್ಯಮ ಮತ್ತು ದೊಡ್ಡ ಪ್ರಮಾಣದ ಆಹಾರದ ಆಯ್ಕೆ ಇದೆ. ದೊಡ್ಡ ಪ್ರಮಾಣದ ಊಟ ೬೦೦ – ೬೫೦ ಕಿಲೋ ಕ್ಯಾಲೊರಿ (ಕೆಕಾಲ್) ಒದಗಿಸಿದರೆ, ಸಣ್ಣ ಪ್ರಮಾಣದ ಊಟ ೩೫೦ – ೪೦೦ ಕೆಕಾಲ್ ಒದಗಿಸುತ್ತದೆ. ೬೦ ಕಿಗ್ರಾ ತೂಕದ ಭಾರತೀಯ ಗಂಡಸಿಗೆ (ದೈಹಿಕ ಚಟುವಟಿಕೆ ಇಲ್ಲದಿದ್ದರೆ) ದಿನಕ್ಕೆ ೨,೩೨೦ ಕೆಕಾಲ್ ಆಹಾರ ಬೇಕು. ಅದೇ ೫೫ ಕಿಗ್ರಾ ತೂಕದ ಭಾರತೀಯ ಹೆಂಗಸಿಗೆ ದಿನಕ್ಕೆ ೧,೯೦೦ ಕೆಕಾಲ್ ಆಹಾರ ಸಾಕು.
ಊಟದ ಸರಬರಾಜಿನಲ್ಲಿ ತೊಡಗಿರುವ ಇನ್ನೊಂದು ಕಂಪೆನಿ ಬೆಂಗಳೂರಿನ “ತಂಡುರಸ್ಟ್” (ಅಂದರೆ, ಹಿಂದಿ ಭಾಷೆಯಲ್ಲಿ ಆರೋಗ್ಯದಾಯಕ ಎಂದರ್ಥ). ಇದು ಇಬ್ಬರು ಯುವಕರು – ಸುಧಾಂಶು ಶರ್ಮ ಮತ್ತು ಪುಷ್ಪೇಶ್ ದತ್ತ – ಆರಂಭಿಸಿದ ಕಂಪೆನಿ. ಇವರಿಬ್ಬರೂ, ತಮ್ಮ ಮನೆಯಿಂದ ಬಹುದೂರದಲ್ಲಿ ವಾಸ ಮಾಡುತ್ತಾ, ಬೇರೆ ಕಂಪೆನಿಗಾಗಿ ದುಡಿಯುತ್ತಾ, ಒಳ್ಳೆಯ ಊಟಕ್ಕಾಗಿ ಆಶೆ ಪಟ್ಟವರು. ಅವರಿಗೆ ಅಂತಹ ಊಟಗಳನ್ನು ತಾವೇ ಸರಬರಾಜು ಮಾಡಬಹುದು ಅನಿಸಿತು. “ನಾವಿಬ್ಬರೂ ಆರೋಗ್ಯದ ಜೀವನಕ್ಕಾಗಿ ಹಾತೊರೆಯುವವರು. ನಾವು ಬೆಂಗಳೂರಿಗೆ ಬಂದಾಗ, ನಮ್ಮ ಆರೋಗ್ಯ ರಕ್ಷಣೆಗಾಗಿ ಪುಷ್ಟಿದಾಯಕ ಆಹಾರ ತಯಾರಿಸಿ ಕೊಳ್ಳುತ್ತಿದ್ದೆವು. ಅದಕ್ಕಾಗಿ ಪೋಷಕಾಂಶಗಳ ಬಗ್ಗೆ ಬಹಳಷ್ಟು ಓದಿಕೊಂಡೆವು. ನಮ್ಮ ದಿನನಿತ್ಯದ ಊಟದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಆರೋಗ್ಯಪೂರ್ಣ ಜೀವನದ ಗುರಿ ಸಾಧಿಸಬಹುದೆಂದು ತಿಳಿದುಕೊಂಡೆವು” ಎನ್ನುತ್ತಾರೆ ಸುಧಾಂಶು ಶರ್ಮ. ಗಜಿಯಾಬಾದಿನ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ ಟೆಕ್ನಾಲಜಿಯ ಪದವೀಧರರಾದ ಇವರಿಬ್ಬರೂ, ೨೦೧೪ರ ಆರಂಭದಲ್ಲಿ ತಮ್ಮ ೨೫ ಗೆಳೆಯರಿಗೆ ಊಟ ಒದಗಿಸಲು ಶುರುವಿಟ್ಟರು.
“ಬಹಳ ಕಡಿಮೆ ಎಣ್ಣೆ ಬಳಸಿ, ಯಾವುದೇ ಸಂಸ್ಕರಿತ ಆಹಾರಾಂಶ ಸೇರಿಸದೆ ನಮ್ಮ ಮಾರಾಟದ ಊಟ ತಯಾರಿಸಲು ಆರಂಭಿಸಿದೆವು. ನಮ್ಮ ಈ ಊಟದಲ್ಲಿ ಪೋಷಕಾಂಶಭರಿತ ಅಗಸೆ ಬೀಜ ಮತ್ತು ಆಲಿವ್ ಎಣ್ಣೆ ಸೇರಿದೆ” ಎನ್ನುತ್ತಾರೆ ಶರ್ಮ. ಅನಂತರ, ಬೇಡಿಕೆ ಹೆಚ್ಚಿದಂತೆ, ತಮ್ಮ ಉದ್ಯೋಗಕ್ಕೆ ರಾಜೀನಾಮೆಯಿತ್ತು, ಡಿಸೆಂಬರ್ ೨೦೧೪ರಲ್ಲಿ ತಂಡುರಸ್ಟ್ ಆರಂಭಿಸಿದರು. ಇವರು ಹೂಡಿದ ಭಂಡವಾಳ ರೂ.೧೨ ಲಕ್ಷ. ಇವರ ಲಾಭ ಪ್ರಮಾಣ ಶೇ.೨೫ – ೨೮ರಷ್ಟಿದೆ. ಇದಕ್ಕೆ ಮುಖ್ಯ ಕಾರಣ ಅತ್ಯುತ್ತಮ ಸರಬರಾಜು ವ್ಯವಸ್ಥೆ ಎನ್ನುತ್ತಾರೆ ಶರ್ಮ. ಜೊತೆಗೆ, ಓಟ್ಸ್ ಉಪ್ಪಿಟ್ಟು, ಬಹುಧಾನ್ಯದ ಪೋಹಾ, ಗೋಧಿಯ ಪಾಸ್ಟಾ ಮತ್ತು ಅಗಸೆ ರಾಯಿತ ಇಂತಹ ಐಟಂಗಳಿರುವ ರುಚಿಕರ ಊಟ. ಇವರ ಊಟದ ದರ ರೂ.೬೦ರಿಂದ ರೂ.೧೪೦. “ಬೆಂಗಳೂರಿನಲ್ಲಿ ಪೋಷಕಾಂಶ ತುಂಬಿದ ಆಹಾರಕ್ಕೆ ಭಾರೀ ಬೇಡಿಕೆಯಿದೆ. ನಾವು ದಿನಕ್ಕೆ ೧೫೦ – ೨೦೦ ಊಟ ಸರಬರಾಜು ಮಾಡುತ್ತಿದ್ದೇವೆ” ಎಂಬುದು ಶರ್ಮ ನೀಡುವ ಮಾಹಿತಿ.
ಉತ್ತರ ಭಾರತದಲ್ಲಿ ದೆಹಲಿ ಹತ್ತಿರದ ಗುರುಗ್ರಾಮದಲ್ಲಿ “ಕ್ಯಾಲೊರಿಸ್ಮಾರ್ಟ್” ಎಂಬ ಕಂಪೆನಿ ಇದೇ ಆಹಾರದ ವಹಿವಾಟಿನಲ್ಲಿ ಯಶಸ್ಸು ಕಂಡಿದೆ. ಅದರ ನಿರ್ದೇಶಕ ಅಶಿಮಾ ಮಾನೆಕ್, ಐದು ವರುಷಗಳ ಮುಂಚೆ ಅಲ್ಲಿ ಉತ್ತಮ ಆಹಾರ ಪೂರೈಕೆಗೆ ಒಂದೇ ಕಂಪೆನಿಯಿತ್ತು ಎಂದು ನೆನಪು ಮಾಡಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರು ಐವರು ಆಸಕ್ತರು ಸೇರಿಕೊಂಡು ಬಂಧುವೊಬ್ಬರ ಮನೆಯ ನೆಲಮಾಳಿಗೆಯಲ್ಲಿ ಕ್ಯಾಲೊರಿಸ್ಮಾರ್ಟ್ ಶುರು ಮಾಡಿದರು. ಈಗ ಅವರು ಸರಬರಾಜು ಮಾಡುವ ಊಟಗಳ ಸಂಖ್ಯೆ ದಿನಕ್ಕೆ ೭೫೦. ಅವರ ೫೦೦ ಕೆಕಾಲ್ ಪ್ರೀಮಿಯಂ ಊಟದ ಬೆಲೆ ರೂ.೧೩೯ (ಸಸ್ಯಾಹಾರ) ಮತ್ತು ರೂ.೧೬೯ (ಮಾಂಸಾಹಾರ). ೩೦೦ ಕೆಕಾಲ್ ಬಾಕ್ಸ್ ಊಟದ ಬೆಲೆ ರೂ.೩೦೦ – ೩೫೦. ಪ್ರತಿ ದಿನವೂ ಊಟದ ಐಟಂಗಳಲ್ಲಿ ಬದಲಾವಣೆ ಅವರ ವಿಶೇಷ. “ಆರೋಗ್ಯದಾಯಕ ಆಹಾರದ ಬಗ್ಗೆ ತಿಳಿದವರು ನಮ್ಮ ಊಟ ಇಷ್ಟ ಪಡುತ್ತಾರೆ. ಇದಕ್ಕೆ ಪುರಾವೆ, ಯಾವುದೇ ಜಾಹೀರಾತಿಲ್ಲದೆ ನಮ್ಮ ವಹಿವಾಟು ಈ ಮಟ್ಟಕ್ಕೆ ಬೆಳೆದಿರುವುದು” ಎನ್ನುತ್ತಾರೆ ಮಾನೆಕ್.
ಭಾರತದಲ್ಲಿ ಆರೋಗ್ಯದಾಯಕ ಆಹಾರದ ವಾರ್ಷಿಕ ಮಾರುಕಟ್ಟೆ ಮೌಲ್ಯ ರೂ.೩೩,೦೦೦ ಕೋಟಿ (ನ್ಯೂಯಾರ್ಕಿನ ಮಾಹಿತಿ ಕಂಪೆನಿ “ನೀಲ್ ಸೆನ್” ಅಂದಾಜಿನ ಪ್ರಕಾರ). ಮಹಾನಗರಗಳು ಹಾಗೂ ಉಪನಗರಗಳಲ್ಲಿ ಆರೋಗ್ಯದಾಯಕ ಆಹಾರ ಸರಬರಾಜು ಮಾಡುವ ಇಂತಹ ಕಿರು ಉದ್ದಿಮೆಗಳಿಗೆ ಅವಕಾಶದ ಬಾಗಿಲು ತೆರೆದಿದೆ.