ಊರಲೆದ ಮೊಲ

ಊರಲೆದ ಮೊಲ

ಬರಹ

-೧-
ಮುಗಿಲೆತ್ತರ ನಿಂತು ನಗುವ ಜಾದುಗಾರನೆದುರು
ಕಪ್ಪು ಮೇಜು ಕಪ್ಪು ಹೊದಿಕೆ ನಟ್ಟ ನಡುವೆ ಹೊಳೆವ ಕಪ್ಪು ನೀಳ ಹ್ಯಾಟು.
ಹ್ಯಾಟಿನೊಳಗೆ ಇಳಿವ ಅವನ ಕೈಗೆ
ಕಿವಿಯ ಕೊಡಲು ಕಾದು ಕೂತ ಬೆಳ್ಳಿತೊಗಲ ಮುದ್ದು ಮೊಲ.
ಹ್ಯಾಟಿನಾಚೆ ಎತ್ತಿದೊಡನೆ
ಕೂಗಲೆಂದೆ ಕಾದು ಕೂತ ಪುಟ್ಟ ಪುಟ್ಟ ದನಿಗಳು,
ತೂಗಲೆಂದೆ ಕಾದು ಕೂತ ನೆರೆತ ಹಿರಿಯ ತಲೆಗಳು;
ಹ್ಯಾಟು ಮೊಲದ ಟ್ರಿಕ್ಕಿಗಾಗಿ ಸ್ಥಬ್ಧ ಮೌನ ಸುತ್ತಲು.
ಅಷ್ಟರಲ್ಲಿ ಧಡೀರನೆ-
ಹ್ಯಾಟು ಬಾಯಿಯಿಂದ ಬಿದ್ದ ಮುಗಿಲ ಬೆಳ್ಳಿ ಬೆಳಕು,
ಮುದ್ದು ಮೊಲದ ಎದೆಯ ಲೋಕದಾಸೆ ಮಣಿಗೆ ಹೊಳೆದು,
ಹ್ಯಾಟಿನಂತರಾಳವೆಲ್ಲ ಹಾಲಿನಂಥ ಬೆಳಕು;
ಸೆಟೆದು ಬಾಲ, ನಿಮಿರಿ ಕಿವಿಯು, ಲಾಗ ಹಾಕಿ ಮನಸು;
ಒಂದೆ ಜಿಗಿತ ಹ್ಯಾಟಿನಾಚೆ, ಜಾದುಗಾರ ಜಾಲದಾಚೆ, ಜನದ ನೆಟ್ಟ ನೋಟದಾಚೆ,
ಚಿಪುಕು, ಚಿಪುಕು, ಚಿಪುಕು, ಚಿಪುಕು.

-೨-
ಸುತ್ತಿದವ ನೆಲವ ಬಲ್ಲ,
ಮೆದ್ದಷ್ಟೂ ಹುಲ್ಲು ಬೆಲ್ಲ, ಯಾರಿಗುಂಟು ಯಾರಿಗಿಲ್ಲ!?
ಬಿಳಿಯ ಕನಸು ಮೈಗೆ ಹತ್ತಿ, ಬಿಂಬಲೋಕ ನಿಜದಿ ಕರಗಿ,
ಮೊಲದ ಹಿಗ್ಗು ಬುಗ್ಗೆಯಾಗಿ, ಗೆದ್ದ ಭಾವ ಎದೆಯ ತುಂಬಿ
ಕನ್ನಡಿಗಳ ಲೋಕದಲ್ಲಿ ನಿಜವು ನಕಲು ಭೇದವೆಲ್ಲಿ?
ಬಿಂಬದಲ್ಲಿ ಬಿಂಬವಾಗಿ ಹುಬ್ಬ ಹೆಕ್ಕಿ ಬಾಗಿ ತೀಡು;
ಮೀಸೆ, ಕಿವಿ, ಮೈ ಬಾಲ, ಸವರಿ ಬಿಳಿಯ ಕಾಪಾಡು.
ಕನಸೆ ನಿಜ, ನಿಜವು ಸುಳ್ಳು, ಸುಳ್ಳಿನಲ್ಲೆ ಚೆಂದ ಹಾಡು;
ಹಾಡು ಹಾಡು, ಕುಣೀ ಕುಣೀ, ಬೇಗ ಕಲಿ
ಗೋಲವಲ್ಲ ಭೂಮಿ ಮಟ್ಟ ನವ್ಯ ಪಾಠ ಉರು ಹೊಡಿ.

ಹುಂಬ-ಬಿಂಬ ಲೋಕದಲ್ಲೇ ಮುಳುಗಿ ಯಾಕೊ
ಕನ್ನಡಿಗಳ ಹಿಂದೆ ಉರಿವ ನಿಜವು ಮೊಲಕೆ ಮರತೆ ಹೋಯಿತು.
ನಗುತ ನಗುತ ಬೆನ್ನು ಸವರಿ ಹಿಡಿವ ಹುಂಬ ಜಾಲದೊಳಗೆ
ಬಿದ್ದು ಮೊಲದ ಎದೆಯ ಬೆಳಕು ಕರಗ ಹತ್ತಿತು.
ಅದನು ಬಿಟ್ಟೆ, ಇದನು ಹಿಡಿಯೆ,
ಕಾಲು ಅಲ್ಲಿ, ಇಲ್ಲಿ ಹೆಜ್ಜೆ-
ಗುರುತು ಮಾಸಿ ನೋವ ನೆರಳು ಕಣ್ಣ ಕೊಳದಲೂ.
ಕನ್ನಡಿಗಳ ಹಿಂದಿನಿಂದ ಕದ್ದು ಬರುವ ಕೈಗಳಿಂದ
ಪಾರಾಗುವ ದಾರಿ ಎಲ್ಲಿ, ಎದೆಯ ಬಿಗಿದು ಹುಡುಕು ಬೇಗ!
ಚಂಗನೆ ಜಿಗಿದೋಡಿ ಓಡಿ, ದಾರಿ ದಿಕ್ಕು ಎರಡು ತಪ್ಪಿ,
ಹೊರಟಲ್ಲಿಗೆ ಮತ್ತೆ ಬಂದು ಬಿದ್ದು ಬಿಟ್ಟೆಯ?
ಹಿಂದೆ ತಿರುಗಿ ನೋಡು, ನೋಡು!
ಕನ್ನಡಿಗಳ ಬಿರುಕಿನಲ್ಲಿ ಒಡೆದ ಮುಖ ಛಿದ್ರ ಬಿಂಬ.
ಬಿಂಬ ಇರಲಿ, ಬಿರುಕ ನೋಡು,
ಬಿರುಕೆ ಇನ್ನು ದಾರಿಗಂಬ; ದಾರಿ ತಪ್ಪಿದವರಿಗೆಲ್ಲ...

-೩-
ಬಿಟ್ಟು ಹೋದ ಮೇಜಿಗೀಗ ಸಾಕು ಮೂರೆ ಕಾಲು;
ಹ್ಯಾಟಿನಿಂದ ಮೊಲವನೆಳೆವ ಟ್ರಿಕ್ಕು ಕೂಡ ಹಳತು.
ಕೂಗುತಾನೆ ಜಾದುಗಾರ; ಆದರಲ್ಲಿ ಜಾದುವಿಲ್ಲ;
ಮಂಗಮಾಯ ಇಂದ್ರಜಾಲ ಮಾಯೆಯೆಲ್ಲ.
ಕಾಲ ನೆಕ್ಕಿ ನಿಂತ ಮೊಲವ ದೂರಕೊದೆದು ಜಾದುಗಾರ
ನಡೆದುಬಿಟ್ಟ, ನೋಟದಲ್ಲಿ ಇದ್ದ ಮೋಹ ಎಲ್ಲಿ ಈಗ?
ಹರಿದು ನವೆದು ತೂತುಬಿದ್ದ ತಳವಿಲ್ಲದ ಹ್ಯಾಟ ಮುಂದೆ
ಒಂಟಿ ಮೊಲ;ಯಾಕೊ ಏನೊ ಕಣ್ಣು ತೇವ;
ಪರಿಚಯದನುಕೂಲ ಮೋಹ, ಮರೆತ ಊರ ನೆನಪಿನಂಟು ಮೈಗೆ ಮಾತ್ರ?
ಹ್ಯಾಟು ಹಳತು ಆದರೇನು ಒರಗು ಅಲ್ಲೆ ಮೈಗೆ ಹಿತ,
ವೇದ ಗೀತೆ ಶ್ರವಣ ಧ್ಯಾನ ಪಾರಮಾರ್ಥ;
ಯಾಕೆ ಬೇಕು ಜೀವ ಹಿಡಿವ ಗೋಜೆ ವ್ಯರ್ಥ;
ಬೆಳಕು ಆರಿ ಕಣ್ಣ ಪೂರ ನೋವ ನೆರಳು;
ಹಸಿದ ಹೊಟ್ಟೆ, ಬಿಟ್ಟ ಕಣ್ಣು, ಕಟ್ಟಿದುಸಿರು;
ಉದುರಿ ರೋಮ, ಮುರುಟಿ ಚರ್ಮ, ಇಣುಕಿ ಮೂಳೆ-,
ಕಪ್ಪುಹ್ಯಾಟಿನೆದುರು ಬಿಳಿಯ ಚೀಲವಷ್ಟೆ ಉಳಿಯಿತು...