ಊರಿನ ಜನರ ಸುಂದರ ಹಬ್ಬಕ್ಕಾಗಿ ತಮ್ಮ ಸುಖವ ಮರೆತ ನಮ್ಮೊಳಗಿನ ಎಲೆ ಮರೆ ಹೀರೋಗಳು
ಈ ವರ್ಷದ ದೀಪಾವಳಿ ಬಹುತೇಕ ಜನರಿಗೆ ತುಂಬಾ ವಿಶೇಷವಾಗಿದೆ, ಯಾಕಂದರೆ ನಾಲ್ಕು ದಿನಗಳ ದೀರ್ಘ ರಜೆ ಸಿಕ್ಕಿದೆ, ಜೊತೆಗೆ ವಾರಂತ್ಯ ಕೂಡ. ಇದೇ ಕಾರಣಕ್ಕಾಗಿ ಅನೇಕ ಜನರು ಇದಾಗಲೇ ದೂರದ ಊರುಗಳಿಗೆ ರೈಲು ಮತ್ತು ಬಸ್ಸು ಟಿಕೆಟ್ ಕೂಡ ಕಾಯ್ದಿರಿಸಿದ್ದಾರೆ. ಇನ್ನೂ ಅನೇಕರು ಟಿಕೆಟ್ಗಳಿಗಾಗಿ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ತೆರಲು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರಮುಖ ಹಬ್ಬ ಒಂದು ಕಡೆಯಾದರೆ, ಖಾಸಗಿ ವಲಯದ ಕೆಲಸದ ಗುದ್ದಾಟದಲ್ಲಿ ತಮ್ಮನ್ನು ತಾವೇ ಮರೆತ ಮಂದಿಗೆ ತಮ್ಮವರ ಜೊತೆ ನಾಲ್ಕಾರು ದಿನ ಕಳೆಯಬಹುದು. ಇನ್ನೊಂದು ಪಂಗಡದ ಜನಕ್ಕೆ ರಜಾ ಬಂದರೆ ಸಾಕು ದೂರದ ಪ್ರವಾಸಿ ತಾಣಗಳಿಗೆ ಸುತ್ತಲು ಸಿದ್ಧರಾಗುತ್ತಾರೆ, ಪಕ್ಕದ ಗೋವಾ, ತಂಪಾದ ಊಟಿ, ದೇವರ ನಾಡು ಕೇರಳದ ರಮಣೀಯ ದೃಶ್ಯಗಳನ್ನು ತಮ್ಮ ಜೀವನ ಸವಿನಯ ನೆನಪುಗಳ ಪುಟಗಳಲ್ಲಿ ಬರೆಯಲು ಹೊರಡುತ್ತಾರೆ. ಇನ್ನೂ ಕೆಲವರು ಸಿಕ್ಕದ ಅಷ್ಟು ರಜಾದಿನಗಳನ್ನು ಮನೆಯಲ್ಲೇ ಕಳೆಯುವ ಇನ್ನೊಂದು ವರ್ಗದ ಜನ, ಇವರಿಗೆ ಇತ್ತ ಸುತ್ತುವ ಆಸೆ ಇಲ್ಲ, ಅತ್ತ ಊರಿಗೆ ಹೋಗಲು ಇಷ್ಟವಿಲ್ಲ.
ಆದರೆ ಇವರನೆಲ್ಲಾ ಮೀರಿದ ಇನ್ನೊಂದು ವರ್ಗದ ಜನರು ನಮ್ಮ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ, ಇವರಿಗೆ ಹಬ್ಬ ಹರಿದಿನಗಳ, ವಾರಾಂತ್ಯ, ವಾರ್ಷಿಕ ರಜೆ ಅನ್ನೋ ಪದಗಳ ಅರ್ಥವೇ ಗೊತ್ತಿಲ್ಲ, ಗೊತ್ತಿದ್ದರೂ ಅದನ್ನು ಅನುಭವಿಸುವ ಅವಕಾಶ ಕೂಡ ಇಲ್ಲ. ಇವರದು ಈ ಕಥೆಯಾದರೆ ಇನ್ನು ಇವರನ್ನು ನಂಬಿ ಬದುಕುವ ಮನೆಯವರ ಕಥೆ ಹೇಳಲಾರದ ಕಣ್ಣೀರ ಕಥೆಯಾಗುತ್ತದೆ.
ಎರಡೋ ಮೂರು ಪಟ್ಟು ಹಣ ಕೊಟ್ಟು ದೂರದ ಊರಗಳಿಗೆ ಹೋಗಲು ನಾವುಗಳು ಪ್ರತಿಸಲ ತುದಿಗಾಲಲ್ಲಿ ನಿಲ್ಲುತ್ತೇವೆ, ಆದರೆ ಯಾವುತ್ತು ಕೂಡ ನಮ್ಮನ್ನು ಊರಿಂದ ಊರಿಗೆ ಸಾಗಿಸುವ ಬಸ್ಸುಗಳ ಚಾಲಕ, ನಿರ್ವಾಹಕ, ಕ್ಲೀನರ್, ರೈಲು ಚಾಲಕ ಅಥವಾ ವಿಮಾನ ಚಾಲಕನ ಬಗ್ಗೆ ಯೋಚಿಸುವುದಿಲ್ಲ. ಯಾಕಂದರೆ ಅದು ಅವರ ವೃತ್ತಿ ಬದುಕು ಅನ್ನೋದು ನಮ್ಮೆಲ್ಲರ ಯೋಚನೆ ಆದರೆ ಅವರ ಕಷ್ಟಗಳನ್ನು ಅರಿಯುವ ಪ್ರಯತ್ನ ಕೂಡ ಮಾಡುವುದಿಲ್ಲ. ಇಡೀ ದೇಶಕ್ಕೆ ದೇಶವೇ ತಮ್ಮ ಕುಟುಂಬದ ಜೊತೆ ಸಂತೋಷವಾಗಿ ಹಬ್ಬ ಆಚರಿಸಿದರೆ ಇವರಿಗೆ ಮಾತ್ರ ನಿದ್ದೆ ಇಲ್ಲದ ರಾತ್ರಿಗಳ ತಪ್ಪಿದಲ್ಲ. ಇವರ ಮನೆಯವರ ಸ್ಥಿತಿ ಕೂಡ ಹೆಚ್ಚು ಕಡಿಮೆ ಹೀಗೆ ಇರುತ್ತದೆ, ಮನೆಯಿಂದ ಹೊರಟ ಮನೆ ಯಜಮಾನ ಮನೆಗೆ ಬರುವ ತನಕ ಖುಷಿಯಾಗಿ ಹಬ್ಬ ಮಾಡಲು ಸಾಧ್ಯವೇ?
ಹಾಗೋ ಹೀಗೋ ಕಷ್ಟ ಪಟ್ಟು ಟಿಕೇಟ್ ತೆಗೆದು ಬಸ್ಸು ಹತ್ತಿದಾಗ ಅಥವಾ ಯಾವುದೋ ಕಾರನಲ್ಲಿ ರಜಾ ಅಂತಾ ಊರಿಗೆ ಹೊರಟಾಗ ಬೆಂಗಳೂರಿನಂತಹ ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಕಳ್ಳ ಕಾಕರ ಕಾಟ ಮಾತ್ರ ತಪ್ಪಿದ್ದಲ್ಲ. ಆಗ ನೆನಪಾಗುವ ಪೋಲೀಸರ ಸಮಸ್ಯೆಗಳು ಮಾತ್ರ ನಮಗೆ ಈ ಟ್ರಾಫಿಕ್ ಸಮಸ್ಯೆಗಳ ಮುಂದೆ ನಗಣ್ಯವಾಗುತ್ತವೆ. ಅವರ ಬಗ್ಗೆ ಯೋಚಿಸುವುದು ಬಿಡಿ, ಇಂತಹ ಹಬ್ಬದ ದಿನಗಳಲ್ಲಿ ಕೂಡ ಹಗಲುರಾತ್ರಿ, ಮಳೆಗಾಳಿಯ ಬಗ್ಗೆ ಯೋಚನೆ ಮಾಡದೆ ಕಲುಷಿತಗೊಂಡ ಈ ಮಹಾನಗರಗಳಲ್ಲಿ ನಮಗಾಗಿ ತಮ್ಮ ಮತ್ತು ಹಾಗೂ ಅವರ ಮನೆಯವರ ಸಂತೋಷದ ಕ್ಷಣಗಳನ್ನು ತ್ಯಾಗ ಮಾಡುವ ಈ ಶ್ರಮಿಕಜೀವಿಗಳ ಜೀವನದ ಬಗ್ಗೆ ಒಂದು ಕ್ಷಣ ಕೂಡ ಯೋಚಿಸದ ಮೂರ್ಖರು ನಾವು.
ಭಾರತದಲ್ಲಿ ಹಬ್ಬ ಇರಲಿ, ರಜಾ ಇರಲಿ, ರಾಷ್ಟ್ರೀಯ ಆಚರಣೆಗಳಿರಲಿ, ಬಂದ್ ಪ್ರತಿಭಟನೆಗಳಾಗಲಿ, ಇವಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಅಂತಾ ಬೇರೆ ಇನ್ಯಾವದೋ ಬೆಳೆದ ದೇಶದ ಕಂಪನಿಗಳಲ್ಲಿ ರಾತ್ರಿ ಹಗಲು ಪಾಳಿಯ ಕೆಲಸದಲ್ಲಿ ತಮ್ಮ ಪದವಿಗೂ ಮಾಡುವ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲದ ನಮ್ಮೊಳಗಿನ BPO, ಕಾಲ್ ಸೆಂಟರಗಳ ಉದ್ಯೋಗಿಗಳ ಗೋಳು ಹೇಳತೀರದು. ಮನೆಯಲ್ಲಿ ಅಪ್ಪ ಅಮ್ಮ ರಜಾ ತಗೋ ಅಂತಾ ಹೇಳಿದರೆ ಅಂತಾ ಕಂಪನಿಯ ಬಾಸು ರಜಾ ಕೊಡದ ಸಮಯದಲ್ಲಿ ಕೆಲಸ ಬಿಡೋದಾ? ಇಲ್ಲ ಅಪ್ಪ ಅಮ್ಮನ್ನು ಒಪ್ಪಿಸುವುದೋ ಅನ್ನೋ ಗೊಂದಲದಲ್ಲೇ ತಮ್ಮ ಸಂತೋಷಗಳನ್ನು ಮರೆತುಬಿಡುತ್ತಾರೆ, ಇತ್ತ ಮನೆಯಲ್ಲಿ ಮಕ್ಕಳಿಲ್ಲದ ಸಮಯದಲ್ಲಿ ಹಬ್ಬ ಬೇಕಾ ಅಂತಾ ಅವರು ಕೂಡ ಹೀಗೆ ಕಾಲ ತಳ್ಳುತ್ತಾರೆ.
ಹಸಿರು ನಗರ ಅನ್ನೋ ಸುಂದರ ಹಣೆಪಟ್ಟಿಯನ್ನು ಕಳಚಿ ಕಾಂಕ್ರೀಟ್ ನಗರ ಅಂತಾ ಹೆಸರು ಪಡೆಯುತ್ತಿರುವ ನಮ್ಮ ನಗರಗಳ ಕಳೆ ಹೆಚ್ಚಿಸುತ್ತಿರುವ ಬಹುಮಹಡಿ ಕಟ್ಟಡಗಳ ಕಾವಲು ಕಾಯುವ ದೂರದ ಊರುಗಳ ಅರೆಬರೆ ಓದಿದ ಯುವಕರ ಪರಿಸ್ಥಿತಿ ಇನ್ನೊಂದು ರೀತಿ, ಕಟ್ಟಡದಲ್ಲಿರುವ ಅಷ್ಟು ಕಂಪನಿಗಳಿಗೆ ರಜಾವಿದ್ದರೂ ಇವರಿಗೆ ಮಾತ್ರ ಕೆಲಸದ ಶಿಕ್ಷೆ. ಸಿಗುವ ಹತ್ತೋ ಹನ್ನೆರೆಡು ಸಾವಿರದ ಪಗಾರದ ಕೆಲಸಕ್ಕೆ ನಿತ್ಯ ಹನ್ನೆರೆಡು ಗಂಟೆ ದುಡಿಯುವ ಇವರ ಜೀವನ ಮಾತ್ರ ನರಕಯಾತನೆ. ಮನೆಯವರ ಜೊತೆಯಲ್ಲಿ ಒಂದೆರೆಡು ದಿನ ಕಾಲ ಕಳೆಯಲು ರಜಾ ಕೇಳಿದರೆ ಕೆಲಸದಿಂದ ತೆಗೆಯುವ ಮಾತುಗಳ ಮಾತ್ರ ತಪ್ಪಿದಲ್ಲ. ಹಬ್ಬದ ದಿನಗಳಲ್ಲಿ ಯಾರೋ ಪುಡಾರಿಗಳು ಕುಡಿದು ರಂಪಾಟ ಮಾಡುವುದನ್ನು ತಡೆಯುವ ಇವರ ಜೀವನಕ್ಕೆ ಯಾವುದೇ ನಂಬಿಕೆ, ಭರವಸೆಗಳಿಲ್ಲ.
ರಜಾ ದಿನಗಳಲ್ಲಿ ಸಿನಿಮಾ, ಶಾಪಿಂಗ್ ಅಂತಾ ಸುತ್ತುವ ನಮಗೆ ಅಲ್ಲಿ ದುಡಿಯುವ ಯುವಕ ಯುವತಿಯರ ಬಗ್ಗೆ ಗಮನ ಕೂಡ ಕೊಡುವುದಿಲ್ಲ, ಅಪ್ಪಿ ತಪ್ಪಿ ತಪ್ಪು ಮಾಡಿದರು ಅಂತಾ ಅವರ ಮೇಲೆ ಉನ್ನತಾಧಿಕಾರಿಗಳಿಗೆ ದೂರು ಕೊಡುವ ನಾವು ನಮಗಾಗಿ ತಮ್ಮ ಹಬ್ಬದ ಖುಷಿಯನ್ನು ಮರೆತ ಅವರ ಮನಸ್ಸಿನ ನೋವಿನ ಬಗ್ಗೆ ಯೋಚನೆ ಮಾಡುವುದಿಲ್ಲ. ಹೊಟ್ಟೆಪಾಡಿನ ಜೀವನವಾದರೂ ಕೂಡ ಅವರು ಕೂಡ ಮನುಷ್ಯರು ಅನ್ನೋ ಸತ್ಯ ಮಾತ್ರ ನಮ್ಮ ಸಂತೋಷ, ನೆಮ್ಮದಿಗಳ ಮಧ್ಯೆ ಸಮಾಧಿಯಾಗಿದೆ.
ಇವರ ಜೊತೆಯಲ್ಲಿ, ಬ್ರಹ್ಮಚಾರಿಗಳ ತವರು ಮನೆಯಾದ ಹೋಟೆಲಗಳಲ್ಲಿ ಪುಡಿಗಾಸಿಗಾಗಿ ದುಡಿಯುವ ಪುಟ್ಟ ಪುಟ್ಟ ಮಕ್ಕಳು, OLA, UBER, MERU. ಅಂತಾ ಹಲವಾರು ಕ್ಯಾಬ್ ಕಂಪನಿಗಳಲ್ಲಿ ದುಡಿಯುವ ಚಾಲಕರುಗಳು, ಹಬ್ಬದ ದಿನ ನಮ್ಮ ಖುಷಿಗಾಗಿ ನಾವು ಸುಟ್ಟ ಪಟಾಕಿಗಳ, ಹಣ್ಣು ಹಂಪಲುಗಳ, ತಳಿರು ತೋರಣಗಳ ಉಳಿದ ಕಸವನ್ನು ಯಾವುದೇ ಅಳಕುಕು ಅಂಜಿಕೆ ಇಲ್ಲದೇ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು, ಯಾವುದೇ ಮುಂಜಾಗ್ರತೆ ಇಲ್ಲದೇ ಪಟಾಕಿ ಹೊಡೆದು ನಮ್ಮ ಮತ್ತು ನೆರೆ ಮನೆಯವರ ಕಣ್ಣುಗಳು ಹಾನಿಗೊಳಗಾದಾಗ ಮಾತನಾಡಿಸಿ, ಧೈರ್ಯ ತುಂಬಿ ಚಿಕಿತ್ಸೆ ನೀಡೋ ವೈದ್ಯರುಗಳು ಮತ್ತು ಅವರ ಮನೆಯವರ ತ್ಯಾಗಗಳು ಮಾತ್ರ ನಮ್ಮ ಗಮನ ಕೂಡ ಸೆಳೆಯುವುದಿಲ್ಲ.
ಮೇಲಿನವರ ಹಬ್ಬದ ದಿನಗಳ ಕಷ್ಟಗಳನ್ನು ನೋಡಿದಾಗ ನಮ್ಮ ಕಷ್ಟಗಳು ತೃಣಕ್ಕೆ ಸಮನಾಗುತ್ತವೆ, ನಾಲ್ಕೈದು ದಿನ ರಜಾ ಅಂತಾ ಊರು, ಟ್ರಿಪ್ ಅಂತಾ ಸುತ್ತುವ ನಾವೇ ಅದೃಷ್ಟವಂತರು. ಮತ್ತೆ ದೀಪಾವಳಿ ಬಂದಿದೆ, ಈ ನಾಲ್ಕೈದು ದಿನಗಳ ರಜದಲ್ಲಿ ಇವರುಗಳ ಕೊಡುಗೆಗೆ ಮಾತ್ರ ಬೆಲೆಕಟ್ಟಲು ಸಾಧ್ಯವಿಲ್ಲ, ಬರುವ ರಜಾದಲ್ಲಿ ಊರು ತಲಪುವ ಮುನ್ನ ಟ್ರಾಫಿಕ್ ನಿಯಂತ್ರಿಸುವ ಪೋಲೀಸರಿಗೆ, ಸುರಕ್ಷಿತವಾಗಿ ಮನೆ ತಲುಪಿಸುವ ಚಾಲಕರಿಗೆ, ಹಗಲು ರಾತ್ರಿ ನಮಗಾಗಿ ಕಾದು ಕುಳಿತು ಊಟ ಕೊಡುವ ಹೋಟೆಲ್ ಹುಡುಗರಿಗೆ, ಯಾವುದೋ ತೊಂದರೆ ಅಂತಾ ಕಾಲ್ ಸೆಂಟರ್ಗೆ ಕರೆ ಮಾಡಿದಾಗ ಪ್ರೀತಿಯಿಂದ ಮಾತನಾಡುವ ಕಾಲ್ ಸೆಂಟರ್ ನೌಕರಿಗೆ, ರಾತ್ರಿಯೆಲ್ಲಾ ಕೆಲಸ ಮಾಡುವ ವೈದ್ಯಕೀಯ ವರ್ಗದವರು ಮತ್ತು ಇನ್ನು ಅನೇಕ ಎಲೆ ಮರೆ ಕಾಯಿಗಳಿಗೆ ಒಂದು ಹೃದಯ ಪೂರ್ವಕ ಧನ್ಯವಾದ ಹೇಳುತ್ತಾ ದೀಪಾವಳಿ ಹಬ್ಬದ ಶುಭಾಷಯ ತಿಳಿಸೋಣ.
ಎಲ್ಲಾ ಸ್ನೇಹಿತರಿಗೂ ದೀಪಾವಳಿ ಹಬ್ಬ ಶುಭಾಷಯಗಳು.