ಊಹೆ, ವಾಸ್ತವ, ಸತ್ಯ ಮತ್ತು ಅದಕ್ಕಿಂತ ಹೆಚ್ಚು ಇನ್ನೂ …!
ಗೋದ್ರಾ ಹತ್ಯಾಕಾಂಡ - ನರೇಂದ್ರ ಮೋದಿಯವರ ಪಾತ್ರ - ಬಿಬಿಸಿ ಸುದ್ದಿ ವಾಹಿನಿಯ ಸಾಕ್ಷ್ಯಚಿತ್ರ - ಎಡ ಬಲ ಪಂಥಗಳ ನಿಲುವು - ಊಹೆ ವಾಸ್ತವ ಸತ್ಯ ಮತ್ತು ಅದಕ್ಕಿಂತ ಹೆಚ್ಚು ಇನ್ನೂ …! ಭಾರತದ ವಿಭಜನೆಯ ಸಮಯದಲ್ಲಿ ನಡೆದ ವಿಶ್ವ ಇತಿಹಾಸದ ಕೆಲವೇ ಘೋರ ದುರ್ಘಟನೆಯ ನಂತರ ಸ್ವಾತಂತ್ರ್ಯ ಭಾರತದಲ್ಲಿ 2002 ರಲ್ಲಿ ಗುಜರಾತಿನ ಗೋದ್ರಾ ಹತ್ಯಾಕಾಂಡ ಹಿಂದೂ ಮುಸ್ಲಿಂ ಗಲಭೆಯಲ್ಲಿ ಅತ್ಯಂತ ಮಹತ್ವ ಪಡೆದಿದೆ.
2002 ರ ಒಂದು ಬೆಳಗ್ಗೆ ಗೋದ್ರಾದಲ್ಲಿ ಚಲಿಸುತ್ತಿದ್ದ ರೈಲಿನ ಭೋಗಿಗೆ ಬೆಂಕಿ ಬೀಳುತ್ತದೆ ಅಥವಾ ಉದ್ದೇಶ ಪೂರ್ವಕವಾಗಿ ಹಚ್ಚಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಪ್ರಯಾಣಿಸುತ್ತಿದ್ದ ಹಿಂದೂ ಕಾರ್ಯಕರ್ತರು ಮತ್ತು ಕರ ಸೇವಕರು (ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಟ್ಟಾ ಆಕಾಂಕ್ಷಿಗಳು) ಸುಮಾರು 59 ಜನ ಸಜೀವ ದಹನವಾಗುತ್ತಾರೆ.
ಸಹಜವಾಗಿಯೇ ಇಂತಹ ಅತ್ಯಂತ ಘನ ಘೋರ ಸಾವುಗಳನ್ನು ಅಲ್ಲಿನ ಹಿಂದೂ ಕಾರ್ಯಕರ್ತರಿಗೆ ಸಹಿಸಲು ಸಾಧ್ಯವಾಗುವುದಿಲ್ಲ ಮತ್ತು ಹಿಂದೂಗಳ ಹತ್ಯೆ ಎಂದರೆ ಅದು ಮುಸ್ಲಿಂ ಮೂಲಭೂತವಾದಿಗಳಿಂದಲೇ ಎಂದು ಹಿಂದೂಗಳಿಗೆ ಅನಿಸುತ್ತದೆ. ಆಗ ಭುಗಿಲೆದ್ದ ಹಿಂಸಾಚಾರದಲ್ಲಿ ಮತ್ತೊಂದು ಘನ ಘೋರ ಹತ್ಯಾಕಾಂಡ ನಡೆಯುತ್ತದೆ. ಅದರಲ್ಲಿ ಸುಮಾರು 800 ಮುಸ್ಲಿಂ ಜನರನ್ನು ಕೊಲ್ಲಲಾಗುತ್ತದೆ ಮತ್ತು ಕೆಲವು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಸಹ ಮಾಡಲಾಗುತ್ತದೆ.
ಆಗ ಕೇಂದ್ರದಲ್ಲಿ ಎನ್ ಡಿ ಎ ಪಕ್ಷಗಳ ಒಕ್ಕೂಟ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇದ್ದರೆ ಗುಜರಾತಿನಲ್ಲಿ ಈಗಿನ ಪ್ರಧಾನಿ ಮತ್ತು ಹೊಸದಾಗಿ ಆಗ ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರದಲ್ಲಿ ಇರುತ್ತದೆ. ಸುಮಾರು 20 ವರ್ಷಗಳೇ ಕಳೆದವು. ಆಗಿನಿಂದ ನರ್ಮದಾ - ಸಬರಮತಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ವಾಜಪೇಯಿಯವರು ಈಗ ನಮ್ಮೊಂದಿಗಿಲ್ಲ. ಗುಜರಾತಿನಲ್ಲಿ ಒಂದೇ ಪಕ್ಷದ ಸರ್ಕಾರ ನಿರಂತರವಾಗಿ ಆಡಳಿತ ನಡೆಸುತ್ತಿದೆ. ಆಗಿನ ಮುಖ್ಯಮಂತ್ರಿಗಳು ಈಗಿನ ಭಾರತದ ಅತ್ಯಂತ ಹೆಚ್ಚು ಬಹುಮತದ ಮತ್ತು ಪ್ರಬಲ ಪ್ರಧಾನ ಮಂತ್ರಿಗಳಾಗಿ ಅಧಿಕಾರದಲ್ಲಿದ್ದಾರೆ.
ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಹಳೆಯ ಸುದ್ದಿ ಸಂಸ್ಥೆಗಳಲ್ಲಿ ಒಂದಾದ ಬಿಬಿಸಿ ಈ ಘಟನೆಯನ್ನು ಆಧಾರಿಸಿ " ಇಂಡಿಯಾ ; ದ ಮೋದಿ ಕ್ವೆಶ್ಚನ್ " ( INDIA ; THE MODI QUESTION ) ಎಂಬ ಸಾಕ್ಷ್ಯಚಿತ್ರ ತಯಾರಿಸಿದೆ. ಅದರಲ್ಲಿ ಮೋದಿಯವರನ್ನು ಆ ಹತ್ಯಾಕಾಂಡ ತಡೆಯಲು ವಿಫಲವಾದ ಜವಾಬ್ದಾರಿ ಹೊರಿಸಿ ಟೀಕಿಸಲಾಗಿದೆ ಎಂಬ ಸುದ್ದಿ ಮತ್ತು ಅದಕ್ಕೆ ಅವರ ಪಕ್ಷದ ವಿರೋಧ ಬಹುವಾಗಿ ಚರ್ಚೆಯಾಗುತ್ತಿದೆ. ಈಗಾಗಲೇ ನೂರಾರು ಸಂಖ್ಯೆಯಲ್ಲಿ ಗೋದ್ರಾ ಘಟನೆಯ ಬಗ್ಗೆ ತನಿಖಾ ವರದಿಗಳು, ನ್ಯಾಯಾಂಗದ ವಿಚಾರಣೆಗಳು, ಪತ್ರಿಕಾ ವರದಿಗಳು, ಸಾಕ್ಷ್ಯಚಿತ್ರಗಳು, ಅಭಿಪ್ರಾಯಗಳು, ಬಂಧನಗಳು, ಶಿಕ್ಷೆಗಳು, ಖುಲಾಸೆಗಳು, ಕ್ಷಮಾಧಾನಗಳು ಎಲ್ಲವೂ ಸಾಕಷ್ಟು ಆಗಿವೆ. ಅದಕ್ಕೆ ಹೊಸ ಸೇರ್ಪಡೆ ಬಿಬಿಸಿ ಕಾರ್ಯಕ್ರಮ.
ಬಿಜೆಪಿ ಮತ್ತು ನರೇಂದ್ರ ಮೋದಿಯವರ ವಿರೋಧಿಗಳು ಈ ಘಟನೆಯ ಕಾರಣದಿಂದ ಅವರನ್ನು ನರಹಂತಕ ಎಂಬಷ್ಟು ತೀಕ್ಷ್ಣವಾಗಿ ಟೀಕಿಸುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನ ಇದೇ ಕಾರಣದಿಂದಾಗಿ ಆಗ ಮೋದಿಯವರಿಗೆ ವೀಸಾ ಸಹ ನಿರಾಕರಿಸಲಾಗಿತ್ತು. ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಈ ಘಟನೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು ಮತ್ತು ಆಗಿನ ಗುಜರಾತ್ ಸರ್ಕಾರವನ್ನು ವಜಾ ಮಾಡಲು ಸಹ ಚಿಂತಿಸಿದ್ದರು ಎಂಬ ಸುದ್ದಿಗಳು ಇವೆ. ಹಾಗೆಯೇ ಮೋದಿಯವರ ಅಭಿಮಾನಿಗಳು ಗೋದ್ರಾ ಘಟನೆಯ ಮೂಲಕ ಭಾರತಕ್ಕೆ ಒಬ್ಬ ಅತ್ಯಂತ ದಿಟ್ಟ ಹಿಂದೂ ನಾಯಕ ದೊರೆತ ಎಂದು ಈಗಲೂ ಆರಾಧಿಸುತ್ತಾರೆ. ಆ ಘಟನೆಯ ನಂತರ ಭಾರತದ ರಾಜಕೀಯದಲ್ಲಿ ನರೇಂದ್ರ ಮೋದಿಯವರು ಸೋಲಿಲ್ಲದ ಸರದಾರನ ರೀತಿಯಲ್ಲಿ ಹಂತ ಹಂತವಾಗಿ ಬೆಳೆದು ಎರಡನೆಯ ಬಾರಿ ಪ್ರಧಾನಿಯಾಗಿ ಈಗ ಮೂರನೆಯ ಬಾರಿ ಸಹ ಆಯ್ಕೆಯ ಹೊಸ್ತಿಲಿನಲ್ಲಿದ್ದಾರೆ.
ಸಾಮಾನ್ಯ ಜನರ ಹಿಂಸೆ ಮತ್ತು ಪ್ರತಿ ಹಿಂಸೆ, ಪ್ರತಿ ಕಾರ, ಆಕ್ರಮಣ, ಧರ್ಮ ಆಧಾರದ ವಿಭಜನೆ ಎಲ್ಲವೂ ಇತಿಹಾಸದಲ್ಲಿ ನಡೆಯುತ್ತಲೇ ಬಂದಿದೆ. ರಾಜ ಪ್ರಭುತ್ವದಲ್ಲಿ, ಸರ್ವಾಧಿಕಾರಿ ಆಡಳಿತ ಇರುವಾಗ ಇಂತಹ ಘಟನೆಗಳಲ್ಲಿ ಪ್ರಭುತ್ವದ ಹಿತಾಸಕ್ತಿಯೇ ಮೇಲುಗೈ ಪಡೆಯುತ್ತದೆ ಮತ್ತು ಅದಕ್ಕೆ ಪೂರಕವಾಗಿ ನ್ಯಾಯ ನಿರ್ಧರಿಸಲಾಗುತ್ತದೆ. ಎಲ್ಲಾ ಹಿಂಸೆಗಳು - ಪಕ್ಷಪಾತಗಳು ರಾಜನ ಪರವಾಗಿಯೇ ಇರುತ್ತದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಗಳ ಮೊದಲ ಕರ್ತವ್ಯ ತನ್ನ ರಾಜ್ಯ ಅಥವಾ ದೇಶದ ಜನರ ಜೀವ ರಕ್ಷಣೆ ಮತ್ತು ಭದ್ರತೆ. ಕಾರಣಗಳು, ಸಂದರ್ಭಗಳು, ಐತಿಹಾಸಿಕ ಸತ್ಯಗಳು ಮತ್ತು ಪ್ರಮಾದಗಳು, ಜನರ ಭಾವನೆಗಳು, ನೆಪಗಳು ಏನೇ ಇರಲಿ ತನ್ನ ಆಡಳಿತಕ್ಕೆ ಒಳಪಟ್ಟ ಎಲ್ಲಾ ಪ್ರಜೆಗಳನ್ನು ರಕ್ಷಿಸಬೇಕು ಮತ್ತು ಹಿಂಸಾವಾದಿಗಳನ್ನು ಶಿಕ್ಷಿಸಬೇಕು. ಅದರಲ್ಲೂ ಮುಖ್ಯವಾಗಿ ಈ ರೀತಿಯ ಗುಂಪು ಹಿಂಸೆಗಳ ಸಂದರ್ಭದಲ್ಲಿ ಪ್ರತಿ ನಾಗರಿಕನ ರಕ್ಷಣೆಯೇ ಆದ್ಯ ಕರ್ತವ್ಯ.
ಆ ದೃಷ್ಟಿಯಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿ ವಿಫಲರಾದರು ಮತ್ತು ಪರೋಕ್ಷವಾಗಿ ಗಲಭೆ ಕೋರರಿಗೆ ಸಮಯಾವಕಾಶ ನೀಡಿ ಸಹಕರಿಸಿದರು ಎಂಬ ಆರೋಪವಿದೆ. ಬಹುಶಃ ಅದನ್ನೇ ಬಿಬಿಸಿ ಹೇಳಿರುವುದು. ಆದರೆ ಕೆಲವು ತನಿಖಾ ವರದಿಗಳನ್ನು ಹೊರತುಪಡಿಸಿ ಯಾವುದೇ ನ್ಯಾಯಾಲಯ ನರೇಂದ್ರ ಮೋದಿಯವರನ್ನು ತಪ್ಪಿತಸ್ಥ ಎಂದು ಹೇಳಿಲ್ಲ. ಖಚಿತ ಸಾಕ್ಷಿ ಆಧಾರಗಳಿಲ್ಲ ಎಂದೇ ಅಭಿಪ್ರಾಯ ಪಟ್ಟಿದೆ. ಕೆಳ ಹಂತದ ನ್ಯಾಯಾಲಯದಲ್ಲಿ ಕೆಲವು ಘಟನೆಗಳ ಸಂದರ್ಭದಲ್ಲಿ ಆಡಳಿತ ವೈಫಲ್ಯಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡಲಾಗಿದೆ. ಇತರ ಅನೇಕ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇತ್ತೀಚಿಗೆ ಬಿಲ್ಕಿಷ್ ಬಾನು ಪ್ರಕರಣದಲ್ಲಿ ಅತ್ಯಾಚಾರಿಗಳ ಬಿಡುಗಡೆ ಸಹ ವಿವಾದವಾಗಿದೆ. ಆದರೆ ಭಾರತದ ಸರ್ವೋಚ್ಚ ನ್ಯಾಯಾಲಯ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದೆ.
ಇದು ಇಡೀ ಗೋದ್ರಾ ಘಟನೆಯ ಸರಳ ಮತ್ತು ಸಂಕ್ಷಿಪ್ತ ವಿವರಣೆ. ಇದನ್ನು ಮೀರಿ ಸತ್ಯ, ವಾಸ್ತವ ಮತ್ತು ಅದಕ್ಕೂ ಮಿಗಿಲಾದ ಅಂಶಗಳನ್ನು ಹೇಳುವುದು ಬಹಳ ಕಷ್ಟ. ಅದರಲ್ಲೂ ಸದ್ಯದ ಭಾರತದ ರಾಜಕೀಯದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯನ್ನು 20 ವರ್ಷಗಳ ಹಿಂದಿನ ಘಟನೆಯ ಆಧಾರದ ಮೇಲೆ ವಿಮರ್ಶಿಸುವುದು ಅಷ್ಟು ಸುಲಭವಲ್ಲ. ಹಿಂದೂ ಮುಸ್ಲಿಂ ವೈಮನಸ್ಯ ಭಾರತದ ಮೇಲಿನ ಘಜ್ನಿ ಘೋರಿ ಆಕ್ರಮಣ ಕಾಲದಿಂದಲೂ ಇದೆ. ಎರಡು ಧರ್ಮಗಳ ಜೀವನ ಶೈಲಿ ಸಹ ಆಚರಣೆಯಲ್ಲಿ ಬಹುತೇಕ ವಿರುದ್ಧವಾಗಿದೆ. ಮೂಲ ನಿವಾಸಿಗಳು ಮತ್ತು ವಲಸಿಗರು ಎಂಬ ಭೇದ ಭಾವ ಸದಾ ಜಾಗೃತಿಯಲ್ಲಿರುತ್ತದೆ. ಭಾರತ - ಪಾಕಿಸ್ತಾನ ವಿಭಜನೆಯ ನಂತರ ಅದು ಶಾಶ್ವತವಾಗಿ ನೆಲೆಸಿದೆ.
ರಾಜಕೀಯವಾಗಿ ಕಾಂಗ್ರೇಸ್ ಜಾತ್ಯಾತೀತ ನಿಲುವಿನ ಹೆಸರಿನಲ್ಲಿ ಮುಸ್ಲಿಂಮರ ಓಲೈಕೆ ಮೂಲಕ ಹೆಚ್ಚಾಗಿ ಬೆಳೆದು ಬಂದಿದೆ. ಹಾಗೆಯೇ ಭಾರತೀಯ ಜನತಾ ಪಕ್ಷ ಮುಸ್ಲಿಂ ವಿರೋಧ ಮತ್ತು ಹಿಂದೂ ಪರವಾಗಿಯೇ ವಿಚಾರ ಮಂಡಿಸಿ ಬೆಳೆಯುತ್ತಲೇ ಇದೆ. ಆಳವಾದ ದ್ವೇಷ ಎರಡೂ ಸಮುದಾಯಗಳಲ್ಲಿ ಬೇರೂರಿದೆ. ಚುನಾವಣಾ ಸಂದರ್ಭದ ರಾಜಕೀಯ ಸ್ವಾರ್ಥ ಮತ್ತು ಜನರ ಭಾವನೆಗಳು ಪ್ರಬುದ್ಧವಾಗಿರುವುದಿಲ್ಲ. ಅದರಿಂದಾಗಿಯೇ ಸತ್ಯದ ಹುಡುಕಾಟ ಬಹಳ ತ್ರಾಸದಾಯಕ.
ಆದರೂ ನಾವು ಗ್ರಹಿಸಿದ ಅಭಿಪ್ರಾಯ ಹಂಚಿಕೊಳ್ಳುವುದು ಉತ್ತಮ. ರೈಲಿನ ಭೋಗಿಯಲ್ಲಿ ಹಿಂದೂ ಕರಸೇವಕರ ಹತ್ಯೆ ಎಷ್ಟು ಕ್ರೌರ್ಯವೋ ಅಷ್ಟೇ ಕ್ರೌರ್ಯ ನಂತರದ ಮುಸ್ಲಿಮರ ಮೇಲಿನ ಆಕ್ರಮಣ. ಇಲ್ಲಿ ಜನಸಾಮಾನ್ಯರ ಅತಿರೇಕದ ವರ್ತನೆಗಳು ಸಾಮಾನ್ಯ ಎಂದು ಸ್ವೀಕರಿಸಿದರು ಆಡಳಿತ ವ್ಯವಸ್ಥೆ ಮಾತ್ರ ಸಂಪೂರ್ಣ ನಿಷ್ಪಕ್ಷಪಾತವಾಗಿಯೇ ಇರಬೇಕು. ಆ ದೃಷ್ಟಿಯಿಂದ ಸಿಖ್ ಹತ್ಯಾಕಾಂಡ, ಬಾಬರಿ ಮಸೀದಿ ಧ್ವಂಸ, ಕಾಶ್ಮೀರ ಪಂಡಿತರ ಹತ್ಯಾಕಾಂಡ, ಗೋದ್ರಾ ಹಿಂಸಾಚಾರದಲ್ಲಿ ಆಗಿನ ಸರ್ಕಾರಗಳು ಪಕ್ಷಪಾತದ ತೀರ್ಮಾನ ಕೈಗೊಂಡಿವೆ ಮತ್ತು ಕಾನೂನು ಸುವ್ಯವಸ್ಥೆ ರಕ್ಷಿಸಿವಲ್ಲಿ ವಿಫಲವಾಗಿವೆ ಎಂದೇ ಹೇಳಬೇಕು. ಇತಿಹಾಸದಲ್ಲಿ ಹಾಗೆಯೇ ದಾಖಲಾಗಬೇಕು.
ಇದರ ಪ್ರಕಾರ ಗೋದ್ರಾ ಹತ್ಯಾಕಾಂಡ ನರೇಂದ್ರ ಮೋದಿಯವರ ರಾಜಕೀಯ ಜೀವನದ ಒಂದು ಕಪ್ಪು ರಂಧ್ರ ಎಂಬುದು ನಿಜ. ಇದಕ್ಕಿಂತ ದೊಡ್ಡ ತಪ್ಪುಗಳು ಇತರ ಮುಖ್ಯಮಂತ್ರಿ ಪ್ರಧಾನ ಮಂತ್ರಿಗಳಿಂದ ನಡೆದಿದೆ ಎಂಬುದೂ ಅಷ್ಟೇ ಸತ್ಯ. ಇಲ್ಲಿ ಕೇವಲ ಗೋದ್ರಾ ಘಟನೆಯ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಮಾತ್ರ ಚರ್ಚಿಸಲಾಗಿದೆ. ಕಾಶ್ಮೀರ ಕಣಿವೆಯ ಹಿಂಸಾಚಾರ, ಸಿಖ್ ಹತ್ಯಾಕಾಂಡ ಸಂದರ್ಭದಲ್ಲಿ ಆಗಿನ ಆಡಳಿತಗಾರರು ಸಹ ದೊಡ್ಡ ಪ್ರಮಾಣದ ಪ್ರಮಾದ ಎಸಗಿದ್ದಾರೆ. ಅದನ್ನು ಮತ್ತೊಮ್ಮೆ ಪ್ರತ್ಯೇಕವಾಗಿ ಚರ್ಚಿಸಬಹುದು. ಒಟ್ಟಿನಲ್ಲಿ ಅಂತಿಮವಾಗಿ, ಯಾವುದೇ ಮಾಧ್ಯಮಗಳಿಗೆ ಯಾವುದೇ ಘಟನೆಯ ಬಗ್ಗೆ ತಮ್ಮ ವರದಿ ಪ್ರಕಟಿಸುವ ಸ್ವಾತಂತ್ರ್ಯವಿದೆ. ಅದನ್ನು ಗೌರವಿಸೋಣ. ಹಾಗೆಯೇ ಆ ವರದಿಗೆ ವಿರೋಧ ವ್ಯಕ್ತಪಡಿಸುವ ಸ್ವಾತಂತ್ರ್ಯ ಸಹ ಎಲ್ಲರಿಗೂ ಇದೆ. ಅದನ್ನೂ ಗೌರವಿಸೋಣ.
ನಮ್ಮ ನಮ್ಮ ಅರಿವಿನ ಮಿತಿಯಲ್ಲಿ, ನಮ್ಮ ನಮ್ಮ ಮನಸ್ಸಿನ ಗ್ರಹಿಕೆಯ ಸಾಮರ್ಥ್ಯದಲ್ಲಿ, ನಮ್ಮ ನಮ್ಮ ಒಳ್ಳೆಯತನ - ಕೆಟ್ಟತನದ ಮನಸ್ಥಿತಿಯಲ್ಲಿ, ಸಾರ್ವಜನಿಕ ಆಸಕ್ತಿಯ ವಿಷಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸೋಣ ಮತ್ತು ಅದನ್ನು ಮಾನವೀಯ ಮೌಲ್ಯಗಳ ಅಡಿಯಲ್ಲಿ, ಸಂವಿಧಾನಾತ್ಮಕ ನಿಯಮಗಳ ಆಧಾರದಲ್ಲಿ ಗೌರವಯುತವಾಗಿ ಚರ್ಚಿಸೋಣ. ನಮ್ಮ ನಡುವೆ ದ್ವೇಷ ಅಸೂಯೆಗಳಿಗೆ ಆಸ್ಪದ ಕೊಡದೆ ಅಭಿಪ್ರಾಯ ಸ್ವಾತಂತ್ರ್ಯ ಉಪಯೋಗಿಸಿಕೊಳ್ಳೋಣ. ಏಕೆಂದರೆ ನಾವೆಲ್ಲರೂ ಭಾರತೀಯರು. ಪ್ರಶ್ನಿಸುವ, ಟೀಕಿಸುವ, ವಿಮರ್ಶಿಸುವ ಎಲ್ಲಾ ಸ್ವಾತಂತ್ರ್ಯ ಪಡೆದ ಮುಕ್ತ ಪ್ರಜೆಗಳು ಮತ್ತು ವಿಶ್ವಕ್ಕೆ ಮಾದರಿ ಸಂವಿಧಾನದ ನಿರ್ಮಾತೃಗಳು...
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ