ಋತು ಚಿತ್ತ ಬದಲಾಗುವತ್ತ
ಬಿರುಸಿನ ಬೇಸಿಗೆ ಎಲ್ಲೆಡೆ ಹಾಸಿಕೊಂಡು ಬೆವರಿಸುತ್ತ, ಬಾಯರಿಸುತ್ತ 'ಹಾಳು ಬಿಸಿಲೆ' ಎಂದು ನಿಡುಸುಯ್ದು ಬೈದುಕೊಂಡಿರುವ ಹೊತ್ತಿನಲ್ಲೇ, ವಿಪರ್ಯಾಸವೆಂಬಂತೆ ಸುತ್ತಲ ಪ್ರಕೃತಿಯ ವನರಾಜಿ ವಸಂತನ ಆಗಮನದೊಂದಿಗೆ ಹೊಸತಿನುಡುಗೆ ತೊಡುಗೆ ತೊಟ್ಟು ನಲಿಯುವ ರೀತಿಯೆ ಅನನ್ಯ. ಅಲ್ಲಿಯ ತನಕ ಬರಿ ಎಲೆಗಳಿಂದಷ್ಟೆ ತುಂಬಿಕೊಂಡಿದ್ದ ಗಿಡ ಮರಗಳೆಲ್ಲ ಮೈ ತುಂಬಿಕೊಂಡು ಹಸಿರಾಗಿ ನಳನಳಿಸುವುದಷ್ಟೆ ಅಲ್ಲದೆ ಅದುವರೆಗೂ ಕಾಣಿಸದಿದ್ದ ಬಣ್ಣ ಬಣ್ಣದ ಹೂಗಳು ಮೊಗ್ಗುಗಳಾಗಿ ಇಣುಕುತ್ತ , ಕಾಯಾಗಿ, ಹಣ್ಣಾಗುವ ದೃಶ್ಯ ಮತ್ತಾ ಪ್ರಕ್ರಿಯೆಯಲ್ಲೆ ಇಡಿ ನಿಸರ್ಗಕ್ಕೆ ಹಚ್ಚುವ ಬಣ್ಣದ ಲೇಪನ ಮನಮೋಹಕ. ಅರಳಿ ಬಾಡುವ ಅಲ್ಪ ಕಾಲದಲ್ಲೆ ಮನವ ಸೆರೆ ಹಿಡಿಯುವ ಈ ಕುಸುಮ ಕುಂಚ ರಮಣೀಯ ನೋಟ ಪ್ರಕೃತಿಯೊಡಲಲಿ ನಡೆದಿರುವ ನಿಸರ್ಗ ಸಹಜ ಸೃಷ್ಟಿಕ್ರಿಯೆಯ ಪ್ರತೀಕವೂ ಹೌದು. ಸೃಷ್ಟಿ ಬದಲಾವಣೆಯ ಚಿತ್ತ; ಬದಲಾವಣೆ ಅನಾವರಣವಾಗುವ, ಪ್ರಕಟವಾಗುವ ಭೌತಿಕ ವಾಹನ. ಈ ಜಗದಲಿ ಬದಲಾವಣೆಯೊಂದೆ ನಿರಂತರವೆಂಬ ಸಂಕೇತ.
ಪ್ರಕೃತಿಯ ಬದಲಾವಣೆಯ ನಿಯಮಕ್ಕೆ ಮಾರು ಹೋದಂತೆ ಜೀವಿಗಳ ಬಾಹ್ಯ ಜಗ, ಅದರಲ್ಲೂ ಮನುಜ ಜೀವನದ ಪರಿ ಬದಲಾವಣೆಯ ರಾಗ ಹಾಡುತ್ತ ಅಸಾಧಾರಣ ವೇಗದಲ್ಲಿ ಮುನ್ನುಗ್ಗುತ್ತಿದೆ. ಎಲ್ಲೆಡೆಯೂ ಬದಲಾವಣೆಯೊಂದೆ ಶಾಶ್ವತವೆಂದು ಸಾರುತ್ತ, ಅಡಿಯಿಂದ ಮುಡಿಯತನಕ ಎಲ್ಲವನ್ನು ಬದಲಿಸುತ್ತ ನಡೆದಿದೆ - ತಾವೂ ಸಹ ನಿಸರ್ಗವನ್ನೇ ಅನುಸರಿಸುತ್ತಿದ್ದೇವೆ ಎನ್ನುವಂತೆ. ಪ್ರಕೃತಿಯ ರೀತಿ ಬದಲಾಗುತ್ತಿದೆ ಈ ಜಗ ಅನ್ನುವುದೇನೋ ನಿಜ - ಆದರೆ ಒಂದೆ ಒಂದು ವ್ಯತ್ಯಾಸ; ಪ್ರಕೃತಿ ಬದಲಾದಂತೆ ಮೇಲ್ನೋಟಕ್ಕೆ ಅನಿಸಿದರೂ, ನಿಜದಲ್ಲಿ ಅದೊಂದು ಆವರ್ತನ ಚಕ್ರವನ್ನು ಅನುಕರಿಸುತ್ತಾ ಪ್ರತಿ ಋತುವಿನಲ್ಲೂ ಅದೇ ಚಕ್ರವನ್ನು ಪುನರಾವರ್ತಿಸುತ್ತಿರುತ್ತದೆ. ಅದನ್ನು ಅನುಕರಿಸುತ್ತಿದ್ದೇವೆನ್ನುವ ಭ್ರಮೆಯಲ್ಲಿ ಮಾನವ ಜಗ ಮತ್ತೆ ಮರಳಲಾಗದ ಬದಲಾವಣೆಯ ಸರಳ ರೇಖೆಯಲ್ಲಿ ಮುನ್ನುಗ್ಗುತ್ತಿದೆ - ಏಕಮುಖ ವಾಹನ ರಸ್ತೆಯ ಹಾಗೆ. ಋತುಗಳೇನೊ ಪ್ರಕೃತಿಯನ್ನು ಜತನದಲ್ಲಿಡುವ ವಾಗ್ದಾನ ಕೊಟ್ಟಂತೆ ಎಚ್ಚರಿಕೆಯ ಆವರ್ತನದಲ್ಲಿ ಮರುಕಳಿಸಿಕೊಂಡು ಸಾಗುತ್ತಿದೆ. ಆದರೆ ಒಂದೇ ನೇರದಲ್ಲಿ ಹಿಂದಿರುಗಲಾಗದಂತೆ ನಡೆದಿರುವ ನಮ್ಮ ಕಥೆ ಮತ್ತು ಭವಿಷ್ಯ? ಭವಿತ ಕಾಲದ ಕನ್ನಡಿಯಲ್ಲಿ ಕಾದಷ್ಟೆ ನೋಡಬೇಕೇನೊ...!
ಆ ಕಾಯುವಿಕೆಯ ನಡುವೆಯೆ ಬದಲಾಗುವ ಋತು ಚಿತ್ತದ ಒಂದು ಪಲುಕು, ಮೆಲುಕು ಈ ಕೆಳಗಿನ ಕವನದ ರೂಪದಲ್ಲಿ :-)
ಋತು ಚಿತ್ತ ಬದಲಾಗುವತ್ತ
_________________
ಬದಲಾವಣೆಯಾಗುವ ಸತತ
ಸಂಭ್ರಮಿಸಿ ಇಣುಕುವ ಋತು ಚಿತ್ತ
ಹೂವಾಗರಳಿ ಎಲೆ ಕೊಂಬೆ ಟೊಂಗೆ ಟಿಸಿಲು
ಕಾಯ ಹಣ್ಣಾಗಿಸುವ ಎಳೆ ಬಲಿತ ಬಿಸಿಲು ||
ಬಿರು ಬೇಸಿಗೆ ಬಿರುಸಲು ಸಂತ
ಬಿರ ಬಿರನೆ ಸವರಿ 'ಜುಂ' ವಸಂತ
ರತಿ ಮನ್ಮಥರೇರಿದ ನಿಸರ್ಗ ರಥ ಸವಾರಿ
ಪ್ರಕೃತಿಗು ಕೆರಳಿಸುತ ಕಾಮನ ರಹದಾರಿ ||
ಚೆಲ್ಲಾಟವಾಡುತ ಸೃಷ್ಟಿಯ ಮುನ್ನುಡಿ
ಅಂಗಜನ ಜತೆಯಲಿ ರತಿ ಮತಿ ಕನ್ನಡಿ
ಅನುಕರಿಸುತ ಪ್ರಕೃತಿ ತಿಲ್ಲಾನ ಮಹೋತ್ಸವ
ನೋಡೊಂದೆರಡೆ ಗಳಿಗೆ ಒಡಲ ಹೂವಾಗಿ ಕಾವ ||
ಬಂಜೆಯಂತೆ ಭಣಗುಟ್ಟುತಿದ್ದ ವನಸಿರಿ
ಸಂಜೆ ರಾಗ ರತಿಯ ಮುಸುಕ ಹೊದ್ದ ಪರಿ
ಛೇಡನೆ ಕಾಮನೋ ಅನುರಾಗ ರತಿಯೋ ಪ್ರಕೃತಿ
ಇದ್ದಕಿದ್ದಂತೆ ಮಾಯಾ ವನರಾಜಿಯೆಲ್ಲಾ ವಿಕೃತಿ ||
ಋತುವಿಗು ಗೊತ್ತು ಬದಲಾವಣೆ ಕಾಲಧರ್ಮ
ಹುಲುಸಿರುವಾಗಲೆ ಮೆಲ್ಲುವುದದರ ಮರ್ಮ
ಮಿಂಚಿ ಮಾಯವಾದರೂ ಮೆಲುಕು ಹಾಕುವ ಸೊಗ
ಮದ್ದಾಗಿ ಮರಳಿ ಬರುವ ತನಕ ಕಾಯುವ ಜಗ ||
------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------
Comments
ಉ: ಋತು ಚಿತ್ತ ಬದಲಾಗುವತ್ತ
ಚೆನ್ನಾಗಿದೆ. ಹಾಸನದವರಿಗಂತೂ ಈ ವರ್ಷ ಬಿರುಬೇಸಿಗೆಯ ಅನುಭವವಾಗಲಿಲ್ಲ. ಮಳೆಗಾಲವೇನೋ ಅನ್ನುವಂತೆ ಕಳೆದ ನಾಲ್ಕೈದು ದಿನಗಳಿಂದ ಒಳ್ಳೆಯ ಮಳೆಯಾಗಿದೆ. ಕಾಲಪಲ್ಲಟವಾಗಿ ಮುಂದೆ ಬಿಸಿಲಿನ ಝಳ ಬರಬಹುದೇನೋ!!
In reply to ಉ: ಋತು ಚಿತ್ತ ಬದಲಾಗುವತ್ತ by kavinagaraj
ಉ: ಋತು ಚಿತ್ತ ಬದಲಾಗುವತ್ತ
ಕವಿಗಳೆ, ಸಿಂಗಪುರದಲ್ಲಿ ಯಾವಾಗಲೂ ಬೇಸಿಗೆಯೆ - ಆದರೂ ಈಗ ಎಲ್ಲಾ ಕಡೆ ಹೂ ಕಾಯಿ ಹಣ್ಣು ಬಿಡುವ ಕಾಲವಾದ ಕಾರಣ ಪ್ರಕೃತಿ ವರ್ಣಮಯವಾಗಿ ನಳನಳಿಸುತ್ತಿದೆ. ಅದೇ ಈ ಕವನದ ಪ್ರೇರಣೆ :-)
ಉ: ಋತು ಚಿತ್ತ ಬದಲಾಗುವತ್ತ
ನಾಗೇಶ ಜಿ, ಕವನ ಇಷ್ಟವಾಯಿತು. ಋತುಚಕ್ರ ಮತ್ತೆ ಮತ್ತೆ ಮರಳಿದರೆ ನಮ್ಮದೇನಿದ್ದರೂ ಅಂಚಿನೆಡೆಗೆ ಒಂದೇ ದಿಕ್ಕಿನ ದಾರಿ, ಕ್ಷಣ ಕ್ಷಣ ತೊರೆಯುವ ಜೀವನ ವಿಧಾನ. ಥೀಮ್ ಚನ್ನಾಗಿದೆ, ನಮಸ್ಕಾರ ಸರ್.
In reply to ಉ: ಋತು ಚಿತ್ತ ಬದಲಾಗುವತ್ತ by lpitnal
ಉ: ಋತು ಚಿತ್ತ ಬದಲಾಗುವತ್ತ
ಇಟ್ನಾಳ್ ಜಿ ನಮಸ್ಕಾರ. ಪ್ರಕೃತಿ ಬದಲಾವಣೆಯನ್ನು ನಿರಂತರವಾಗಿರಿಸಿಕೊಂಡು ತನ್ನ ಜೀವಮಾನದ ಕಾಲಾವಧಿಯನ್ನು ಲಂಬಿಸಿಕೊಂಡಿರುವಂತೆ ಕಂಡರೆ, ನಾವು ಮಾತ್ರ ಎಲ್ಲಾ ಒಂದೆ ಬೊಗಸೆಯಲ್ಲಿ ಕುಡಿಯುವ ದಾರಿ ಹಿಡಿದು ಬಾಲ್ಯ-ಯೌವ್ವನ ಪ್ರಾಯ-ವೃದ್ಧ್ಯಾಪದ ಹಂತವನ್ನು ಅನುಕ್ರಮತೆಯಲ್ಲಿ ಅನುಭವಿಸುತ್ತ ಒಂದೆ ಬಾರಿಗೆ ಜೀವನ ಮುಗಿಸುತ್ತೇವೆ. ಪ್ರಕೃತಿ ಇದೆ ಹಂತಗಳನ್ನು ಪ್ರತಿ ಋತುವಿಗೊಂದು ಬಾರಿಯಂತೆ ಪುನರಾವರ್ತಿಸುತ್ತ ನಡೆವ ವಿಸ್ಮಯ ಅದನ್ನು ನಿರಂತರವಾಗಿಸಿದಂತೆ ಕಾಣುತ್ತದೆ. ತಮಗೂ ವಿನಮ್ರ ಧನ್ಯವಾದಗಳು ಮತ್ತು ನಮಸ್ಕಾರಗಳು.
ಉ: ಋತು ಚಿತ್ತ ಬದಲಾಗುವತ್ತ
ಋತುಚಕ್ರ ಕುರಿತ ತಮ್ಮ ಲೇಖನ ಹಾಗು ಕವನ ಚನ್ನಾಗಿದೆ ಮತ್ತು ಅಷ್ಟೇ ಅರ್ಥಗರ್ಬಿತ ವಾಗಿದೆ, ನೀವು ಶ್ರೀಯುತ ಇಟ್ನಾಳರಿಗೆ ಬರೆದ ಪ್ರತಿಕ್ರಿಯೆ ಓದಿದಾಗ ನನಗೆ ಮಾನ್ಯ ಡಿ.ವಿ.ಜಿ ಅವರ ಕಗ್ಗದ ಸಾಲುಗಳು ನೆನಪಾದವು
' ಋತುಚಕ್ರ ತಿರುಗುವುದು,ಕಾಲನೆದೆ ಮರಗುವುದು|
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು||
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ |
ಸತತ ಕೃಷಿಯೋ ಪ್ರಕೃತಿ ಮಂಕುತಿಮ್ಮ ||
ವಂದನೆಗಳು ನಾಗೇಶ್ ಅವರೆ, ರಮೇಶ ಕಾಮತ್
In reply to ಉ: ಋತು ಚಿತ್ತ ಬದಲಾಗುವತ್ತ by swara kamath
ಉ: ಋತು ಚಿತ್ತ ಬದಲಾಗುವತ್ತ
ಕಾಮತ್ ಸಾರ್, ನಮಸ್ಕಾರ. ನೀವು ಬರೆದ ಕಗ್ಗದಿಂದಾಯ್ದ ಸಾಲು ನೋಡಿದಾಗ ಬೇಂದ್ರೆಯವರ 'ಯುಗಯುಗಾದಿ ಕಳೆದರೂ ..' ನಲ್ಲಿರುವ ಇದೆ ಅರ್ಥದ ಸಾಲಿನ ನೆನಪನ್ನು ಮರುಕಳಿಸಿತು - '......ಒಂದೆ ಒಂದು ಬಾಳಿನಲ್ಲಿ, ಒಂದೆ ಬಾಲ್ಯ, ಒಂದೆ ಹರೆಯ ನಮಗದಷ್ಟೆ ಏತಕೊ?' ನಿಜ ಹೇಳಬೇಕೆಂದರೆ ನಾವು ಏನೆಲ್ಲಾ ಬರೆಯಲು ಸಾಧ್ಯವಿದೆಯೊ, ಅದನ್ನೆಲ್ಲ ನಮ್ಮ ಹಿರಿಯ ಕವಿಗಳು ಈಗಾಗಲೆ ಬರೆದು ಮುಗಿಸಿಬಿಟ್ಟಿದ್ದಾರೆ. ನಾವೇನೆ ಬರೆದರೂ, ಅದು ಆ ನೈಜ ಮೂಲದ ನಾನಾರೂಪಿ ನಕಲಷ್ಟೆ - ಆದರೆ ಆ ಪ್ರಕೃತಿ ಭಾವದ ಸಮಗ್ರತೆ, ವಿಶಾಲತೆ ಬರೆದಷ್ಟೂ ಮಿಕ್ಕುವ ಸರಕು ಎನ್ನುವುದು ಅಷ್ಟೆ ನಿಜ. ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು :-)