ಋಷಿ, ಮುನಿ, ಸಾಧು, ಸಂತರೆಂದರೆ… (ಭಾಗ 2)

ಋಷಿ, ಮುನಿ, ಸಾಧು, ಸಂತರೆಂದರೆ… (ಭಾಗ 2)

ಹಿಂದಿನ ಸಂಚಿಕೆಯಲ್ಲಿ ಆಸ್ತಿಕ, ನಾಸ್ತಿಕ, ಗೃಹಸ್ಥ, ಋಷಿ ಮತ್ತು ಮಹರ್ಷಿಗಳ ಬಗ್ಗೆ ಮಾಹಿತಿಗಳನ್ನು ಪಡೆದಿರುವಿರಿ. ಮುಂದುವರಿದ ಭಾಗವಾಗಿ ಈ ಲೇಖನದಲ್ಲಿ ಮುನಿ, ಸಾಧು ಮತ್ತು ಸಂತರ ಬಗ್ಗೆ ತಿಳಿಸುವ ಪುಟ್ಟ ಪ್ರಯತ್ನವಿದೆ.

ಮೌನ ಎಂಬ ಪದದಿಂದ “ಮುನಿ” ಪದದ ಉತ್ಪನ್ನವಾಗಿದೆ. ಮುನಿಗಳು ಜ್ಞಾನಿಗಳು ಮತ್ತು ತಪೋನಿರತರು. ನಾರದ ಮುನಿಯ ಹೆಸರನ್ನು ನೀವು ಓದಿರಬಹುದು, ಅರಿತಿರಬಹುದು. ಮುನಿಗಳು ಮೌನವಾಗಿ ಅಥವಾ ಬಹಳ ಕಡಿಮೆ ಮಾತನಾಡಿ ಜ್ಞಾನಾರ್ಜನೆಯಲ್ಲಿ ತೊಡಗುತ್ತಾರೆ. ತಾವು ಹೊಸದಾಗಿ ಕಂಡುಕೊಂಡ ಜ್ಞಾನವನ್ನು ಶಿಷ್ಯರಿಗೆ ವರ್ಗಾಯಿಸುತ್ತಾರೆ. ಮುನಿಗಳು ವೇದ ಗ್ರಂಥಗಳನ್ನು ಚೆನ್ನಾಗಿ ತಿಳಿದುಕೊಂಡು ಜನರಿಗೆ ಬೋಧನೆ ಮಾಡುತ್ತಿದ್ದರು. ಮೌನದಿಂದಿರುವಾಗ ಅವರು ದೇವರನ್ನು ಧ್ಯಾನ ಮಾಡುತ್ತಾರೆ. ಮುನಿಗಳು ಜಗತ್ತಿನ ಯಾವುದೇ ವಿಷಯಗಳಿಗೆ ಆಕರ್ಷಿತರಾಗುವುದಿಲ್ಲ. ಅವರು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಭಗವಂತನ ಧ್ಯಾನ ಮಾಡಿ ಜ್ಞಾನಗಳಿಸುತ್ತಿದ್ದರು. ಮುನಿಗಳಿಗೆ ಸುಖ ದುಃಖ ಸಂತಸ ಎಲ್ಲವೂ ಸಮಾನ. ಪಂಚೇಂದ್ರಿಯಗಳು, ಕರ್ಮೇಂದ್ರಿಯಗಳು,‌ ರಸನೇಂದ್ರಿಯಗಳು ಎಲ್ಲವನ್ನೂ ನಿಯಂತ್ರಣದಲ್ಲಿಡುವ ಮಹಾ ಶಕ್ತಿಯ ಸಿದ್ಧಿಯನ್ನು ಅವರು ಗಳಿಸಿರುತ್ತಿದ್ದರು. ಮುನಿಗಳಾದವರು ಋಷಿಗಳೆಂದು ಹೇಳುವಂತಿಲ್ಲ. ಋಷಿಗಳು ಬೋಧಕರು. ಆದರೆ ಮುನಿಗಳು ಮನಸನ್ನು ಕೇಂದ್ರೀಕರಿಸಿ ಭಗವದ್‌ ಧ್ಯಾನದೊಂದಿಗೆ ಜ್ಞಾನವನ್ನು ಸ್ವಯಂ ಗಳಿಸುತ್ತಿದ್ದರು ಮತ್ತು ಕಂಡ ಸತ್ಯವನ್ನು ಲೋಕಕ್ಕೆ ಸಾರುತ್ತಿದ್ದರು. ಲೋಮಾಶ, ಜಡಭರತ ರಂತಹ ಮುನಿಗಳು ಆತ್ಮ ಸಂಯಮಿಗಳಾಗಿದ್ದು ಮಹಾಜ್ಞಾನಿಗಳಾಗಿದ್ದರೆಂದು ಹೇಳಲಾಗಿದೆ.

ಸಾಧುಗಳಲ್ಲಿ ಇತ್ತೀಚೆಗೆ ನಾವು ಮಹಾಕುಂಭಮೇಳದ ಸಂದರ್ಭದಲ್ಲಿ ಕೇಳಿದ ಹೆಸರು “ನಾಗಾ ಸಾಧು” ಸಾಧಕ ಎಂಬ ಪದದಿಂದ ಸಾಧು ಪದದ ಸೃಷ್ಟಿಯಾಗಿದೆ. ಸಾಧುಗಳು ಏಕೆ ಸಾಧಕರೆಂದು ಗೌರವಕ್ಕೆ ಅರ್ಹರಾಗಿದ್ದಾರೆ ಎಂಬ ಸಂದೇಹ ಸಹಜ. ಯೋಗ ಮತ್ತು ಭಕ್ತಿ ಮಾರ್ಗದ ಮೂಲಕ ಮೋಕ್ಷ ಪಡೆಯುವ ಸಾಧಕರಿವರು. ಅವರು ಋಷಿಗಳು ಮತ್ತು ಮುನಿಗಳಂತೆ ಒಂದೇ ಕಡೆ ನೆಲೆಸುವುದಿಲ್ಲ. ಪಾದಯಾತ್ರೆಯ ಮೂಲಕ ತೀರ್ಥಾಟನೆ ಮಾಡುತ್ತಿರುತ್ತಾರೆ. ಹೆಚ್ಚಿನ ಆಧ್ಯಾತ್ಮಿಕ ಚಿಂತಕರಾಗಿರುತ್ತಾರೆ ಮತ್ತು ಸಾಧುಗಳು ಕನಿಷ್ಠ ಆಹಾರ ಸೇವಿಸುತ್ತಾರೆ. ತಮ್ಮ ಆಹಾರವನ್ನು ಭಿಕ್ಷೆಯೆತ್ತುತ್ತಾರೆ. ಕಠಿಣ ಧ್ಯಾನ, ಪ್ರಾಣಾಯಾಮ ಮತ್ತು ಮಂತ್ರಪಠಣ ಇವರ ದಿನಚರಿ. ಸಾಧುಗಳು ಕುಟುಂಬ ಬಂಧದಿಂದ ದೂರವಿದ್ದು ವಿರಕ್ತರೆನಿಸುತ್ತಾರೆ. ಸನ್ಯಾಸವೇ ಅವರ ಬದುಕು. ಸಾಧುಗಳು ತಪಸ್ವಿಗಳೂ ಹೌದು, ಪರೋಪಕಾರಿಗಳೂ ಹೌದು.

ಸಂತರು ಶಾಂತ ಎಂಬ ಪದದಿಂದ ಹುಟ್ಟಿತೆಂದು ಹೇಳುತ್ತಾರೆ. ಶಾಂತ ಎಂಬುದ ಸಂಸ್ಕೃತ ಪದ. ಸಂತ ಕನ್ನಡ ಪದ. ಸಂತರು ಸಮಾಜವು ಸಂತಸದಿಂದ ಶಾಂತವಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿಯೇ ಸಂತರು ಸಾಹಿತ್ಯದ ರಚನೆಯಲ್ಲೂ ತೊಡಗುತ್ತಾರೆ. ಸಾಹಿತ್ಯದಿಂದ ಸರ್ವರ ಹಿತ ಸಾಧ್ಯವಿದೆಯೆಂಬುದು ನಮಗೂ ತಿಳಿದಿದೆ. ಸಂತರಲ್ಲಿ ಸದ್ಗುಣಗಳು ತುಂಬಿರುತ್ತವೆ. ಅವರು ಆಧ್ಯಾತ್ಮ ಮತ್ತು ಜಗದೊಳಗಿನ ಸಂಬಂಧವನ್ನು ಚೆನ್ನಾಗಿ ಅರಿತವರು. ಆಧ್ಯಾತ್ಮರಹಿತವಾಗಿ ಜಗದ ಯಾವುದೇ ಕಾರ್ಯಗಳು ನಡೆಯುವುದಿಲ್ಲ ಎಂಬುದನ್ನು ಸಂತರು ಬಹಳ ಚೆನ್ನಾಗಿ ಅರಿತು ವ್ಯವಹರಿಸುತ್ತಾರೆ. 

ಕಬೀರ, ಪುರಂದರ, ಕನಕ ಇವರೆಲ್ಲರೂ ಭಗವಂತನ ದಾಸರೆಂಬುದಾಗಿ ತಮ್ಮನ್ನು ಗುರುತಿಸಿಕೊಂಡ ಮಹಾ ಸಂತರು. ಭಕ್ತಿಸಾಹಿತ್ಯಕ್ಕೆ ಸಂತರ ಕೊಡುಗೆ ಅದ್ಭುತವೇ ಸರಿ. ಋಷಿ, ಮುನಿ, ಸಾಧು, ಸಂತರಾದಿಯಾಗಿ ಎಲ್ಲರನ್ನೂ ಪೂಜ್ಯರೆಂದು ಗೌರವಿಸುತ್ತೇವೆ. ಅವರ ಮಾತುಗಳಿಗೆ ನಾವು ಕಿವಿಯಾಗುತ್ತೇವೆ. ಅವರ ಭಾವನೆಗಳಿಗೆ ನಾವು ಸ್ಪಂದಿಸುತ್ತೇವೆ. ಜ್ಞಾನದ ಸಾಕಾರದಲ್ಲಿ ಪುರಾಣದಿಂದ ತೊಡಗಿ ಇಂದಿನವರೆಗೆ ಇವರ ಪರಿಶ್ರಮ, ಆಲೋಚನೆ, ಕೊಡುಗೆ ಸದಾ ವಂದನೀಯ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ