ಎಂತಹ ಮಧುರ ಪ್ರೀತಿ
ಇತ್ತೀಚಿಗಷ್ಟೇ ಮುಂಬೈನ ಪನ್ವೆಲ್ ಇಂದ ಕೇರಳಕ್ಕೆ ನೇತ್ರಾವತಿ ಎಕ್ಸ್-ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ, ಸೆಕೆಂಡ್ ಕ್ಲಾಸ್ ಎ.ಸಿ ಯಾ ಮೇಲಿನ ಸೀಟು ನನ್ನದು, ಸುಮಾರು ಇಪ್ಪತ್ತ ಮೂರು ಗಂಟೆಗಳ ಪ್ರಯಾಣ, ಪ್ರಯಾಣಕ್ಕೆ ಜೊತೆಯಾಗಿದ್ದು ನನ್ನ ಕೆಲವು ಆಫೀಸಿನ ಕೆಲಸಗಳು ಹಾಗು ತೇಜಸ್ವಿಯವರ ಅಡ್ವೆಂಚರ್, ಇದರ ಜೊತೆಯಲ್ಲಿ ನನ್ನ ಕಂಪಾರ್ಟ್-ಮೆಂಟಿನಲ್ಲಿ ಕುಳಿತ ನವ ವಿವಾಹಿತ ಜೋಡಿ, ಮರಾಠಿ ಭಾಷೆಯಲ್ಲಿ ಮಾತಾಡುತ್ತ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಅದುವರೆಗೂ ಏಕಾಂತದಲ್ಲಿ ಕುಳಿತ ಅವರಿಗೆ ನಾನು ಬಂದಿದ್ದು ತುಸು ಮುಜುಗರವನ್ನು ತಂದಂತಿತ್ತು. ಹುಡುಗಿಯ ಕೈ ತುಂಬಾ ಮದರಂಗಿಯ ಚಿತ್ತಾರ ಎದ್ದು ಕಾಣುತ್ತಿತ್ತು, ಆಕೆಯ ಮುಖದ ಸೌಂದರ್ಯ, ಅವಳ ಗಂಡನ ಕಣ್ಣಿನಲಿ ಪ್ರತಿಫಲಿಸುತ್ತಿತ್ತು. ಆತ ಆಕೆಯನ್ನು ಹೂವಿನಂತೆ ಕಾಪಡಿಕೊಳ್ಳುತ್ತಿದ್ದ, ಆಕೆಯ ಕೈ ಬೆರಳುಗಳನ್ನು ನಿಧಾನವಾಗಿ ನೀವುತ್ತಾ ಆಕೆಯ ಆಯಾಸವನ್ನು ತಣಿಸಲು ಯತ್ನಿಸುತ್ತಿದ್ದ, ಅವಳ ಮದರಂಗಿ ತುಂಬಿದ ಕೈ ಮೇಲಿನ ಮೃದು ಬಣ್ಣ ಅವನಿಗೆ ಅದೇನೊ ರೋಮಾಂಚನ ಉಂಟುಮಾಡುತ್ತಿತ್ತೇನೊ! ಅದಾಗಲೇ ನಾನು ಮೇಲಿನ ಸೀಟಿನಲ್ಲಿ ಕುಳಿತ ವಿಷಯವನ್ನೇ ಅವರಿಬ್ಬರೂ ಮರೆತಂತಿತ್ತು.
ಮೊದಲ ಮಳೆಗೆ ಹಾತೊರೆಯುವ ಬರಡು ಭೂಮಿಯಂತೆ ಅವಳ ತುಟಿ ಅದುರುತ್ತಿತ್ತು. ಇಬ್ಬರಲ್ಲೂ ನಾಚಿಕೆ ಮನೆ ಮಾಡಿತ್ತು. ಆಗಾಗ ಬರುವ ಚಾ-ವಾಲಗಳಲ್ಲಿ ಅವನು ಒಂದೊಂದು ಚಹ ತೆಗೆದುಕೊಂಡು ಅವಳು ಕುಡಿಯುವಂತೆ ಒತ್ತಾಯಿಸುತ್ತಿದ್ದ. ಆಕೆ ಕಿಟಕಿಗೆ ಒರಗಿ ಕುಳಿತಾಗ, ತನ್ನ ಸಣ್ಣ ಕ್ಯಾಮರದಿಂದಾ ಅವಳ ಮುದ್ದು ನೋಟವನ್ನು ಸೆರೆಹಿಡಿಯುತ್ತಿದ್ದ. ಅವರ ಪ್ರೇಮ ಸಲ್ಲಾಪದಲ್ಲಿ ನಾನು ಕಪ್ಪು ಚುಕ್ಕಿಯೆನೋ ಎಂಬ ಭಾವ ನನ್ನಲ್ಲಿ ಮನೆಮಾಡಿತು. ನಾನು ಸ್ವಲ್ಪ ಸಮಯದ ಮಟ್ಟಿಗೆ ಎದ್ದು ಬಾಗಿಲ ಬಳಿಯಲ್ಲಿ ಹೋಗಿ ಕುಳಿತೆ. ತಣ್ಣನೆಯ ಗಾಳಿ ನನ್ನನ್ನು ಸವರಿ ಪ್ರೇಮಿಸುವಂತೆ ನಟಿಸಿತು, ಗಾಳಿಯ ಹಿತ ಅಪ್ಪುಗೆ ನನಗೆ ಹೊಸ ಚೈತನ್ಯ ಮೂಡಿಸಿತು, ತೇಜಸ್ವಿಯವರ ಅಡ್ವೆಂಚರ್ ಪುಸ್ತಕ ಹಿಡಿದು ಓದಲಾರಂಬಿಸಿದೆ. ಎಷ್ಟು ಹೊತ್ತೆಂದು ಬಾಗಿಲ ಬಳಿ ಕುಳಿತಿರಲು ಸಾಧ್ಯ? ರೈಲು ವಯ್ಯಾರದ ಹುಡುಗಿಯಂತೆ ಓಲಾಡುತ್ತಿತು. ಹಾಗಾಗಿ ಹಿಂತಿರುಗಿ ನನ್ನ ಕಂಪಾರ್ಟ್-ಮೆಂಟಿಗೆ ಬಂದೆ. ಅವರಿಬ್ಬರೂ ಪ್ರೇಮದಲ್ಲಿ ಮುಳುಗಿ ಹೋಗಿದ್ದರು. ಆಕೆ ಆತನ ಎದೆಗೊರಗಿ ತನ್ನ ಭವಿಷ್ಯದ ಕನಸುಗಳನ್ನು ಅಲ್ಲಿ ಬರೆದಿಡುತ್ತಿದ್ದಳು, ಅವನು ಆದಷ್ಟು ಕನಸುಗಳನ್ನು ಎದೆಯೊಳಗೆ ಹಿಡಿದಿಡುವ ಭರವಸೆ ತೋರುತ್ತಿದ್ದ. ಆಕೆಯ ತಲೆಯ ನೆತ್ತಿಯ ಮೇಲೆ ಅವನ ಕೆನ್ನೆ ಒತ್ತಿಕೊಂಡಿತ್ತು, ನಾನು ಬಂದದ್ದು ಅವರ ಪ್ರೇಮಕ್ಕೆ ಸ್ವಲ್ಪವೂ ಅಡ್ಡಿಯಾಗಲಿಲ್ಲ. ಕುಳಿತಲ್ಲಿಯೇ ಕುಳಿತು ಜಡ್ಡುಗಟ್ಟಿದ ಆಕೆಯ ಮೆಹಂದಿ ತುಂಬಿದ ಮೃದು ಕಾಲುಗಳಿಗೆ ಅವನು ಪ್ರೀತಿಯಿಂದ ನೇವರಿಸಿ ನೋವನ್ನು ಹೀರುತ್ತಿದ್ದ. ಅದೆಷ್ಟೋ ಹೊತ್ತಿನ ವರೆಗೆ ಅವಳ ಕಾಲ್ಬೆರಳುಗಳನ್ನು ಎಳೆದು, ಕೈಗಳನ್ನು ನೇವರಿಸಿ ಮನ ಜಡ್ಡುಗಟ್ಟದಂತೆ ಕಿಲ ಕಿಲ ನಗಿಸುತ್ತಿದ್ದ. ಕ್ಷಣ ಕ್ಷಣಕ್ಕೂ ಅವಳ ಕಣ್ಣುಗಳಲ್ಲಿ ಸಾರ್ಥಕತೆಯ ಭಾವ ನದಿಯಾಗಿ ಹರಿಯುತ್ತಿತ್ತು.
ಪ್ರಯಾಣದ ಅದ್ಭುತ ಸೆಳೆತವನ್ನು, ಅವನ ತೋಳ ತೆಕ್ಕೆಯಲ್ಲಿ ಆಕೆ ಸಂಪೂರ್ಣ ಅನುಭವಿಸುತ್ತಿದ್ದಳು. ಜೀವನ ಪ್ರಯಾಣವೇ ಆಗಲಿ, ರೈಲು ಪ್ರಯಾಣವೇ ಆಗಲಿ, ನಮ್ಮ ಕನಸುಗಳನ್ನು(ಲಗೇಜುಗಳನ್ನು) ಸುರಕ್ಷಿತವಾಗಿ ನೋಡಿಕೊಳ್ಳುವವರು ಇಲ್ಲವೆಂದರೆ, ಪ್ರಯಾಣ ಬರಿಯ ಗೊಂದಲದಲ್ಲಿಯೇ ಮುಗಿದು ಬಿಡುತ್ತದೆ, ಯಾವ ಸಾರ್ಥಕತೆಯೇ ಇಲ್ಲದೇ. ಇಲ್ಲಿ ನನ್ನ ಅನುಭವಕ್ಕೆ ಬಂದ ಇನ್ನೊಂದು ವಿಚಾರವೆಂದರೆ, ನಾವು ಕಡಿಮೆ ಲಗೇಜುಗಳನ್ನು ಹೊಂದಿದಷ್ಟು, ಕಡಿಮೆ ಒತ್ತಡದಲ್ಲಿ ಪ್ರಯಾಣ ಮಾಡುತ್ತೇವೆ. ಅದನು ಕನಸುಗಳಿಗೆ ಅನ್ವಯಿಸಿದರೆ ಹೇಗೆ ?? ಕಡಿಮೆ ಕನಸುಗಳು ಇದ್ದಷ್ಟು ನಮ್ಮ ಬದುಕಿನ ಪ್ರಯಾಣವೂ ಸುಗಮವಾಗಿರುತ್ತದೆಯಲ್ಲ. ನಮ್ಮ ಕನಸುಗಳನು ನಾವು ಪದೇ ಪದೇ ಬದುಕಿಗೆ ಹತ್ತಿರವಾಗುವಂತೆ ನಮ್ಮನ್ನು ಜೇವಂತವಾಗಿರಿಸಬೇಕಾಗುತ್ತದೆ.
ಅವರಿಬ್ಬರ ಸಂಭಾಷಣೆ ನನಗೇನು ಅರ್ಥ್ವಾಗುತ್ತಲೇ ಇರಲಿಲ್ಲ. ಆದರೆ ಆದರ ಸಾರವನ್ನು ನಾನು ಗ್ರಹಿಸಬಲ್ಲವನಾಗಿದ್ದೆ. ಆಕೆ ಒಳಗೊಳಗೆ ಮುಸಿ ಮುಸಿ ನಕ್ಕಾಗ ಅವನಿಗೆ ತಾನೇನೋ ಮಹತ್ತರವಾದುದನ್ನು ಸಾಧಿಸಿದ್ದೇನೆ ಎನ್ನುವ ಗತ್ತು ಬರುತ್ತಿತ್ತು. ಅವಳ ಹಸಿವಾಗಲಿ, ಅವಳ ನೋವಾಗಲಿ, ಅವಳು ಹೇಳುವ ಮುನ್ನವೇ ಅದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಗೆ ಆತ ತಲುಪಿಯಾಗಿತ್ತು....... ಪ್ರೀತಿ ಕೊಡುವ ಜೀವಕ್ಕೆ ಪ್ರೀತಿಯನ್ನು ಪಡೆದುಕೊಳ್ಳುವ ಜೀವವೊಂದು ಈ ಪ್ರಪಂಚದಲ್ಲಿ ಇರಲೇ ಬೇಕು ಅನ್ನಿಸಿತು ನನಗೆ. ಎಷ್ಟೋ ಬಾರಿ ಕಲಹಗಳು ಗಂಡ ಹೆಂಡತಿಯ ಮದ್ಯ ಉಂಟಾದಾಗ ಅಲ್ಲಿ ಇರುವುದು ಬರಿಯ ಒಂದು ತೆಳು ಪರದೆ, ಆ ಪರದೆಯನ್ನು ತಕ್ಷಣವೆ ಕಿತ್ತು ಹಾಕಲಿಲ್ಲ ಎಂದರೆ ಅದು ಗಟ್ಟಿಗೊಂಡು ಇಬ್ಬರನ್ನು ಬೇರೆ ಬೇರೆ ದಿಕ್ಕುಗಳಿಗೆ ಚಲಿಸುವಂತೆ ಮಾಡಿಬಿಡುತ್ತದೆ. ಪ್ರೀತಿಯ ಹಲವು ಮುಖಗಳಲ್ಲಿ, ಒಬ್ಬರ ಎದುರು ಇನ್ನೊಬ್ಬರು ಸೋತು ಶರಣಾಗುವುದರಲ್ಲಿ ನಿಜವಾದ ಗೆಲುವಿದೆ ಅನಿಸುತ್ತದೆ.
ಗಂಡಸಿನ ಗಟ್ಟಿತನ, ಹೆಣ್ಣಿನ ಮೃದು ಕೆನ್ನೆಯ ಮುಂದೆ ಸಂಪೂರ್ಣ ಸೋತುಬಿಡುತ್ತದೆ. ಆ ಸೋಲೇ ಅವನ ನಿಜವಾದ ಗೆಲುವಾಗಿರುತ್ತದೆ. ಹೆಣ್ಣಿನ ಮಾಧುರ್ಯದ ಬಗೆಗೆ ಹಾಗು ಆಕೆಯ ವಯ್ಯಾರದ ಬಗೆಗೆ ಗಂಡು ಎಂದಿಗೂ ಕುತುಹಲನಾಗಿಯೇ ಇರುತ್ತಾನೇನೊ. ಅದಕ್ಕಾಗಿಯೇ ಇರಬೇಕು ಆಕೆ ಒಂದು ಅಕ್ಷಯ ಪಾತ್ರೆಯಂತೆ ಸದಾ ತುಂಬುತ್ತಲೇ ಇರುತ್ತಾಳೇ.
ಈ ಪ್ರಯಾಣ ಅದೇನೊ ಹೊಸ ಭಾವವನ್ನು ನನ್ನಲ್ಲಿ ಹುಟ್ಟುಹಾಕಿತು. ಸಂಬಂದಗಳ ಗಟ್ಟಿತನದಲ್ಲಿ ನೀರಿಕ್ಷೆಗಳಿಗಿಂತ, ಪ್ರತಿಫಲಾಪೆಕ್ಷೆಗಿಂತಾ, ನಿಸ್ವಾರ್ಥತೆ ಬಹಳ ಮುಖ್ಯಎನಿಸಿಬಿಟ್ಟಿತು,,,,,,, ಆ ಪ್ರೇಮ ತುಂಬಿದ ವಿವಾಹಿತರಿಗೆ ಶುಭವಾಗಲಿ.
-ಜೀ ಕೇ ನ
Comments
ಉ: ಎಂತಹ ಮಧುರ ಪ್ರೀತಿ
:)