ಎಂತಹ ಸನ್ನಿವೇಶದಲ್ಲೂ ಮಾನವೀಯತೆ ಮರೆಯಬಾರದು..!

ಎಂತಹ ಸನ್ನಿವೇಶದಲ್ಲೂ ಮಾನವೀಯತೆ ಮರೆಯಬಾರದು..!

ಮುರುಘಾ ಮಠದ ಸ್ವಾಮಿಗಳು ಸಾಕಷ್ಟು ಒತ್ತಡದ ನಂತರ ಅನಿವಾರ್ಯವಾಗಿ ಬಂಧನಕ್ಕೆ ಒಳಗಾದರು. ‌ಕಾನೂನು‌ ತನ್ನ ಕ್ರಮವನ್ನು ಕೈಗೊಳ್ಳಲಿ. ಆದರೆ ಅದೇ ಸಮಯದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು. ಈ ವಿಷಯದಲ್ಲಿ ವ್ಯಂಗ್ಯ ಅಥವಾ ತೀರಾ ಅಮಾನವೀಯ ಅನುಮಾನ ಬೇಡ.

ಏಕೆಂದರೆ 65 ವರ್ಷದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಿ ವ್ಯಕ್ತಿ. ಕಾರಣಗಳು ಏನೇ ಇರಲಿ ತಾನು ಜೈಲಿಗೆ ಹೋಗಬೇಕಾಗುತ್ತದೆ ಮತ್ತು ಇನ್ನು ಉಳಿದ ಮುಂದಿನ ಭವಿಷ್ಯ ಮತ್ತಷ್ಟು ಯಾತನಾಮಯವಾಗಿರುತ್ತದೆ ಎಂದು ಊಹಿಸಿಕೊಂಡು ಆಂತರಿಕ ಕ್ಷೋಭೆಗೆ ಒಳಗಾಗುವುದು ಸಹಜ. ಆತ ಎಷ್ಟೇ ದೃಢ ಮನಸ್ಕನಾಗಿರಲಿ ಇಂತಹ ಸಂದರ್ಭಗಳಲ್ಲಿ ಆಂತರ್ಯದಲ್ಲಿ ಕುಸಿಯುವುದು ವಾಸ್ತವ. ಆ ಕಾರಣದಿಂದಾಗಿ ಅವರಿಗೆ ಮೊದಲೇ ಇರುವು ಬಿಪಿ, ಶುಗರ್, ಕೊಲೆಸ್ಟರಾಲ್‌, ಅಸಿಡಿಟಿ ಒಂದಕ್ಕೊಂದು ಪೈಪೋಟಿ ನಡೆಸಿ ಹೆಚ್ಚಾಗುತ್ತಾ ಇರುತ್ತದೆ. ಇದು ‌ಅವರ ಹೃದಯದ ಮೇಲೆ ಒತ್ತಡ ಹೇರಿ ನೋವು ಕಾಣಿಸಿಕೊಳ್ಳುವುದು ಸಹಜ. ಮನಸ್ಸಿಗೆ ವಿಶ್ರಾಂತಿ ಇಲ್ಲದೇ ನಿದ್ದೆ ಬಾರದೆ ಆರೋಗ್ಯ ಏರುಪೇರಾಗುತ್ತದೆ. ಕೆಲವೊಮ್ಮೆ ನಾಟಕವೂ ಇರಬಹುದು. ಆದರೆ ಅದನ್ನು ನಿರ್ಲಕ್ಷಿಸುವುದು‌ ಸರಿಯಲ್ಲ. ಒಂದೆರಡು ದಿನ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿ ಇರಲಿ‌ ಬಿಡಿ. ಅವರೂ ಈ ಅವಧಿಯಲ್ಲಿ ಸ್ವಲ್ಪ ಒತ್ತಡ ಮುಕ್ತರಾಗುತ್ತಾರೆ.  ಕೇವಲ ಈ ಪ್ರಕರಣದಲ್ಲಿ ಮಾತ್ರವಲ್ಲ ಇತರೆ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳ ಜೀವವನ್ನು ಸಹ ರಕ್ಷಿಸಬೇಕಾಗುತ್ತದೆ. ಅದರ ಜೊತೆಗೆ ಆ ಸಮಯದಲ್ಲಿ ಕಾನೂನು ತನ್ನ ಕ್ರಮಗಳನ್ನು ಮುಂದುವರಿಸಲಿ. ಆದರೆ ಯಾರೇ ಆದರೂ ಮಾನವೀಯತೆ ಮರೆಯಬಾರದು.

ಅನೇಕ ದೊಡ್ಡ ರಾಜಕಾರಣಿಗಳು, ಶ್ರೀಮಂತರು, ಧಾರ್ಮಿಕ ಮುಖಂಡರು, ಸಿನಿಮಾ ನಟ ನಟಿಯರು ಮುಂತಾದವರು ಸಹಜ ಸ್ಥಿತಿಯಲ್ಲಿ ತಾವು ಉತ್ತಮ ಸ್ಥಾನ ಹೊಂದಿದ್ದಾಗ ಅವರ ಮಾನಸಿಕ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಒಂದಷ್ಟು ಅಹಂಕಾರ - ಹೆಮ್ಮೆ ಇರುತ್ತದೆ. ತಮಗಿರುವ ಸಂಪರ್ಕಗಳು ತಮ್ಮನ್ನು ಎಲ್ಲಾ ಕಷ್ಟಗಳಿಂದಲೂ‌ ಪಾರು ಮಾಡುತ್ತವೆ ಎಂದು ಬಲವಾಗಿ ನಂಬಿರುತ್ತಾರೆ.

ಆದರೆ ಅದು‌ ಎಲ್ಲಾ ಸಂದರ್ಭದಲ್ಲಿಯೂ ನಿಜವಾಗುವುದಿಲ್ಲ. ಸದಾ ವಿಐಪಿಯಾಗಿ ಸಹಾಯಕರ ಮೇಲೆಯೇ ಅವಲಂಬಿಸಿರುವವರು  ಇಂತಹ ಸಂದರ್ಭಗಳಲ್ಲಿ ಬೇಗ ವಿಚಲಿತರಾಗಿ ಗೊಳೋ ಎಂದು ಅಳುತ್ತಾರೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಜನರ ಮಧ್ಯೆ ಸದಾ ಇದ್ದವರು ಏಕಾಂಗಿ ತನಕ್ಕೆ ಹೆದರುತ್ತಾರೆ ಮತ್ತು ಅನಾಥ ಪ್ರಜ್ಞೆಗೆ ಬಲಿಯಾಗುತ್ತಾರೆ. ಆಗ ಆರೋಗ್ಯದ ಏರು ಪೇರು ಸಹಜ.

ಸಾಮಾನ್ಯ ಜನರಿಗೆ ಇದು ಅಷ್ಟಾಗಿ ಕಾಡುವುದಿಲ್ಲ. ಎಷ್ಟೋ ಜನ ಅಯ್ಯೋ ಈಗಿನ ಈ ಬದುಕಿಗಿಂತ ಜೈಲೇ ವಾಸಿ ಎಂದು ಲೋಕಾಭಿರಾಮವಾಗಿ ಮಾತನಾಡುವುದು ಕೇಳಿಲ್ಲವೇ. ಕಾರಣ ಅವರ ಸಹಜ ಬದುಕಿನ ಒತ್ತಡಗಳು. ಜೈಲೇನು ಉತ್ತಮವಲ್ಲ. ಆದರೆ ಅದು ನೊಂದ ಮನದ ಆ ಕ್ಷಣದ ಮಾತು ಮಾತ್ರ. ಆದ್ದರಿಂದ ಸ್ವಾಮಿಗಳು ಅವಶ್ಯಕತೆ ಇರುವ ಚಿಕಿತ್ಸೆ ಪಡೆಯಲಿ ಬಿಡಿ. ಆದರೆ ಅದು ಅತಿಯಾಗಿ ಉದ್ದೇಶಪೂರ್ವಕವಾಗಿ ಆದಾಗ ಮತ್ತೆ ಅದನ್ನು ಪ್ರಶ್ನಿಸಬೇಕಾಗುತ್ತದೆ. ಆದರೆ   ಸಿನಿಕರಾಗುವುದು ಬೇಡ. ಎಲ್ಲರ ಜೀವವೂ ಅಮೂಲ್ಯ.

ಯಾವುದೇ ಸನ್ನಿವೇಶದಲ್ಲೂ ದ್ವೇಷ ಅಸೂಯೆ ಕೋಪ‌ ಸೇಡುಗಳು ನಮ್ಮ ಮನಸ್ಸಿನಲ್ಲಿ ಮೇಲುಗೈ ಪಡೆಯಲು ಬಿಡದೆ ಪ್ರೀತಿ ಸಹನೆ ಕರುಣೆ ಮಾನವೀಯತೆ ಸದಾ ನಮ್ಮ ಬದುಕಿನ ದಿನನಿತ್ಯದ ಚಟುವಟಿಕೆಗಳ ಭಾಗವಾಗಿರುವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ನೊಂದ ಆ ಮಕ್ಕಳ ಭವಿಷ್ಯ ಇನ್ನಾದರೂ ಸರಿಯಾಗಲಿ. ಹಾಗೆಯೇ ಎಲ್ಲಾ ಸ್ವಾಮಿಗಳ ನಡತೆಯೂ ಸುಧಾರಣೆಯಾಗಲಿ ಎಂದು ಆಶಿಸುತ್ತಾ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ