ಎಂಥಾ ಲೋಕವಯ್ಯಾ! ಇದು ಎಂಥಾ ಲೋಕವಯ್ಯಾ!
(’ಸುಧಾ’ ೨೦೧೦ರ ಹಾಸ್ಯ ಸಂಚಿಕೆಯಲ್ಲಿ ಪ್ರಕಟಿತ ವಿಡಂಬನೆ)
ಟಿವಿಯ ಎಲ್ಲಾ ಚಾನೆಲ್‌ಗಳ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ತಂದೆತಾಯಂದಿರು ಮಕ್ಕಳನ್ನು ಶಾಲೆಗೆ ಕಳಿಸುವ ಅಗತ್ಯವೇ ಇಲ್ಲ. ಟಿವಿ ಆನ್ ಮಾಡಿ ಮಕ್ಕಳ ಕೈಯಲ್ಲಿ ರಿಮೋಟ್ ಕೊಟ್ಟು ಟಿವಿಯ ಮುಂದೆ ಕೂರಿಸಿದರೆ ಸಾಕು. ಶಾಲೆಯಲ್ಲಿ ಕಲಿತುಕೊಳ್ಳಲು ಸಾಧ್ಯವಾಗದ್ದನ್ನೂ ಮಕ್ಕಳು ಟಿವಿ ನೋಡಿ ಕಲಿತುಕೊಂಡುಬಿಡುತ್ತವೆ. ಅವು ಒಂದೊಂದು ವರ್ಷ ಟಿವಿ ನೋಡಿದಂತೆಲ್ಲ ಅವಕ್ಕೆ ಒಂದೊಂದು ತರಗತಿಯ ತೇರ್ಗಡೆ ಪ್ರಮಾಣಪತ್ರವನ್ನು ಸರ್ಕಾರವು ನೀಡುತ್ತಹೋದರಾಯಿತು. ಇದರಿಂದಾಗಿ ಸರ್ಕಾರಕ್ಕೆ ಶಿಕ್ಷಣದ ಬಾಬ್ತು ಹಣ ಉಳಿತಾಯವಾಗುತ್ತದೆ. ಆ ಹಣವನ್ನು ಮಠಮಾನ್ಯಗಳಿಗೆ ದಾನ ನೀಡಲು ಬಳಸಿಕೊಳ್ಳಬಹುದು.
ಗೃಹಿಣಿಯರಿಗಂತೂ ಟಿವಿ ಒಂದು ವರದಾನ. ಮನೆಗೆಲಸ ಮಾಡುತ್ತಲೇ (ಮತ್ತು ಆಗಾಗ, ಕೆಲಸ ಕ್ಯಾನ್ಸಲ್ ಮಾಡಿ) ಒಂದರಮೇಲೊಂದರಂತೆ ಧಾರಾವಾಹಿಗಳನ್ನು, ಕ್ಷಮಿಸಿ, ದಾರವಾಹಿಗಳನ್ನು ನೋಡಬಹುದು. ’ಕ್ಲುಪ್ತ ಕ್ಲುಪ್ತ’ ದಾರವಾಯಿಯ ಆರುನೂರಾ ಏಳನೇ ಸಂಚಿಕೆಯ ಕಥೆಯನ್ನು ’ಗುಪ್ತ ಗುಪ್ತ’ ದಾರವಾಯಿಯ ಏಳುನೂರಾ ಎಂಟನೇ ಸಂಚಿಕೆಯ ಕಥೆಯ ಜೊತೆಗೆ ಕನ್‌ಫ್ಯೂಸ್ ಮಾಡಿಕೊಳ್ಳದಿದ್ದರಾಯಿತು, ಅಷ್ಟೆ.
ಗಂಡಸರನ್ನು ವಿಶೇಷವಾಗಿ ಆಕರ್ಷಿಸುವ ’ಕ್ರೈಂ ಸೀನ್’, ’ಏಳ್ನೇ ಕ್ಲಾಸ್ ನನ್ಮಕ್ಳು’ ಇಂಥ ಅದ್ಭೂತ ಕಾರ್ಯಕ್ರಮಗಳ ಜೊತೆಗೀಗ ವರ್ಷವಿಡೀ ಕ್ರಿಕೆಟ್ ಮ್ಯಾಚುಗಳೂ ಟಿವಿಯಲ್ಲಿ ಲಭ್ಯ.
ಟಿವಿಯಲ್ಲಿ ನಾವಿಂದು ಗ್ರಹಫಲ, ತಾರಾಫಲ ಮುಂತಾದ ಫಲಗಳನ್ನು ಸವಿಯಬಹುದು; ಯಾರ್ಯಾರದೋ ಜನ್ಮರಹಸ್ಯ ತಿಳಿದುಕೊಳ್ಳಬಹುದು; ಗುರೂಜಿಗಳು ಯಾರ್ಯಾರನ್ನೋ ಜನ್ಮಾಂತರಕ್ಕೆ ಕೊಂಡೊಯ್ದು ಅಥವಾ ಪುನರ್ಜನ್ಮ ಎತ್ತಿಸಿ ಅವರ ಜನ್ಮ ಜಾಲಾಡುವುದನ್ನು ನಾವು ನೋಡಿ ಆನಂದಿಸಬಹುದು; ಕಿರುತೆರೆಯಲ್ಲಿಂದು ನಾವು ಅಗೋಚರವನ್ನು ಕಾಣಬಹುದು, ಬ್ರಹ್ಮಾಂಡವನ್ನೇ ಅರಿಯಬಹುದು! ಕೊನೆಗೊಂದು ದಿನ ಬೆಂಗಳೂರಿನ ’ನಿಮ್ಹಾನ್ಸ್’ ಎಂಬ ನರ ವಿಜ್ಞಾನ ಸಂಸ್ಥೆಯ ಹಾಸಿಗೆಯಮೇಲೆ ಲೇಸಾಗಿ ಮಲಗಿ ರೆಸ್ಟ್ ತೆಗೆದುಕೊಳ್ಳಬಹುದು. ಭಾಗ್ಯವಂತರು, ನಾವು ಭಾಗ್ಯವಂತರು!
ಟಿವಿಯಲ್ಲಿ ಏನೇನೆಲ್ಲ ಹದ್ಬುತ ಕಾರ್ಯಕ್ರಮಗಳಿವೆ, ವಾಹ್! ಕ್ರೈಂ ಸ್ಟೋರಿಗಳೊಡನೆ ಪೈಪೋಟಿ ನಡೆಸುವ ವಾರ್ತೆಗಳು, ನಿರೂಪಕರಿಂದ ಮೊದಲ್ಗೊಂಡು ನಿರ್ಣಾಯಕರವರೆಗೆ ಎಲ್ಲರೂ ಕೀಲು ಕಿತ್ತವರಂತೆ ಕುಣಿಯುವ ಡ್ಯಾನ್ಸ್ ಕಾಂಪಿಟಿ’ಷನ್’ಗಳು, ಏಳು ವರ್ಷದ ಪೋರಿ ’ಏರಿಮೇಲೆ ಏರಿ’ ಎಂದು ಹಾಡುತ್ತ ನುಲಿಯುವ ’ಎದೆತುಂಬ ಹಾಡುವೆನು’ ಷೋಗಳು, ಗಂಡಹೆಂಡಿರು ಹೊಡೆದಾಡಿಕೊಳ್ಳುವ ರಿಯಾಲಿಟಿ ಶೂಗಳು.....ಒಟ್ಟಿನಲ್ಲಿ, ಮಸ್ತ್ ಮಜಾ ಮಾಡಿ.
ಇವೆಲ್ಲಕ್ಕೂ ಕಿರೀಟಪ್ರಾಯವಾಗಿ, ಕಣ್ಣು, ಕಿವಿ, ತಲೆ ಮೂರನ್ನೂ ಕುಕ್ಕುವ ಆಲ್‌ಮೋಸ್ಟ್ ೨೪/೭/೩೬೫ ಜಾಹಿರಾತುಗಳು! ಎಂಥಾ ಲೋಕವಯ್ಯ! ಇದು ಎಂಥಾ ಲೋಕವಯ್ಯ!
ಅಂದಹಾಗೆ, ’ರಕ್ತಸಿಕ್ತ’ ದಾರವಾಹಿಯ ಸಾವಿರ ಎಪಿಸೋಡುಗಳು ಮುಗಿದರೂ ಇನ್ನೂ ರಕ್ತವನ್ನು ತೋರಿಸಿಲ್ಲ. ರಕ್ತ ಸಿಕ್ತ? ಸಿಗಲಿಲ್ಲವಾ? ಒಂದೂ ಗೊತ್ತಾಗುತ್ತಿಲ್ಲ. ಮುಂದಿನ ತಿಂಗಳು ತಂಗಳೂರಿನ ಕುಂಟೀರವ್ವ ಸ್ಟೇಡಿಯಂನಲ್ಲಿ ನಡೆಯಲಿರುವ ರಕ್ತಸಿಕ್ತ ಸಂವಾದದಲ್ಲಿ ನಾನು ಈ ಪ್ರಶ್ನೆ ಕೇಳಬೇಕೆಂದಿದ್ದೇನೆ. ಆಗ ಟಿವಿಯಲ್ಲಿ ನನ್ನನ್ನೂ ತೋರಿಸ್ತಾರೆ! ಭಲೇ ಛಾನ್ಸಿದೆ, ಛಲೋ ಚಾನ್ಸಿದೆ, ಲಲಲಾವ್ ಲಲಲಾವ್ ಲಕ್ಕೀ ಛಾನ್ಸಿದೆ!
ನಾಣ್ಣುಡಿ: ಒಂದೇ ಪೆಟ್ಟಿಗೆ ಎರಡು ತುಂಡು! (ಅಂಥಾ ಪೆಟ್ಟು!)
ನನ್ನ್ ನುಡಿ: ಜಾಣರ ಪೆಟ್ಟಿಗೆ ಮೂರ್ಖರ ಪೆಟ್ಟಿಗೆ ತುಂಡು! (ಅಂಥಾ ಸಿಟ್ಟು!)