ಎಂದಿಗೂ ತುಳುಕದ ತುಂಬಿದ ಕೊಡ !

ಎಂದಿಗೂ ತುಳುಕದ ತುಂಬಿದ ಕೊಡ !

ಒಮ್ಮೆ ಒಬ್ಬ ರಾಜ ತನ್ನ ಪರಿವಾರದೊಂದಿಗೆ ಬೇಟೆಯಾಡಲು ಹೋದ. ಜಿಂಕೆಯೊಂದನ್ನು ಬೆನ್ನಟ್ಟಿ ಬಹಳ ದೂರ ಹೋದಾಗ ತನ್ನ ಪರಿವಾರ, ಸೈನಿಕರಿಂದ ಬೇರ್ಪಟ್ಟ. ಎಲ್ಲರೂ ರಾಜನನ್ನು ಹುಡುಕತೊಡಗಿದರು. ಆ ಕಾಡಿನ ನಡುವೆ ಗುಡಿಸಲಿನಲ್ಲಿ ಒಬ್ಬ ಕುರುಡ ಸಾಧು ಕುಳಿತಿದ್ದ. ಓರ್ವ ಸೈನಿಕ ಆ ಸಾಧುವನ್ನು ನೋಡಿ, ಲೇ ಜೋಗಿ, ನಮ್ಮ ರಾಜರನ್ನು ನೋಡಿದೆಯೇನೋ? ಎಂದು ಕೇಳಿದ. ಆಗ ಸಾಧು 'ಅಣ್ಣಾ ನಾನು ಕುರುಡ, ಹೇಗೆ ನೋಡಲಿ?' ಎಂದ. ಕುರುಡನಾದರೇನಾಯ್ತು? ಕುದುರೆ ಕಾಲಿನ ಸಪ್ಪಳ ಕೇಳಲಿಲ್ವೇ? ಎಂದ ಸೈನಿಕ. ಇಲ್ಲಣ್ಣ, ನನಗೇನೂ ಕೇಳಿಸಲಿಲ್ಲ ಎಂದ ಸಾಧು. ಆಗ ಸೈನಿಕ ಯಾರನ್ನೋ, ಏನನ್ನೋ ಬೈಯುತ್ತಾ, ಗೊಣಗುತ್ತಾ ಅತ್ತ ಕಡೆ ಹೋದ.

ಕೆಲಕ್ಷಣಗಳ ನಂತರ ಸೇನಾನಾಯಕ ಬಂದ. ತಪಸ್ವಿಗಳೇ, ಇತ್ತ ಕಡೆ ನಮ್ಮ ಮಹಾರಾಜರು ಬಂದರೇ? ಎಂದು ಕೇಳಿದ. 'ಇಲ್ಲಯ್ಯ, ಮಹಾರಾಜರು ಬಂದಿಲ್ಲ. ಆದರೆ ಒಬ್ಬ ಸೈನಿಕ ಅವರನ್ನು ಹುಡುಕುತ್ತಾ ಬಂದು ಅತ್ತ ಕಡೆ ಹೋದ ಎಂದು ಸಾಧು ಹೇಳಿದ. ಹೀಗೆ ಹುಡುಕಾಟ ಮುಂದುವರೆಯುತ್ತಿತ್ತು. ನಂತರ ಸೇನಾಪತಿ ಸಾಧುವಿನ ಬಳಿಗೆ ಬಂದು, ಸಾಧು ಮಹಾರಾಜರೇ, ಮಹಾರಾಜರು ಏನಾದರೂ ಇತ್ತ ಕಡೆಗೆ ಬಂದಿರುವರೇ? ಕೇಳಿದ. ಸಾಧು ಆತನಿಗೆ ಸೂಕ್ತ ಉತ್ತರ ನೀಡಿದ. ಸ್ವಲ್ಪ ಹೊತ್ತಿನ ನಂತರ ಖುದ್ದಾಗಿ ಮಂತ್ರಿಯೇ ಅಲ್ಲಿಗೆ ಬಂದ. 'ಮಹಾಸ್ವಾಮಿ, ನಾವು ಬೇಟೆಗೆಂದು ಬಂದೆವು. ಮಹಾರಾಜರು ತಪ್ಪಿಸಿಕೊಂಡರು. ತಾವೇನಾದರೂ ಸುಳಿವು ನೀಡುವಿರಾ? ಎಂದ. ಸಾಧು ಆತನಿಗೂ ಸರಿಯಾದ ಉತ್ತರ ನೀಡಿದ. ಹೀಗೆ ಎಲ್ಲರೂ ಹುಡುಕುತ್ತಾ ಮುಂದೆ ಸಾಗುತ್ತಲೇ ಇದ್ದರು. 

ಸ್ವಲ್ಪ ಹೊತ್ತಿನ ಬಳಿಕ ಮಹಾರಾಜನೇ ಕಾಡೆಲ್ಲ ಅಲೆದು ಸಾಧುವಿನ ಬಳಿ ಬಂದ. ಸಾಧುವಿಗೆ ನಮಸ್ಕರಿಸಿದ. ಭಗವಾನ್, ನನಗೆ ಆಶೀರ್ವದಿಸಿ. ಅಲ್ಲದೆ ನಾನು ತುಂಬಾ ಬಾಯಾರಿದ್ದೇನೆ. ಸ್ವಲ್ಪ ನೀರು ಕೊಡುವಿರಾ? ಎಂದು ಕೇಳಿದನು, ಆಗ ಸಾಧು, ರಾಜನೇ ನಿನಗೆ ಸ್ವಾಗತ ಎಂದು, ಹಣ್ಣು-ಹಂಪಲುಗಳು, ನೀರನ್ನು ಕೊಟ್ಟು ಉಪಚರಿಸಿದನು. ಆಗ ರಾಜನು ಗುರುಗಳೇ, ನಾನು ರಾಜನೆಂದು ನಿಮಗೆ ಹೇಗೆ ತಿಳಿಯಿತು? ನನ್ನನ್ನು ಹುಡುಕುತ್ತಾ ಯಾರಾದರೂ ಬಂದಿರುವರೇ? ಎಂದು ಪ್ರಶ್ನಿಸಿದನು. ಆಗ ಸಾಧು ಓರ್ವ ಸೈನಿಕ, ನಂತರ ಅವರ ನಾಯಕ, ಸೇನಾಧಿಪತಿ, ಕೊನೆಗೆ ಮಂತ್ರಿ ಕೂಡಾ ಬಂದಿದ್ದರು ಎಂದರು. ರಾಜನಿಗೆ ಅಚ್ಚರಿಯ ಜೊತೆಗೆ, ಕುರುಡನಾದರೂ ಎಲ್ಲರ ಅಧಿಕಾರ, ಪದವಿ ಈ ಸಾಧುವಿಗೆ ಹೇಗೆ ತಿಳಿಯಿತು? ಎಂದು ಕುತೂಹಲ ಮೂಡಿತು. ತನ್ನ ಕುತೂಹಲವನ್ನು ರಾಜ ಸಾಧುವಿನ ಬಳಿ ಅರುಹಿದ.

ರಾಜನ ಪ್ರಶ್ನೆಗೆ ಸಾಧು ಹಸನ್ಮುಖಿಯಾಗಿ ಉತ್ತರಿಸುತ್ತಾ ಹೇಳಿದ, ಅವರ ಮಾತಿನ ಶೈಲಿಯೇ ಅವರ ಅಧಿಕಾರ, ಸ್ಥಾನಮಾನ ತಿಳಿಸಿತು. ಒಬ್ಬ ಜೋಗಿ ಎಂದ, ಇನ್ನೊಬ್ಬ ತಪಸ್ವಿ, ಮತ್ತೊಬ್ಬ ಸಾಧು ಮಹಾರಾಜರೇ, ನಂತರದವ ಮಹಾಸ್ವಾಮಿ ಹೀಗೆ ಅವರ ಮಾತಿನ ಆಂತರಿಕ ಧ್ವನಿಯೇ ಎಲ್ಲವನ್ನೂ ತಿಳಿಸಿತು. ನೀನು ಭಗವಾನ್ ಎಂದು ಗೌರವದಿಂದ ಕರೆದಾಗಲೇ, ಇದು ಮಹಾರಾಜರ ಧ್ವನಿ ಎಂದು ಗುರುತಿಸಿದೆ ಎಂದನು. ರಾಜನಿಗೆ ಸಾಧುವಿನ ಮಾತಿನ ತಾತ್ಪರ್ಯ ತಿಳಿಯಿತು. ನಮ್ಮ ಬದುಕಿನಲ್ಲೂ ಕೂಡ ನಮ್ಮ ವರ್ತನೆ, ಮಾತುಗಳೇ ನಮ್ಮ ಯೋಗ್ಯತೆಯನ್ನು ತಿಳಿಸುತ್ತವೆ. ಮೃದುತ್ವ, ವಿನಯಶೀಲತೆ, ಸಭ್ಯತೆ ಶ್ರೇಷ್ಟ ವ್ಯಕ್ತಿಗಳ ಲಕ್ಷಣವಾಗಿರುತ್ತದೆ. ಕಠೋರತೆ, ವೃಥಾ ಕೋಪ, ಕೆಟ್ಟ ಮಾತುಗಳು ಹೀನ ಗುಣದ ಜನರ ನಡವಳಿಕೆಗಳಾಗಿರುತ್ತವೆ.

-ಭಾರತಿ ಎ.ಕೊಪ್ಪ (ವಿಶ್ವವಾಣಿ ಪತ್ರಿಕೆಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ