ಎಂದೂ ಹುಟ್ಟದ ಮಗುವಿಗೆ ಪತ್ರ

ಎಂದೂ ಹುಟ್ಟದ ಮಗುವಿಗೆ ಪತ್ರ

ಪುಸ್ತಕದ ಲೇಖಕ/ಕವಿಯ ಹೆಸರು
ಇಟಾಲಿಯನ್ ಮೂಲ: ಒರಿಯಾನ ಫಲಾಚಿ, ಕನ್ನಡಕ್ಕೆ: ಸುಧಾ ಆಡುಕಳ
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೩

ಖ್ಯಾತ ಇಟಾಲಿಯನ್ ಸಾಹಿತಿ ಒರಿಯಾನಾ ಪಲಾಚಿ ಅವರ ಕಾದಂಬರಿ “LETTER TO A CHILD NEVER BORN” ಎಂಬ ಪುಟ್ಟ ಕಾದಂಬರಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ ಜಾನ್ ಶೆಪ್ಲಿ ಎಂಬವರು. ಈ ಇಂಗ್ಲೀಷ್ ಕಾದಂಬರಿಯನ್ನು ಮೂಲಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆ ಲೇಖಕಿ ಸುಧಾ ಆಡುಕಳ. ಅವರು ತಮ್ಮ ಅನುವಾದಿತ ‘ಎಂದೂ ಹುಟ್ಟದ ಮಗುವಿಗೆ ಪತ್ರ’ ಕೃತಿಯ ಕುರಿತು ವ್ಯಕ್ತ ಪಡಿಸಿದ ಭಾವ ಹೀಗಿದೆ...

“ಪ್ರಪಂಚದಷ್ಟೇ ಪುರಾತನವಾದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ.....ತಾಯ್ತನದ ಆಯ್ಕೆ, ಮಗುವಿನ ಹೊಣೆಗಾರಿಕೆ, ಮಗುವಿನ ಲಿಂಗದ ಬಗ್ಗೆ ನಿರೀಕ್ಷೆ......ಇವೆಲ್ಲವೂ ಪ್ರಪಂಚ ಹುಟ್ಟಿದಾಗಿನಿಂದಲೂ ಜೀವಿಗಳ ಜತೆಗೆ ಸಾಗಿ ಬಂದಿರುವ ವಿಷಯಗಳು. ಕಾಲ ಬದಲಾದಂತೆ ಉತ್ತರಗಳಲ್ಲಿ ಮಾರ್ಪಾಡುಗಳಾಗುತ್ತ ಬಂದರೂ..... ಹುಡುಕಾಟ ಇಂದಿಗೂ ಮುಂದುವರೆಯುತ್ತಲೇ ಇದೆ. ಖ್ಯಾತ ಇಟಾಲಿಯನ್ ಸಾಹಿತಿ ಒರಿಯಾನಾ ಪಲಾಚಿ ಅವರ ಕಾದಂಬರಿ LETTER TO A CHILD NEVER BORN ಈ ಹುಡುಕಾಟವನ್ನು ನಡೆಸುತ್ತಲೇ ಸಂಪ್ರದಾಯವಾದಿಗಳನ್ನು ದಿಟ್ಟವಾಗಿ ಪ್ರಶ್ನಿಸುವ ಕಾದಂಬರಿಯಾಗಿದೆ. ತನ್ನ ಹೊಟ್ಟೆಯಲ್ಲಿ ಮಗುವೊಂದು ಒಡಮೂಡಿದ ಗಳಿಗೆಯಿಂದಲೇ ತಾಯಿಯೊಬ್ಬಳು ಮಗುವಿನೊಂದಿಗೆ ನಡೆಸುತ್ತಾ ಸಾಗುವ ಸಂಭಾಷಣೆಯ ರೂಪದಲ್ಲಿರುವ ಕಾದಂಬರಿ ಅನೂಹ್ಯವಾದ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ತಾಯೊಬ್ಬಳು ತನ್ನ ಸ್ವಗೌರವದ ರಕ್ಷಣೆಗಾಗಿ ಜಗದ ನ್ಯಾಯದ ಕಟಕಟೆಯಲ್ಲೂ ನಿಲ್ಲಬೇಕಾಗುತ್ತದೆ. ಕೊನೆಯಲ್ಲಿ ನ್ಯಾಯ-ಅನ್ಯಾಯಗಳ ತೀರ್ಮಾನ ಹೇಳಬೇಕಾಗಿರುವುದು ಮಗು ತಾನೆ? ತಾಯ್ತನವೆಂದರೆ ತನ್ನ ಬಾಲ್ಯದ ಅವಲೋಕನವೂ ಹೌದಲ್ಲವೆ? ಹೀಗೆ........ಬಹಳ ಕಾಡಿದ ಕಾದಂಬರಿ ಈಗ ಕನ್ನಡದಲ್ಲಿ ನಿಮ್ಮ ಮುಂದಿದೆ.

ಫಲಾಚಿ ಕೇವಲ ಸಾಹಿತಿಯಲ್ಲ, ಪತ್ರಕರ್ತೆ. ಬರಿಯ ಪತ್ರಕರ್ತೆಯಲ್ಲ, ಯುದ್ಧ ಮತ್ತು ಕ್ರಾಂತಿಯ ವರದಿಗಳನ್ನು ಯುದ್ಧರಂಗಕ್ಕಿಳಿದು ವರದಿ ಮಾಡಿದ ದಿಟ್ಟ ಪತ್ರಕರ್ತೆ. ಜತೆಯಲ್ಲಿ ಅವರ ಕಾಲದ ಜಗತ್ತಿನ ಅನೇಕ ನಾಯಕರನ್ನು ಸಂದರ್ಶಿಸಿದ ಅಪರೂಪದ ಪತ್ರಕರ್ತೆಯೂ ಹೌದು. ಅವರ ಸಂದರ್ಶನದ ಪಟ್ಟಿಯಲ್ಲಿ ಯಾಸಿರ್ ಅರಾಫತ್, ಝುಲ್ಫಿಕರ್ ಅಲಿ ಬುಟ್ಟೊ, ಗಡಾಫಿ, ಅಲ್ಫ್ರೆಡ್ ಹಿಚ್ ಕಾಕ್, ಖೊಮೈನಿ, ಹೆನ್ರಿ ಕಿಸ್ಸಿಂಜರ್ ......ಇವರೆಲ್ಲರ ಜತೆ ಭಾರತದ ಇಂದಿರಾ ಗಾಂಧಿ ಮತ್ತು ಮೊರಾರ್ಜಿ ದೇಸಾಯಿಯವರೂ ಸೇರಿದ್ದಾರೆ. ಇಂದಿರಾ ಗಾಂಧೀಜಿಯವರೊಂದಿಗೆ ಅವರು ನಡೆಸಿದ 60 ಪ್ರಶ್ನೆಗಳ ಮುಖಾಮುಖಿಯು ಬಾಂಗ್ಲಾ ವಿಮೋಚನೆ ಮತ್ತು ಆ ಕಾಲದ ರಾಜಕೀಯ ಸಂದಿಗ್ದಗಳ ಅನಾವರಣವೂ ಹೌದು. ಇವೆಲ್ಲವನ್ನೂ ಅವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಕೋಮುಹಿಂಸೆಯ ಬಗ್ಗೆ ಅವರು ಬರೆದ The Rage and Pride ಪುಸ್ತಕ ಮಿಲಿಯನ್ಗಳಷ್ಟು ಮಾರಾಟ ದಾಖಲೆಯನ್ನು ಹೊಂದಿದೆ ಮತ್ತು ಅವರಿಗೆ ಬಹುಸಂಖ್ಯೆಯ ವಿರೋಧಿಗಳನ್ನು ಹುಟ್ಟುಹಾಕಿತು. ಅವರ ಬರಹಗಳೆಲ್ಲವೂ ಮೂಲಭೂತವಾದಿಗಳ ನಿದ್ದೆಗೆಡಿಸಿದ್ದವು. ನಾವಿನ್ನೂ ಹುಟ್ಟುವ ಕಾಲದಲ್ಲಿ ಬರೆದ ಈ ಕಾದಂಬರಿ ಈ ಕಾಲಕ್ಕೆಂದೇ ಬರೆದರೇನೊ? ಎಂಬಷ್ಟು ಹೊಸದಾಗಿದೆ. ಹಾಗಾಗಿಯೇ ಅಪ್ರಯತ್ನಪೂರ್ವಕವಾಗಿ ನಿಮ್ಮೆದುರಿಗಿದೆ.

ಕಾದಂಬರಿಯ ಬೆನ್ನುಡಿಯಲ್ಲಿ ಕಂಡ ಬರಹ ಮನಕಲಕುವಂತಿದೆ “ ಮಗುವನ್ನು ಭೂಮಿಗೆ ಯಾಕೆ ತರಬೇಕು? ಎಂಬ ಪ್ರಶ್ನೆಯನ್ನು ಅನೇಕ ಮಹಿಳೆಯರು ತಮಗೆ ತಾವೇ ಕೇಳಿಕೊಳ್ಳುತ್ತಾರೆ. ಮಗುವು ಹಸಿವೆಯಿಂದ ಬಳಲಬಹುದು, ಶೀತಗಾಳಿಯ ಹೊಡೆತಕ್ಕೆ ಸಿಕ್ಕಿ ನಲುಗಬಹುದು, ತಿರಸ್ಕಾರ ಮತ್ತು ಅವಹೇಳನಕ್ಕೆ ಒಳಗಾಗಬಹುದು. ರೋಗ ಮತ್ತು ಯುದ್ಧಗಳಂತಹ ಅಪಾಯಕ್ಕೆ ಈಡಾಗಬಹುದೆಂಬುದು ಅವರ ಆತಂಕ. ಆದರೆ ನನ್ನ ಪ್ರಕಾರ ಹಸಿವೆಯನ್ನು ತಣಿಸಬಹುದು, ಮಗುವನ್ನು ಬೆಚ್ಚಗಿಡುವ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಗೌರವ ಮತ್ತು ಘನತೆಗಳನ್ನು ಜೀವನದಲ್ಲಿ ಸಂಪಾದಿಸಬಹುದು, ಯುದ್ಧ ಮತ್ತು ರೋಗಗಳ ನಿವಾರಣೆಗಾಗಿಯೇ ಜೀವನವನ್ನು ಮುಡಿಪಾಗಿಡಬಹುದು. ಅವೆಲ್ಲವೂ ಮಗುವೊಂದು ಹುಟ್ಟದೇ ಇರಲು ಕಾರಣವಾಗಬೇಕಿಲ್ಲ.”