ಎಂ ವಿಶ್ವೇಶ್ವರಯ್ಯನವರ ಜೀವನದ ಆಖ್ಯಾಯಿಕೆಗಳು
ಕನ್ನಡದ ಮಕ್ಕಳು ತಮ್ಮ ಪ್ರಾಂತ್ಯವನ್ನು ಮಾತ್ರವಲ್ಲ ಇಂಡಿಯಾ ರಾಷ್ಟ್ರವನ್ನೂ ಬೆಳಗಿ ಕರ್ನಾಟಕದ ಕೀರ್ತಿವೈಜಯಂತಿಯನ್ನು ಗಗನದೆತ್ತರಕ್ಕೆ ಹಾರಿಸಿದ್ದಾರೆ. ಅಂತಹ ಮಹಾಮಹಿಮರಲ್ಲಿ ಒಬ್ಬರು ವಾಸ್ತುಶಿಲ್ಪಜ್ಞ, ದಕ್ಷ ಆಡಳಿತಗಾರ, ಧೀಮಂತ ಹಾಗೂ ನಿಸ್ಪೃಹರಾಗಿದ್ದ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು.
ಸರ್ ಎಂ ವಿ ಅವರು ಜನಿಸಿದ್ದು ೧೮೬೧ನೇ ಸೆಪ್ಟೆಂಬರ್ ೧೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ. ಇವರ ಬಾಲ್ಯದ ಐದು ವರ್ಷಗಳು ಕಳೆದ ಮೇಲೆ ಇವರ ತಂದೆ ಶ್ರೀನಿವಾಸಶಾಸ್ತ್ರಿಗಳು ಚಿಕ್ಕಬಳ್ಳಾಪುರಕ್ಕೆ ಬಂದು ನೆಲೆನಿಂತರು.
ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿಯೇ ಪಡೆದುಕೊಂಡರು. ಇವರ ವಿದ್ಯಾಸಕ್ತಿಯನ್ನೂ ಪ್ರತಿಭೆಯನ್ನೂ ಕಂಡ ಇವರ ಸೋದರಮಾವ ಎಚ್ ರಾಮಯ್ಯನವರು ಇವರನ್ನು ಬೆಂಗಳೂರಿಗೆ ಕರೆತಂದು ವೆಸ್ಲಿಯನ್ ಮಿಷನ್ ಹೈಸ್ಕೂಲಿಗೆ ಸೇರಿಸಿದರು. ಅಲ್ಲಿಂದ ಎಂ ವಿ ಅವರು ಸೆಂಟ್ರಲ್ ಕಾಲೇಜು ಸೇರಿದರು. ಸರ್ಕಾರದಿಂದ ಇವರಿಗೆ ವಿದ್ಯಾರ್ಥಿವೇತನ ದೊರೆಯುತ್ತಿದ್ದರೂ ಜೀವನಕ್ಕೆ ಬೇಕಾದ ಖರ್ಚಿಗೆ ಏನಾದರೂ ಮಾಡಬೇಕಿತ್ತು. ಕೋಟೆಯ ಬಳಿಯಿದ್ದ ಕೊಡಗಿನ ಸಂಸಾರದವರು ಇವರನ್ನು ತಮ್ಮ ಮಕ್ಕಳಿಗೆ ಪಾಠ ಹೇಳುವಂತೆ ಗೊತ್ತುಮಾಡಿಕೊಂಡರು. ಹೀಗೆ ಅವರ ಮನೆಯಲ್ಲೇ ಮಲಗಿದ್ದು ಬೆಳಗ್ಗೆ ಮಾವನವರ ಮನೆಯಲ್ಲಿ ಊಟಮಾಡಿ ಕಾಲೇಜಿಗೆ ತೆರಳುತ್ತಿದ್ದರು.
೧೮೮೧ರಲ್ಲಿ ಉತ್ತಮ ಶ್ರೇಣಿಯಲ್ಲಿ ಬಿ.ಎ. ತೇರ್ಗಡೆಯಾದ ಅವರು ಉನ್ನತ ವ್ಯಾಸಂಗ ಮಾಡಲು ಧನಸಹಾಯ ಬೇಡಲು ಆಗಿನ ಮೈಸೂರು ದಿವಾನರಾಗಿದ್ದ ರಂಗಾಚಾರ್ಲು ಅವರನ್ನು ಭೇಟಿಯಾಗಿ ಸರ್ಕಾರದ ವತಿಯಿಂದ ಪುಣೆಯ ಸೈನ್ಸ್ ಕಾಲೇಜನ್ನು ಸೇರಿದರು. ೧೮೮೩ರಲ್ಲಿ ಈಗಿನ ಬಿ.ಇ.ಗೆ ಸಮನಾದ ಪದವಿಯನ್ನು ಪಡೆದರು.
೧೮೮೪ರಲ್ಲಿ ಅವರು ಬೊಂಬಾಯಿ ಸಂಸ್ಥಾನಕ್ಕೆ ಸೇರಿದ ನಾಸಿಕ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರಾಗಿ ನೇಮಕಗೊಂಡರು.
೧೮೮೮ರಲ್ಲಿ ಇಲಾಖೆಯ ಪರೀಕ್ಷೆ ಬರೆದು ಸಹಾಯಕ ಇಂಜಿನಿಯರ್ ಶ್ರೇಣಿಯ ಮೊದಲ ಹಂತಕ್ಕೆ ಏರಿದರು. ಅನಂತರ ಖಾನ್ ದೇಶ ಜಿಲ್ಲೆಯ ರಸ್ತೆ ಮತ್ತು ಕಟ್ಟಡಗಳ ವಿಭಾಗದಲ್ಲಿ ಸೇವೆ ಸಲ್ಲಿಸಿದರು.
೧೮೯೪ನೇ ಫೆಬ್ರವರಿ ತಿಂಗಳಲ್ಲಿ ಸುಕ್ಕೂರು ನಗರಕ್ಕೆ ವಿಶೇಷ ಇಂಜಿನಿಯರಾಗಿ ಅಲ್ಲಿಯ ಕೆಲಸವನ್ನು ೧೮೯೫ರಲ್ಲ ಅತ್ಯಲ್ಪ ವೆಚ್ಚದಲ್ಲಿ ಪೂರ್ತಿಮಾಡಿ ಬೊಂಬಾಯಿಯ ಗವರ್ನರರಿಂದ ಪ್ರಶಂಸೆ ಗಳಿಸಿದರು.
೧೮೯೮ರಲ್ಲಿ ತಮ್ಮ ಸ್ವಂತ ಹಣದಿಂದ ಜಪಾನ್ ಪ್ರವಾಸ ಮಾಡಿ ಅಲ್ಲಿನವರ ಕಾರ್ಯಶೀಲತೆಯನ್ನು ಖುದ್ದು ಅರಿತರು.
೧೮೯೯ರಲ್ಲಿ ಪುಣೆಯಲ್ಲಿ ಇಲಾಖೆಯ ಮುಖ್ಯಾಧಿಕಾರಿ ಹುದ್ದೆಗೆ ಬಡ್ತಿ ಪಡೆದರಲ್ಲದೆ ನೀರು ಪೂರೈಕೆಯಲ್ಲಿ ಪಡಿತರ ವ್ಯವಸ್ಥೆಯನ್ನು ಜಾರಿಗೆ ತಂದರು. ಇದೇ ಸಮಯದಲ್ಲಿ ಇಂಡಿಯಾದ ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು 'ಬ್ಲಾಕ್ ಇರಿಗೇಷನ್ ಸಿಸ್ಟಂ' ಎಂಬ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತಂದರು.
೧೯೦೩ರಲ್ಲಿ ಪುಣೆಯಲ್ಲಿನ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಮ್ಮಷ್ಟಕ್ಕೇ ಮುಚ್ಚಿ ತೆರೆಯುವ ತೂಬಿನ ಬಾಗಿಲುಗಳನ್ನು (Automatic Sluice Gate = ಆಟೊಮ್ಯಾಟಿಕ್ ಸ್ಲೂಸ್ ಗೇಟ್) ನಿರ್ಮಿಸಿ ಬಳಸಿದರು. ಇಂಥ ಬಾಗಿಲುಗಳನ್ನೇ ಕರ್ನಾಟಕದ ಕೃಷ್ಣರಾಜ ಸಾಗರದಲ್ಲೂ ಬಳಸಲಾಗಿದೆ.
೧೯೦೫ರಲ್ಲಿ ನೀರಾವರಿ ಯೋಜನೆಗಳ ನಿರ್ಮಾಣದ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು.
೧೯೦೬ರಲ್ಲಿ ಏಡನ್ ಮತ್ತು ಕೊಲ್ಲಾಪುರಗಳ ಕುಡಿಯುವ ನೀರಿನ ಯೋಜನೆಗಳ ಕಾರ್ಯ ನಿರ್ವಹಿಸಿದರು.
೧೯೦೭ರಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರಾಗಿ ಬಡ್ತಿ ಹೊಂದಿ ಧಾರವಾಡ, ಬಿಜಾಪುರ ಇಲ್ಲೆಗಳ ಕುಡಿಯುವ ನೀರಿನ ಯೋಜನೆಗಳನ್ನು ಕಾರ್ಯಗತಗೊಳಿಸಿದರು.
ಎಂವಿ ಅವರ ಅಸಾಮಾನ್ಯ ಕಾರ್ಯದಕ್ಷತೆ ಮತ್ತು ಕರ್ತವ್ಯನಿಷ್ಠೆಯನ್ನು ಗುರುತಿಸಿದ ಬ್ರಿಟಿಷ್ ಸರ್ಕಾರವು ಅವರನ್ನು ಇನ್ನಷ್ಟು ಉನ್ನತ ಹುದ್ದೆಗೇರಿಸಿತು. ಇದರಿಂದ ಕೆಲವರಿಗೆ ಅಸೂಯೆ ಅಸಮಾಧಾನಗಳುಂಟಾದವು. ಆದ್ದರಿಂದ ಎಂವಿ ಅವರಿಗೆ ಆ ಹುದ್ದೆಯಲ್ಲಿ ಹೆಚ್ಚು ಆಸಕ್ತಿ ಉಳಿಯದೇ ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿ ನಿವೃತ್ತಿಗೆ ಮುನ್ನ ರಜಾ ಪಡೆದು ಸ್ವಂತ ಖರ್ಚಿನಿಂದ ಇಟಲಿ, ಇಂಗ್ಲೆಂಡ್, ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ, ಸ್ವೀಡನ್ ಮತ್ತು ರಷ್ಯಾ ದೇಶಗಳ ಪ್ರವಾಸ ಮಾಡಿಬಂದರು.
೧೯೦೯ರಲ್ಲಿ ಹೈದರಾಬಾದ್ ನಗರದ ವಿಶೇಷ ಇಂಜಿನಿಯರಾಗಿ ಅಧಿಕಾರ ವಹಿಸಿಕೊಂಡು ಆ ನಗರವನ್ನು ಈಸಾ ಮತ್ತು ಮೂಸಾ ನದಿಗಳ ಉಪಟಳದಿಂದ ರಕ್ಷಿಸಿದರು. ಹೊಸ ಸುಂದರ ನಗರದ ಯೋಜನೆ ರೂಪಿಸಿಕೊಟ್ಟರು. ಅದೇ ವರ್ಷದ ನವೆಂಬರ್ ೧೫ರಂದು ಮೈಸೂರಿನ ಮುಖ್ಯ ಇಂಜಿನಿಯರಾಗಿ ಅಧಿಕಾರ ವಹಿಸಿಕೊಂಡರು.
೧೯೧೧ರಲ್ಲಿ ಬ್ರಿಟಿಷ್ ಸರ್ಕಾರವು ಸಿಐಇ ಬಿರುದು ನೀಡಿ ಗೌರವಿಸಿತು.
೧೯೧೨ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಂಡು ೧೯೧೩ರಲ್ಲಿ ವೈಸರಾಯ್ ಲಾರ್ಡ್ ಹಾರ್ಡಿಂಜ್ ರೊಂದಿಗೆ ಮಾತುಕತೆ ನಡೆಸಿ 'ಮೈಸೂರು ಕೌಲು' ಎಂಬ ಒಪ್ಪಂದಕ್ಕೆ ಸಹಿ ಹಾಕಿದರು.
ಕಾವೇರಿ ನದಿಗೆ ಅಡ್ಡಲಾಗಿ ೪೦ಕಿಲೋಮೀಟರು ಉದ್ದವೂ ೧೩೦ ಚದರ ಕಿಲೋಮೀಟರು ವಿಸ್ತಾರವೂ ಆದ ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಿಸಿದ್ದು ಇವರ ಜೀವನದ ಮಹತ್ಸಾಧನೆ. ಈ ಕೆಲಸ ೧೯೧೧ರಲ್ಲಿ ಪ್ರಾರಂಭಗೊಂಡು ೧೯೩೧ರಲ್ಲಿ ಪೂರ್ಣಗೊಂಡಿತು. ಆ ಸಮಯದಲ್ಲಿ ಅದು ಪ್ರಪಂಚದಲ್ಲಿಯೇ ಗಾತ್ರದಲ್ಲಿ ಎರಡನೆಯದಾಗಿತ್ತು. ಜಲಾಶಯದ ಬದಿಯಲ್ಲಿ ರಚಿಸಲಾಗಿರುವ ಬೃಂದಾವನ ಉದ್ಯಾನವು ಪರಮರಮಣೀಯವಾಗಿದೆ. ಮೈಸೂರಿನ ದಿವಾನರಾಗಿ ಅವರು ಪ್ರಜಾಪ್ರತಿನಿಧಿ ಸಭೆ (ಈಗಿನ ವಿಧಾನ ಪರಿಷತ್ತು) ಯನ್ನು ಸುಧಾರಣೆಗೊಳಪಡಿಸಿದರು.
೧೯೧೫ರಲ್ಲಿ ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಕಲ್ಕತ್ತಾ ವಿಶ್ವವಿದ್ಯಾಲಯವು ಡಿ.ಎಸ್ಸಿ. ನೀಡಿ ಗೌರವಿಸಿತು. ಬೊಂಬಾಯಿ ವಿಶ್ವವಿದ್ಯಾಲಯವು ಎಲ್ ಎಲ್ ಡಿ ನೀಡಿತು ಹಾಗೂ ಬ್ರಿಟಿಷ್ ಸರ್ಕಾರವು ಕೆ ಸಿ ಐ ಇ ಬಿರುದು ನೀಡಿ ಸನ್ಮಾನಿಸಿತು.
೧೯೧೬ರಲ್ಲಿ ಚೇಂಬರ್ ಆಫ್ ಕಾಮರ್ಸ್ ಸ್ಥಾಪಿಸಿದರಲ್ಲದೆ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದರು.
೧೯೧೮ರಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಿದರು.
೧೯೧೯ರಲ್ಲಿ ಅವರು ಜಪಾನ್, ಕೆನಡಾ, ಯು ಎಸ್ ಎ ಪ್ರವಾಸದಲ್ಲಿದ್ದಾಗ ಸೆಕ್ರೆಟರಿ ಆಫ್ ಸ್ಟೇಟ್ ಮಾಂಟೆಗೋ ಅವರಿಂದ ಸಚಿವಸಂಪುಟಕ್ಕೆ ಸೇರುವ ಆಹ್ವಾನ ಬಂದಿದ್ದನ್ನು ನಯವಾಗಿ ನಿರಾಕರಿಸಿದರು.
೧೯೨೨ರಲ್ಲಿ ಅವರನ್ನು ನವದೆಹಲಿಯ ರಾಜಧಾನಿ ನಿರ್ಮಾಣ ಸಮಿತಿಗೆ ನಾಮಕರಣ ಮಾಡಲಾಯಿತು.
೧೯೨೩ರಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಉಸ್ತುವಾರಿ ವಹಿಸಿಕೊಂಡು ಬೃಹತ್ ಕಾರ್ಖಾನೆಗಳ ನಿರ್ವಹಣೆಯು ಬಿಳಿಯರಿಂದಲೇ ಸಾಧ್ಯ ಎಂಬ ತಪ್ಪು ಪರಿಕಲ್ಪನೆಯನ್ನು ಹೋಗಲಾಡಿಸಿದರು. ಒಂದು ವರ್ಷದ ತಮ್ಮ ಸೇವೆಗೆ ಅವರು ಯಾವ ಸಂಭಾವನೆಯನ್ನೂ ಪಡೆಯಲಿಲ್ಲ.
೧೯೨೫ರಲ್ಲಿ ಇಂಡಿಯಾದ ಎಕನಾಮಿಕ್ ಎನ್ಕ್ವಯರಿ ಸಮಿತಿಯ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ್ದರು. ಅದೇ ಸಮಯದಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಹೊಸ ಯೋಜನೆಯನ್ನು ರೂಪಿಸಿದರು.
೧೯೨೬ರಲ್ಲಿ ಮತ್ತೊಮ್ಮೆ ಯೂರೋಪ್ ಪ್ರವಾಸ ಮಾಡಿಬಂದರು.
೧೯೨೯ರಲ್ಲಿ ದೇಶೀಯ ಸಂಸ್ಥಾನಗಳ ಪ್ರಜಾಪರಿಷತ್ತುಗಳ ಅಧ್ಯಕ್ಷರಾದರಲ್ಲದೆ ಬೆಂಗಳೂರು ನಗರ ಜನತೆಯ ತೊಂದರೆಗಳನ್ನು ಕುರಿತ ವಿಚಾರ ಸಮಿತಿಯ ನೇತೃತ್ವ ವಹಿಸಿದ್ದರು.
೧೯೩೧ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಅವರಿಗೆ ಡಿ ಲಿಟ್ ಪದವಿ ನೀಡಿ ಗೌರವಿಸಿತು.
೧೯೩೫ರಲ್ಲಿ ಯೂರೋಪ್ ಮತ್ತು ಅಮೆರಿಕಾದಲ್ಲಿ ಕೈಗಾರಿಕಾ ಅಧ್ಯಯನ ಪ್ರವಾಸ ಮಾಡಿ ಬಂದು ಇಂಡಿಯಾದಲ್ಲಿ ಮೋಟಾರು ಕಾರುಗಳ ನಿರ್ಮಾಣಕ್ಕೊಂದು ಯೋಜನೆ ಸಿದ್ಧಪಡಿಸಿದರು.
೧೯೩೯ರಲ್ಲಿ ಅವರ ಮೋಟಾರು ಕಾರುಗಳ ಯೋಜನೆ ಪ್ರಮುಖ ತಿರುವು ಪಡೆದು ಬೆಂಗಳೂರಿನಲ್ಲಿ ವಾಲ್ ಚಂದ್ ಹೀರಾಚಂದ್ ಅವರ ಸಹಭಾಗಿತ್ವದಲ್ಲಿ ವಿಮಾನ ಕಾರ್ಖಾನೆ ತಲೆಯೆತ್ತಿತು. ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ITI) ಸಹ ಸ್ಥಾಪನೆಯಾಯಿತು.
೧೯೪೬ರಲ್ಲಿ ಇಂಡಿಯಾದ ಉದ್ಯಮಿಗಳ ಸಂಘದ ಪ್ರತಿನಿಧಿ ಸಮಿತಿಯ ಸದಸ್ಯರಾಗಿ ಅಮೆರಿಕಾದಲ್ಲಿ ಅಧ್ಯಯನ ಪ್ರವಾಸ ಮಾಡಿ ಬಂದರು. ಎಂ ವಿ ಅವರ ಮಹತ್ಸಾಧನೆಗಳನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರೆಟ್ ನೀಡಿ ಗೌರವಿಸಿತು.
೧೯೫೧ರಲ್ಲಿ Memoirs of my working life ಎಂಬ ಪುಸ್ತಕವನ್ನು ಪ್ರಕಟಿಸಿದರು.
ತಮ್ಮ ನಿವೃತ್ತಿಯ ದಿನ ಮನೆಯಿಂದ ಅಠಾರಾ ಕಚೇರಿಗೆ ಸರ್ಕಾರಿ ಕಾರಿನಲ್ಲಿ ಬಂದು ತಮ್ಮ ಸ್ಥಾನವನ್ನು ಮತ್ತೊಬ್ಬರಿಗೆ ವಹಿಸಿಕೊಟ್ಟು ಎಲ್ಲರಿಂದ ಹೃತ್ಪೂರ್ವಕವಾಗಿ ಬೀಳ್ಕೊಂಡು ಸ್ವಂತ ಕಾರಿನಲ್ಲಿ ಮನೆಗೆ ಹಿಂದಿರುಗಿದರು.
ಹೀಗೆ ಸಾರ್ಥಕ ಜೀವಿಯಾಗಿ ಶತಾಯುಷಿಯಾಗಿ ಬಾಳಿದ ಎಂ ವಿಶ್ವೇಶ್ವರಯ್ಯನವರು ೧೯೬೨ನೇ ಏಪ್ರಿಲ್ ೧೪ಎಂದು ಮುಂಜಾನೆ ೬:೧೫ಕ್ಕೆ ಕೊನೆಯುಸಿರೆಳೆದರು.