ಎಐ : ಭಾರತದ ಹೊಸ ಅಧ್ಯಾಯ

ಎಐ : ಭಾರತದ ಹೊಸ ಅಧ್ಯಾಯ

ಪ್ರಧಾನಿ ನರೇಂದ್ರ ಮೋದಿಯವರ ಫ್ರಾನ್ಸ್ ಭೇಟಿಯು ಉಭಯ ದೇಶಗಳ ನಡುವೆ ಕೃತಕ ಬುದ್ಧಿಮತ್ತೆ (ಎಐ) ಯ ತಂತ್ರಜ್ಞಾನ ವಿಸ್ತರಣೆಯಲ್ಲಿ ಮತ್ತು ರಕ್ಷಣಾ ಸಹಕಾರದಲ್ಲಿ ಮಹತ್ವದ ಅಧ್ಯಾಯವೊಂದನ್ನು ತೆರೆದಿದೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಮತ್ತು ನರೇಂದ್ರ ಮೋದಿಯವರ ಉಸ್ತುವಾರಿಯಲ್ಲಿ ನಡೆದ ಎಐ ಆಕ್ಷನ್ ಸಮ್ಮೇಳನದಲ್ಲಿ ಕೃತಕ ಬುದ್ದಿಮತ್ತೆಯನ್ನು ಮನುಕುಲದ ಲಾಭಕ್ಕೆ ಬಳಸುವ ಕುರಿತಂತೆ ಮತ್ತು ಅದರ ನೈತಿಕ ಚೌಕಟ್ಟನ್ನು ಕಾಪಾಡಿಕೊಳ್ಳುವ ಕುರಿತಂತೆ ಚರ್ಚಿಸುವುದು ಗಮನಾರ್ಹ. ಇನ್ನಿತರ ಕೆಲವು ದೇಶಗಳ ಮುಖಂಡರು ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರು ಜನರ ಉದ್ಯೋಗವನ್ನು ಎಐ ಕಸಿದುಕೊಳ್ಳುವುದಿಲ್ಲ, ಉದ್ಯೋಗದ ಸ್ವರೂಪ ಬದಲಾಗುವುದಷ್ಟೇ ಎಂದು ಹೇಳುವ ಮೂಲಕ ಹಲವು ವಲಯಗಳಲ್ಲಿ ಮೂಡಿರುವ ಶಂಕೆಯನ್ನು ನಿವಾರಿಸಲೆತ್ನಿಸಿದ್ದಾರೆ. ಇದೇ ವೇಳೆ, ಎ ಐ ಜನಕೇಂದ್ರಿತವಾಗಿರಬೇಕು, ಪಾರದರ್ಶಕವಾಗಿರಬೇಕು ಎಂಬಂತಹ ಕಿವಿಮಾತನ್ನೂ ಮೋದಿಯವರು ಹೇಳಿರುವುದು ಮನನೀಯ. ಇದರೊಂದಿಗೇ ಭಾರತವು ಫ್ರಾನ್ಸ್ ಜೊತೆಗೆ ೪೦೦ ಬಿಲಿಯನ್ ಡಾಲರ್ ಗಳ ‘ಎಐ ತಂತ್ರಜ್ಞಾನ ಅಭಿವೃದ್ಢಿಯ ಪಾಲುದಾರಿಕೆ’ಗೂ ಸಹಿ ಹಾಕಿದೆ. ಈ ಎಐ ತಂತ್ರಜ್ಞಾನವನ್ನು ಮಾನವಾಭಿವೃದ್ದಿಗೆ, ನಾಗರಿಕ ಹಿತಕ್ಕೆ ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಲಿರುವುದರಿಂದ ಹಾಗೂ ಜನಜೀವನದ ಒಂದಂಗವಾಗಿ ಬೆಳೆಯಲಿರುವುದರಿಂದ ಭಾರತ ಕೂಡಾ ಈ ವಿಷಯದಲ್ಲಿ ಹಿಂದುಳಿಯುವುದು ತರವಲ್ಲ ಎಂಬ ಭಾವನೆಯು ಗಟ್ಟಿಗೊಳ್ಳುತ್ತಿರುವುದರಿಂದ ಪ್ರಧಾನಿಯವರು ಇಂತಹದೊಂದು ಒಪ್ಪಂದಕ್ಕೆ ಸಹಿ ಹಾಕಿರುವುದು ನಮ್ಮ ದೇಶಕ್ಕೂ ವರದಾನವಾಗಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಮುಂಚೂಣಿ ಸ್ಥಾನದಲ್ಲಿದ್ದರೂ ಎಐ ಕ್ಷೇತ್ರದಲ್ಲಿ ಇನ್ನೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲವೆನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಇದೀಗ ತನ್ನ ವ್ಯೂಹಾತ್ಮಕ ಪಾಲುದಾರನಾಗಿರುವ ಫ್ರಾನ್ಸ್ ನ ಜತೆ ಸೇರಿಕೊಂಡು ಎಐ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸುವುದು ಹಾಗೂ ಅದನ್ನು ಪ್ರಜಾಹಿತಕ್ಕಾಗಿ ಬಳಸಿಕೊಳ್ಳುವುದು ಭಾರತದ ಗುರಿಯಾಗಿದೆ.

ಎಐ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ದೊಡ್ದ ಮೊತ್ತದ ಅಗತ್ಯವಿದೆ. ಇದೇ ವೇಳೆ, ಚೀನಾದ ಡೀಪ್ ಸೀಕ್ ಕಡಿಮೆ ವೆಚ್ಚದಲ್ಲಿ ಕೂಡ ಎ ಐ ತಂತ್ರಜ್ಞಾನ ಅಭಿವೃದ್ಧಿ ಸಾಧ್ಯವೆಂಬುದನ್ನೂ ತೋರಿಸಿಕೊಟ್ಟಿದೆ. ಭಾರತವು ಈ ಎಲ್ಲ ಆಯಾಮಗಳಲ್ಲೂ ಗಮನ ಹರಿಸಬೇಕಾಗಿದೆ. ಇದೇ ವೇಳೆ ರಾಕೆಟ್ ಲಾಂಚರ್ ‘ಪಿನಾಕ’ಗಳನ್ನು ಖರೀದಿಸಲು ಆಸಕ್ತಿ ತೋರಿದೆ. ಈ ವರೆಗೆ ಭಾರತವು ಫ್ರಾನ್ಸ್ ನಿಂದ ಶಸ್ತಾಸ್ತ್ರ ಖರೀದಿಸುತ್ತಿದ್ದರೆ ಈಗ ಫ್ರಾನ್ಸ್ ಭಾರತದಿಂದಲೇ ಶಸ್ತ್ರ ಖರೀದಿಗೆ ಉತ್ಸುಕತೆ ತೋರುತ್ತಿರುವುದು ಬದಲಾದ ಪರಿಸ್ಥಿತಿಯ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಅಭಿವೃದ್ಧಿಯ ದ್ಯೋತಕವಾಗಿದೆ. ಇದು ಭಾರತದ ರಕ್ಷಣಾ ಸಾಮಗ್ರಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮೌಲ್ಯವನ್ನು ಹೆಚ್ಚಿಸಲಿದೆ. 

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೩-೦೨-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ