ಎಚ್ಚರಿಕೆಯ ನಡೆ ಅಗತ್ಯ
ಮಹತ್ವಾಕಾಂಕ್ಷಿ ಷಿ ಜಿನ್ ಪಿಂಗ್ ಅವರು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಸರ್ವೋಚ್ಚ ನಾಯಕರಾಗಿ ಹಾಗೂ ತನ್ಮೂಲಕ ಆ ರಾಷ್ಟ್ರದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಇದು ಆ ದೇಶದ ಜೊತೆಗೆ ಭಾರತ ಮತ್ತು ಜಗತ್ತು ಇನ್ನಷ್ಟು ಕಟ್ಟೆಚ್ಚರದಿಂದ ವ್ಯವಹರಿಸಬೇಕಾದ ಸೂಚನೆಯೆನ್ನಬಹುದು. ಜಿನ್ ಪಿಂಗ್ ಮೂರನೇ ಬಾರಿ ಅಧಿಕಾರದಲ್ಲಿ ಮುಂದುವರಿಯುವ ಮೂಲಕ ನವ ಚೀನಾ ನಿರ್ಮಾತೃ ಮಾವೋ ತ್ಸೆ ತುಂಗ್ (ಮಾವೋ ಜೆಡಾಂಗ್) ನಂತರ ಆದೇಶದ ಪ್ರಬಲ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಚೀನಾದಲ್ಲಿ ಇರುವುದು ಏಕಪಕ್ಷೀಯ ಕಮುನಿಸ್ಟ್ ಆಡಳಿತ. ಸರ್ವಾಧಿಕಾರಿ ಮನಸ್ಥಿತಿಯ ಈ ಪಕ್ಷದ ಸರ್ಕಾರದಲ್ಲಿ ಜಿನ್ ಪಿಂಗ್ ಪ್ರಶ್ನಾತೀತ ನಾಯಕರಂತೆ ರೂಪುಗೊಂಡಿರುವುದು ಈ ದೋರಣೆಯನ್ನು ಮತ್ತಷ್ಟು ಬಲಗೊಳಿಸುವುದು ನಿಸ್ಸಂದೇಹ. ಹತ್ತು ವರ್ಷಗಳ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾದ ಜಿನ್ ಪಿಂಗ್ ಎಲ್ಲಾ ಅಧಿಕಾರವೂ ತಮ್ಮ ಸುತ್ತ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾದ ಅಧ್ಯಕ್ಷ ಸ್ಥಾನಕ್ಕೆ ಇದ್ದ ಗರಿಷ್ಠ ಎರಡು ಅವಧಿಗಳ ಮಿತಿಯನ್ನು ೨೦೧೮ರಲ್ಲಿ ತೆಗೆದುಹಾಕುವ ಮೂಲಕ ಮತ್ತೊಮ್ಮೆ ಆಸ್ಥಾನದಲ್ಲಿ ತಾವೇ ಮುಂದುವರಿಯುವಂತೆ ನೋಡಿಕೊಂಡಿದ್ದಾರೆ. ಸೇನೆಗೆ ಬಲ ತುಂಬುವುದಕ್ಕಾಗಿ ಅವರು ರಕ್ಷಣಾ ವೆಚ್ಚವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಿಕೊಂಡೇ ಬಂದಿದ್ದಾರೆ. ಜಿನ್ ಪಿಂಗ್ ಅವಧಿಯಲ್ಲಿ ಚೀನಾ ಜಾಗತಿಕವಾಗಿ ಆಕ್ರಮಣಕಾರಿ ಧೋರಣೆಯನ್ನೇ ಪ್ರದರ್ಶಿಸಿಕೊಂಡು ಬಂದಿದ್ದು, ಇದು ಮುಂದುವರಿಯುವ ಸಾಧ್ಯತೆ ಗೋಚರಿಸುತ್ತಿದೆ.
ಚೀನಾ ನೆಲದಲ್ಲಿ ಅವರಿಗೆ ಯಾವುದೇ ಬಲ ರಾಜಕೀಯ ಎದುರಾಳಿ ಇಲ್ಲ. ಆದರೆ., ಆರ್ಥಿಕವಾಗಿ ಹಲವಾರು ಸವಾಲುಗಳನ್ನು ಅವರು ಎದುರಿಸುವ ಪರಿಸ್ಥಿತಿ ತಲೆದೋರಿದೆ. ಕೋವಿಂದ್ ಸೋಂಕು ಇತರೆಲ್ಲಾ ದೇಶಕ್ಕಿಂತ ಚೀನಾಗೆ ಹೆಚ್ಚಿನ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಸಾಲದಿಂದ ಜರ್ಜರಿತವಾಗಿರುವ ಚೀನಾದ ಆರ್ಥಿಕತೆ ಕುಸಿಯುತ್ತಿದೆ. ಅಮೆರಿಕ ಕೂಡ ಚೀನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರೋಕ್ಷವಾಗಿ ಅನೇಕ ದಿಗ್ಬಂಧನಗಳನ್ನು ಹೇರುತ್ತಲೇ ಸಾಗಿದೆ. ಈ ಆರ್ಥಿಕ ಸವಾಲುಗಳನ್ನು ಮೆಟ್ಟಿನಿಂತು ಚೀನಾವನ್ನು ನಡೆಸುವುದು ಜಿನ್ ಪಿಂಗ್ ಗೆ ಸುಲಭದ ಸಂಗತಿಯಲ್ಲ. ೨೦೨೧ರಲ್ಲಿ ಚೀನಾದ ಜೊತೆಗೆ ಭಾರತದ ವ್ಯಾಪಾರ ಕೊರತೆ ೬೯.೪ ಬಿಲಿಯನ್ ಡಾಲರ್ (೫,೭೨,೮೩೮ ಕೋಟಿ ರೂಪಾಯಿ) ಇದೆ. ಅಂದರೆ, ಚೀನಾಗೆ ಭಾರತದ ರಫ್ತು ಕಡಿಮೆ ಇದ್ದು, ಅಗಾಧ ಪ್ರಮಾಣದ ಆಮದನ್ನು ನಾವು ಆ ದೇಶದಿಂದ ಮಾಡಿಕೊಳ್ಳುತ್ತೇವೆ ಎಂದರ್ಥ. ಅಮೆರಿಕದ ನಂತರ ಅತಿ ಹೆಚ್ಚು ವ್ಯಾಪಾರ ವಹಿವಾಟನ್ನು ಭಾರತ ಹೊಂದಿರುವುದೇ ಚೀನಾದೊಂದಿಗೆ. ಹೀಗಿದ್ದರೂ ಚೀನಾವನ್ನು ಭಾರತ ವಿಶ್ವಾಸಾರ್ಹ ದೇಶವಾಗಿ ಪರಿಗಣಿಸುವುದಿಲ್ಲ. ೧೯೬೨ ನಲ್ಲಿ ಚೀನಾ ಏಕಾಏಕಿ ಭಾರತದ ಮೇಲೆ ಆಕ್ರಮಣ ನಡೆಸಿ ಕೈಗೊಂಡಿತ್ತು. ಜಿನ್ ಪಿಂಗ್ ಆಡಳಿತಾವಧಿಯಲ್ಲೇ ಡೋಕ್ಲಾಮ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿ ಪರಸ್ಪರ ಸೈನಿಕರ ಘರ್ಷಣೆಗೂ ಕಾರಣವಾಯಿತು. ಕೆಲದಿನಗಳ ಹಿಂದೆಯಷ್ಟೇ ಎಲ್ ಇ ಟಿ ಉಗ್ರನನ್ನು ಜಾಗತಿಕ ಭಯೋತ್ಪಾದಕ ಎಂದು ಪೋಷಿಸುವ ಭಾರತದ ಪ್ರಸ್ತಾವಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಮತ್ತೆ ವಿರೋಧ ವ್ಯಕ್ತಪಡಿಸಿತು. ಈಗ ಜ಼ಿನ್ ಪಿಂಗ್ ಸೆಂಟ್ರಲ್ ಮಿಲಿಟರಿ ಕಮಿಷನ್ ಮುಖ್ಯಸ್ಥರಾಗಿಯೂ ಮರು ನೇಮಕಗೊಂಡಿದ್ದಾರೆ. ಹೀಗಾಗಿ, ಇಂತಹ ಮಿಲಿಟರಿ ಸಂಘರ್ಷದ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ರಾಜಕೀಯವಾಗಿ ಭೌಗೋಳಿಕವಾಗಿ ಚೀನಾ ಯಾವಾಗಲೂ ಭಾರತಕ್ಕೆ ಮಗ್ಗುಲ ಮುಳ್ಳು. ಆ ಎಚ್ಚರದಲ್ಲೇ ಭಾರತದ ನೀತಿಗಳು ರೂಪುಗೊಳ್ಳಬೇಕಾದ್ದು ಅನಿವಾರ್ಯ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿನಾಂಕ:೨೪-೧೦-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ