ಎಚ್ಚರ! ಬರುತ್ತಿದೆ ಮಾಧ್ಯಮಗಳ ಸರ್ವಾಧಿಕಾರ!!

ಎಚ್ಚರ! ಬರುತ್ತಿದೆ ಮಾಧ್ಯಮಗಳ ಸರ್ವಾಧಿಕಾರ!!

ಬರಹ

ಎಚ್ಚರ! ಬರುತ್ತಿದೆ ಮಾಧ್ಯಮಗಳ ಸರ್ವಾಧಿಕಾರ!!

ಚುನಾವಣೆಗಳು ಮುಗಿದಿವೆ. ಹೊಸ ಸರ್ಕಾರವೂ ರಚನೆಯಾಗಿದೆ. ಅದು, ಸಂಪುಟ ರಚಿಸಿಕೊಂಡು ಅಧಿಕಾರದ ಕುರ್ಚಿಯ ಮೇಲೆ ಸರಿಯಾಗಿ ಕೂರುವ ಮುನ್ನವೇ ಎರಡು ಬಲಿಗಳನ್ನೂ ತೆಗೆದುಕೊಂಡಿದೆ. ಒಂದು ನೇರವಾಗಿ - ಹಾವೇರಿಯಲ್ಲಿ, ತನ್ನ ಬೆಂಬಲಿಗನೇ ಆದ ಅಮಾಯಕ ರೈತನೊಬ್ಬನನ್ನು. ಇನ್ನೊಂದು, ತನ್ನದೇ ಶಾಸಕನೊಬ್ಬನ ಪತ್ನಿಯನ್ನು. ಸರ್ಕಾರ ರಚನೆಯಾದಾಗಿನಿಂದ ಮುಖ್ಯಮಂತ್ರಿಯೂ ಸೇರಿದಂತೆ ಅವರ ಸಚಿವ ಸಂಪುಟದ ಬಹುಪಾಲು ಸದಸ್ಯರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಎಲ್ಲ ಅಧಿಕೃತ ಮರ್ಯಾದೆಗಳನ್ನೂ ಮೀರಿ ನಡೆಸಿದ ಪೂಜೆ - ಪುನಸ್ಕಾರ - ಹೋಮ - ಹವನಗಳ ಸಂಭ್ರಮಗಳನ್ನು ಗಮನಿಸಿದವರಿಗೆ ಈ ಎರಡು ಸಾವುಗಳು ಇವರ ಮೌಢ್ಯಾಚರಣೆಗಳ ಮುಂದುವರಿಕೆಯಾಗಿ ಆದ ಬಲಿಗಳಂತೆ ಕಂಡರೆ ಆಶ್ಚರ್ಯವಿಲ್ಲ.

ಏಕೆಂದರೆ, ಈ ಎರಡೂ ಸಾವುಗಳು ಸದ್ಯಕ್ಕಂತೂ ಇನ್ನೂ ನಿಗೂಢವಾಗಿಯೇ ಇವೆ. ರೈತ ಸಿದ್ಧಲಿಂಗಪ್ಪ ಚೂರಿಯ ಸಾವಿಗೆ ಕಾರಣವಾದ ಪೋಲೀಸ್ ಗೋಲೀಬಾರಿಗೆ ಪ್ರಚೋದನೆಯಾದರೂ ಏನು, ಅದಕ್ಕೆ ಆಜ್ಞೆ ಮಾಡಿದವರಾರು ಎಂಬುದು ಒಂದು ವಾರ ಕಳೆದರೂ ಸ್ಪಷ್ಟವಾಗಿಲ್ಲ. ಹಾಗೇ ಪದ್ಮಪ್ರಿಯ ಅವರ ಕಣ್ಮರೆ ಮತ್ತು ಸಾವಿನ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಬದಲಿಗೆ, ಕೆಟ್ಟ್ಚ ವದಂತಿಗಳು ಹಬ್ಬುವ ದುರದೃಷ್ಟಕರ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಮೊದಲ ಸಾವಿನ ಬಗೆಗೆ ಆದೇಶಿಸಿದಂತೆ ಮುಖ್ಯಮಂತ್ರಿಯವರು ಎರಡನೇ ಸಾವಿನ ಬಗೆಗೂ ನ್ಯಾಯಾಂಗ ವಿಚಾರಣೆಗೆ ಆದೇಶಿಸುವ ಒತ್ತಡಕ್ಕೆ ಒಳಗಾದರೂ ಆಶ್ಚರ್ಯವಿಲ್ಲ. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಕೂತಿರುವುದು ಅಧಿಕಾರದ ಕುರ್ಚಿಯ ಮೇಲೋ ಉರಿಯತ್ತಿರುವ ಒಲೆಯ ಮೇಲೋ ಗೊತ್ತಾಗದಷ್ಟು ಪರಿಸ್ಥಿತಿ ಆರಂಭದಲ್ಲೇ ಪ್ರತಿಕೂಲವಾಗಿದೆ. ಇದಕ್ಕಾಗಿ ಯಡಿಯೂರಪ್ಪನವರ ಬಗ್ಗೆ ನಮ್ಮ ಸಹಾನುಭೂತಿ ಇದೆ.

ಆದರೆ, ಅಧಿಕಾರ ಸ್ವೀಕರಿಸಿದೊಡನೆ ಸೋತ ಧರ್ಮಸಿಂಗರೂ ಸೇರಿದಂತೆ ವಿರೋಧ ಪಕ್ಷಗಳ ಎಲ್ಲ ಮುಖ್ಯ ನಾಯಕರನ್ನು ಭೇಟಿ ಮಾಡಿ ಸಹಕಾರ ಕೋರುವ ಮೂಲಕ ಯಡಿಯೂರಪ್ಪ ಪ್ರದರ್ಶಿಸಿದ ಅಪರೂಪದ ಸಜ್ಜನಿಕೆ, ಅಧಿಕಾರ ನಿರ್ವಹಣೆಯ ಕಷ್ಟಗಳು ಬಂದೆರಗಲಾರಂಭಿಸಿದೊಡನೆ ಕಾಣೆಯಾಗತೊಡಗಿದೆ. ರಾಜ್ಯಪಾಲರ ಮೇಲೆ, ವಿರೋಧ ಪಕ್ಷಗಳ ಮೇಲೆ, ಕೇಂದ್ರ ಸರ್ಕಾರದ ಮೇಲೆ ಅನುಚಿತವಾಗಿ ಹರಿಹಾಯತೊಡಗಿದ್ದಾರೆ. ಇದು ಪ್ರಬುದ್ಧ ನಾಯಕತ್ವದ ಲಕ್ಷಣವಲ್ಲ. ಮುಂಗಾರು ಬಿತ್ತನೆಗೆ ಬೇಕಾದ ಸಿದ್ಧತೆ ರಾಜ್ಯಪಾಲರ ಆಡಳಿತಾವಧಿಯ ಕಾಲದಲ್ಲಿ ಸಮರ್ಪಕವಾಗಿ ಆಗಿಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ ತಾವು ಅಧಿಕಾರ ವಹಿಸಿಕೊಂಡಾದ ನಂತರ ಹಾಸನ ಮತ್ತು ದಾವಣೆಗೆರೆಗಳಲ್ಲಿ ರೈತರು ಬೀಜ ಮತ್ತು ಗೊಬ್ಬರಗಳಿಗಾಗಿ ಮಾಡಿದ ಹಾಹಾಕಾರದ ಎರಡು ಮೂರು ದಿನಗಳ ನಂತರವೂ ಏನೂ ಕ್ರಮ ಕ್ರಮ ಕೈಗೊಳ್ಳಲಿಲ್ಲ ಎಂದರೆ ಏನರ್ಥ? ಹಾವೇರಿ ಅನಾಹುತದ ನಂತರ ಎರಡೇ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವಷ್ಟು ತ್ವರೆಯಿಂದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವುದಾದರೆ, ಇದೇ ಕ್ರಮಗಳನ್ನು ಮೊದಲೇ ಏಕೆ ಕೈಗೊಳ್ಳಲಾಗಲಿಲ್ಲ?

ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯರ ಸಾವನ್ನೇ ನೋಡಿ. ಹೇಳಿ ಕೇಳಿ ಅವರು ಶಾಸಕರ ಪತ್ನಿ. ಅವರು ಮನೆಯಿಂದ ತಾಯಿಯ ಮನೆಗೆ ಪಯಣ ಬೆಳೆಸಲು ಕೊಂಡೊಯ್ದಿದ್ದರೆಂದು ಹೇಳಲಾದ ಕಾರು ಎರಡು ದಿನಗಳ ನಂತರ ನಿರ್ಜನ ಪ್ರದೇಶವೊಂದರಲ್ಲಿ ಆಕಸ್ಮಿಕವಾಗಿ ಪೋಲೀಸರ ಕಣ್ಣಿಗೆ ಬೀಳುವ ತನಕ ಒಂದು ಪೋಲೀಸು ದೂರೂ ಇಲ್ಲ ಎಂದರೆ ಏನು ಹೇಳುವುದು? ನಂತರ ಅವರು ಸಂಬಂಧವಿಲ್ಲದ ಮಾಲೂರಿನಲ್ಲಿ ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯ ಕಾಣಲಿದೆ ಎಂದು ಸ್ವತಃ ರಾಜ್ಯದ ಗೃಹ ಮಂತ್ರಿಗಳೇ ಸೂಚನೆ ನೀಡಿದ ಮರುದಿನವೇ ದೂರದ ದೆಹಲಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಹಿರಂಗಗೊಳ್ಳುತ್ತದೆಂದರೆ ಯಾರನ್ನು ನಂಬುವುದು? ಏನನ್ನು ನಂಬುವುದು? ಇದರ ವಿವರಗಳು ಒಂದು ಕುಟುಂಬದ, ಅದರ ಸದಸ್ಯರ ಖಾಸಗಿ ಜೀವನ ಮತ್ತು ಭಾವನೆಗಳಿಗೆ ಸಂಬಂಧಿಸಿವೆ ಹಾಗೂ ಅವು ಖಂಡಿತ ಸಾರ್ವಜನಿಕವಾಗಿ ಚರ್ಚೆಯಾಗುವ ಅಗತ್ಯವಿಲ್ಲ, ನಿಜ. ಆದರೆ ಇಡೀ ಪ್ರಕರಣವನ್ನು ನಮ್ಮ ಪೋಲೀಸರು ನಿರ್ವಹಿಸಿದ ಅಥವಾ ಅದಕ್ಕಾಗಿ ಅವರಿಗೆ ಅವಕಾಶ ನೀಡಿದ ರೀತಿ ಖಂಡಿತ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತರುವಂತಹುದಲ್ಲ. ಬದಲಿಗೆ ಸಾರ್ವಜನಿಕ ರಕ್ಷಣೆಯ ಅದರ ಬದ್ಧತೆ, ದಕ್ಷತೆ ಹಾಗೂ ಪ್ರಾಮಾಣಿಕತೆಗಳನ್ನು
ಸಂದೇಹಾಸ್ಪದಗೊಳಿಸಿದೆ.

ಯಡಿಯೂರಪ್ಪನವರಿಗೆ ಇದು ನಿಜವಾಗಿಯೂ ಕಷ್ಟದ ಕಾಲ. ಆದರೆ ಈ ಕಷ್ಟಗಳನ್ನೆಲ್ಲ ಅವರೇ ತಂದುಕೊಂಡಿರುವಂತಹವು ಮತ್ತು ಬಹುಶಃ ಈಗಲೇ ಕೊನೆಗೊಳ್ಳದಂತಹವು ಕೂಡಾ. ಏಕೆಂದರೆ, ಸರ್ಕಾರ ಮತ್ತು ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಯ ರೀತಿ ನೀತಿಗಳಲ್ಲಿ ಕಂಡ ಅವರ ವೈಯುಕ್ತಿಕ ಶಕ್ತಿ ವರ್ಧನೆಯ ರಾಜಕಾರಣ, ನಿನ್ನೆಯವರೆಗೂ ಕಾಂಗ್ರೆಸ್ಸಿನಲ್ಲಿದ್ದ ಲಿಂಗಾಯಿತ ನಾಯಕ ಪ್ರಭಾಕರ ಕೋರೆಯವರನ್ನು ಇಂದು ತಮ್ಮ ಪಕ್ಷದ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಕರೆ ತಂದಿರುವುದರವರೆಗೂ ವಿಸ್ತರಿಸಿದೆ. ಯಡಿಯೂರಪ್ಪ ತಮ್ಮ ಸ್ಥಾನದ ಅಭದ್ರತೆಯ ಆತಂಕವನ್ನು ಹೀಗೆ ವೈಯುಕ್ತಿಕ ನಿಷ್ಠೆಯ ನೆಲೆಯಲ್ಲೇ ಪರಿಹರಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿದಷ್ಟೂ ಅವರ ಆತಂಕಗಳು ಹೆಚ್ಚುತ್ತಾ ಹೋಗುತ್ತವೆ. ಅಧಿಕಾರವೆಂಬುದು ಜನಸೇವೆಯ ಮೂಲಕ ವ್ಯಕ್ತಿತ್ವವನ್ನು ಅರಳಿಸುವ ಉತ್ಸಾಹವಾಗದೆ, ಬೆಂಬಿಡದ ಭೂತವಾಗಿ ಕಾಡತೊಡಗುತ್ತದೆ. ಈಗಾಗಲೇ ಸಿದ್ಧಲಿಂಗಪ್ಪ ಮತ್ತು ಪದ್ಮಪ್ರಿಯರ ಭೂತಗಳು ಅವರ ಬೆನ್ನಿಗೆ ಬಿದ್ದಿವೆ. ಅವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಸಿದ್ಧಲಿಂಗಪ್ಪನವರ ಪುತ್ಥಳಿಯನ್ನು ಸ್ಥಾಪಿಸುವುದಾಗಿ ಈಗಾಗಲೇ ಹೇಳಿರುವ ಯಡಿಯೂರಪ್ಪ, ಪದ್ಮಪ್ರಿಯ ಅವರ ಪುತ್ಥಳಿಯನ್ನೂ ಸ್ಥಾಪಿಸುವರೇನೋ ಇನ್ನೂ ತಿಳಿಯದು! ನಮ್ಮ ಚರಿತ್ರೆಯಲ್ಲಿನ ಎಲ್ಲ ವೀರುಗಲ್ಲುಗಳ ಹಿಂದಿನ ಕರುಣ ಕಥೆಯೂ ಇದೇ ಏನೋ...

ಇರಲಿ, ಯಡಿಯೂರಪ್ಪನವರ ಹಿಂದೆ ಬಿದ್ದಿರುವುದು ಸಿದ್ಧಲಿಂಗಪ್ಪ ಮತ್ತು ಪದ್ಮಪ್ರಿಯರ ಭೂತಗಳು ಮಾತ್ರವಲ್ಲ. ಬಹುಪಾಲು ಮಾಧ್ಯಮಗಳೂ ಅವರ ವಿರುದ್ಧ ತಿರುಗಿ ಬಿದ್ದಂತೆ ತೋರುತ್ತಿದೆ. ಒಂದೆರಡು ದಿನಪತ್ರಿಕೆಗಳು ಯಡಿಯೂರಪ್ಪನವರ ಸಚಿವ ಸಂಪಟ ರಚನೆ ಮತ್ತು ಖಾತೆ ಹಂಚಿಕೆಯ ರೀತಿ ನೀತಿಗಳನ್ನು ತಾವು ಸಾರ್ವಜನಿಕ ಮಾಧ್ಯಮವೆಂಬುದನ್ನೇ ಮರೆತಂತೆ, ಸುದ್ದಿ ಮತ್ತು ಸುದ್ದಿ ವಿಶ್ಲೇಷಣೆಯ ಗೆರೆಗಳನ್ನೇ ಅಳಿಸಿ ಹಾಕಿದಂತೆ, ಆಡಳಿತ ಪಕ್ಷದೊಳಗಿನ ಭಿನ್ನಮತೀಯ ಗುಂಪೊಂದರ ಕರಪತ್ರದ ಮಟ್ಟಕ್ಕಿಳಿದು ದೂಷಿಸಿದವು. ಇದು ಯಡಿಯೂರಪ್ಪನವರ ಜಾತಿ ರಾಜಕಾರಣಕ್ಕೆ
ಪ್ರತಿಯಾದ ಜಾತಿ ರಾಜಕಾರಣವೆಂಬುದು ಎದ್ದು ಕಾಣುವಂತಿತ್ತು. ನಮ್ಮ ಮಾಧ್ಯಮಗಳ ಈ ಅವನತಿ, ಸಾರ್ವಜನಿಕ ಚರ್ಚೆಯ ದಿಕ್ಕು ದೆಸೆಗಳನ್ನೇ ನಿರ್ಣಾಯಕವಾಗಿ ಬದಲಿಸುವಷ್ಟು ಮೂಲಭೂತವಾದವು. ಇದು ನಿಜವಾದ ಅಪಾಯದ ಸೂಚನೆ. ಈ ಅಪಾಯ, ಹಾವೇರಿ ಗೋಲೀಬಾರ್ ಮತ್ತು ಪದ್ಮಪ್ರಿಯ ಸಾವಿನ ಪ್ರಕರಣಗಳನ್ನು ಟಿ.ವಿ. ವಾಹಿನಿಗಳು ವರದಿ ಮಾಡಿದ ರೀತಿಯಲ್ಲಿ ಹೊಸ ಆಯಾಮಗಳನ್ನೇ ಪಡೆದುಕೊಂಡಿತು. ಕಸ್ತೂರಿ ವಾರ್ತೆ ಹಾವೇರಿ ಗೋಲಿಬಾರ್ ಪ್ರಕರಣದ ಸುದ್ದಿ ಪ್ರಸಾರದ ಹಿಂದೆ ಶೋಕ ಸಂಗೀತವನ್ನು ಅಳವಡಿಸಿ ಅದನ್ನು ಭಾವನಾತ್ಮಕಗೊಳಿಸುವ ವಿಶೇಷ ಪ್ರಯತ್ನ ಮಾಡಿತಲ್ಲದೆ, ರಸಗೊಬ್ಬರದ ಸಮಸ್ಯೆಗೆ ಯಾರ್ಯಾರು ಶೇಕಡಾವಾರು ಎಷ್ಟೆಷ್ಟು ಕಾರಣರು ಎಂದು ಲೆಕ್ಕ ಹಾಕಿ (ಇದಕ್ಕೆ ಆಧಾರಗಳೇನು ಎಂಬುದನ್ನು ಮಾತ್ರ ಅದು ಹೇಳಲಿಲ್ಲ!) ನಕ್ಷೆ ತೋರಿಸಿ ತೀರ್ಪು ನೀಡುವಂತಹ ಅಗ್ಗದ ರಾಜಕಾರಣಕ್ಕೆ ಕೈಹಾಕಿತು. ಇನ್ನು ಈವರೆಗೆ ತನ್ನ ಘನತೆಯನ್ನು ಕಾಯ್ದುಕೊಂಡು ಬಂದಿದ್ದ ಈ-ಟಿವಿ ವಾರ್ತೆ ಈ ದುರದೃಷ್ಟಕರ ಪ್ರಸಂಗವನ್ನು ಎಂತಹ ಒಂದು ಜಿಗುಪ್ಸೆಕರ ಮೆಲೋಡ್ರಾಮಾವಾಗಿ ಪರಿವರ್ತಿಸಿತೆಂದರೆ, ಅದರ ಪ್ರಸಾರವನ್ನು ಹಾಡು, ಗುಂಡಿನ ಸದ್ದು, ಸಂದರ್ಶನಗಳು ಮತ್ತು ಅರ್ಧಜೀವವಾಗಿ ಬಿದ್ದಿದ್ದ ರೈತರ ಶವಗಳ ದೃಶ್ಯಗಳನ್ನು ಹೃದಯ ವಿದ್ರಾವಕ 'ಹದ'ದಲ್ಲಿ ಮಿಶ್ರಮಾಡಿ ಒಂದು ಭಾವೋದ್ರೇಕದ ರೂಪಕದಂತೆ ಪದೇ ಪದೇ ಪ್ರಸ್ತುತಪಡಿಸಿ, ಸುದ್ದಿಯೆಂಬುದರ ಪಾವಿತ್ರ್ಯತೆಯನ್ನೇ ಹಾಳು ಮಾಡಿತು.

ಪದ್ಮಪ್ರಿಯ ಸಾವಿನ ಪ್ರಕರಣವನ್ನಂತೂ ಟಿವಿ-9, ಸಾವಿನ ಸುದ್ದಿ ಬಹಿರಂಗಗೊಂಡ ಕ್ಷಣದಿಂದ ಭಾರಿ ಶಿಕಾರಿ ಸಿಕ್ಕ ಮೃಗದಂತೆ ಹಗಲೂ ರಾತ್ರಿ ಪ್ರಕರಣದ ವ್ಯಾಖ್ಯಾನ - ವಿಶ್ಲೇಷಣೆಗಳ ಮೂಲಕ ಅದನ್ನೇ ಬಗೆಯುತ್ತಾ ತಿಂದು ಚಪ್ಪರಿಸತೊಡಗಿತು. ಪದ್ಮಪ್ರಿಯರ ಕುಟುಂಬ ಜೀವನದ ವಿವರಗಳಿಗೆ ಮೆಲ್ಲಗೆ ಕೈಹಾಕಿದ ಈ ವಾಹಿನಿ, ಅವರ ಶವ ದೆಹಲಿಯ ಶವಾಗಾರದಲ್ಲಿ ಕೇಳುವವರಿಲ್ಲದೆ ಅನಾಥವಾಗಿ ಬಿದ್ದಿದೆ ಎಂದು ಸಾರ್ವಜನಿಕರ ಪರವಾಗಿ ಕಂಬನಿ ಮಿಡಿಯುವ ನೆಪದಲ್ಲಿ ಇಡೀ ಪ್ರಕರಣವನ್ನು ಒಂದು ಭಾವನಾತ್ಮಕ 'ಕಥೆ'ಯಾಗಿ ಕಟ್ಟುವ ಎಲ್ಲ ಪ್ರಯತ್ನಗಳನ್ನು ಮಾಡಿತು. ಇದು
ಮಾಧ್ಯಮಗಳ ಮಾರುಕಟ್ಟೆ ರಾಜಕೀಯದ ಒಂದು ಅಶ್ಲೀಲ ಪಟ್ಟಲ್ಲದೆ ಮತ್ತೇನಲ್ಲ. ನಿಜ, ಈ ಪ್ರಕರಣ ಅದು ಶಾಸಕರೊಬ್ಬರ ಪತ್ನಿಯ ನಿಗೂಢ ಸಾವಿಗೆ ಸಂಬಂಧಿಸಿದೆ ಎಂಬ ಕಾರಣಕ್ಕಾಗಿ ಸಾರ್ವಜನಿಕರ ಕುತೂಹಲ ಕೆರಳಿಸಿದೆ. ಅವರ ಕಣ್ಮರೆ ಮತ್ತು ಸಾವಿನ ಹಿಂದೆ ಯಾವ ಷಡ್ಯಂತ್ರ್ಯ ಅಥವಾ ಸಂಚಿದೆ ಎಂಬುದರ ಸುಳಿವನ್ನು ಸಾರ್ವಜನಿಕರಿಗೆ ನೀಡುವುದು ತನ್ನ ಕರ್ತವ್ಯವೆಂದು ಸುದ್ದಿ ವಾಹಿನಿ ಭಾವಿಸಬಹುದು. ಆದರೆ ಒಂದು ಕುಟುಂಬದ ಖಾಸಗಿ ಜೀವನದ ವಿವರಗಳನ್ನು -ಅದೂ, ಅವಿನ್ನೂ ಅಸ್ಪಷ್ಟವಾಗಿದ್ದಾಗ -ಸಾರ್ವಜನಿಕ ಚರ್ಚೆಗೆ ಎಳೆಯುವುದು,
ಅನುಮಾನಾಸ್ಪಗೊಳಿಸುವುದು ಅನೈತಿಕವೆನಿಸಿಕೊಳ್ಳುತ್ತದೆ. ಯಾರದೇ ಬದುಕಿನ ಖಾಸಗಿತನದೊಳಕ್ಕೆ ಸಂಬಂಧಪಟ್ಟವರ ಅಪ್ಪಣೆ ಇಲ್ಲದೆ ಪ್ರವೇಶಿಸುವುದು ಅಸಭ್ಯವಷ್ಟೇ ಅಲ್ಲ, ಅಪರಾಧ ಕೂಡ. ದೆಹಲಿಯಲ್ಲಿ ಪದ್ಮಪ್ರಿಯ ವಾಸಿಸುತ್ತಿದ್ದ ಮನೆಯ ಬಾಗಿಲನ್ನು ಒಡೆದು ಪೋಲೀಸರು ಒಳ ಪ್ರವೇಶಿಸಿದಾಗ ಅವರ ಶವವಿದ್ದ ಕೋಣೆಯಲ್ಲಿ ಟಿವಿ-9 ವಾಹಿನಿ ಆನ್ ಆಗಿಯೇ ಇತ್ತೆಂದು ವರದಿಯೊಂದು ತಿಳಿಸುತ್ತದೆ. ಇದು ನಿಜವೇ ಆಗಿದ್ದಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರಂಭದಿಂದ ತಾನು ಪ್ರಸಾರ ಮಾಡುತ್ತಾ ಬಂದ ಸುದ್ದಿಯ ಸ್ವರೂಪವನ್ನೊಮ್ಮೆ ಅದು ವಿಮರ್ಶೆಗೆ ಒಳಪಡಿಸಿಕೊಳ್ಳುವುದು ಒಳ್ಳೆಯದು.

ಇಂದು ಮಾಧ್ಯಮಗಳು ರಾಜಕಾರಣಿಗಳಿಗಿಂತ ಹೆಚ್ಚಿನ ರಾಜಕಾರಣ ಮಾಡುತ್ತಿವೆ ಎಂಬುದು ಹೊಸ ಮಾತೇನಲ್ಲ. ರಾಜಕಾರಣ ಮಿತಿ ಮೀರಿದ ಹಣದ ವ್ಯವಹಾರವಾಗಿ ಪರಿವರ್ತಿತವಾದಾಗಿನಿಂದ ಅನೇಕ ರಾಜಕಾರಣಿಗಳ ವೈಯುಕ್ತಿಕ ಮತ್ತು ಕುಟುಂಬ ಜೀವನ ಅಸ್ತವ್ಯಸ್ತವಾಗಿದೆ. ಅವರು ಆಂತರಿಕವಾಗಿ ದುರ್ಬಲರೂ, ಅಸಹಾಯಕರೂ ಆಗತೊಡಗಿದ್ದಾರೆ. ಇದನ್ನರಿತಿರುವ ಮಾಧ್ಯಮ ಅಧಿಪತಿಗಳು ಮತ್ತು ಪ್ರತಿನಿಧಿಗಳು ತಮ್ಮ 'ಬುದ್ಧಿ' ಮತ್ತು 'ಬಲ'ವನ್ನು ಬಳಸಿಕೊಂಡು ರಾಜಕಾರಣಿಗಳನ್ನು ಆಟವಾಡಿಸತೊಡಗಿದ್ದಾರೆ. ಸರ್ಕಾರಗಳೂ ಈ ಹಾವಳಿಯಿಂದ ರಕ್ಷಣೆ ಪಡೆಯಲು ಅವರಿಗೆ ಬೆಲೆ ಬಾಳುವ ನಿವೇಶನ, ಮನೆ ಹಾಗೂ ಇನ್ನಿತರ ರೀತಿಯ ಉಡುಗೊರೆಗಳನ್ನು ಆಗಾಗ್ಗೆ ನೀಡುತ್ತಾ ಅವರ ವೃತ್ತಿವಂತಿಕೆಯನ್ನೇ ನಾಶ ಮಾಡಿವೆ. ಇವರಲ್ಲಿ ಕೆಲವರಂತೂ ರಾಜಕಾರಣಿಗಳ ಆಸ್ಥಾನ ವಿದ್ವಾಂಸರಾಗಿ, ಸಲಹಾಕಾರರಾಗಿ ಅನತಿ ಕಾಲದಲ್ಲೇ ಕೋಟ್ಯಾಧೀಶ್ವರರಾಗಿದ್ದಾರೆ. ಟಿವಿ ವಾಹಿನಿಗಳಂತೂ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಸುದ್ದಿಯನ್ನು ಹೆಚ್ಚೆಚ್ಚು ರೋಚಕ ಮತ್ತು ರಂಜಕಗೊಳಿಸುತ್ತಾ ನಿಧಾನವಾಗಿ ಅದನ್ನು ಸಾಮಾಜಿಕ ಅಭಿವೃದ್ಧಿ ಸಂಪನ್ಮೂಲದ ಸ್ಥಾನದಿಂದ ಒಂದು ಗ್ರಾಹಕ ವಸ್ತುವಿನ ಮಟ್ಟಕ್ಕೆ ಇಳಿಸತೊಡಗಿದೆ. ಬೇಲಿಯೇ ಎದ್ದು ಹೊಲ ಮೇಯತೊಡಗಿರುವ ವಿಪರ್ಯಾಸದ ದೃಶ್ಯವಿದು. ಈ ಬಗ್ಗೆ ಬಹುಬೇಗ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕಿದೆ. ಈ ಸಂಬಂಧ ಗೃಹ ಸಚಿವ ವಿ.ಎಸ್.ಆಚಾರ್ಯರು ಪದ್ಮಪ್ರಿಯ ಪ್ರಕರಣದಲ್ಲಿ ನೀಡಿರುವ ಒಂದು ಹೇಳಿಕೆ ಗಮನಾರ್ಹವಾಗಿದೆ: ಆಕೆಯನ್ನು ಟಿವಿ ಮಾಧ್ಯಮದ ಪ್ರತಿಕೂಲ ಪ್ರಚಾರದ ಪ್ರಭಾವದಿಂದ ಕಾಪಾಡಲೆಂದೇ ಆಕೆ ಮಾಲೂರಿನಲ್ಲಿದ್ದಾಳೆಂದು ಹೇಳಲಾಯಿತು ಎಂದಿದ್ದಾರೆ. ಆದರೆ ಅದರಲ್ಲಿ ವಿಫಲವಾಗಿದ್ದಾರೆ ಎಂಬುದು ಬೇರೆ ವಿಷಯ.

ಮಾಧ್ಯಮಗಳು ಸರ್ವಾಂತರ್ಯಾಮಿ, ಸರ್ವಶಕ್ತವಾಗತೊಡಗಿವೆ. ಅವು 24 ತಾಸುಗಳ ಕಾಲ ಪ್ರತಿ ಪ್ರಪಂಚವೊಂದನ್ನು ಸೃಷ್ಟಿಸುತ್ತಾ, ನಿಜ ಪ್ರಪಂಚದ ಭಾವನೆಯನ್ನೇ ದುರ್ಬಲಗೊಳಿಸತೊಡಗಿವೆ. ಮಾರುಕಟ್ಟೆಯಲ್ಲಿ ಗೆಲ್ಲಲು ಎಲ್ಲವನ್ನೂ ರೋಚಕ - ರಂಜಕಗೊಳಿಸಿ ಮತ್ತು ಅದನ್ನೇ recycle ಮಾಡಿ, ಹೇಳಿದ್ದನ್ನೇ ಹೇಳುತ್ತಾ ಮತ್ತು ತೋರಿಸಿದ್ದನ್ನೇ ತೋರಿಸುತ್ತಾ, ನಮ್ಮ ಸಂವೇದನಾ ಸೂಕ್ಷ್ಮಗಳನ್ನೇ ಮೊಂಡುಗೊಳಿಸುತ್ತಿವೆ. ಆ ಮೂಲಕ ನಾವು ವಾಸ್ತವದಲ್ಲಿ ಯಾವುದಕ್ಕೂ ಸ್ಪಂದಿಸುವ ಶಕ್ತಿಯನ್ನೇ ಕಳೆದುಕೊಳ್ಳುವಂತೆ ಮಾಡುತ್ತಿವೆ. ಶಾಸನ ಸರ್ವಾಧಿಕಾರದ ಆತಂಕವಾಯಿತು. ಅಧಿಕಾರಶಾಹಿ ಸರ್ವಾಧಿಕಾರದ ಆತಂಕವಾಯಿತು. ನಂತರ ನ್ಯಾಯಾಂಗ ಸರ್ವಾಧಿಕಾರದ ಆತಂಕವಾಯಿತು. ಈಗ ಮಾಧ್ಯಮಗಳ ಸರ್ವಾಧಿಕಾರದ ಆತಂಕ ಕಾಣಬರುತ್ತಿದೆ. ಈ ಎಲ್ಲ ಆತಂಕಗಳೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೇ. ಹಾಗಾಗಿ ಈ ಮೊದಲ ಮೂರು ಆತಂಕವನ್ನು ನಿವಾರಿಸಿಕೊಳ್ಳಲು ಸಾಧ್ಯವಾದಂತೆಯೇ ಈ ಹೊಸ ಸರ್ವಾಧಿಕಾರದ ಆತಂಕವನ್ನು ನಿವಾರಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುವ ಕಾಲವೀಗ ಬಂದಂತೆ ತೋರುತ್ತದೆ. ಇದರಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಜೊತೆ, ಇನ್ನೂ ತನ್ನ ವಿಶ್ವಾಸಾರ್ಹತೆ ಮತ್ತು
ಪಾವಿತ್ರ್ಯಗಳನ್ನು ಉಳಿಸಿಕೊಂಡಿರುವ ಮಾಧ್ಯಮ ಸಂಸ್ಥೆಗಳು ಮತ್ತು ಪ್ರತಿನಿಧಿಗಳು ಕೈ ಜೋಡಿಸಬೇಕಿದೆ.