ಎಚ್ಚರ, ಮಕ್ಕಳು ನಿಮ್ಮನ್ನು ಅನುಸರಿಸುತ್ತಿದ್ದಾರೆ !
ಹೌದು, ಮಕ್ಕಳು ಸಣ್ಣವರಿರುವಾಗ ಹೆಚ್ಚಾಗಿ ತಮ್ಮ ಪೋಷಕರನ್ನು ಅನುಸರಿಸುತ್ತಾರೆ. ಅವರು ನಡೆದುಕೊಳ್ಳುವ ರೀತಿ, ಮಾತನಾಡುವ ಕ್ರಮ ಮೊದಲಾದ ವಿಷಯಗಳನ್ನು ಬೇಗನೇ ಗ್ರಹಿಸಿಕೊಳ್ಳುತ್ತಾರೆ. ಪ್ರತೀ ದಿನ ಗಲಾಟೆ ಮಾಡಿಕೊಳ್ಳುವ ದಂಪತಿಗಳ ಮಕ್ಕಳು ಹೆಚ್ಚಾಗಿ ಒಂದೋ ಅಂತರ್ಮುಖಿಯಾಗಿರುತ್ತಾರೆ ಅಥವಾ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ಮಕ್ಕಳ ಎದುರು ಪೋಷಕರ, ಸಹೋದರ ಸಹೋದರಿಯರ, ಹತ್ತಿರದ ಸಂಬಂಧಿಕರ, ನಿಯಮಿತವಾಗಿ ಮನೆಗೆ ಭೇಟಿ ಕೊಡುವ ಕುಟುಂಬದ ಗೆಳೆಯರು ಆದಷ್ಟು ಮಟ್ಟಿಗೆ ಉತ್ತಮ ನಡವಳಿಕೆಯನ್ನು ಅಭ್ಯಾಸ ಮಾಡಬೇಕು. ಇವರನ್ನೆಲ್ಲಾ ನೋಡಿ ಪುಟ್ಟ ಮಕ್ಕಳು ಬೇಗನೇ ಕಲಿಯುತ್ತಾರೆ.
ಮಕ್ಕಳು ತೀರಾ ಸಣ್ಣವರಿದ್ದಾಗ ಅಂದರೆ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾಗ ಬೇಗನೇ ತಮ್ಮ ತಂದೆ ತಾಯಿಯರನ್ನು ಅನುಸರಿಸುತ್ತಾರೆ. ಸಣ್ಣ ಪ್ರಾಯದಲ್ಲಿ ಇದನ್ನು ನೋಡಿ ಖುಷಿ ಪಡುವ ನಾವು ಅವರು ಬೆಳೆದಂತೆ ಹಾಗೆಲ್ಲಾ ಮಾಡಬಾರದು ಎಂದು ಗದರಿಸುತ್ತೇವೆ. ಹುಟ್ಟುವ ಮಕ್ಕಳು ಕೆಲವೊಂದು ಜೀನ್ ಗಳನ್ನು ತಮ್ಮ ಹೆತ್ತವರಿಂದಲೇ ನೈಸರ್ಗಿಕವಾಗಿ ಪಡೆದಿರುತ್ತಾರೆ. ಉದಾಹರಣೆಗೆ ಮೈಬಣ್ಣ, ಮುಖದ ಚಹರೆ, ನಡೆಯುವ ರೀತಿ, ಮಾತು, ಧ್ವನಿ ಹೀಗೆ ಹತ್ತು ಹಲವಾರು ವಿಷಯಗಳು ತಮ್ಮ ಹೆತ್ತವರಿಂದಲೇ ಬಳುವಳಿಯಾಗಿ ಬಂದಿರುತ್ತವೆ. ಕೆಲವು ಬಾರಿ ಕಾಯಿಲೆಗಳೂ ಸಹ. ‘ನನ್ನ ಅಪ್ಪನಿಗೆ ಸಕ್ಕರೆ ಕಾಯಿಲೆ (ಮಧುಮೇಹ) ಇತ್ತು ನನಗೂ ಈಗ ಬಂದಿದೆ’ ಎನ್ನುವುದು ಈಗ ಸಾಮಾನ್ಯ ಸಂಗತಿಯಾಗಿದೆ. ಅನುವಂಶೀಯ ಅಥವಾ ರಕ್ತಗತವಾಗಿ ಬರುವ ಕೆಲವೊಂದು ಸಂಗತಿಗಳನ್ನು ನಾವು ತಡೆಯಲಾಗದು. ರಕ್ತ ಸಂಬಂಧಿ ಕಾಯಿಲೆಗಳು ಬಹಳಷ್ಟು ಮಕ್ಕಳಿಗೆ ತಮ್ಮ ಹೆತ್ತವರಿಂದಲೇ ಬಂದಿರುತ್ತದೆ. ಇದನ್ನು ತಡೆಯಲು ಆಗುವುದಿಲ್ಲ. ವಿಜ್ಞಾನ ಈಗ ಬಹಳಷ್ಟು ಮುಂದುವರೆದಿರುವುದರಿಂದ ಕೆಲವೊಂದು ಕಾಯಿಲೆಗಳು ಹೆತ್ತವರಿಂದ ಮಕ್ಕಳಿಗೆ ಹೋಗದಂತೆ ತಡೆಯಲು ಸಾಧ್ಯವಿದೆ.
ಮಕ್ಕಳು ಸಣ್ಣವರಿರುವಾಗ ತಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಸಂಗತಿಗಳನ್ನು ಬಹಳ ಸೂಕ್ಸ್ಮವಾಗಿ ಗಮನಿಸುತ್ತಿರುತ್ತಾರೆ. ಹೆತ್ತವರು ನಡೆದುಕೊಳ್ಳುವ ರೀತಿ, ಅಣ್ಣ ಆಟವಾಡುವ ರೀತಿ, ಅಕ್ಕ ಪೈಂಟಿಂಗ್ ಮಾಡುವ ಕ್ರಮ ಇವನ್ನೆಲ್ಲಾ ಬಾಲ್ಯದಿಂದಲೇ ಗಮನಿಸುವ ಮಕ್ಕಳು ಹಲವಾರು ಬಾರಿ ಅದೇ ರೀತಿಯ ಅನುಸರಿಸುವಿಕೆಯನ್ನು ಬೆಳೆಸಿಕೊಳ್ಳುತ್ತಾರೆ. ಖ್ಯಾತ ಗಾಯಕಿಯ ಮಕ್ಕಳು ಅವರಷ್ಟೇ ಖ್ಯಾತ ಗಾಯಕಿಯರು ಆಗದೇ ಹೋದರೂ ಸಂಗೀತದ ಜ್ಞಾನವನ್ನು ಹೊಂದಿರುತ್ತಾರೆ. ಇಂಪಾಗಿ ಹಾಡಲೂ ತಿಳಿದಿರುತ್ತದೆ. ಇವು ಅನುಸರಿಸುವಿಕೆಯಿಂದ ಬರುತ್ತದೆ. ಅಮ್ಮ ಅಡುಗೆ ಮನೆಯಲ್ಲಿ ಮಾಡುವ ಅಡುಗೆಯನ್ನು ನೋಡಿಕೊಂಡು ಬಹಳಷ್ಟು ಮಕ್ಕಳು ಬಾಲ್ಯದಲ್ಲಿ ಅಡುಗೆ ಆಟವನ್ನೇ ಆಡಲು ಶುರು ಮಾಡಿರುತ್ತಾರೆ. ಅಡುಗೆ ಮಾಡುವ ಆಟಿಕೆಗಳನ್ನೇ ಖರೀದಿ ಮಾಡಿಕೊಡುವಂತೆ ತಮ್ಮ ಹೆತ್ತವರಿಗೆ ಬಲವಂತ ಮಾಡುತ್ತಾರೆ.
ಈಗ ಕೆಲವು ಸಮಯದಿಂದ ಶುರುವಾದ ದೊಡ್ಡ ಅನುಸರಿಸುವಿಕೆ ಎಂದರೆ ಮೊಬೈಲ್ ಫೋನ್ ಚಟ. ಮಕ್ಕಳು ಅತೀ ಬೇಗದಲ್ಲಿ ಮೊಬೈಲ್ ಫೋನ್ ಗೆ ದಾಸರಾಗಿ ಬಿಡುತ್ತಾರೆ. ದೊಡ್ಡವರಿಗಿಂತ ಬೇಗದಲ್ಲಿ ಅವರು ಆ ಫೋನ್ ಬಳಕೆ ಬಗ್ಗೆ ತಿಳಿದುಕೊಳ್ಳುತ್ತಾರೆ. ದಿನವಿಡೀ ಮೊಬೈಲ್ ನಲ್ಲಿ ಆಟವಾಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಆ ಮಕ್ಕಳು ಸಣ್ಣವರಿದ್ದಾಗ ತಮ್ಮ ಹೆತ್ತವರು ಆ ಮೊಬೈಲ್ ಅನ್ನು ಬಳಕೆ ಮಾಡುವುದನ್ನು ನೋಡಿರುವುದು. ಕೆಲವು ಮಕ್ಕಳಿಗೆ ಊಟ, ತಿಂಡಿ ಮಾಡಿಸುವಾಗ ಮೊಬೈಲ್ ಬೇಕೇ ಬೇಕು. ಅದಿಲ್ಲವಾದಲ್ಲಿ ಅವರ ಗಂಟಲಿನಿಂದ ತಿಂಡಿ ಹೊಟ್ಟೆಗೆ ಇಳಿಯುವುದೇ ಇಲ್ಲ. ಇದೇ ಮುಂದೆ ಅಭ್ಯಾಸವಾಗುತ್ತದೆ. ಟಿವಿ ಅಥವಾ ಮೊಬೈಲ್ ಇಲ್ಲದೇ ಮಕ್ಕಳು ಯಾವ ಕೆಲಸವನ್ನೂ ಮಾಡುವುದಿಲ್ಲ ಎನ್ನುವ ಸ್ಥಿತಿಗೆ ಬಂದಿದ್ದಾರೆ ಈಗ. ಇವೆಲ್ಲಾ ಅವರು ತಮಗಿಂತ ದೊಡ್ದವರನ್ನು ನೋಡಿ ಕಲಿತ ವಿದ್ಯೆಗಳು. ಮಕ್ಕಳು ಹಠ ಮಾಡುತ್ತಾರೆ, ಅಳುತ್ತಾರೆ ಎಂದು ಅವರಿಗೆ ಕೊಡುವ ಮೊಬೈಲ್ ಅವರನ್ನು ಜೀವನ ಪರ್ಯಂತ ಅದರ ದಾಸರನ್ನಾಗಿ ಮಾಡುತ್ತದೆ. ನಿರಂತರ ಮೊಬೈಲ್ ಬಳಕೆಯಿಂದ ಕಣ್ಣಿನ, ನರಗಳ ಸಮಸ್ಯೆ ಕಾಡುತ್ತದೆ.
ಮಕ್ಕಳು ಉತ್ತಮ ಅನುಕರಣೆ ಮಾಡುವಂತೆ ಪೋಷಕರು ಜಾಗ್ರತೆ ವಹಿಸಬೇಕು. ತನ್ನ ಹೆತ್ತವರು ಆಫೀಸಿಗೆ ಹೊರಟಾಗ ಕನ್ನಡಿಯ ಮುಂದೆ ನಿಂತು ತಲೆ ಬಾಚುವುದು, ಪೌಡರ್ ಹಾಕಿಕೊಳ್ಳುವುದನ್ನು ಬಹಳಷ್ಟು ಮಕ್ಕಳು ಸಣ್ಣವರಿದ್ದಾಗಲೇ ಅನುಸರಿಸಲು ಪ್ರಾರಂಭಿಸುತ್ತಾರೆ. ಅಪ್ಪನಂತೆಯೇ ತಲೆ ಬಾಚಿಕೊಳ್ಳುವುದು, ಅಮ್ಮನ ಹಾಗೆಯೇ ಜಡೆ ಹಾಕಿಕೊಳ್ಳುವುದು ಇವನ್ನೆಲ್ಲಾ ಮಾಡುತ್ತಾರೆ. ಪೌಡರ್, ಲಿಪ್ ಸ್ಟಿಕ್ ಎಲ್ಲವನ್ನೂ ಮೆತ್ತಿಕೊಳ್ಳುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಹಲವು ಬಾರಿ ಮನೆಯಲ್ಲೇ ಶಾಲೆಯ ವಾತಾವರಣ ನಿರ್ಮಾಣ ಮಾಡುತ್ತಾರೆ. ಶಾಲೆಯ ಟೀಚರ್ ನಂತೆ ವರ್ತನೆ ಮಾಡುತ್ತಾರೆ. ಹಾಗೆಯೇ ಸೀರೆ ಉಡುತ್ತಾರೆ. ಗೋಡೆಯನ್ನೇ ಬೋರ್ಡ್ ಮಾಡಿಕೊಂಡು ಬೊಂಬೆಗಳಿಗೆ ಪಾಠ ಮಾಡುತ್ತಾರೆ. ಇವೆಲ್ಲಾ ಸಾಮಾನ್ಯವಾಗಿ ಮಕ್ಕಳು ಮಾಡುವ ಅನುಸರಣೆಗಳು. ಇಂತಹ ಅನುಸರಣೆಯನ್ನು ಹೆತ್ತವರು ಗಮನವಿರಿಸಿ ನೋಡಬೇಕು. ಒಳ್ಳೆಯ ಸಂಗತಿಗಳನ್ನು ಬೆಂಬಲಿಸಬೇಕು.
ಮಕ್ಕಳ ಅನುಸರಣೆಗಳು ಹಲವಾರು ಬಾರಿ ಕೆಟ್ಟ ಸಂಗತಿಗಳತ್ತ ಬೇಗನೇ ತಿರುಗುತ್ತವೆ. ತಂದೆ ಸೇದುವ ಸಿಗರೇಟು, ಕುಡಿಯುವ ಮದ್ಯ, ಅಜ್ಜ ತಿನ್ನುವ ಬೀಡಾ, ಅಣ್ಣ ತಿನ್ನುವ ಗುಟ್ಕಾ ಇವೆಲ್ಲಾ ಸಣ್ಣ ಪ್ರಾಯದಲ್ಲಿ ಅವರಿಗೆ ಹೀರೋಯಿಸಂ ನಂತೆ ಕಾಣಿಸುತ್ತದೆ. ಅದರಿಂದ ಆಗುವ ಆರೋಗ್ಯದ ತೊಂದರೆಗಳ ಬಗ್ಗೆ ಅವರಿಗೆ ಆ ಸಣ್ಣ ಪ್ರಾಯದಲ್ಲಿ ತಿಳಿದೇ ಇರುವುದಿಲ್ಲ. ಸಿಗರೇಟು ಸೇದುವ ಅಪ್ಪ ತನ್ನ ಮಗನ ಎದುರು ಸೇದಲೇ ಬಾರದು. ಅಜ್ಜ ಬೀಡಾ ತಿನ್ನಬಾರದು. ಹೀಗೆ ಮಾಡಿದರೆ ಮಗುವೊಂದು ಸಣ್ಣ ಪ್ರಾಯದಲ್ಲೇ ಹಾದಿ ತಪ್ಪುವುದನ್ನು ತಡೆಯಬಹುದು. ಅಮ್ಮ ಅಪ್ಪನನ್ನು ಸದಾಕಾಲ ತೆಗಳುತ್ತಲೇ ಇದ್ದರೆ ಮಗುವಿಗೆ ತನ್ನ ಅಪ್ಪನ ಮೇಲಿನ ಗೌರವ ಕಡಿಮೆಯಾಗುತ್ತಾ ಹೋಗುತ್ತದೆ. ಸಣ್ಣವರಿದ್ದಾಗ ಪ್ರತಿಯೊಬ್ಬ ಮಗನಿಗೆ ತನ್ನ ಅಪ್ಪ ಒಬ್ಬ ‘ಸೂಪರ್ ಮ್ಯಾನ್’ ಆಗಿರುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ಗೊತ್ತಾಗುತ್ತೆ ಅಪ್ಪ ಸೂಪರ್ ಮ್ಯಾನ್ ಅಲ್ಲ ನನ್ನಂತೇ ಇರುವ ಒಬ್ಬ ಸಾಮಾನ್ಯ ಮನುಷ್ಯ ಮಾತ್ರ ಎಂದು. ಸೂಕ್ಷ್ಮ ಸಂವೇದಿ ಮಕ್ಕಳು ತಮ್ಮ ಹಿರಿಯರು ಮಾತನಾಡುವ ಮಾತುಗಳನ್ನು ಬೇಗನೇ ಮನಸ್ಸಿನಲ್ಲಿಳಿಸಿಕೊಂಡು ಬಿಡುತ್ತಾರೆ. ಈ ಕಾರಣಕ್ಕಾಗಿ ಮಕ್ಕಳ ಎದುರು ಉತ್ತಮ ಮಾತುಗಳನ್ನು ಮಾತ್ರ ಆಡಿ. ಸುಖಾ ಸುಮ್ಮನೇ ಬೇರೆಯವರಿಗೆ ಬಯ್ಯಬೇಡಿ, ಅವರ ಬಗ್ಗೆ ಕೆಟ್ಟ ಮಾತುಗಳನ್ನಾಡಬೇಡಿ. ನಿಮಗೆ ಇತರರ ಮೇಲೆ ಇರುವ ಅಸಮಾಧಾನ ನಿಮ್ಮ ಮಕ್ಕಳ ಕಾಲದಲ್ಲೂ ಮುಂದುವರೆಯುವುದು ಬೇಡ.
ಹೆತ್ತವರು ಮತ್ತು ಹಿರಿಯರು ಸಣ್ಣ ಮಕ್ಕಳ ಎದುರು ಯಾವುದೇ ಕೆಲಸ ಮಾಡುವಾಗ ಜಾಗರೂಕತೆಯಿಂದ ಮಾಡಿ. ನೀವು ಮಾಡುವ ಕೆಲಸದ ಬಗ್ಗೆ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ. ಅದರಿಂದಾಗುವ ಅಪಾಯದ ಬಗ್ಗೆಯೂ ತಿಳಿಸಿ. ಮಕ್ಕಳು ಬೆಳೆಯುತ್ತಾ ಹೋದಂತೆ ನಮ್ಮ ವರ್ತನೆಗಳಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳ ಮುಂದೆ ದಿನವಿಡೀ ಟಿ ವಿ, ಮೊಬೈಲ್ ನೋಡುವುದು ಮಾಡಬಾರದು. ಸೋಮಾರಿಯಂತೆ ದಿನವಿಡೀ ಮಲಗಿಕೊಂಡಿರುವುದು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರಬಲ್ಲ ಚಟುವಟಿಕೆಗಳನ್ನು ಮಾಡಿ. ಹಾಡು ಹಾಡುವುದು, ಆಟ ಆಡುವುದು, ಗಣಿತದ ಸಮಸ್ಯೆಗಳನ್ನು ಪರಿಹಾರ ಮಾಡುವುದು, ಅಡುಗೆ ಮಾಡುವುದು, ವಾಕಿಂಗ್ ಹೋಗುವುದು, ಯೋಗ ಮಾಡುವುದು ಇತ್ಯಾದಿಗಳನ್ನು ಮಕ್ಕಳನ್ನು ಸೇರಿಸಿ ಮಾಡಿದರೆ ಅವುಗಳೂ ಬೇಗನೇ ಕಲಿತುಕೊಳ್ಳುತ್ತವೆ. ಮಕ್ಕಳು ಉತ್ತಮ ಕೆಲಸಕ್ಕೆ ಹೇಗೆ ಪ್ರಭಾವಿತರಾಗುತ್ತರೋ ಅದೇ ರೀತಿ ಕೆಟ್ಟ ಕೆಲಸಗಳಿಗೂ ಮನಸ್ಸು ಮಾಡುತ್ತಾರೆ. ಈ ಕಾರಣದಿಂದ ನಿಮ್ಮ ಮಕ್ಕಳ ಅನುಸರಿಸುವಿಕೆ ಉತ್ತಮ ಕಾರ್ಯಗಳತ್ತ ಮಾತ್ರ ಇರುವಂತೆ ಜಾಗ್ರತೆ ವಹಿಸಿ, ಅವರನ್ನು ದೇಶದ ಉತ್ತಮ ಪ್ರಜೆಗಳಾಗುವಂತೆ ಬೆಳೆಸಿ.
ಚಿತ್ರ ಕೃಪೆ: ಅಂತರ್ಜಾಲ ತಾಣ