ಎಚ್ಚೆಸ್ವಿ ಅನಾತ್ಮಕಥನ

ಎಚ್ಚೆಸ್ವಿ ಅನಾತ್ಮಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್.ಎಸ್.ವೆಂಕಟೇಶಮೂರ್ತಿ
ಪ್ರಕಾಶಕರು
ಗುಲ್ ಮೊಹರ್
ಪುಸ್ತಕದ ಬೆಲೆ
130

ಎಚ್ಚೆಸ್ವಿ ಅನಾತ್ಮಕಥನದ ಈ ಬರಹಗಳು ಅವರ ಅಂತರಂಗದಲ್ಲಿ ತುಂಬಿಕೊಂಡಿರುವ ನೆನಪುಗಳ, ಮಧುರ ಭಾವನೆಗಳ, ಅಕ್ಷರ ರೂಪಗಳು. ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ಎಚ್ಚೆಸ್ವಿ 'ಅನಾತ್ಮ ಕಥನ' ಅವರು ಬರೆದಿರುವ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಕೀರ್ಣ ಸಂಪುಟ. ಕನ್ನಡ, ಇಂಗ್ಲೀಷ್ ,ಸಂಸ್ಕೃತ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನ ಎಚ್ಚೆಸ್ವಿ ಅವರ ಭಾವಕೋಶ ಮತ್ತು ಕಾವ್ಯವ್ಯಕ್ತಿತ್ವವನ್ನು ನಿರ್ಮಿಸಿವೆ. ಹಾಗಾಗಿ ಇವರ ಬರವಣಿಗೆಯಲ್ಲಿ ಕಾಣುವ ಆಧುನಿಕತೆಯು, ಪರಂಪರೆಯೊಂದಿಗೆ ನಡೆಸಿದ ಹೋರಾಟ ಮತ್ತು ಸಂಘರ್ಷದ ಫಲವಾಗಿ ನಿಷ್ಪನ್ನವಾದಂಥದು.
ಅನಾತ್ಮಕಥನ ಬರಹಗಳು ಎಚ್ಚೆಸ್ವಿ ಅವರ ಸುತ್ತಲಿನ ಜಗತ್ತು, ಆತ್ಮೀಯ ವ್ಯಕ್ತಿಗಳು, ಘಟನೆಗಳು,  ತೀರ ಕ್ಷುದ್ರ ಎನ್ನಿಸುವಂಥಹ, ತೀರಾ ಹೃದ್ಯ ಎನ್ನಿಸುವಂಥಹ ನೆನಪುಗಳು ಇವೆಲ್ಲವೂ ಇಲ್ಲಿ ದಾಖಲಾಗಿವೆ. ಸುಮಾರು ೩೦ಕ್ಕೂ ಹೆಚ್ಚು ಬರಹಗಳಿರುವ ಈ ಕೃತಿಯು ಜನಜೀವನದ ಆಗು ಹೋಗುಗಳ ಕಥೆಯನ್ನು ಧ್ವನಿಸುತ್ತದೆ. ಎಚ್ಚೆಸ್ವಿ ಅವರ ಬಾಲ್ಯದ ನೆನಪುಗಳು- ಪಿಳ್ಳೆ ಪಂಡಿತರ ಪಿತ್ತ ಪ್ರಕೋಪ, ನನ್ನ ಪ್ರಾರಂಭದ ಕಾವ್ಯಾಭಾಸ, ನನ್ನ ಮೊದಲ ಬರಹ ಹೀಗೆ ಒಂದಕ್ಕಿಂತ ಒಂದು ಮಿಗಿಲು ಎನ್ನಬಹುದು. ಯೌವನದ ಹೊಸ್ತಿಲಲ್ಲಿ ಬೆಂಬಿಡದೆ ಕಾಡಿದ ನೆನಪುಗಳು-ಮರೆಯಲಾಗದ ಆ ಓಕುಳಿ ಸಂಜೆ, ಅಧ್ಯಾಪನ ವೃತ್ತಿಯಲ್ಲಿನ  ಅನುಭವಗಳು, ವೇಣು ಎಂಬ ಹುಡುಗಿ, ಸ್ವಲ್ಪ ಹಣ ಮತ್ತು ಒಬ್ಬ ಮನುಷ್ಯ- ಉದ್ಯೋಗದ ಸಲುವಾಗಿ ಹೊಸದಾಗಿ ಬೆಂಗಳೂರಿಗೆ ಬಂದ ಸಂದರ್ಭಲ್ಲಿ ಮೊದಲ ಸಂಬಳದಲ್ಲೇ ಗ್ಯಾಸ್ ಪಡೆಯುವ ಸಲುವಾಗಿ ಮುನ್ನೂರು ರೂಪಾಯಿ ಕಳೆದುಕೊಂಡ ಘಟನೆ ಹೀಗೆ ಅವರ ನೆನಪುಗಳೆಲ್ಲವೂ ಇಲ್ಲಿ ಬರಹದ ರೂಪವನ್ನು ಪಡೆದಿವೆ.
ಮರಣಯಾನ ಎಂಬ ಬರಹದಲ್ಲಿ ಕೇವಲ ಕೊನೆಯ ಉಸಿರಾಟ ಮಾತ್ರ ಇದ್ದ ಬೀಮಜ್ಜಿ ಸಾವನ್ನು ಗೆದ್ದು  ಬಂದು ನಂತರ ಸುದೀರ್ಘ ೨೦ ವರುಷಗಳ ಕಾಲ ಬಾಳಿದ ಕಥೆ ಸ್ವಾರಸ್ಯವಾಗಿದೆ. ಅಶ್ವಥ ಎಂಬ ಅಯಸ್ಕಾಂತ , ಮಧ್ಯರಾತ್ರಿಯ ಫೋನು, ಸೀತಜ್ಜಿಯ ಬಂಗಾರದ ಸರ ಹೀಗೆ ಇನ್ನೂ ಅನೇಕ ಕಥೆ, ಪ್ರಬಂಧಗಳು,ಇಲ್ಲಿವೆ.  ಅಮೆರಿಕಾದಲ್ಲೊಂದು ವೈಶಂಪಾಯನ ಸರೋವರ- ಪ್ರವಾಸದ ಅನುಭವ ಹೀಗೆ ತನ್ನ ಬದುಕಿನಲ್ಲಿ ನಡೆದ ಘಟನೆಗಳಿಗೆ ಸುಂದರ ಅಕ್ಷರಗಳ ರೂಪವನ್ನು ಕೊಟ್ಟಿದ್ದಾರೆ. ಇದು ಆತ್ಮಕಥನವಲ್ಲ, ಅನಾತ್ಮ ಕಥನ. ಅವರ ಬದುಕಿನ ಕಥೆಯಾದರೂ ಅವರೊಬ್ಬರದ್ದೇ ಕಥೆಯಲ್ಲ, ಅವರು ಬದುಕಿನಲ್ಲಿ ಭೇಟಿಯಾದ ಹಲವಾರು ಜನಗಳು, ತಾನು ಪಾಠ ಮಾಡಿದ ವಿದ್ಯಾರ್ಥಿಗಳು, ಬಾಲ್ಯದ ದಿನಗಳು, ಊರಿನ ಜಾತ್ರೆ, ಅವರ ಮೊದಲ ಕವನ, ಅದನ್ನು ಮೇಷ್ಟ್ರ ಜತೆ ತೋರಿಸಿ, ಅವರಿಂದ ಮೆಚ್ಚುಗೆ ಪಡೆದ ಕ್ಷಣ, ಕಾಲೇಜು ಹೋಗವ ಸಂರ್ಭದಲ್ಲಿ  ಬಸ್‌ ಸ್ಟಾಪ್ ಬಳಿ ಬಂದು ದಿನಾ ನಿಗದಿತ ಸಮಯಕ್ಕೆ ನಿತ್ಯ ಪ್ರಯಾಣಿಸುತ್ತಿದ್ದ ಇಬ್ಬರು ಹುಡುಗಿಯರನ್ನು ನೋಡುವ ಸಲುವಾಗಿ ಬಸ್ಟ್ಯಾಂಡಿನಲ್ಲೇ ಅವರು ಹೋಗೋವರೆಗೂ ಅಲ್ಲೇ ಇದ್ದು ನಂತರ ತಮ್ಮ ಕಾಲೇಜಿನತ್ತ ಸಾಗುತ್ತಿದ್ದ ದಿನಗಳು. ಕೆಲವೊಂದು ಹಾಸ್ಯಮಯ ಸನ್ನಿವೇಶಗಳು, ಹಾಸ್ಯ ಪ್ರಜ್ಞೆಯೂ ಇವರ ಬರಹಗಳಲ್ಲಿ ವ್ಯಕ್ತವಾಗುತ್ತವೆ. ಒಮ್ಮೆ ಪುಸ್ತಕ ಹಿಡಿದುಕೊಂಡು ಓದಲು ಕುಳಿತರ ಯಾವುದೇ ಅಡಚಣೆಯಿಲ್ಲದೆ ನಮ್ಮನ್ನು ಓದಿಸಿಕೊಂಡು ಹೋಗುವಂತಹ ಪುಸ್ತಕ ಇದಾಗಿದೆ.

ಹೀಗೆ ಹತ್ತು ಹಲವರ ಕಥೆ ಈ ಅನಾತ್ಮಕಥನ. ಇದರ ಕೇಂದ್ರ ಬಿಂದು  ಮಾತ್ರ ಎಚ್ಚೆಸ್ವಿ. ಇದು ಒಬ್ಬರ ಹೆಸರಿನ ಅನೇಕರ ಕಥೆ. ದೈನಂದಿನ ಜೀವನ, ಬಾಲ್ಯದ ನೆನಪುಗಳು,ವಿದೇಶಾನುಭವ ಅನಾತ್ಮಕಥನದ ಈ ಬರಹಗಳನ್ನು ಓದಿದಾಗ ಸರಳ ವಿಷಯಗಳಲ್ಲೂ ಎಷ್ಟೊಂದು ಅದ್ಭುತ ಕೃತಿ ರಚನೆಯಾಗಿದೆ ಎಂದೆಣಿಸುತ್ತದೆ. ಎಚ್ಚೆಸ್ವಿ ಅವರ ಲೇಖನದಲ್ಲಿನ ಭಾಷಾ ಪ್ರಬುದ್ಧತೆ ಅಚ್ಚರಿ ಮೂಡಿಸುತ್ತದೆ.