ಎಚ್ ಡಿ ದೇವೇಗೌಡ ಅವರಿಗೆ ಜನುಮದಿನದ ಶುಭಾಶಯ ಕೋರುತ್ತಾ...

ಎಚ್ ಡಿ ದೇವೇಗೌಡ ಅವರಿಗೆ ಜನುಮದಿನದ ಶುಭಾಶಯ ಕೋರುತ್ತಾ...

ಶ್ರೀ ಎಚ್ ಡಿ ದೇವೇಗೌಡ 92, ನಾಟ್ ಔಟ್ ಅವರು ಶತಕವನ್ನು ಬಾರಿಸಲಿ ಎಂದು ಹಾರೈಸುತ್ತಾ… ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿಯ ಸಾಮಾನ್ಯ ರೈತ ಕುಟುಂಬದ ವ್ಯಕ್ತಿಯೊಬ್ಬರು ಬೃಹತ್ ಭಾರತದ ಪ್ರಧಾನಿಯಾಗಿ ಅಧಿಕಾರಕ್ಕೆ ಏರುವುದು ಎಷ್ಟು ಸೋಜಿಗವೋ, ದೇವೇಗೌಡರ ವ್ಯಕ್ತಿತ್ವವನ್ನು ವಿಮರ್ಶೆಗೆ ಒಳಪಡಿಸುವುದು ಸಹ ಅಷ್ಟೇ ಸಂಕೀರ್ಣ.

ಕೆಲವು ಪದ ವಿಶೇಷಣಗಳನ್ನು ಬಳಸಿ ಅವರ ಸಾಧನೆಗಳನ್ನು ವರ್ಣಿಸುವುದು ಒಂದು ಮುಖವಾದರೆ, ಅಷ್ಟೇ ಕೆಟ್ಟ ಪದ ವಿಶೇಷಣಗಳನ್ನು ಬಳಸಿ ಅವರನ್ನು ಟೀಕಿಸಲೂಬಹುದು. ಅದು ಇನ್ನೊಂದು ಮುಖ. ಅವಿರತ ಶ್ರಮದ, ರಾಜಕೀಯ ಚಾಣಾಕ್ಷತೆಯ, ದಕ್ಷ ಆಡಳಿತದ ಮೂಲಕ ಉನ್ನತ ಸ್ಥಾನಕ್ಕೇರಿ ಹೆಸರು ಗಳಿಸಿರುವಂತೆ, ಅಷ್ಟೇ ಸಣ್ಣತನದ, ಜಾತಿ ರಾಜಕೀಯದ, ಕುಟುಂಬ ರಾಜಕೀಯದ, ಒಡೆದಾಳುವ ರಾಜಕೀಯ ನೀತಿ, ವಿರೋಧಿಗಳನ್ನು ತುಳಿಯುವುದು ಹೀಗೆ ವೈರುಧ್ಯಗಳ ವ್ಯಕ್ತಿತ್ವವನ್ನು ಹೊಂದಿದ್ದಾರೆ.

ಸುಮಾರು 60 ವರ್ಷಗಳ ಅವರ ದೀರ್ಘ ರಾಜಕೀಯ ಜೀವನ ಘಟನೆಗಳನ್ನು, ಸೋಲು ಗೆಲುವುಗಳನ್ನು, ಒಡನಾಟಗಳನ್ನು, ವಿರೋಧಗಳನ್ನು, ಪ್ರತಿಭಟನೆಗಳನ್ನು, ಬಿಡಿಬಿಡಿಯಾಗಿ ಪೋಣಿಸುತ್ತಾ ಹೋದರೆ ಒಂದು ಕಡೆ ಒಳ್ಳೆಯ ಅಂಶಗಳ, ಇನ್ನೊಂದು ಕಡೆ ಕೆಟ್ಟ ಗುಣಲಕ್ಷಣಗಳ, ಒಂದು ಸರಮಾಲೆಯೇ ಸಿಗುತ್ತದೆ. ಅವರ ಅಭಿಮಾನಿಗಳಿಗೆ ಒಂದು ಹಾರ, ಅವರ ವಿರೋಧಿಗಳಿಗೆ ಇನ್ನೊಂದು ಹಾರ ಸಿದ್ದವಾಗುತ್ತದೆ. ವಿಮರ್ಶಕರಿಗೆ ಈ ಎರಡರ ನಡುವಿನ ಕೊರಳಿನ ಸಹಜತೆಯನ್ನು ಹುಡುಕುವುದೇ ಒಂದು ಸವಾಲು. ಇರಲಿ, ಈ ಎಲ್ಲದರ ನಡುವೆ ನಮ್ಮದು ಒಂದು ಅಭಿಪ್ರಾಯ, ಅನಿಸಿಕೆ ದಾಖಲಾಗಲಿ.

ಮೊದಲನೆಯದಾಗಿ, 92 ವರ್ಷಗಳ ದೈಹಿಕ ಆರೋಗ್ಯವನ್ನು, ಮಾನಸಿಕ ಸ್ಥಿಮಿತತೆಯನ್ನು, ರಾಜಕೀಯ ಜೀವನವನ್ನು, ಈಗಲೂ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡಿರುವುದು ಅವರ ಬಹುದೊಡ್ಡ ಸಾಧನೆ ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯ ಒತ್ತಡವನ್ನು ತಾಳಲಾಗದೆ ಅನೇಕ ಕಾಯಿಲೆಗಳಿಗೆ ತುತ್ತಾಗುವ ನಾವು ರಾಜಕೀಯದ ಬಹುದೊಡ್ಡ ಏಳು ಬೀಳುಗಳ ಸಮಯದಲ್ಲಿಯೂ, ದೇಹ ಆರೋಗ್ಯವನ್ನು ಕಾಪಾಡಿಕೊಂಡು, ಚಾಣಾಕ್ಷ ನಡೆಗಳನ್ನು ಮುನ್ನಡೆಸುತ್ತಾ, ನೋವು ಅವಮಾನಗಳನ್ನು ಸಹಿಸಿಕೊಳ್ಳುತ್ತಾ, ಸೈದ್ಧಾಂತಿಕ ವೈರುಧ್ಯಗಳ ನಡುವೆ ಸಿಕ್ಕಿಬೀಳುತ್ತಾ, ತನ್ನ ವರ್ಚಸ್ಸನ್ನು ಕಾಪಾಡಿಕೊಳ್ಳುತ್ತಾ, ಮುನ್ನಡೆಯುತ್ತಿರುವುದರಲ್ಲಿಯೇ ವ್ಯಕ್ತಿಯೊಬ್ಬನ ಯಶಸ್ಸನ್ನು ಗುರುತಿಸಬಹುದು.

ಎರಡನೆಯದಾಗಿ, ಕಾಲಕ್ಕೆ, ಪರಿಸ್ಥಿತಿಗೆ ತಕ್ಕಂತೆ, ರಾಜಕೀಯ ನಡೆಗಳನ್ನು ನಡೆಸುವಲ್ಲಿ ಅತ್ಯಂತ ನಿಖರ, ನಿಯಂತ್ರಿತ ದಾಳಗಳನ್ನು ಉರುಳಿಸುವಲ್ಲಿ ಕರ್ನಾಟಕದ ರಾಜಕೀಯದಲ್ಲಿ ಬಹುಶಃ ದೇವೇಗೌಡರಿಗೆ ಮೊದಲನೆಯ ಸ್ಥಾನವೇ ಸಿಗಬಹುದು. ಅದೊಂದು ಹುಟ್ಟಿನಿಂದಲೇ ಬಂದ ಸ್ವಾಭಾವಿಕ ಗುಣ ವಿಶೇಷವೇ ಇರಬೇಕು. ಕೆಲವರಿಗೆ, ಕೆಲವು ಕ್ಷೇತ್ರಗಳಲ್ಲಿ ಸಹಜವಾಗಿಯೇ ಕೆಲವು ಸಾಮರ್ಥ್ಯಗಳು ಮೈಗೂಡಿರುತ್ತವೆ. ದೇವೇಗೌಡರಿಗೆ ರಾಜಕೀಯ ನಡೆಗಳು ತುಂಬಾ ನಿರೀಕ್ಷಿತ ಮತ್ತು ಅನುಕೂಲಕರ ಫಲಿತಾಂಶಗಳನ್ನೇ ನೀಡಿದೆ. ಅದರಲ್ಲಿ ಅವರು ಎತ್ತಿದ ಕೈ ಎಂದು ಹೇಳಬಹುದು.

ಮೂರನೆಯದಾಗಿ, ರಾಜಕೀಯ ತಾಳ್ಮೆ, ಅವಕಾಶವಾದಿತನದ ಸದುಪಯೋಗ, ಕಾದು ಹೊಡೆಯುವ ತಂತ್ರಗಾರಿಕೆ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಬೆಳೆಸುವ ದೂರ ದೃಷ್ಟಿ, ಸ್ವಾರ್ಥಕ್ಕಾಗಿ ಎಷ್ಟೇ ಕೆಳಹಂತಕ್ಕೂ ಇಳಿಯುವ ಮಾನಸಿಕ ಸ್ಥಿತಿ ಎಲ್ಲದರಲ್ಲೂ ಅವರು ಹೆಚ್ಚು ನಿಯಂತ್ರಣ ಹೊಂದಿದ್ದಾರೆ. ಇದು ರಾಜಕೀಯದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಮಾನ ಅಪಮಾನವನ್ನು ಲೆಕ್ಕಿಸದೆ, ವಿಷಯವನ್ನು ಗೊಂದಲಗೊಳಿಸಿ, ಭಂಡತನದಿಂದ ತನ್ನ ಕಾರ್ಯ ಸಾಧಿಸುವ, ಎಲ್ಲವನ್ನು ಸಮರ್ಥಿಸಿಕೊಳ್ಳುವ, ಸಮಯಕ್ಕೆ ತಕ್ಕ ಉತ್ತರಗಳನ್ನೇ ಬಳಸಿಕೊಳ್ಳುವ ಸಾಮರ್ಥ್ಯವು ಅವರಿಗಿದೆ.

ತನ್ನ ಬಹುಕಾಲದ ಕಟ್ಟಾ ವಿರೋಧಿಗಳು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವಾಗ, ತನ್ನ ನೇತೃತ್ವದ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿರುವಾಗ, ತನ್ನ ಮೊಮ್ಮಗನ ಭಯಂಕರ ಲೈಂಗಿಕ ದೌರ್ಜನ್ಯದ ಪ್ರಕರಣ ಬಯಲಾಗಿರುವಾಗ, ತನಗೂ ವಯಸ್ಸು, ಆರೋಗ್ಯ ಕ್ಷೀಣಿಸುತ್ತಿರುವಾಗ, ಈಗಲೂ ಕುಗ್ಗದೆ, ಜಗ್ಗದೆ ರಾಜಕೀಯ ಶಕ್ತಿಯನ್ನು ಪ್ರದರ್ಶಿಸುವ ಧೈರ್ಯವನ್ನು ಮೆಚ್ಚಲೇಬೇಕಾಗುತ್ತದೆ. 

ಹಾಗೆಯೇ ದೇವೇಗೌಡರನ್ನು ಕರ್ನಾಟಕ ರಾಜಕೀಯದ ಆದರ್ಶ ಪುರುಷ ಎಂದು ಕರೆಯೋಣವೇ ಎಂದರೆ ಅದು ಸೂಕ್ತವಲ್ಲ, ಹಾಗೆಂದು ಅವರು ಅತ್ಯಂತ ಕೆಟ್ಟ ರಾಜಕಾರಣಿಯೇ ಅಂದರೆ ಅದೂ ಸೂಕ್ತವಲ್ಲ. ರಾಜಕೀಯದ ಪಡಸಾಲೆಯಲ್ಲಿ ಉಪಯೋಗಿಸಬಹುದಾದ ಎಲ್ಲಾ ತಂತ್ರ ಕುತಂತ್ರ, ಒಳ್ಳೆಯ ಕೆಟ್ಟ ನಡೆಗಳನ್ನು ಅವರು ಮುನ್ನಡೆಸಿದ್ದಾರೆ. ಹಾಗೆಯೇ ಅತ್ಯಂತ ಆಳವಾದ ದೈವ ಭಕ್ತಿಯನ್ನು, ಮೂಢನಂಬಿಕೆಯನ್ನು ಹೊಂದಿದ್ದಾರೆ. ಹಾಗೆಂದು ಎಲ್ಲರೂ ಭಾವಿಸುವಂತೆ ದೇವೇಗೌಡರಿಗೆ ಯಶಸ್ಸು ದೈವಿಕ ಶಕ್ತಿಯಿಂದಲೇ ಸಿಕ್ಕಿದೆ ಎಂದು ತಿಳಿಯುವುದಾದರೆ ಅದು ತಪ್ಪು. ಅವರು ಮೇಲ್ನೋಟಕ್ಕೆ ದೇವರನ್ನು ಪೂಜಿಸಿದರು, ದೇವರನ್ನು ಸಂಪೂರ್ಣ ನಂಬಿ ಸುಮ್ಮನೆ ಕೂರುವುದಿಲ್ಲ. ತಾವು ವಾಸ್ತವದಲ್ಲಿ, ಪ್ರಾಯೋಗಿಕವಾಗಿ ಶ್ರಮದ ಮೇಲೆಯೇ, ತಂತ್ರದ ಮೇಲೆಯೇ ನಂಬಿಕೆ ಇಟ್ಟಿದ್ದಾರೆ. ಆ ವಿಷಯದಲ್ಲಿ ದೇವರನ್ನು ಸಹ ನಂಬುವುದಿಲ್ಲ. ಫಲ ನೀಡಲಿ ಎಂದು ಪೂಜೆ ಮಾಡಿ ಸುಮ್ಮನೆ ಕೂರುವುದಿಲ್ಲ. ರಾಜಕೀಯ ಮೈದಾನದಲ್ಲಿ ತಮ್ಮ ಅನುಭವದ ಕಾಯಿಗಳನ್ನು ಮುನ್ನಡೆಸುತ್ತಲೇ ಇರುತ್ತಾರೆ. ಅದಕ್ಕೆ ದೈವ ಭಕ್ತಿಯ ಒಂದು ಸ್ಪೂರ್ತಿ ಪಡೆಯುತ್ತಾರೆ ಅಷ್ಟೇ..... 

ಏಕೆಂದರೆ ಅನೇಕರು ದೈವವೇ ಎಲ್ಲಾ ಮಾಡಲಿ ಎಂದು ಪೂಜೆಗಳನ್ನು ಮಾಡಿ ಸುಮ್ಮನೆ ಕೂರುತ್ತಾರೆ. ದೇವೇಗೌಡ, ಯಡಿಯೂರಪ್ಪ, ಡಿಕೆ ಶಿವಕುಮಾರ್ ಇವರುಗಳಿಗೆ ದೇವರ ಮೇಲೆ ಸಹ ಸಂಪೂರ್ಣ ಭರವಸೆ ಇಲ್ಲ. ನಾಳೆ ದೇವರನ್ನು ನಂಬಿ ಸೋತರೆ ಕಷ್ಟ ಎಂದು ಎಲ್ಲಾ ರೀತಿಯ ಜಾತಿ, ಹಣ, ಭ್ರಷ್ಟಾಚಾರ ಎಲ್ಲವನ್ನೂ ಚುನಾವಣೆ ಸಂದರ್ಭದಲ್ಲಿ ಅಥವಾ ರಾಜಕೀಯದ ವಿಷಯದಲ್ಲಿ ಮಾಡಿಯೇ ಮಾಡುತ್ತಾರೆ. ದೇವರಿದ್ದಾನೆ ಆ ಕಾರಣದಿಂದ ಒಳ್ಳೆಯ ಕೆಲಸಗಳನ್ನು ಮಾಡೋಣ, ದೇವರು ನೋಡಿಕೊಳ್ಳಲಿ ಎಂದು ಆತನನ್ನು ನಂಬುವುದಿಲ್ಲ. ಇದೊಂದು ತರಹದ ವಿಚಿತ್ರ ಮನೋಭಾವದ ವಿಕ್ಷಿಪ್ತ ಜೀವಿಗಳಿವರು.

ಒಟ್ಟಿನಲ್ಲಿ ವಿಮರ್ಶಿಸುತ್ತಾ ಹೋದರೆ ದೇವೇಗೌಡರು ಒಂದು ಸ್ಪಷ್ಟ ವಿಚಾರಗಳಿಗೆ ನಿಲುಕುವುದಿಲ್ಲ. ಒಬ್ಬ ಯಶಸ್ವಿ ರಾಜಕಾರಣಿ ಎಂಬಲ್ಲಿಗೆ ಅವರ ವ್ಯಕ್ತಿತ್ವ ಬಂದು ನಿಲ್ಲುತ್ತದೆ. ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಇನ್ನೂ ಜೀವಂತ ಉಳಿಸಿದ್ದಾರೆ. ಅದಕ್ಕೆ ಅವರು ಅಭಿನಂದನಾರ್ಹರು. ಹಾಗೆಯೇ ಜಾತಿ ಮತ್ತು ಕುಟುಂಬ ರಾಜಕೀಯದ ಅತ್ಯಂತ ಕೆಟ್ಟ ರಾಜಕಾರಣದ ಉದಾಹರಣೆಯಾಗಿಯೂ ಅವರನ್ನು ಹೆಸರಿಸಬಹುದು.

ಅವರಿಗೆ ಜನುಮದಿನ ಶುಭಾಶಯಗಳು. ಒಬ್ಬ ವ್ಯಕ್ತಿ ಹೇಗೆ ಬದುಕಬೇಕು ಎಂಬುದು ಅವನ ಸ್ವಾತಂತ್ರ್ಯ. ಅದನ್ನು ಹೇಗೆ ಗ್ರಹಿಸಿ ವಿಮರ್ಶಿಸಬೇಕು ಎಂಬುದು ನಮ್ಮ ಸ್ವಾತಂತ್ರ್ಯ. ಎಲ್ಲವನ್ನೂ ಗೌರವಿಸುವ ಮನೋಭಾವ ನಾಗರಿಕ ಸಮಾಜದ ನಿಜವಾದ ಸ್ವಾತಂತ್ರ್ಯ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ