ಎಚ್ ಪಿಯ ಟ್ಯಾಬ್ಲೆಟ್
ಎಚ್ ಪಿಯ ಟ್ಯಾಬ್ಲೆಟ್
ಹ್ಯೂಲೆಟ್-ಪ್ಯಕರ್ಡ್(ಎಚ್ಪಿ) ಕಂಪೆನಿಯು ಹೊಸ ಟ್ಯಾಬ್ಲೆಟ್ ಸಾಧನಗಳನ್ನು ಮಾರುವ ತೀರ್ಮಾನಕ್ಕೆ ಬಂದಿದೆ.ಎಂಟು ಗಿಗಾಬೈಟ್ ಸ್ಮರಣ ಸಾಮರ್ಥ್ಯದ ಸಾಧನದ ತೆರೆಯೂ ಮೂರೂವರೆ ಇಂಚಿನ ಕರ್ಣ ಹೊಂದಿದೆ.ಈ ಸಾಧನಗಳಲ್ಲಿ ತನ್ನದೇ ಆದ ವೆಬ್ಓಎಸ್ ಎನ್ನುವ ಆಪರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಲೂ ಎಚ್ಪಿ ತೀರ್ಮಾನಿಸಿದೆ.ತನ್ನ ಕಂಪ್ಯೂಟರುಗಳಲ್ಲೂ ತನ್ನದೇ ಆದ ವೆಬ್ಓಎಸ್ ಬಳಸುವ ಅದರ ತೀರ್ಮಾನವೂ ಹೊಸ ಹೆಜ್ಜೆ.ಟ್ಯಾಬ್ಲೆಟ್ ಸಾಧನವು ಐಪ್ಯಾಡಿಗೆ ಸ್ಪರ್ಧೆ ನೀಡುವುದು ನಿಶ್ಚಿತ.
------------------------------
ನೋಕಿಯಾ-ಮೈಕ್ರೋಸಾಫ್ಟ್:ಮೈತ್ರಿ
ನೋಕಿಯಾ ತನ್ನ ಹ್ಯಾಂಡ್ಸೆಟ್ಗಳಲ್ಲಿ ಸಿಂಬಿಯಾನ್ ಎನ್ನುವ ತನ್ನದೇ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸುತ್ತಿತ್ತು.ಒಂದೊಮ್ಮೆ ಮಾರುಕಟ್ಟೆಯ ಅರೆಪಾಲು ನೋಕಿಯಾ ಸೆಟ್ಗಳೇ ಮಾರಾಟವಾಗುತ್ತಿದ್ದುವು.ಈಗ ಕಾಲ ಬದಲಾಗಿ ನೋಕಿಯಾ ಪಾಲು ಕಾಲುಭಾಗಕ್ಕಿಂತ ತುಸುವೇ ಹೆಚ್ಚಿದೆ.ಸ್ಯಾಂಸಂಗ್,ಎಚ್ಟಿಸಿ,ಎಲ್ಜಿ ಮುಂತಾದ ಕಂಪೆನಿಗಳು ನೋಕಿಯಾಗೆ ತೀವ್ರ ಸ್ಪರ್ಧೆ ನೀಡುತ್ತಿವೆ.ಈಗ ನೋಕಿಯಾ ತನ್ನ ಸಿಇಓವನ್ನೂ ಬದಲಿಸಿದ್ದು,ಸ್ಟೀಫನ್ ಇಲಾಪ್ ಎನ್ನುವಾತ ನೋಕಿಯಾಕ್ಕೆ ಹೊಸ ನಾಯಕನಾಗಲಿದ್ದಾರೆ.ಆತ ಮೊದಲು ಮೈಕ್ರೋಸಾಫ್ಟ್ ಕಂಪೆನಿಯಲ್ಲಿದ್ದಾತ.ಅವರು ತೆಗೆದುಕೊಂಡ ಮೊದಲ ನಿರ್ಧಾರಗಳಲ್ಲಿ,ಸಿಂಬಿಯಾನ್ಗೆ ಬೈ ಹೇಳಿ ಮೈಕ್ರೋಸಾಫ್ಟಿನ ವಿಂಡೋಸ್ ಫೋನ್ 7 ಆಪರೇಟಿಂಗ್ ವ್ಯವಸ್ಥೆಯನ್ನು ನೋಕಿಯಾ ಫೋನುಗಳಲ್ಲಿ ಬಳಸಲು ತೀರ್ಮಾನಿಸಿದೆ.ಇದು ನೋಕಿಯಾಗೆ ತುಂಬಾ ಅಪಾಯಕಾರಿಯಾದ ತೀರ್ಮಾನ ಎಂದು ಮೊದಲ ನೋಟಕ್ಕೆ ಕಾಣುತ್ತದೆ.ಆದರಿದು ಮೈಕ್ರೋಸಾಫ್ಟ್ ಕಂಪೆನಿಗೆ ಹೆಚ್ಚು ಲಾಭ ತರುವುದು ನಿಶ್ಚಿತ.ಅದರ ಆಪರೇಟಿಂಗ್ ವ್ಯವಸ್ಥೆ ಬರೇ ಶೇಕಡಾ ಎರಡು ಮಾರುಕಟ್ಟೆ ಮಾತ್ರಾ ಹೊಂದಿದ್ದು,ನೋಕಿಯಾದ ಕಾರಣ ಅದು ಹೆಚ್ಚಿನ ಜನಪ್ರಿಯತೆಗಿಟ್ಟಿಸಲಿದೆ.ಗೂಗಲ್ನ ಆಂಡ್ರಾಯಿಡ್ ಇದೀಗ ಹ್ಯಾಂಡ್ಸೆಟ್ ಮಾರುಕಟ್ಟೆಯಲ್ಲಿ ಅತಿ ಜನಪ್ರಿಯ ತಂತ್ರಾಂಶ.ಆದರೆ ಅದರ ಬಳಕೆಯನ್ನು ನೋಕಿಯಾದಲ್ಲಿ ಮಾಡಿದರೆ,ಅದರ ಪ್ರಯೋಜನ ಗೂಗಲಿಗಲ್ಲದೆ ನೋಕಿಯಾಗಲ್ಲ ಎನ್ನುವುದು ಇಲಾಪ್ ಲೆಕ್ಕಾಚಾರ.ಈಗ ನೋಕಿಯಾದ ಸೆಟ್ಗಳನ್ನು ಜಗತ್ತಿನಲ್ಲಿ ಇಪ್ಪತ್ತು ಕೋಟಿ ಜನ ಬಳಸುತ್ತಿದ್ದು,ಅವರಿಗಾಗಿ ಸಿಂಬಿಯಾನ್ ಮುಂದುವರಿಯ ಬೇಕಾದೀತು.ವಿಂಡೋಸ್ 7ರ ಸುಮಾರು ಎಂಟು ಸಾವಿರ ತಂತ್ರಾಂಶಗಳು ಲಭ್ಯವಿವೆ.ಅವನ್ನು ಬಳಸಿ,ಹೊಸ ಮೌಲ್ಯವರ್ಧಿತ ಸೇವೆಗಳನ್ನು ನೋಕಿಯಾದ ಪೋನುಗಳಲ್ಲಿ ಪಡೆಯಬಹುದು.ಮೈಕ್ರೋಸಾಫ್ಟ್ ಕಂಪೆನಿಯು ಈ ಸ್ನೇಹಕ್ಕೆ ಪ್ರತಿಯಾಗಿ,ಹ್ಯಾಂಡ್ಸೆಟ್ಗಳಲ್ಲಿ ಶೋಧ ಸೇವೆಯಿಂದ ಪಡೆದ ಜಾಹೀರಾತು ಆದಾಯ.ಮ್ಯಾಪ್ ಸೇವೆಗಳ ಆದಾಯ ಇಂತವುಗಳಲ್ಲಿ ಹೆಚ್ಚಿನ ಪಾಲು ನೀಡಲು ಒಪ್ಪಿದ್ದು ಈ ನಿರ್ಣಯಕ್ಕೆ ಕಾರಣವಾಗಿರ ಬಹುದು.ಮೈಕ್ರೋಸಾಫ್ಟಿಗೂ ತನ್ನ ಹಿಡಿತವನ್ನು ಹೆಚ್ಚಿಸಿಕೊಳ್ಳಲು ಒಳ್ಳೆಯ ಗೆಳೆಯರ ಅವಶ್ಯಕತೆಯಿತ್ತು.ನೋಕಿಯಾ ಜತೆ ಸ್ನೇಹ ಮೈಕ್ರೋಸಾಫ್ಟಿಗೆ ಅದೃಷ್ಟವೇ ಸರಿ.ಇಂಟೆಲ್ ಜತೆ ಮೀಗೋ ಸಂಸ್ಕಾರಕದ ಬಗ್ಗೆ ತಳೆದಿದ್ದ ನಿರ್ಧಾರವನ್ನು ಇಲಾಪ್ ಬದಲಿಸಿ,ತನ್ನದೇ ಆದ ಸಂಸ್ಕಾರಕವನ್ನು ತಯಾರಿಸಲು ತೀರ್ಮಾನಿಸಿದ್ದಾರೆ.
-----------------------------------
ಐಫೋನ್ ಮಿನಿ
ಐಫೋನಿನ ಅಗ್ಗದ ಮಿನಿ ಸೆಟ್ನ್ನೂ ಮಾರಾಟಕ್ಕೆ ಒದಗಿಸಲು ಆಪಲ್ ತಯಾರಿ ನಡೆಸಿದೆಯಂತೆ.ಇನ್ನೂರು ಡಾಲರು ಬೆಲೆಯ ಸೆಟ್ ಈಗಿನ ಐಫೋನುಗಳ ಅರ್ಧ ಗಾತ್ರದ್ದಿರುತ್ತದೆ.ಅದರಲ್ಲಿ ಸಿಮ್ ಬದಲಿಸದೆ,ಸೇವಾದಾತೃಗಳನ್ನು ಬದಲಿಸಲು ಅವಕಾಶ ಸಿಗಲಿದೆ ಎಂದು ವರದಿ.ಸ್ಮಾರ್ಟ್ ಫೋನ್ ಮಾರುಕಟ್ಟೆಯೇ ಅಲ್ಲದೆ,ಅಗ್ಗದ ಸೆಟ್ಗಳ ಪಾಲೂ ಪಡೆಯಲು ಆಪಲ್ ಹವಣಿಸಿ,ಈ ನಿರ್ಧಾರ ತಳೆದಿರಬಹುದು.
----------------------------------------
ಓದುಗರ ಪ್ರತಿಕ್ರಿಯೆಗಳು
*ಬೆಂಗಳೂರಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪದಗಳನ್ನು ಇಂಗ್ಲೀಷಿನಲ್ಲಿದ್ದಂತೆ ಬಳಸಿ,ಕನ್ನಡ ಶಬ್ದ ಭಂಡಾರವನ್ನು ಶ್ರೀಮಂತಗೊಳಿಸಲು ಮತ್ತು ಈಗಿರುವ ಕನ್ನಡ ಶಬ್ದಗಳು ಅಳಿಯದಂತೆ ಎಚ್ಚರಿಕೆ ವಹಿಸಲು ಕರೆ ನೀಡಿದ್ದರು.ಓದುಗರಾದ ಜಯಶ್ರೀಯವರು ಇದಕ್ಕೆ ಸಹಮತ ಸೂಚಿಸಿದ್ದಾರೆ.
*ಅಂಕಣದ ಬರಹಗಳು ವಿಷಯ ಸಮೃದ್ಧವಾಗಿ,ಸರಳ ನಿರೂಪಣೆ ಹೊಂದಿವೆ ಎಂದು ಚೆನ್ನೈಯ ಶಾಂತಿ.ಕೆ.ಎ. http://kannadablogs.ning.comನಲ್ಲಿ ಪ್ರತಿಕ್ರಿಯಿಸಿದ್ದಾರೆ.
------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಶಾಲಾ ಮಕ್ಕಳಿಗೆ ಹೇಳಿ ಮಾಡಿಸಿದಂತಿರುವ ಲೀನಕ್ಸ್ ವಿತರಣೆ ಯಾವುದು?
*ಶಿಕ್ಷಣಕ್ಕೆ ಸಂಬಂಧಿಸಿದ ಪದಕ್ಕೆ ತಳಕು ಹಾಕಿರುವ ಲೀನಕ್ಸ್ ವಿತರಣೆ ಯಾವುದು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS18 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ಈ ವಾರ ಅಂತರ್ಜಾಲದ ಮಟ್ಟಿಗೆ ಒಂದು ಪರ್ವ(ಯುಗ) ಮುಗಿದಂತಾಗಿದೆ.ಯಾಕೆಂದರೆ ಐಪಿ ವಿಳಾಸಗಳು ಮುಗಿದಿವೆ.
*ಹೊಸ "ಯುಗ"ದಲ್ಲಿ ಅಗುವ ಬದಲಾವಣೆಯೆಂದರೆ ನೂರ ಇಪ್ಪತ್ತೆಂಟು ಸ್ಥಾನಗಳ ಐಪಿವಿಳಾಸಗಳನ್ನು ಬಳಸುವ,ಐಪಿv6 ಜಾರಿಗೆ ಬರಬೇಕಾಗುತ್ತದೆ.ಬಹುಮಾನ ಗೆದ್ದವರು ಪ್ರಜೋತ್ ಡೇಸಾ,ಉಡುಪಿ.ಅಭಿನಂದನೆಗಳು.
-------------------------------------------------
ಲಂಚ್ ಡಬ್ಬ
ಗಂಟೆಗೆ ಎರಡು ಸಾವಿರ ಚಪಾತಿ ತಯಾರಿಸಬಲ್ಲ ಯಂತ್ರದ ಸಹಾಯದಿಂದ ಚಪಾತಿ ತಯಾರಿಸಿ,ಬೇಕಾದ ಹೋಟೆಲ್,ಬಳಕೆದಾರರಿಗೆ ತಲುಪಿಸುವ ಸೇವೆಯನ್ನು ಲಂಚ್ ಡಬ್ಬಾ ಕಂಪೆನಿ ನೀಡುತ್ತಿದೆ.ಬೆಂಗಳೂರಿನ ಗ್ರಾಹಕರಿಗಷ್ಟೇ ಸದ್ಯಕ್ಕೆ ಪೂರೈಕೆ ಸೀಮಿತವಾಗಿದೆ.ಈ ಚಪಾತಿಗಳು ತಿನ್ನಲು ರೆಡಿಯಾಗಿರುತ್ತವಾದರೂ,ಬೇಕಾದರೆ ಉಗಿಯಲ್ಲಿ ಬಿಸಿ ಮಾಡಿ ತಿನ್ನಬಹುದಾಗಿದೆ.ಬೆಲೆಯೂ ಹೆಚ್ಚಿಲ್ಲ.ಎರಡು ರೂಪಾಯಿಗೂ ಕಡಿಮೆ ದರದಲ್ಲಿ ಪ್ರತಿ ಚಪಾತಿಯನ್ನು ಪೂರೈಸಲು ಲಂಚ್ ಡಬ್ಬಾಕ್ಕೆ ಸಾಧ್ಯವಾಗಿದೆ.
------------------------------
ಟ್ವಿಟರ್ ಚಿಲಿಪಿಲಿ
*ಫೆಬ್ರವರಿ ಹದಿನಾಲ್ಕರಂದು ಪೆಟ್ರೋಲ್ ಬಂಕ್ ಬಳಿ ಸುಳಿಯದೆ,ಪೆಟ್ರೋಲ್ ಮೇಲೆ ಅಧಿಕ ತೆರಿಗೆಯ ಬಗ್ಗೆ ಪ್ರತಿಭಟಿಸಿ.
*ಹಲಸಿನ ಮುನ್ನೂರು ಖಾದ್ಯಗಳನ್ನು ತಯಾರಿಸಬಲ್ಲ ಮಹಿಳೆ ಹೆಬ್ರಿಯ ಗೀತಾ ನರಸಿಂಹ ಭಟ್; (ವಿವರಗಳಿಗೆ:http://www.panasamwonders.blogspot.com/ ನೋಡಿ).
*ಸಾಹಿತ್ಯ ಸಮ್ಮೇಳನದಲ್ಲಿ ನಾನು ಒಂದು ಲಕ್ಷ ಮೌಲ್ಯದ ಪುಸ್ತಕ ನೋಡಿದೆ,ನೂರರದ್ದನ್ನು ಕೊಂಡೆ...
*ಅಶೋಕ್ಕುಮಾರ್ ಎ