ಎಡ್ಗರ್ ಅಲೆನ್ ಪೋ ಎಂಬ ಪತ್ತೇದಾರಿ ಸಾಹಿತ್ಯದ ಜನಕ

ಎಡ್ಗರ್ ಅಲೆನ್ ಪೋ ಎಂಬ ಪತ್ತೇದಾರಿ ಸಾಹಿತ್ಯದ ಜನಕ

ನೀವು ಪತ್ತೇದಾರಿ ಕಾದಂಬರಿಗಳ ಅಭಿರುಚಿ ಹೊಂದಿರುವವರಾಗಿದ್ದು, ಹಳೆಯ ಕಾಲದ ಬರಹಗಳನ್ನು, ಲೇಖಕರನ್ನು ಬಲ್ಲವರಾಗಿದ್ದರೆ ನಿಮಗೆ ಎಡ್ಗರ್ ಅಲೆನ್ ಪೋ ಬಗ್ಗೆ ತಿಳಿದಿರುತ್ತದೆ. ನಮ್ಮ ಕನ್ನಡದಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಬರೆದು ಹುಚ್ಚು ಹಿಡಿಸಿದವರಲ್ಲಿ ಎನ್.ನರಸಿಂಹಯ್ಯನವರು ಅಗ್ರಗಣ್ಯರು. ಕನ್ನಡದಲ್ಲೂ ಹಲವಾರು ಪತ್ತೇದಾರಿ ಕಾದಂಬರಿ, ಕಥಾ ಲೇಖಕರು ಆಗಿಹೋಗಿದ್ದಾರೆ. ಈಗ ಹೊಸ ತಲೆಮಾರಿನ ಹಲವಾರು ಮಂದಿ ಪತ್ತೇದಾರಿ ಸಾಹಿತ್ಯವನ್ನು ತಮ್ಮದೇ ಆದ ಶೈಲಿಯಲ್ಲಿ ಬರೆದು ಓದುಗರಿಗೆ ರಸದೌತಣ ನೀಡುತ್ತಿದ್ದಾರೆ.

ಈ ರೀತಿಯ ಪತ್ತೇದಾರಿ ಶೈಲಿಯ ಕಾದಂಬರಿ ಮತ್ತು ಕಥೆಗಳನ್ನು ಪೂರ್ಣ ಪ್ರಮಾಣದಲ್ಲಿ ಬರೆದವರು ಯಾರು ಗೊತ್ತೇ? ಅಮೇರಿಕನ್ ಬರಹಗಾರನಾದ ಎಡ್ಗರ್ ಅಲೆನ್ ಪೋ (Edgar Allan Poe) ಪತ್ತೇದಾರಿ ರೀತಿಯ ರಹಸ್ಯ ಹಾಗೂ ಭೀಕರ ಕಥೆಗಳನ್ನು ಬರೆಯುತ್ತಿದ್ದ. ಆತ ರಚಿಸಿದ ಸಾಹಿತ್ಯ, ನಿರಾಶಾಮಯವಾದ ಈ ವಾಸ್ತವ ಜಗತ್ತಿನಿಂದ ದೂರವಾದ ಸ್ವಪ್ನಗಳ ಮತ್ತು ಭಯಾನಕತೆಯ ಹಾಗೂ ಸೌಂದರ್ಯದ ಸಮ್ಮಿಲನವಾದ ಹೊಸ ಲೋಕವನ್ನೇ ಓದುಗರಿಗೆ ತೆರೆದಿಟ್ಟಿತು. 

೧೮೦೯ರ ಜನವರಿ ೧೯ರಂದು ಅಮೇರಿಕಾದ ಬೋಸ್ಟನ್ ನಗರದಲ್ಲಿ ಜನಿಸಿದ ಈತನ ಹೆತ್ತವರಿಬ್ಬರೂ ಚಿತ್ರ ನಟ-ನಟಿಯರಾಗಿದ್ದರು. ಇವನ ತಂದೆ ಡೇವಿಡ್ ಪೋ ಜ್ಯೂನಿಯರ್ ಹಾಗೂ ತಾಯಿ ಎಲಿಜಬೆತ್ ಆರ್ನಾಲ್ಡ್ ಪೋ. ಇವನ ಹೆತ್ತವರ ಸಂಬಂಧ ಅಷ್ಟೊಂದು ಮಧುರವಾಗಿರಲಿಲ್ಲ. ಮನೆಯಲ್ಲಿ ಜಗಳಗಳು ನಿತ್ಯ ನಡೆಯುತ್ತಿದ್ದವು. ಈ ಜಗಳದಿಂದ ಬೇಸತ್ತು ಇವನ ತಂದೆ ಒಂದು ದಿನ ಮನೆ ಬಿಟ್ಟು ಹೊರಟು ಹೋದರು. ತಾಯಿಯೇ ಎಡ್ಗರ್ ನನ್ನು ಸ್ವಲ್ಪ ಸಮಯದವರೆಗೆ ಸಾಕಿ ಸಲಹಿದರು. ಆದರೆ ಆಕೆ ಎಡ್ಗರ್ ಎರಡು ವರ್ಷದವರಾಗಿದ್ದಾಗ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದು, ನರಳಿ ಪ್ರಾಣ ಬಿಟ್ಟಳು. ಆ ಸಮಯದಲ್ಲಿ ಅವರ ಅರ್ಥಿಕ ಸ್ಥಿತಿಯೂ ಅಷ್ಟೊಂದು ಚೆನ್ನಾಗಿರಲಿಲ್ಲ. ಆದರೆ ಪೋ ಅವರ ತಾಯಿಯ ನಟನೆಯ ಅಭಿಮಾನಿಗಳಾಗಿದ್ದ ರಿಚ್ಮಂಡ್ ನ ಜಾನ್ ಅಲೆನ್ ದಂಪತಿಗಳು ಎಡ್ಗರ್ ನನ್ನು ಸಾಕಲಾರಂಭಿಸಿದರು.

ಸ್ಕಾಟ್ ಲ್ಯಾಂಡಿನ ಇರ್ವಿನ್ ಮತ್ತು ಲಂಡನ್ ನ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸ್ವಲ್ಪ ಸಮಯ ಕಲಿತ ಎಡ್ಗರ್ ನಂತರ ರಿಚ್ಮಂಡ್ ನಗರಕ್ಕೆ ಮರಳಿ ಒಂದು ಖಾಸಗಿ ಶಾಲೆಯನ್ನು ಸೇರಿಕೊಂಡ. ಎಡ್ಗರ್ ತನ್ನ ಹದಿನೈದನೇ ವಯಸ್ಸಿನಲ್ಲಿಯೇ ತನ್ನ ಸಹಪಾಠಿಯ ತಾಯಿಯನ್ನು ಪ್ರೀತಿಸಿದ. ಆದರೆ ಅವಳು ಅಕಾಲ ಮೃತ್ಯುವಿಗೆ ಈಡಾದಳು. ಎಡ್ಗರ್ ತುಂಬಾ ಓದುತ್ತಿದ್ದ. ಈ ವಿಷಯ ಅವನ ಸಾಕು ತಂದೆಗೆ ಹಿಡಿಸುತ್ತಿರಲಿಲ್ಲ. ಇದರಿಂದ ನೊಂದ ಎಡ್ಗರ್ ಕುಡಿತವನ್ನು ಕಲಿತ. ಸಾಕು ತಂದೆಯ ಜೊತೆ ಜಗಳವಾಡಿ ಸೈನ್ಯಕ್ಕೆ ಸೇರಿದ.

ಈ ಸಮಯದಲ್ಲಿ ಅವನಲ್ಲಿದ್ದ ಸಾಹಿತಿ ಜಾಗ್ರತನಾದ. ವೆಸ್ಟ್ ಪಾಯಿಂಟ್ ಎಂಬಲ್ಲಿ ಅವನು ಕಾರ್ಯನಿರತನಾಗಿದ್ದ ಸಮಯದಲ್ಲಿ ‘ಟು-ಹೆಲೆನ್'. ‘ದಿ ಸ್ಲೀಪರ್', ‘ಫೇರಿ ಲ್ಯಾಂಡ್' ಮೊದಲಾದ ಕವನಗಳನ್ನು ಬರೆದ. ಆದರೆ ಎಡ್ಗರ್ ಒಂದೆಡೆ ನೆಲೆ ನಿಲ್ಲದೇ ವೆಸ್ಟ್ ಪಾಯಿಂಟ್ ನಿಂದ ನ್ಯೂಯಾರ್ಕ್ ಅಲ್ಲಿಂದ ಬೋಸ್ಟನ್, ಫಿಲಡೆಲ್ಫಿಯಾ, ಬಾಲ್ಟಿ ಮೊದಲಾದ ನಗರಗಳಲ್ಲಿ ಅಲೆದಾಡಿದ. ಮಾನಸಿಕ ತೊಳಲಾಟದಿಂದ ಬಳಲಿ ಅಫೀಮಿನಂತಹ ಮಾದಕ ದ್ರವ್ಯದ ವ್ಯಸನಿಯಾದ. ಹಲವಾರು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ. ಅವನ ಹಿಂದಿನ ಪ್ರೇಮ ವೈಫಲ್ಯಗಳು ಅವನನ್ನು ಮಾನಸಿಕವಾಗಿ ಬಹಳ ದುರ್ಬಲನನ್ನಾಗಿ ಮಾಡಿದ್ದವು. ಆ ಸಮಯದಲ್ಲೇ ಅವನಿಗೆ ವರ್ಜೀನಿಯಾ ಕ್ಲೇಮ್ ಎಂಬ ಯುವತಿಯ ಪರಿಚಯವಾಗುತ್ತದೆ. ಆಕೆ ಎಡ್ಗರ್ ನ ದೂರದ ಸಂಬಂಧಿಯೂ ಆಗಿದ್ದಳು.

ಎಡ್ಗರ್ ಅವಳನ್ನು ಪ್ರೀತಿಸಿ ಮದುವೆಯಾದಾಗ (೧೮೩೫) ಅವಳಿಗೆ ಬರೇ ೧೩ ವರ್ಷ. ಆಕೆಯಿಂದ ಸ್ಪೂರ್ತಿಗೊಂಡು ಎಡ್ಗರ್ ‘ಲಿಜಿಯ, ಯುಲೀಲಿಯಾ, ಎಲಿಯನೋರ, ಅನ್ ಬೆಲ್ ಲೀ’ ಮುಂತಾದ ಕೃತಿಗಳನ್ನು ರಚಿಸಿದ. 'ಸದರನ್ ಲಿಟರಲಿ ಮೆಸೆಂಜೆರ್' ಎಂಬ ಪತ್ರಿಕೆಯಲ್ಲಿ ಎಡ್ಗರ್ ನ ಅನೇಕ ಬರಹಗಳು ಪ್ರಕಟವಾದವು. ಆ ಪತ್ರಿಕೆಯವರು ಎಡ್ಗರ್ ನನ್ನು ಅವರ ಸಂಪಾದಕೀಯ ಬಳಗದಲ್ಲಿ ಸೇರಿಸಿಕೊಂಡರು. ಕ್ರಮೇಣ ಆ ಪತ್ರಿಕೆಯ ಸಂಪಾದಕನೂ ಆದ. ಆದರೆ ಎಡ್ಗರ್ ನ ಮಾನಸಿಕ ಸಮಸ್ಯೆಗಳು ಹಾಗೂ ದುಶ್ಚಟಗಳು ಅವನನ್ನು ಬಹಳ ಸಮಯ ಕೆಲಸದಲ್ಲಿ ಮುಂದುವರೆಯಲು ಬಿಡಲಿಲ್ಲ. ಕೆಲಸ ಕಳೆದುಕೊಂಡ ಎಡ್ಗರ್ ಫಿಲಡೆಲ್ಫಿಯಾಗೆ ತೆರಳಿ, ಅಲ್ಲಿಯ ‘ದಿ ಜೆಂಟಲ್ ಮ್ಯಾನ್ಸ್’ ಎಂಬ ಪತ್ರಿಕೆಯ ಸಹ ಸಂಪಾದಕನಾದ. 

ಆ ಪತ್ರಿಕೆಯಲ್ಲಿ ದುಡಿದ ಐದು ವರ್ಷಗಳು ಎಡ್ಗರ್ ಪೋನ ಸುವರ್ಣ ದಿನಗಳು ಎಂದೇ ಹೇಳಬಹುದು. ಏಕೆಂದರೆ ಆ ಸಮಯದಲ್ಲೇ ಅವನ ಹಲವಾರು ಶ್ರೇಷ್ಣ ಬರಹಗಳು ಬೆಳಕು ಕಂಡವು. ಎಡ್ಗರ್ ನ ಖ್ಯಾತಿ ನಿಧಾನವಾಗಿ ಹರಡತೊಡಗಿತು. ಹಣವೂ ಸೇರತೊಡಗಿತು. ಸಮಯ ಕಳೆದಂತೆ ಮತ್ತೆ ಎಡ್ಗರ್ ಮಾನಸಿಕ ಸ್ಥಿಮಿತ ಕಳೆದುಕೊಳ್ಳಲಾರಂಬಿಸಿದ. ನಿಧಾನವಾಗಿ ಏರಿದ್ದ ಕೀರ್ತಿ ಶಿಖರದಿಂದ ಕೆಳಗಿಳಿಯಲಾರಂಭಿಸಿದ. ಕೆಲಸ ಕಳೆದುಕೊಂಡ. ಮನೆಯಲ್ಲಿದ್ದ ಹೆಂಡತಿ ಹಾಗೂ ಅತ್ತೆಯನ್ನು ಸಾಕುವುದೇ ಅವನಿಗೆ ಕಷ್ಟವಾಗ ತೊಡಗಿತು. ಅದೇ ಸಮಯ ಅವನ ಹೆಂಡತಿಯ ಆರೋಗ್ಯ ಸ್ಥಿತಿಯೂ ಬಿಗಡಾಯಿಸತೊಡಗಿತು. ಒಂದು ತುತ್ತಿನ ಆಹಾರಕ್ಕೂ ನೆರೆಹೊರೆಯವರ ಬಳಿ ಬೇಡುವ ಪರಿಸ್ಥಿತಿ ಒದಗಿತು. ಚಳಿಯಲ್ಲಿ ಅವನ ಪತ್ನಿ ಕ್ಲೇಮ್ ನರಳ ತೊಡಗಿದಾಗಲೂ ಏನೂ ಮಾಡಲಾಗದೇ ಎಡ್ಗರ್ ತಲೆಯ ಮೇಲೆ ಕೈಯಿಟ್ಟು ಕುಳಿತುಕೊಳ್ಳುತ್ತಿದ್ದ. ಹೀಗೆಯೇ ನರಳಾಡಿ ಒಂದು ದಿನ ಕ್ಲೇಮ್ ಸತ್ತೇ ಹೋದಳು.

ತನ್ನ ಹೆಂಡತಿಯ ಸಾವಿನಿಂದ ಇನ್ನಷ್ಟು ಕುಗ್ಗಿ ಹೋದ ಎಡ್ಗರ್ ವಿಪರೀತ ಕುಡಿಯಲಾರಂಭಿಸಿದ. ಕಳ್ಳ ಕೆಲಸಗಳನ್ನು ಮಾಡಿದ, ಸೆರೆಮನೆವಾಸ ಅನುಭವಿಸಿದ. ವಿಪರೀತ ಕುಡಿತದ ಪರಿಣಾಮ ಆಸ್ಪತ್ರೆಗೆ ದಾಖಲಾದ. ನ್ಯೂಮೋನಿಯಾ ತಗುಲಿದ ಕಾರಣ ನರಳಿ ನರಳಿ ೧೮೪೯ರ ಅಕ್ಟೋಬರ್ ೭ರಂದು ಬಾಲ್ಟಿಮೋರಿನ ಸಿಟಿ ಹಾಸ್ಪಿಟಲ್ ನಲ್ಲಿ ಮೃತನಾದ. ಆಗ ವನಿಗೆ ಬರೇ ನಲವತ್ತು ವರ್ಷ ವಯಸ್ಸು. ಪ್ರತಿಭಾವಂತ ಲೇಖಕ, ಸಾಹಿತ್ಯಕ್ಕೆ ಹೊಸ ಪ್ರಕಾರವನ್ನು ನೀಡಿದ ಎಡ್ಗರ್ ತನ್ನ ಜೀವನದಲ್ಲಿ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಧಾರಗಳಿಂದ ಬೇಗನೇ ನಮ್ಮನ್ನು ಅಗಲಿದ. 

ಅವನ ಸಾವಿನ ನಂತರ ಎಡ್ಗರ್ ಸಾಹಿತ್ಯ ಜನಪ್ರಿಯವಾಗತೊಡಗಿತು. ಅವನ ಬರವಣಿಗೆಯ ವಿಭಿನ್ನ ಶೈಲಿ ಜನರನ್ನು ಆಕರ್ಷಿಸ ತೊಡಗಿತು. ಅದಕ್ಕೆ ಉದಾಹರಣೆಯೆಂದರೆ ೧೮೪೧ರಲ್ಲಿ ಆತ ‘ಗ್ರಹಾಂಸ್ ಮ್ಯಾಗಜಿನ್' ಸಂಪಾದಕನಾಗಿ ಅಧಿಕಾರ ವಹಿಸಿಕೊಂಡಾಗ ಅದರ ಪ್ರಸಾರ ಸಂಖ್ಯೆ ೮೦೦೦ ಇತ್ತು. ಎರಡೇ ವರ್ಷದಲ್ಲಿ ಅದರ ಪ್ರಸಾರ ಸಂಖ್ಯೆ ೪೦ ಸಾವಿರಕ್ಕೆ ಏರಿತ್ತು. ಇದು ಎಡ್ಗರ್ ಪೋನ ತಾಕತ್ತು. 

ಎಡ್ಗರ್ ಪೋನ ‘ಫಾಲ್ ಆಫ್ ದಿ ಹೌಸ್ ಆಫ್ ಆಷರ್' ಕೃತಿ ಚಲನಚಿತ್ರವಾಯಿತು. ಎಡ್ಗರ್ ಪೋ ನ ಪತ್ತೇದಾರಿ ಶೈಲಿ ವಿಭಿನ್ನವಾಗಿತ್ತು. ಇವರು ತನ್ನ ಕಾದಂಬರಿಗಳಲ್ಲಿ ತಾರ್ಕಿಕ ಕೌಶಲ್ಯ(Rationalisation)ವನ್ನು ಅಳವಡಿಸಿಕೊಂಡಿದ್ದ. ಇವರ ಪತ್ತೇದಾರಿ ಕಥೆಗಳಲ್ಲಿನ ಗಮನಾರ್ಹ ಅಂಶವೆಂದರೆ ಸರಿಯಾದ ದಾರಿಯಲ್ಲಿ ವಿಶಾಲವಾಗಿ ಚಿಂತಿಸುವುದು. ತಪ್ಪಿಲ್ಲದ ಅಂಶಗಳನ್ನು ತೆಗೆದು ಅದರ ಬಗ್ಗೆ ತರ್ಕಿಸುತ್ತಾ ತೀರ್ಮಾನಕ್ಕೆ ಬರುವುದು. ಈ ವಿಷಯನ್ನು ಗಮನದಲ್ಲಿರಿಸಿಕೊಂಡು ಬರೆದ ಪ್ರಮುಖ ಕಾದಂಬರಿ ‘ಗೋಲ್ಡನ್ ಬಗ್'. (ಈ ಕಾದಂಬರಿಯನ್ನು ಎಂ. ಗೋಪಾಲಕೃಷ್ಣ ಅಡಿಗರು ‘ಸುವರ್ಣ ಕೀಟ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ) 

'ದಿ ಮರ್ಡರ್ಸ್ ಇನ್ ದಿ ರೂಮಾರ್ಗ್', ‘ದಿ ಪರ್ಲಾಂಯ್ಡ್ ಲೆಟರ್'  ಎಂಬೆಲ್ಲಾ ಕಾದಂಬರಿಗಳನ್ನು ರಚನೆ ಮಾಡಿದ್ದ ಪೋ, ಓದುಗರನ್ನು ಕೊನೆಯವರೆಗೆ ತುದಿಗಾಲಿನಲ್ಲೇ ನಿಲ್ಲಿಸುತ್ತಾನೆ. ‘ದಿ ಬ್ಲ್ಯಾಕ್ ಕ್ಯಾಟ್' ಮತ್ತು 'ದಿ ಕ್ಯಾಸ್ಕ್ ಆಫ್ ಅಮನ್ಫಿಲಾಡೋ’ ಎಂಬ ಕೃತಿಯಲ್ಲಿ ಮಾನವನಲ್ಲಿಯ ಅಂತರಂಗದ ಛಾಯೆಯನ್ನು ಚಿತ್ರಿಸಿದ್ದಾನೆ. ಎಡ್ಗರ್ ಪೋನ ಯೋಚನಾ ಲಹರಿಯನ್ನು ಮೀರಿಸುವವರಿಲ್ಲ ಎಂದು ಅವನ ಕೃತಿಗಳನ್ನು ಓದುವಾಗ ಅನುಭವಕ್ಕೆ ಬರುತ್ತದೆ. ಇಷ್ಟೆಲ್ಲಾ ಪ್ರತಿಭೆ ಇದ್ದರೂ ಮಾನಸಿಕ ತುಮಲಗಳಿಗೆ ಬಲಿಯಾಗಿ ತನ್ನ ಜೀವನವನ್ನೇ ಕೊನೆಗಾಣಿಸಿದ ಎಡ್ಗರ್ ಪೋ ಒಬ್ಬ ದುರಂತ ಬರಹಗಾರನಾಗಿ ಸದಾ ಕಾಲ ಕಾಡುತ್ತಿರುತ್ತಾನೆ. ಎಡ್ಗರ್ ಪೋ ನನ್ನು ಪತ್ತೇದಾರಿ ಕಾದಂಬರಿಗಳ ಜನಕ ಎಂದು ಬಹಳಷ್ಟು ಮಂದಿ ಅಭಿಪ್ರಾಯ ಪಡುತ್ತಾರೆ.

(ಮಾಹಿತಿ ಆಧಾರ-ಹಳೆಯ ಕಸ್ತೂರಿ ಪತ್ರಿಕೆ)

ಚಿತ್ರ ಕೃಪೆ: ಅಂತರ್ಜಾಲ ತಾಣ