ಎಡ ಬಲ ಪಂಥಗಳ ಬಗ್ಗೆ ಸರಳ - ಸಂಕ್ಷಿಪ್ತ ವಿವರಣೆ…

ದೇಶ ಮುಖ್ಯ - ಬಲಪಂಥೀಯರು, ವ್ಯಕ್ತಿ ಮುಖ್ಯ - ಎಡಪಂಥೀಯರು. ಸಾಮರ್ಥ್ಯ ಉಳ್ಳವರು ಶ್ರೇಷ್ಠರು - ಬಲಪಂಥೀಯರು, ಎಲ್ಲರೂ ಸಮಾನರು - ಎಡಪಂಥೀಯರು. ಸಮಾಜಕ್ಕೆ ಧರ್ಮವೇ ಸಂಜೀವಿನಿ - ಬಲಪಂಥೀಯರು, ಸಮಾಜಕ್ಕೆ ಧರ್ಮವೇ ಅಫೀಮು - ಎಡಪಂಥೀಯರು. ಸಂಪತ್ತಿನ ವೃದ್ಧಿಗೆ ಶ್ರೀಮಂತರ ಚಾಣಾಕ್ಷತೆಯೇ ಕಾರಣ - ಬಲಪಂಥೀಯರು, ಸಂಪತ್ತಿನ ವೃದ್ಧಿಗೆ ಕಾರ್ಮಿಕರ ಶ್ರಮವೇ ಕಾರಣ - ಎಡಪಂಥೀಯರು. ಮಹಲು ಕಟ್ಟಿರುವುದು ನಮ್ಮ ಸ್ವಂತ ದುಡಿಮೆಯಿಂದ - ಬಲಪಂಥೀಯರು, ಮಹಲು ಕಟ್ಟಿರುವುದು ನಮ್ಮ ಬೆವರ ಹಣದಿಂದ - ಎಡಪಂಥೀಯರು. ಶಿಸ್ತು ಮತ್ತು ತಂತ್ರಜ್ಞಾನ ನಮ್ಮ ಬಂಡವಾಳ - ಬಲಪಂಥೀಯರು, ಸಂಘಟನೆ ಮತ್ತು ಹೋರಾಟ ನಮ್ಮ ಬಂಡವಾಳ - ಎಡಪಂಥೀಯರು.
ಸ್ಪರ್ಧೆ, ಸಾಮರ್ಥ್ಯ ಪ್ರತಿಭೆಯೇ ನಮ್ಮ ಆದ್ಯತೆ - ಬಲಪಂಥೀಯರು, ಶೋಷಣೆ, ದೌರ್ಜನ್ಯದ ವಿರುದ್ಧ ಹೋರಾಟ ನಮ್ಮ ಆದ್ಯತೆ - ಎಡಪಂಥೀಯರು. ಬುದ್ದಿಯೇ ನಮ್ಮ ಶಕ್ತಿ - ಬಲಪಂಥೀಯರು ಶ್ರಮವೇ ನಮ್ಮ ಶಕ್ತಿ - ಎಡಪಂಥೀಯರು. ಬಲಿಷ್ಠರ ಉಳಿವು ದುರ್ಬಲರ ಅಳಿವೇ ಇತಿಹಾಸ - ಬಲಪಂಥೀಯರು, ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ - ಎಡಪಂಥೀಯರು. ಸಾಹಿತ್ಯ, ಸಂಗೀತ, ಸಂಸ್ಕೃತಿ, ಲಲಿತಕಲೆಗಳ ಬೀಡು ನಮ್ಮ ದೇಶ - ಬಲಪಂಥೀಯರು, ಬಡವರ, ರೋಗರುಜಿನಗಳ, ಜಾತಿ ಅಸ್ಪೃಷ್ಯತೆಯ ನೆಲ ನಮ್ಮ ದೇಶ - ಎಡಪಂಥೀಯರು. ವಾಸ್ತಶಿಲ್ಪದ ಭವ್ಯತೆಯ ಸುಂದರ ಕಟ್ಟಡ ವಿಧಾನಸೌದ - ಬಲಪಂಥೀಯರು, ಕೂಲಿಕಾರ್ಮಿಕರ ನೋವಿನ, ನರಳಾಟದ ಸ್ಮಶಾನ ವಿಧಾನಸೌಧ - ಎಡಪಂಥೀಯರು. ಕಣ್ಣ ಹನಿ ಮುತ್ತಾಗಿ ಕಂಡರೆ - ಬಲಪಂಥೀಯರು, ಕಣ್ಣ ಹನಿ ರಕ್ತವಾಗಿ ಕಂಡರೆ - ಎಡಪಂಥೀಯರು. ಬಡವರನ್ನು ಶೋಷಿಸಿಯಾದರೂ ಸಂಪತ್ತನ್ನು ಗಳಿಸೋಣ - ಬಲಪಂಥೀಯರು, ಶ್ರೀಮಂತರನ್ನು ಕೊಂದಾದರೂ ಸಂಪತ್ತನ್ನು ಹಂಚೋಣ - ಎಡಪಂಥೀಯರು. ನನ್ನದೆಲ್ಲವೂ ನನ್ನದೇ - ಬಲಪಂಥೀಯರು, ನನ್ನದೆಲ್ಲವೂ ಇತರರದೇ - ಎಡಪಂಥೀಯರು. ಸೂಟುಬೂಟಿನಲ್ಲಿ ಪ್ರತಿಭೆ ಮತ್ತು ಸೌಂದರ್ಯ ಕಂಡರೆ - ಬಲಪಂಥೀಯರು, ಹರಿದ ಬಟ್ಟೆಯಲ್ಲಿ ನೋವು ಮತ್ತು ಸೌಂದರ್ಯ ಕಂಡರೆ - ಎಡಪಂಥೀಯರು. ಆಧ್ಯಾತ್ಮ ಭಕ್ತಿಯ ತವರೂರು ಭಾರತ - ಬಲಪಂಥೀಯರು, ಸಂಘರ್ಷ, ಅಸಮಾನತೆ, ಅಸಹಿಷ್ಣತೆಯ ತವರೂರು ಭಾರತ - ಎಡಪಂಥೀಯರು.
ಹೌದು, ಎರಡೂ ಪಂಥದವರು ಇದನ್ನು ಒಪ್ಪುವುದಿಲ್ಲ. ನಮ್ಮದು ಇದಕ್ಕಿಂತ ಉತ್ತಮ ಆದರ್ಶ ಹೊಂದಿದ ಸಿದ್ಧಾಂತ ಎಂದೇ ವಾದಿಸುತ್ತಾರೆ. ಮೂಲ ಸಿದ್ಧಾಂತ ಏನಾದರೂ ಇರಲಿ. ವಾಸ್ತವದ ಆಚರಣೆಯಲ್ಲಿರುವುದು ಬಹುತೇಕ ಇದೇ. ಹಾಗಾದರೆ ಇದರಲ್ಲಿ ನಿಜವಾದ ದೇಶದ್ರೋಹಿಗಳಾರು ? ನಿಜವಾದ ದೇಶಭಕ್ತರಾರು ? ನಮ್ಮ ಭಾರತಾಂಬೆಯ ಬುಡಕ್ಕೆ ಕೊಡಲಿ ಹಾಕುತ್ತಿರುವವರು ಯಾರು ? ಮಾನವೀಯತೆಯ ಕಗ್ಗೋಲೆ ಮಾಡುತ್ತಿರುವವರು ಯಾರು ? ಬಹಳ ಜನರಿಗೆ ಕಹಿಯಾದ - ಒಂದಷ್ಟು ಸ್ನೇಹವಲಯದ ಅಸಮಾಧಾನಕ್ಕೂ ಕಾರಣವಾಗಬಹುದಾದ ಸತ್ಯ ಮತ್ತು ವಾಸ್ತವ ಹುಡುಕಾಟದ ಒಂದು ಪ್ರಯತ್ನ.
ಕಮ್ಯುನಿಸಂ ಸಿದ್ಧಾಂತಕ್ಕೆ ಸಂಪೂರ್ಣ ಶರಣಾಗಿ ನಕ್ಸಲಿಸಂನಂತಹ ಪ್ರಾಯೋಗಿಕವಲ್ಲದ, ಅಮಾನವೀಯ, ಹಿಂಸಾತ್ಮಕ ಚಟುವಟಿಕೆಗಳನ್ನು ಬೆಂಬಲಿಸುವ - ಬಂಡವಾಳಶಾಹಿ ವ್ಯವಸ್ಥೆಯ ಒಂದಷ್ಟು ಪ್ರಯೋಜನಗಳನ್ನು ಗುರುತಿಸಿ ಅದರಲ್ಲಿನ ಲೋಪಗಳನ್ನು ಸರಿಪಡಿಸದೆ ಆಧುನಿಕ ನಾಗರಿಕತೆಯ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ, ತಮ್ಮ ಸಿದ್ಧಾಂತವೇ ಶ್ರೇಷ್ಠ ಮತ್ತು ಅತ್ಯುತ್ತಮ ಎಂಬ ಭ್ರಮೆಗೆ ಒಳಗಾಗಿರುವ ಕಾರ್ಮಿಕರೇ ಪ್ರಪಂಚ ಎಂಬ ಅಮಲಿಗೊಳಗಾಗಿರುವ ಒಂದು ವರ್ಗ ತಮಗೆ ಅರಿವಿಲ್ಲದಂತೆ ದೇಶದ್ರೋಹದ ಚಟುವಟಿಕೆಯಲ್ಲಿ ತೊಡಗಿದೆ.
ಮನುವಾದಿ ಸಿದ್ಧಾಂತ ಪ್ರೇರಿತ ಕೆಲವರು ಸಂಘಟನೆಗಳನ್ನು ಕಟ್ಟಿಕೊಂಡು ಜಾತಿ, ಮತ, ಪಂಥಗಳ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಮೌಢ್ಯತೆಗೆ ಒಳಪಡಿಸಿ ತಮ್ಮ ತಟ್ಟೆಯಲ್ಲೇ ಆನೆ ಸತ್ತು ಬಿದ್ದಿದ್ದರೂ ಇತರರ ತಟ್ಟೆಯ ನೊಣ ನೋಡಿ ಗಹಗಹಿಸಿ ನಗುತ್ತಿರುವ, ಆ ಮೂಲಕ ಶ್ರೇಷ್ಠತೆಯ ವ್ಯಸನದಿಂದ ಅಸಮಾನತೆ ಉಂಟುಮಾಡಿ ದೇಶವನ್ನು ಅಸಹನೆಯ ಕೂಪಕ್ಕೆ ತಳ್ಳಿ ಸಮಾಜದ ವಿಭಜನೆಗೆ ಕಾರಣವಾಗುತ್ತಿರುವ ಇನ್ನೊಂದು ವರ್ಗ ಅಜ್ಞಾನದಿಂದ ದೇಶದ್ರೋಹ ಮಾಡುತ್ತಿದೆ.
ಆದರೆ ನಾವು, ನೀವು ಕೇವಲ ಖೋಟಾನೋಟು ತಯಾರಕರು - ಭ್ರಷ್ಟಾಚಾರಿಗಳು - ರಾಷ್ಟ್ರಗೀತೆ ಹೇಳದವರುಗಳನ್ನು ದೇಶದ್ರೋಹಿಗಳೆಂದು ತಿಳಿದಿದ್ದೇವೆ. ನನ್ನ ದೃಷ್ಟಿಯಲ್ಲಿ ಇವರು ಕ್ರಿಮಿನಲ್ ಗಳು. ಇದೊಂದು Law and Order ಸಮಸ್ಯೆ ಆಡಳಿತಗಾರರು ಮನಸ್ಸು ಮಾಡಿದರೆ ಇದನ್ನು ಹೊಸಕಿ ಹಾಕಿಬಿಡಬಹುದು. ಈ ಬೃಹತ್ ದೇಶಕ್ಕೆ ಇದೇನು ಅಂತ ಅಪಾಯಕಾರಿಯಲ್ಲ. ಭ್ರಷ್ಟಾಚಾರಿಗಳನ್ನು ಬಿಟ್ಟರೆ ಉಳಿದವರ ಸಂಖ್ಯೆ ಅತಿ ಕಡಿಮೆ.
ಆದರೆ ಈ ಕಮ್ಯುನಿಸ್ಟ್ ಮತ್ತು ಬಲಪಂಥೀಯರು ತಮ್ಮ ಸಿದ್ಧಾಂತಗಳೆಂಬ ಅಫೀಮು ತಿನ್ನಿಸಿ - ಅದರಲ್ಲೂ ವಿಧ್ಯಾರ್ಥಿಗಳು - ಯುವಕರು - ಅರೆ ಅಕ್ಷರಸ್ಥರು - ನಿರುದ್ಯೋಗಿಗಳುನ್ನು ಟಾರ್ಗೆಟ್ ಮಾಡಿ ಅವರ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ದೇಶಕ್ಕೆ ಮಾರಕವಾಗಿದ್ದಾರೆ. ಆ ಕಾರಣಕ್ಕಾಗಿಯೇಕೆಲವು ಕಡೆ ಪರಿಸ್ಥಿತಿ ಬೆಂಕಿಯ ಕೆಂಡಗಳಾಗಿ ಭವ್ಯ ಭವಿಷ್ಯದ ಕನಸಿನ ಅಮಾಯಕ ಹುಡುಗರು ಕೊಲೆಯಾಗುತ್ತಿದ್ದಾರೆ. ಇದರಿಂದಾಗೆ ಭಾರತವೆಂಬ ತಾಯ್ನಾಡು ಮೌನವಾಗಿ ರೋಧಿಸುತ್ತಿರುವುದು ಈ ಮೂಢರಿಗೆ ಅರ್ಥವಾಗುತ್ತಿಲ್ಲ. ನಿಮಗೆ ತಿಳಿದಿರಬಹುದು, ಸ್ವಾತಂತ್ಯ್ರೋತ್ತರ ಭಾರತದಲ್ಲಿ ಅತಿ ಹೆಚ್ಚು ಹಿಂಸೆ ನಡೆದಿರುವುದು ಈ ಕಮ್ಯುನಿಸಂ ಮತ್ತು ಮನುವಾದಿ ಮನೋಭಾವದವರಿಂದ.
ಇದೇ ಮೂಲಭೂತವಾದ. ಮನುವಾದ ಪ್ರಬಲವಾದಷ್ಟೂ ಅದಕ್ಕೆ ವಿರುಧ್ಧ ದಿಕ್ಕಿನಲ್ಲಿ ಪ್ರಚೋದಿತವಾಗಿ ದಲಿತ - ಮುಸ್ಲಿಂ - ಹಿಂದುಳಿದ ವರ್ಗಗಳು ಬಲಿಷ್ಠವಾಗುತ್ತಾ ದೇಶ ವಿಭಜನೆಯ ಸಾಧ್ಯತೆ ನಿಮಗೆ ಗೋಚರಿಸುತ್ತಿಲ್ಲವೇ? ಹಾಗಾದಲ್ಲಿ ದೇಶದ ಹಿತಚಿಂತನೆ ಮಾಡುವವರು ಯಾರು. ಇಲ್ಲಿನ ಸಾಮಾಜಿಕ ವ್ಯವಸ್ಥೆಯ ಅಸಮಾನತೆ, ಟೊಳ್ಳುತನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಮ್ಯುನಿಸಂ ಎಂಬುದು ಮಾನವ ಜೀವಿಯ ಸಮಾನತೆಯನ್ನು ಬಯಸುವ ಒಂದು ಅತ್ಯುತ್ತಮ ವ್ಯವಸ್ಥೆ. ಆದರೆ ಅದೇ ಜೀವ ವಿರೋಧಿಯಾಗಬಾರದು. ತನ್ನ ವಾದದಿಂದಲೇ ಬದಲಾವಣೆ ಬಯಸದೆ ಕೊಳೆತು ನಾರಬಾರದು.
ಹಾಗೆಯೇ, ಅಂದಿನ ಸಾಮಾಜಿಕ ವ್ಯವಸ್ಥೆಗೆ ಒಂದಷ್ಟು ಕ್ರಮಬದ್ಧತೆ ತಂದು ಕೊಟ್ಟಿದ್ದ ಮನುವಾದ ಕಾಲಾಂತರದಲ್ಲಿ ಬದಲಾದ ಸಾಮಾಜಿಕ ಮನಸ್ಥಿತಿ, ಜಾಗೃತ ವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥಮಾಡಿಕೊಳ್ಳದೆ, ಹಳೆಯ ಸಿದ್ದಾಂತಕ್ಕೆ ಗಂಟು ಬಿದ್ದು ಧರ್ಮಕ್ಕಾಗಿ ಹಿಂಸೆಯನ್ನೇ ಪ್ರಚೋದಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಎರಡೂ ಸಿದ್ದಾಂತ ವಾದಿಗಳು ತಮ್ಮ ಭಾಷಣಗಳಲ್ಲಿ - ಅಂಕಣ ಬರಹಗಳಲ್ಲಿ - ಬ್ರಿಗೇಡ್ ಮುಂತಾದ ಸಂಘಟನೆಗಳ ಮೂಲಕ ಪ್ರಚೋದನಾಕಾರಿಯಾಗಿ ವರ್ತಿಸಿ ಯುವ ಪೀಳಿಗೆಯನ್ನು ಅಸಹನೆಯ ಕೂಪಕ್ಕೆ ತಳ್ಳಿ ದೇಶದ ಅಭಿವೃದ್ಧಿಗೆ ಮಾರಕವಾಗಿರುವುದು ಸತ್ಯವಲ್ಲವೇ ?
ಈ ಅಸಹಿಷ್ಣುತೆಯ ಕಾರಣದಿಂದಾಗಿಯೇ ಯುವಜನತೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಗುಲಾಮಿ ಮನೋಭಾವ ಬೆಳೆಸಿಕೊಂಡು ಹಣದ ಹಿಂದೆ ಬಿದ್ದಿಲ್ಲವೇ ? ದೇಶಕ್ಕಿಂತ ಧರ್ಮವೇ ಮುಖ್ಯ ಎನ್ನುವ ಎಲ್ಲಾ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಇತ್ಯಾದಿಗಳನ್ನು ದೇಶದ್ರೋಹಿಗಳೆಂದೇ ಪರಿಗಣಿಸಬಹುದು. ಏಕೆಂದರೆ ಧರ್ಮವೆನ್ನುವುದು ಜೀವನ ಶೈಲಿ. ಆದರೆ ದೇಶ ನಾವು ಜೀವಿಸುವ ಒಂದು ಪ್ರದೇಶ. ನಮ್ಮ ದೇಹದ ಅಸ್ತಿತ್ವವಿರುವುದೇ ಆ ಪ್ರದೇಶದ ಗಾಳಿ, ನೀರು, ಬೆಳಕು, ಆಹಾರಗಳಿಂದ. ಆದ್ದರಿಂದ ದೇಶವೇ ಮುಖ್ಯ, ಮನುಷ್ಯ ಅದಕ್ಕಿಂತ ಮುಖ್ಯ. ದೇವರು, ಧರ್ಮ, ಜಾತಿ ಎಂದೆಲ್ಲಾ ಇಲ್ಲದ ಭ್ರಮೆ ಸೃಷ್ಟಿಸುವುದು - ಕಾರ್ಮಿಕರಿಲ್ಲದೆ ಪ್ರಪಂಚವೇ ಇಲ್ಲ ಎನ್ನುವಷ್ಟು ಅವಾಸ್ತವಿಕ ವಾದ ಮೂಡಿಸುವುದು ಎರಡೂ ಒಳ್ಳೆಯದಲ್ಲ.
ಇದಕ್ಕೆ ಬಹುಶಃ ಭಾರತೀಯತೆ ಪರಿಹಾರವಾಗಬಲ್ಲದು. ಭಾರತೀಯತೆ ಎಂದರೆ . 2025 ರ ಈ ಕ್ಷಣದಲ್ಲಿ ನಮ್ಮ ಅನುಭವ, ಅರಿವಿನಿಂದ ಅಳವಡಿಸಿಕೊಳ್ಳಬಹುದಾದ ನಾಗರಿಕ ಪ್ರಜ್ಙೆಯೇ ಭಾರತೀಯತೆ. ಸಭ್ಯತೆ - ಸಹಿಷ್ಣುತೆ - ವಿಶಾಲ ಮನೋಭಾವ - ನಾಯಕತ್ವ - ಕಠಿಣ ಶ್ರಮ - ಅಸ್ತಿತ್ವಕ್ಕೆ ಧಕ್ಕೆಯಾದಾಗ ಸಹಜ ಆಕ್ರಮಣ ಮುಂತಾದವುಗಳ ಒಟ್ಟು ನಡವಳಿಕೆಯ ಪ್ರಬುಧ್ದತೆಯೇ ಭಾರತೀಯತೆ.
ನಾವು, ನೀವು ಎಲ್ಲರೂ ಒಂದೇ ದೋಣಿಯ ಪಯಣಿಗರು. ಸಿದ್ದಾಂತಕ್ಕಾಗಿ ಮನುಷ್ಯರನ್ನು ಕೊಲ್ಲುವ ಎಲ್ಲಾ ಸಂಘಟನೆಗಳೂ ದೇಶದ್ರೋಹಿಗಳೇ. ಇವುಗಳ ಮದ್ಯೆ ಸಹೋದರತ್ವದ ಸಂಪರ್ಕ ಸಾಧಿಸಿ ಮತ್ತೊಮ್ಮೆ ನೆಮ್ಮದಿಯ ಬದುಕಿಗೆ ಮರಳೋಣ ಎಂದು ಆಶಿಸುತ್ತಾ… ಚರ್ಚೆಗಳು ಬದುಕಲ್ಲ ನಡವಳಿಕೆಗಳೇ ಬದುಕು. ಆದ್ದರಿಂದ ಈಗ ಆಯ್ಕೆ ನಿಮ್ಮದು. ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಾ, ನಾಗರಿಕವಾಗಿ ಬದುಕುವುದೇ ನಿಜವಾದ ದೇಶಭಕ್ತಿಯೇ ಹೊರತು ಧರ್ಮದ ಬಗ್ಗೆ ಬರೆದರೆ RSS Agent ಅನ್ನುವುದು - ವ್ಯವಸ್ಥೆಯ ಶೋಷಣೆಯ ಬಗ್ಗೆ ಬರೆದರೆ Communist Agent ಎನ್ನುವುದು ನಿಜವಾದ ದೇಶಭಕ್ತಿಯಲ್ಲ.... ಮತ್ತೊಮ್ಮೆ ಯೋಚಿಸಿ. ಆಧುನಿಕ ನಾಗರಿಕ ಸಮಾಜದಲ್ಲಿರುವ ನಾವು, ಅಂಜದೆ - ಅಳುಕದೆ - ಹೇಡಿಗಳಾಗದೆ - ಪೂರ್ವಾಗ್ರಹ ಪೀಡಿತರಾಗದೆ - ಪಕ್ಷಪಾತಿಗಳಾಗದೆ - ಸಿದ್ಧಾಂತದ ಗುಲಾಮರಾಗದೆ -ಭಾವನಾತ್ಮಕರಾಗದೆ - ಕಠೋರಿಗಳಾಗದೆ - ಯಾವ ದಿಕ್ಕಿಗೂ ವಾಲದೆ - ಪ್ರಬುಧ್ಧತೆಯಿಂದ ಸತ್ಯ ಮತ್ತು ವಾಸ್ತವದ ಹುಡುಕಾಟ ನಡೆಸಿ ನವ ನಾಗರಿಕ ಸಮಾಜ ನಿರ್ಮಿಸೋಣ. ಪಂಥಗಳಾಚೆಯ ಬದುಕನ್ನು ರೂಪಿಸಿಕೊಳ್ಳೋಣ. ಪ್ರಕೃತಿಗೆ ನಿಷ್ಠರಾದ ಸಹಜ ಸ್ವಾಭಾವಿಕ ಜೀವನಕ್ಕೆ ಆದ್ಯತೆ ನೀಡೋಣ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ