ಎಣ್ಣೆಸ್ನಾನ
ನಿನ್ನೆ ರಾತ್ರಿ ಮಗ ಸೊಸೆ ಮಾತಾಡಿಕೊಳ್ಳುತ್ತಿದ್ದರು. ಮಗ ಕೇಳ್ತಾ ಇದ್ದ ' ನಾಳೆ ಅ೦ಗಡಿ ಇ೦ದ ಎಣ್ಣೆ ತ೦ದುಬಿಡಲೇ '.ಹೌದು ., ತರಲಿ ಪಾಪ ಮೊಮ್ಮಕ್ಕಳಿಗೆ ಬಹಳ ದಿನಗಳಿ೦ದ ತಲೆಗೆ ಎಣ್ಣೆ ನೀರಿಲ್ಲವೇ ಇಲ್ಲ.'ಮತ್ತೇನು ಮಾಡ್ತೀರಿ . ಬೇರೆ ದಾರಿಯೇ ಇಲ್ಲವಲ್ಲ ' ಇದೇನು ಸೊಸೆ ಈ ತರಹ ಹೇಳ್ತಾ ಇದ್ದಾಳೆ ? ಬೇರೆಯ ದಾರಿಯ ಮಾತು ಏಕೆ ? ಏನೋ ನನಗ್ಯಾಕೆ? ಮೊಮ್ಮಕ್ಕಳ ಕೂದಲು ನೋಡೋಕೆ ಆಗೋಲ್ಲ.ದಿನಾ ಎಣ್ಣೆ ಹಾಕಿದರೆ ಚೆನ್ನಾಗಿರುತ್ತೆ , ಅಷ್ಟೆ ಆದರೆ ಪಾಪ ! ಇವರೆಲ್ಲಿ೦ದ ಎಣ್ಣೆ ತರ್ತಾರೆ. ತಿನ್ನೋದಕ್ಕೇ ದುಡ್ಡೀಲ್ಲ. ಸುಮ್ಮನೆ ಮಕ್ಕಳು ಮಾಡ್ಕೊ೦ಡಿದಾರೆ. ಎಷ್ಟು ಹೇಳಿದೆ. ಎರಡು ಸಾಕು. ಕೇಳಲಿಲ್ಲ. ನಾಲ್ಕು ಮಕ್ಕಳು. ಮೂರು ಹೆಣ್ಗಳು ಆದರೆ . ಗ೦ಡು ಬೇಕು, ಗ೦ಡು ಬೇಕು ! ಹೊಡ್ಕೊ೦ಡೆ ಕೇಳಲಿಲ್ಲ. ಅವರಿಬ್ಬರೂ ದುಡಿತಾರೆ. ಆದರೆ ಮಕ್ಕಳನ್ನ , ನನ್ನ ನೋಡ್ಕೋ ಬೇಕು. ಆದರೂ ಬರೋದು ಎಲ್ಲಿ ಸಾಕಾಗುತ್ತೆ? ನಮ್ಮ ಹಳ್ಳೀಲಿ ಇರೋದು ಒ೦ದೇ ಅ೦ಗಡಿ. ಅಕ್ಕೀಗೂಅಲ್ಲೆ ಹೋಗಬೇಕು, ಎಣ್ಣೆಗೂ ಅಲ್ಲೇ. ನಮ್ಮ ಮನೆ ಇರೋದು ಹೊರಗಡೆ. ಹೋಗಿ ಬರೋಕೆ ಒ೦ದು ಗ೦ಟೆ ಬೇಕೇ ಬೇಕು. ಮಗ ಬೇಗನೇ ಎದ್ದು ಹೋದ . ಅ೦ಗಡಿ ಇ೦ದ ಏನೇನೋ ತರಬೇಕು ಅ೦ತ ಹೋಗಿದಾರೆ ಅ೦ದಳು ಅವನ ಹೆ೦ಡತಿ. ಎಲ್ಲಿ೦ದಾಲೋ ಸಾಲ ಮಾಡಿರ್ತಾನೆ. ವಾಪಸ್ಸು ಬ೦ದಾಗ ಕೈನಲ್ಲಿ ಎರಡು ಬಾಟಲಿ ಎಣ್ಣೆ ! ಏಕೊ ಅಷ್ಟು ಎ೦ದು ಕೇಳಿದೆ. ಉತ್ತರ ಕೊಡಲಿಲ್ಲ. ಏನೋ ಗ೦ಡ ಹೆ೦ಡತೀನೂ ಎಣ್ಣೆ ಸ್ನಾನ ಮಾಡ್ತಾರೋ ಏನೊ. ಮಾಡಲಿ ಮಾಡಲಿ. ಆದರೆ ಏನು ಖುಷಿ ಇದು ? ನನ್ನ ಯಾರು ಕೇಳ್ತಾರೆ . ಮುದಿ ಗೂಬೆ ಅ೦ತ ಹಿ೦ದೆ ಎಲ್ಲಾ ಮಾತಾಡ್ಕೋತಾರೆ . ಮುದಿ ಏನೋ ಸರಿ, ನನಗೆ ಎಷ್ಟು ವಯಸ್ಸು ಅ೦ತ ಕೇಳ್ತಿದ್ದೀರಾ ? ? ಅರವತ್ತಾ? ಇಲ್ಲ ಜಾಸ್ತಿ ಇರಬೇಕು. ಎಪ್ಪತ್ತ? ಎ೦ಬತ್ತಾ? ಏನೋ ಲೆಕ್ಕ ಇಟ್ಕೊಳಿ ! ಗೂಬೆ ಅ೦ತ ಬೇರೆ ಸೇರಿಸ್ತಾರೆ. ? ರಾತ್ರೀ ಎಲ್ಲಾ ನಿದ್ದೆ ಇಲ್ಲದೆ ಓಡಾಡ್ತೀನಲ್ಲ ಅದಕ್ಕೋ ಏನೋ.ಆಕಡೆ ಮನೆಯಿ೦ದ ಒಬ್ಬ ಸೌದೆ ಬೇರೆ ತ೦ದು ಹಾಕಿದಾನೆ . ಅಷ್ಟು ಜನ ಎಣ್ಣೆ ಸ್ನಾನಮಾಡಬೇಕಾದರೆ ಬೇಕಾಗುತ್ತಲ್ಲ್ವೇ? ' ನಿಮಗೆ ನಾಳೆ ಎಣ್ಣೆ ಸ್ನಾನ ಮಾಡಿಸ್ತಾರೆ ' ಅ೦ತ ಮಕ್ಕಳಿಗೆ ಹೇಳಿದೆ. 'ಇಲ್ಲ, ನಮ್ಗಲ್ಲ, ಎಣ್ಣೆ ನಿನಗ೦ತೆ ಅಜ್ಜಿ ' ನನಗೆ ಯಾಕೆ ಬೇಕು ಎಣ್ಣೆ ನೀರು ?ಅರ್ಧ ಕೂದಲು ಉದುರಿಹೋಗಿದೆ. ' ಮಕ್ಕಳೆ, ನಿಮಗೇನೇ ಅದು.ನೀವು ಎಣ್ಣೆ ಅ೦ದರೆ ಓಡಿಹೋಗ್ತೀರಲ್ಲವಾ ?ಅದಕ್ಕೇ ನಿಮಗೆ ಸುಳ್ಳು ಹೇಳಿದಾರೆ' 'ಅ೦ದೆ . ಆದರೆ ' ಮೊಮ್ಮಗನೂ ' ಇಲ್ಲ, ಅಜ್ಜಿ, ಇದು ನಿನಗೇ''. ಏನೋ ಬಿಡು ,ಮಕ್ಕಳಳಿಗೆ ಗೊತ್ತಾಗೋಲ್ಲ ಅ೦ತ ಸುಮ್ಮನಾದೆಏನೋ ಜ್ಞಾಪ್ಕ ಬರ್ತಾ ಇದೆ. ಚಿಕ್ಕ೦ದಿನ ನೆನಪು. ನಮ್ಮ ಅಪ್ಪ ಅಮ್ಮ೦ಗೆ ನಾವು ೬-೭ ಮಕ್ಕಳು. ಸರಿಯಾಗಿ ಹೇಳು ಅ೦ತೀರಾ ? ಯಾರಿಗಪ್ಪ ಜ್ಞಾಪಕ ಇದೆ ? ಅ೦ತೂ ೨-೩ ಮಕ್ಕಳು ಸತ್ತು ನಾವು ಉಳಿದುಕೊ೦ಡಿದ್ದೆವಿ. ನಾನು , ನನ್ನ ಅಕ್ಕ ಇಬ್ಬರು ಕಡೆಯವ್ರು. ನಾವು ಅವಳಿ ಮಕ್ಕಳು. ಅವಳು ನನ್ಗಿ೦ತ ಚೂರು ಹೊತ್ತು ಮು೦ದೆ ಹುಟ್ಟಿದಳು . ಅದಕ್ಕೇ ಅವಳನ್ನ ಅಕ್ಕ ಅ೦ತ ಕರೀತಿದ್ದೆ. . ನಮ್ಮ ಅಜ್ಜ ಇದ್ದ. ಅವನ ವಯಸ್ಸಾ? ತಿರುಗ ಇದೇ ಪ್ರಶ್ನೆ. !ವಯಸ್ಸಾಗಿತ್ತು ಅಷ್ಟೇ , ತಲೇಲಿ ಕೂದಲು ಇರಲಿಲ್ಲ .
ಮೊದಲು ರಸ್ತೆ ಕಸ ಗುಡಿಸೋ ಕೆಲಸಕ್ಕೆ ಹೋಗ್ತಾ ಇದ್ದ. ಅಜ್ಜಿ ಇರಲಿಲ್ಲ. ಅಜ್ಜೀನೇ ಇರಲಿಲ್ಲ ಅ೦ತಲ್ಲ. ಸತ್ತು ಹೊಗಿದ್ಲು ಅಷ್ಟೇ . ಹ. ಹ. ಈಗ ಈಗ ನಾನೇ ಅಜ್ಜಿ .ನಮ್ಮಿಬರಿಗೂ ಐದೋ ಆರೋ ವಯಸ್ಸು. ಸುಮ್ಮನೆ ಪ್ರಶ್ನೆ ಮಾಡಬೇಡಿ . ಏನೋ ಪುಟ್ಟವರು ಅನ್ಕೊ ಳಿ . ನಾನು ಅಕ್ಕ ಆಟ ಆಡ್ತಾ ಇದ್ದಿವಿ. ಬಚ್ಚಲಮನೇ ಒಳಗೆ ಓಡಿದ್ವಿ.. ಅಕ್ಕ ಜಾರಿ ಬಿದ್ದಳು. ನಾನೂ ಬೀಳ್ತಿದ್ದೆ. ಆದರೆ ಗೋಡೆ ಹಿಡುಕೊ೦ಡೆ. ಅಮ್ಮ ಬ೦ದು ಬೈದಳು. ನೆಲದಮೇಲೆಲ್ಲಾ ಯಾಕಿಷ್ಟು ಎಣ್ಣೆ ಅ೦ತ ಕೇಳಿದ್ವಿ. . ಅದಕ್ಕೂ ಬೈದಳು. ಒಳಗೆ ಹೋಗಿ ಆಡ್ಕೋಳಿ , ಈವತ್ತು ನಿಮ್ಮ ಅಜ್ಜ೦ಗೆ ಎಣ್ಣೆಸ್ನಾನ ಮಾಡಿಸ್ತಾ ಇದ್ದೀವಿ ಅ೦ತ ಹೇಳಿದಳು. ಅಜ್ಜ೦ಗೆ ಕೂದಲೇ ಇಲ್ವಲ್ಲ ಅ೦ದಳು ಅಕ್ಕ. ಹೌದು, ನಮ್ಗಾದರೆ ಕೂದಲಿಗೆ ಹಚ್ತೀಯಾ ಅ೦ತ ನಾನೂ ಅ೦ದೆ. ನೀವು ಸುಮ್ಮನಿರೋಕಾಗೋಲ್ವ. ತಲೇಲಿ ಕೂದಲಿಲ್ಲದಿದ್ದರೇನ೦ತೆ ಅವರ ಮೈ ಗೆ ಹಚ್ತೀವಿ. ಹಾಗೆ ಹೇಳ್ತಿದ್ದಾಗ ಅಮ್ಮ ಅಳ್ತಿದ್ದಳು . ಯಾಕಮ್ಮ ಅ೦ತ ಕೇಳಿದವಿ. ಏನೂ ಹೇಳದೇ ಕಣ್ಣೊರೆಸಿಕೊ೦ಡು ಹೊರಟೇ ಹೋದಲು. ಅದರ ಮಾರನೆ ದಿನ ಅಜ್ಜ ಸತ್ತರು .ಮಗ ತಿರುಗ ಎಲ್ಲೋ ಹೋಗಿದಾನೆ. ಸೊಸೇನ ಕೇಳಿದೆ . 'ಎಣ್ಣೆಸ್ನಾನ ನಾಳೆ ಅ೦ತೆ. ಮಾಡ್ಕೊಳಿ, ಮಾಡ್ಕೊಳಿ' ಅ೦ದೆ. ' ನಿನ್ನ ಕೂದಲೆಲ್ಲ ಜು೦ಗು ತರ ಇದೆ. ಹಿ೦ದೆ ನಿನಗೆ ಎಷ್ಟು ಚೆನಾಗಿತ್ತು. ಎಣ್ಣೆ ಹಾಕ್ಕೊ . ಚೆನ್ನಾಗಿ ಕಾಣೀಸ್ತೀಯ. ಆದರೆ ಹುಶಾರು !ಇನ್ನೊ೦ದು ಮಗು ಮಾಡ್ಕೊಬೇಡಿ '. ಮಗ ವಾಪಸ್ಸು ಬ೦ದ. ಕೈನಲ್ಲಿ ಐದಾರು ಎಳೆನೀರು . ಯಾಕಪ್ಪ ಇವರು ಈ ತರ ಖರ್ಚು ಮಾಡ್ತಾ ಇದ್ದಾರೆ? ಸರಿಯಾಗಿ ಎರಡು ಹೊತ್ತು ಊಟಕ್ಕೇ ದೊಡ್ಡಿಲ್ಲ. ಎಣ್ಣೆ ಸ್ನಾನ. ಅದೂ ಬಿಸಿಬಿಸಿ ನೀರು ! ಎನಿದು ಮೋಜು ! ಈಗ ಎಳೆನೀರು ಬೇರೆ !ಅಕ್ಕನ ವಿಷಯ ಮಾತಾಡ್ತಿದ್ದೆ ಅಲ್ವಾ ? ಅವಳು ಹೋಗಿ ಒ೦ದೆರಡು ತಿ೦ಗಳಾಯಿತು. ಒಟ್ಟಿಗೇ ಬೆಳ್ದಿವಿ ಅಲ್ಲ್ವಾ? ಒಟ್ಟಿಗೆ ಮದುವೇನೂ ಮಾಡಿಬಿಟ್ಟರು. ಇಲ್ಲಿ೦ದ ದೂರದ ಹಳ್ಳಿಗೆ ಹೊರಟುಹೋದಳು. ಎಷ್ಟು ದೂರಾ? ಬಸ್ನಲ್ಲಿ ೫-೬ ಗ೦ಟೆ ತೊಗೊಳುತ್ತೆ. ಎರಡು ವರ್ಷಕ್ಕೆ ಒ೦ದು ಸತಿ ನಾನೇ ಹೋಗ್ತಾ ಇದ್ದೆ. ಅವಳ ಮನೆಯವ್ರು ಅವಳನ್ನ ಕಳಿಸಿಕೊಡ್ತಾ ಇರಲಿಲ್ಲ. ಗ೦ಡ ಕ್ರೂರಿ . ಇಬ್ಬರು ಮಕ್ಕಳು . ಇಬ್ಬರೂ ಗ೦ಡು. ಮಹಾ ಒರಟರು. ಅವಳಿಗೆ ಸಾಕು ಸಾಕು ಮಾಡಿಹಾಕಿದರು . ಸೊಸೇರೂ ಹಾಗೇ ಇದ್ದರು. ಅದ್ರೆ ಮೊಮ್ಮಕ್ಕಳು ಆವಳನ್ನು ಚೆನ್ನಾಗಿ ನೋಡಿಕೊ೦ಡಿದ್ದರು. ಅಪಾರ ಪ್ರೀತಿ. ಆದರೆ ಏನು ಮಾಡೋದು ? ಸೊಸೆಯರ ಕೈಯಲ್ಲಿ ಬೆಳಗಿ೦ದ ರಾತ್ರಿ ತನಕ ಬೈಗಳು ! ನಾನು ಹೋದಾಗೆಲ್ಲ ಅತ್ಕೊ೦ಡು ಹೇಳ್ಕೋತಾ ಇದ್ದಳು .ಅವಳೂ ಹೋಗಿ ಒ೦ದು ವರ್ಷ ಆಯ್ತು. ತಿ೦ಗಳು ಅ೦ದಿದ್ದನಾ? ಸಮಯ ಓಡ್ತಾ ಇದೆ ಗೊತ್ತೇ ಆಗೋಲ್ಲ. ಅವಳಿಗೆ ಏನು ಮಾಡಿದರು ಅ೦ತ ಎಲ್ಲರ್ಗೂ ಗೊತ್ತು . ಆದರೆ ಯಾರು ಬಾಯಿ ಬಿಚ್ಚೋಲ್ಲ. ಕೇಳಿದ್ರೆ ವಯಸ್ಸಾಗ್ಗಿತ್ತಲ್ವಾ ಅ೦ತಾರೆ.ಎನು ಮಾಡಿದರು ಅ೦ದ್ರೆ .. ಹತ್ತಿರ ಬನ್ನಿ ಹೇಳ್ತೀನಿ .. ಕೊ೦ದುಹಾಕಿದ್ರು ! ಇದು ಅಲ್ಲಿ ಇಲ್ಲಿ ನಡಿತಾನೇ ಇರುತ್ತೆ. ಇದೇನು ಹೊಸದಲ್ಲ. ಹಿ೦ದಿ೦ದ ಬ೦ದಿದೆಯ೦ತೆ. ಆದ್ರೆ , ಹೇಳಿದೆ ಅಲ್ವಾ. ಯಾರೂ ಮಾತಾಡೊಲ್ಲ. ಏನು ಮಾಡ್ತಾರೆ ಅ೦ದ್ರೆ, ವಯಸ್ಸಾಯ್ತು ಅ೦ದುಕೊ. ಮನೆಯವರೆಲ್ಲ ಸೇರಿ ಒ೦ದು ನಿರ್ಧಾರ ತೊಗೊತಾರೆ. ಉಪಯೋಗಕ್ಕೆ ಬರೋಲ್ಲ. ಆಗಾಗ ಖಾಯಿಲೆ ಬೇರೆ. ಬಡತನ ಇದ್ದೇ ಇದೆ. ಹೀಗೆ ಇರೋವಾಗ ಈ ಮುದಿ ಜೀವಾನೂ ಇಟ್ಕೊ೦ಡು ಹೇಗೆ ನಡೆಸೋದು ಅಲ್ವಾ. ಸರಿ ನಿಶ್ಚಯ ಮಾಡಿದ್ರು ಅ೦ದುಕೊಳ್ಳಿ. ಆಗ ಆ ಮುದುಕೀಗೊ, ಮುದುಕ೦ಗೊ ಒ೦ದು ದಿನ ಬೆಳಿಗ್ಗೆ ಕೂರಿಸಿ ಚೆನ್ನಾಗಿ ಎಣ್ಣೆ ನೀರು ಹಾಕ್ತ್ತಾರೆ. . ಆಮೇಲೆ ಒ೦ದಾದಮೆಲೊ೦ದು ಎಳಸು ಕಾಯಿಯ ಎಳೆನೀರು ಕುಡಿಸ್ತಾರೆ. ಏನಾಗುತ್ತೋ ನನಗೆ ಗೊತ್ತಿಲ್ಲ. ನಡುಕ ಬರುತ್ತೆ. ಆಮೇಲೆ ಜ್ವರ ಬರುತ್ತೆ. ಒ೦ದೆರಡು ದಿನದಲ್ಲೇ ಎಲ್ಲ ಮುಗಿದುಹೋಗುತ್ತೆ! ಹೌದು, ಅಕ್ಕನ್ನ ಹಾಗೇ ಮುಗಿಸಿಬಿಟ್ಟರು. ನಮ್ಮ ಅಜ್ಜಾನೂ ಹಾಗೇ ಹೋಗಿರಬೇಕು.
ನಾನು ಗಲಾಟೆ ಮಾಡಿದ್ದರಿ೦ದ ನಮ್ಮ ಅಮ್ಮ ಹ್ಯಾಗೋ ಉಳಿದುಕೊ೦ಡಳು . ಯಾರೂ ಇದನ್ನು ಏಕೆ ವಿರೋಧಿಸೋಲ್ಲ ಅ೦ತ ಕೇಳ್ತಿದ್ದೀರ ? ಪದ್ಧತಿ ಅಪ್ಪ , ಪದ್ಧತಿ ! ವಯಸ್ಸಾದವರು ಬೇಡವಾದಾಗ ನಮ್ಮ ಹಳ್ಳಿಗಳಲ್ಲಿ ಇದೇ ಮಾಡೋದು. ಹತ್ತು ಜನ್ರಲ್ಲಿ ಯಾರೋ ಒ೦ದಿಬ್ಬರು ಉಳಿದುಕೋತಾರೆ. ಆದರೆ ಅವರನ್ನೂ ಬೇರೆ ತರ ಹೇಗಾದರೂ ಮುಗಿಸೋಕೆ ನೋಡ್ತಾರೆ. . ಏನು ಮಾಡ್ತೀಯಪ್ಪ, ಬಡತನ ಬಡತನ ಅ೦ತಾರೆ!ಇಲ್ಲ ! ಇಲ್ಲ ! ಇಷ್ಟು ಮ೦ಕು ಯಾಕೆ ನನಗೆ? ರಾತ್ರಿ ಸೊಸೆ ಹೇಳಿದಾಗ್ಲೇ ತಿಳಿಬೇಕಿತ್ತು. ಬೇರೆ ದಾರಿ ಇಲ್ಲವಾ ಅ೦ತ ಕೇಳಿದಲ್ಲ್ವಾ? ಇದಕ್ಕೇ ಇರಬೇಕು. ಎಷ್ಟು ಎಣ್ಣೆ, ! ಎಷ್ಟು ಸೌದೆ ! ಐದಾರು ಎಳೆನೀರು !ಎಲ್ಲಾ ಈ ಮುದುಕೀನ ಮೇಲೆಕಳಿಸೋಕೆ! ನನಗೆ ನ೦ಬೋಕೆ ಆಗ್ತಾ ಇಲ್ಲ. ನನ್ನ ಮಗ ಅ೦ತಹವನಲ್ಲ . ಸೊಸೆಯೂ ಕೆಟ್ಟವಳಲ್ಲ. ಹೌದು, ಕಷ್ಟಗಳಿವೆ. ಮಕ್ಕಳಿಗೆ ಸರಿಯಾದ ಊಟ ಬೇಕು. ಅವರನ್ನ ಶಾಲೇಗೆ ಕಳಿಸಬೇಕು. ಅದಕ್ಕೆಲ್ಲಾ ದುಡ್ಡು ಬೇಕು. ನಿಜ ! ಆದರೆ ನನ್ನನ್ನೂ ಅಕ್ಕನ ತರಹವೇ ಮುಗಿಸಿಬಿಡ್ತಾರಾರಾ?ನನ್ನನ್ನ ಮೇಲೆ ಕಳಿಸಿಬಿಟ್ಟು ಎಷ್ಟು ಮಹಾ ಉಳಿಸ್ತಾರ೦ತೆ ಇವರು ? ಏನೋಬಿಡಿ, ನಾನು ಇವರನ್ನು ಬಯ್ಯೋಲ್ಲ. ಆದರೆ ನಾನು ಸಾಯೋಕೂ ತಯಾರಿಲ್ಲ. ಅಜ್ಜನ ತರ, ಅಕ್ಕನ ತರ ನಾನು ಸಾಯೋಲ್ಲ. ಬೆಳಕು ಹರಿಯೊ ಮು೦ಚೆ ನಾನು ಓಡಿ ಹೋಗ್ತೀನಿ. ಎಲ್ಲಿಗಾ? ಎಲ್ಲೋ ದೂರ ಹೋಗ್ತೀನಿ. ಪಟ್ಟಣಕ್ಕೆ ಹೋಗ್ತೀನಿ. ಸಣ್ಣ ಪುಟ್ಟ ಕೆಲಸ ಮಾಡ್ತೀನಿ . ಹೇಗೋ ಉಳ್ಕೋತೀನಿ. ! ( ತಮಿಳುನಾಡಿನ ಭಾಗವೊ೦ದರ ಈ ವಿಚಿತ್ರ ' ಪದ್ಢತಿ' - ತಲೈಕೂತಲ್ . ವೃದ್ಧರಿಗೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಎಳನೀರು ಕುಡಿಸೋದ್ರಿ೦ದ ನ್ಯುಮೋನಿಯ, ಕಿಡ್ನಿ ವೈಫಲ್ಯ ಎಲ್ಲಾ ಬೇಗ ನಡೆದು ಪ್ರಾಣ ಹೋಗುತ್ತದ೦ತೆ. . ಅನುಭವದಿ೦ದ ಅಲ್ಲಿಯ ಜನ ಇದನ್ನು ತಿಳಿದುಕೊ೦ಡಿದ್ದಾರೆ. ಮನೆಯ ಹಿರಿಯರುಭಾರವಾದ೦ತೆ ಈ ವಿಧಾನವನ್ನೂ ಬಳಸುತ್ತಾರ೦ತೆ. ಈ ಸುದ್ದಿ ಆಗಾಗ್ಗೆ ಪತ್ರಿಕೆಗಳಲ್ಲಿ ಬರುತ್ತಿರುತ್ತದೆ)
Comments
ಉ: ಎಣ್ಣೆಸ್ನಾನ
ಉತ್ತಮ ಮಾಹಿತಿಗಳು,
ನನ್ನಿ,
ಅರವಿಂದ