ಎತ್ತಿ ಬಾ ಮತ್ತೆ ಅವತಾರವ....

ಎತ್ತಿ ಬಾ ಮತ್ತೆ ಅವತಾರವ....

 

ಈ ದೇಶ ಉದ್ದಾರ ಆಗೋಲ್ಲ...! ಜಗತ್ತಿನಲ್ಲಿ ಏನೇ ಆದರೂ, ಮನುಷ್ಯ ಮಾತ್ರ ತಾನು ಬುದ್ದಿ ಕಲಿಯೋ ಯಾವ ಲಕ್ಷಣನೂ ತೋರಿಸ್ತಿಲ್ಲ... ನಡುದಾರಿಯಲ್ಲಿ ನಿಂತುಕೊಂಡು ಹಗಲು ದರೋಡೆ ಮಾಡ್ತಿದ್ರೂ, ವಿರೋದವಾಗಿ ಏಳ್ತಾ ಇರೋ ಯಾವ ದನಿಯೂ ಕೇಳುಗನ ಹತ್ತಿರ ಸಹ ಸುಳಿತಾ ಇಲ್ಲ.. ಸಾಯೋವಾಗ ಜೊತೆಗೆ ಹೊತ್ಕೊಂಡು ಹೋಗೋದು ನಾವೇ ಕಂಡು ಹಿಡಿದ 'ಶೂನ್ಯ'ವನ್ನಾ ಅಂತ ತಿಳಿದಿದ್ದರೂ, ಕೆಲವರ ಆಸೆಗಳಿಗೆ ಮಾತ್ರ ಮಿತಿ ಎಂಬುದು ಇಲ್ವೇ ಇಲ್ಲ. ತಾನೇ ತನ್ನೊಳಿತಿಗೆ ಸಂಶೋಧಿಸಿದ ಯಾವ ಆವಿಷ್ಕಾರಗಳೂ, ಆಟಂ ಬಾಂಬ್ ಗಳೂ, ತನ್ನೊಳಗಿನ ನೀಚ ಬುದ್ದಿಯನ್ನ ಸುಟ್ಟಿ ಹಾಕ್ತಾ ಇಲ್ಲ.. ಸಮಾಜದಲ್ಲಿ ಆಗ್ತಾ ಇರೋ ಪ್ರತಿ ಏರುಪೇರನ್ನ ಸರಿಪಡಿಸಲು ದೇವರು ಅವತಾರ ಎತ್ತಿ ಬರ್ತಾನೆ ಅಂತ ನಂಬ್ಕೊಂಡು ಕಾಯೋ ಜನ ಇರೋ ತನಕ ಈ ದೇಶ ಉದ್ದಾರ ಆಗೋಲ್ಲಾ... ಖಂಡಿತವಾಗಲೂ ಆಗೋಲ್ಲಾ...

         
        ಒಂದು ಮಗು ಹುಟ್ಟಿದಾಗ ಮಾಡಿಸೋ ಅದರ Birth Certificate ಇಂದ ಹಿಡಿದು, ಸತ್ತಾಗಿನ Death Certificate ವರೆಗೂ.., ಗಾಡಿ ಓಡಿಸೋಕೆ ಇರೋ D.L (Driving License) ಇಂದ ಹಿಡಿದು, ಓದಿಸೋಕೆ ಇರೋ ನಮ್ಮ "University (ವಿಶ್ವವಿದ್ಯಾನಿಲಯ)" ವರೆಗೂ.., ಪ್ರತಿಯೊಂದೂ ನಿಮಗೆ ಸುಲಭದಲ್ಲಿ ದಕ್ಕಬೇಕು ಅಂದ್ರೆ ನಿಮ್ಮಲ್ಲಿ Vitamin-M ಇರಲೇಬೇಕು! ಭಾರತದಲ್ಲಿ ಒಂದು ವ್ಯವಹಾರ (Bussiness)ಕ್ಕೆ ಕೈ ಹಾಕಬೇಕು ಅಂದ್ರೆ ಕೇವಲ ಒಂದು ಒಳ್ಳೆಯ ಯೋಚನೆಯ ಯೋಜನೆ ಇದ್ರೆ ಸಾಲದು..! ವಿಳಾಸ ಇಲ್ಲದೇ ಇರೋ ಒಂದು ತುಂಬು ನೋಟುಗಳ ಎನ್ವೆಲೋಪ್ (Envelop) ಕೂಡಾ ಬೇಕು- ಲಂಚ!. ಆಗ ಮಾತ್ರ ಯಾವುದೇ ತೊಂದರೆ ಇಲ್ಲದೆ ಪರವಾನಗಿ ಎನ್ನೋದು ಸಿಕ್ಕಿಬಿಡತ್ತೆ ನಿಮಗೆ. ಭಾರತದಲ್ಲಿನ ಭ್ರಷ್ಟಾಚಾರದ ತೀವ್ರತೆ ಬಗ್ಗೆ ಗಮನ ಸೆಳೆವಂತಹ ಒಂದು ಕಥೆಯನ್ನ ಅಗಸ್ಟ್ 1997 ರಲ್ಲೇ Hinduism Today ನಲ್ಲಿ ಪ್ರಕಟಗೊಂಡ "Bribery in India" ಎಂಬ ಲೇಖನದಲ್ಲಿ ಲೇಖಕ ಹೇಳ್ತಾನೆ.
      ಒಬ್ಬ Income Tax Commissioner, ಉದ್ಯಮಿಯಾದ ತನ್ನ ಗೆಳೆಯನ ತೆರಿಗೆ ಪಾವತಿಯ ವಿಚಾರವಾಗಿ ಸಲಹೆ ನೀಡುತ್ತಿರುತ್ತಾನೆ. ಹಾಗಿದ್ದಾಗ ಅವನು ತನ್ನ ಗೆಳೆಯ 1,00,000/- ರೂ ಗಳನ್ನ ನಾಯಿಗಾಗಿ ವೆಚ್ಚ (Dog Account) ಮಾಡಿದನ್ನ ಕಂಡು ಆಶ್ಚರ್ಯಗೊಳ್ಳುತ್ತಾನೆ. ಇರುವ ನಾಲ್ಕು ನಾಯಿಗಳಿಗಾಗಿ ಒಂದು ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿದ ರೀತಿಯನ್ನ ಕೇಳಲಾಗಿ, "ಅಯ್ಯೋ, ನನ್ನ ನಾಲ್ಕು ನಾಯಿಗಳ ಹೊರತಾಗಿ, ನಾನು ಕಡೇ ಪಕ್ಷ 50 ನಾಯಿಗಳನ್ನ ಉದ್ಯಮದ ಒಳಿತಿಗಾಗಿ ಸಾಕಬೇಕು. ಬೇರೆ ಬೇರೆ ಸರ್ಕಾರಿ ಅಧಿಕಾರಿಗಳಿಗೆ ಕೊಟ್ಟ ಲಂಚದ ಅಕೌಂಟ್ ನ ಯಾವ ಹೆಸರಲ್ಲಿ ತೋರಿಸೋದು ಗೆಳೆಯ??.. ಹಾಗಾಗಿ ಅವುಗಳನ್ನ Dog Account ನಲ್ಲಿ ತೋರಿಸೋದು ಇದಕ್ಕಾಗಿ ನಾನು ಕಂಡುಕೊಂಡ ಪರಿಹಾರ" ಅಂತ ಹೇಳ್ತಾನೆ... ಹೇಗಿದೆ ನೋಡಿ...!!?
ಚಿತ್ರ ಕೃಪೆ: http://gettwicetheresults.com/tag/nbsp/
          
              ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಕೇಳಲಾಗುತ್ತಿರುವ ಲಂಚದಲ್ಲಿ 91% ಡಿಮಾಂಡ್ ಮಾಡುತ್ತಿರುವವರು ಸರ್ಕಾರಿ ನೌಕರರು. ಇದರಲ್ಲಿ ಅರ್ಧದಷ್ಟು ಮಂದಿ ಲಂಚ ಪಡೆಯುತ್ತಿರುವುದು ಸರಿಯಾದ ಸಮಯದಲ್ಲಿ ನಮ್ಮ ಕೆಲಸ ಮಾಡಿ ಕೊಡುವುದಕ್ಕೆ..!. ಎಂತಹ ವಿಪರ್ಯಾಸ ಇದು...? ಪ್ರತಿಯೊಂದು ಸವಲತ್ತುಗಳೂ, ತಿಂಗಳು ತಿಂಗಳು ತಪ್ಪದೇ ಬರೋ ಸಂಬಳ, ಹೆಚ್ಚು-ಕಮ್ಮಿ ವರ್ಷ ಪೂರ್ತಿ ಸಾಕಾಗೋ ಅಷ್ಟು extra ರಜಗಳು... ಇಷ್ಟೆಲ್ಲಾ ಇದ್ದು ಕೊಟ್ಟ ಕಾಸಿಗೆ (ಸಂಬಳ, ಲಂಚ ಅಲ್ಲ...!) ಪ್ರಾಮಾಣಿಕವಾಗಿ ಕೆಲಸ ಮಾಡೋ ಅಂತವರು ಎಲ್ಲೋ ಒಂದಿಬ್ಬರು ಬೆರಳೆಣಿಕೆಗೂ ಸಿಗದೇ ಹೋಗ್ತಾರೆ. ಈ ತರ ಲಂಚಾನ expect ಮಾಡೋ ಜನರಲ್ಲಿ ರಾಜಕಾರಣಿಗಳು ಮತ್ತು ಅವರ ಸಹವರ್ತಿಗಳು, ಪೋಲಿಸ್/ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, Passport , DL ತರಹದ document ಮಾಡಿಸಿ ಕೊಡೋಕೆ ಅಂತ ಹುಟ್ಟಿಕೊಂಡಿರೋ ಮಧ್ಯವರ್ತಿ(agency) ಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿರೋ ಅತೀ ಬುದ್ದಿವಂತರೂ ಸೇರಿದಾರೆ ಅಂತ ಯಾರಿಗೂ ಹೇಳಿ ತಿಳಿಸೋ ಅವಶ್ಯಕತೆ ಇಲ್ಲ ಅನ್ಸೊತ್ತೆ. ಎಷ್ಟರ ಮಟ್ಟಿಗೆ ಇವರುಗಳು ತಮ್ಮ ಕಿಸೆಗಳಿಗೆ ಕಂಡವರ ಕಾಸು ಇಳಿಸಿಕೊಳ್ಳುತ್ತಾರೆ ಅಂದರೆ ಅವರ ಈ outside income, ಸಂಬಳಕ್ಕಿಂತಾ ಎಷ್ಟೋ ಶೇಕಡಾ ಹೆಚ್ಚಿರುತ್ತದೆ. ಇಂತಹ ಕೆಲಸಕ್ಕೆ ಸೇರಿಕೊಳ್ಳಲು ಇರೋ ಬೇಡಿಕೆಗಳೂ ಅಷ್ಟೇ. ಕೆಲಸ ನೀಡೋಕೆ ಲಕ್ಷ offer ಮಾಡೋನೊಬ್ಬ!., ಕೇಳಿದಷ್ಟು ಕಾಸು ಕೊಟ್ಟು ಬರುವವನೊಬ್ಬ!. ಆತನೋ, ತಾ ಕೊಟ್ಟ ಲಂಚದ ಹಣವನ್ನಾ ಬಡ್ಡಿ ಸಮೇತ ಲಂಚದ ಹೆಸರಲ್ಲೇ ಪಡೆದು, ಲೆಕ್ಕ ಚುಕ್ತಾ ಆಯ್ತು ಅಂತ ಹೇಳಿ ಪಾಪ ಕಳಿದುಕೊಳ್ಳೋಕೆ ವರ್ಷ ವರ್ಷ ತಿರುಪತಿಗೆ ಮುಡಿ ಹರಕೆ ನೀಡುತ್ತಾನೆ. ಮಾಡು (ಮೇಲ್ಚಾವಣಿ) ಸೋರುತಿರೋ ಮನೆಯಲ್ಲಿರೋ ಒಬ್ಬ ಬಡಪಾಯಿ ಕೂಡಾ ಆತನ ಕಣ್ಣಿಗೆ ಹಣ ಬಿಡೋ ಮರವಾಗಿ ಕಾಣ್ತಾನೆ. ನಿನ್ನ ಬೇರು ಒಣಗಿದರೂ ಪರವಾಗಿಲ್ಲ ನನಗೆ ಹಣ್ಣು ಕೊಡೊ ಮಹರಾಯ ಅಂತಾನೆ....
ಕೃಪೆ: http://trak.in/tags/business/2009/06/30/india-corruption-bribery-report
     
     ಎಲ್ಲರಿಗೂ ಈ ಲಂಚದ ಬಿಸಿ ತಟ್ಟೋದಿಲ್ಲ. ಧನಿಕನಿಗೆ ಇದರಿಂದಾಗೋ ನಷ್ಟವೀನು ಇಲ್ಲ. ದುಡಿದರೆ ಮಾತ್ರ ಕೂಳು ಅನ್ನೋ ಪರಿಸ್ಥಿತಿಯಲ್ಲಿರೋ ಬಡವ/ಮದ್ಯಮವರ್ಗದ ಬಡಪಾಯಿ ಮಾತ್ರ ಅಣು ಜೀವಿ, ತೃಣ ಸಮಾನ.. ಏನೊಂದೂ ಪಡಿಯೋಕೂ ಹರ ಸಾಹಸ ಪಡೋದೇ ಅವನ ಜೀವನ..
         
           ಬುದ್ದಿವಂತರನ್ನ ಹುಟ್ಟಿ ಹಾಕೋಕೆ ಸರ್ಕಾರ ಎದ್ದು ನಿಲ್ಲಿಸಿರೋ ನಮ್ಮ ಅತ್ಯುನ್ನತ University ಗಳಲ್ಲಿ ಎಂತೆಂತವರು ಇರಬಹುದು ಅನ್ನೋ ಬಗ್ಗೆ ಕೆಲವೊಂದು ಸಂಗತಿ ಹೇಳಲೇಬೇಕು. ಮಕ್ಕಳಿಗೆ/ವಿದ್ಯಾರ್ಥಿಗಳಿಗೆ Percentage ಲೆಕ್ಕದಲ್ಲಿ ಮಾರ್ಕ್ಸ್ ಕೊಡೋರು ಮಾಡ್ತಿರೋ Percentage ದಂಧೆ ಇರಬಹುದು, Transfer Certificate (TC) ಪಡಿಯೋದಕ್ಕೆ ಹಣ transfer ಮಾಡು ಅಂತ ಹೇಳೋ ಅದ್ಯಾಪಕೇತರ ನೌಕರರಿರಬಹುದು, Development Section - Finance Section ಅಂದ್ಕೊಂಡು ಒಂದೊಂದು bill/letter ನ pass ಮಾಡೋಕೆ 'ಕಾಯಿಸಿ-ಕಾಯಿಸೋ' ತಂತ್ರ ಮಾಡೋ SDA-FDA ಗಳಿರಬಹುದು.., ವಿದ್ಯಾರ್ಥಿಗಳಿಗೆ ಬರುವ OBC, SC-ST Fellowship ಗಳಲ್ಲೂ ತಮ್ಮ ಲಾಭನ ಕೇಳೋ ಅಧಿಕಾರಿಗಳಿರಬಹುದು... ಬಂದಿರೋ refundable ಹಣದ Cheque ಬಂದೇ ಇಲ್ಲ ಅಂತ ಕೈ ಬಿಸಿ ಮಾಡದ ವಿದ್ಯಾರ್ಥಿಗಳಿಗೆ ಹೇಳಿ ಅವರು ತಮ್ಮ ಪ್ರಯತ್ನ ಕೈ ಬಿಟ್ಟಾಗ ತಾವೇ ಸಹಿ ಮಾಡಿ ಸ್ವೀಕರಿಸೋ ಕೀ(ಳು)ಲಾಡಿ ಗಳಿರಬಹುದು..ಇಷ್ಟೇ ಯಾಕೆ ವಿದ್ಯಾರ್ಥಿಗಳ ಹೆಸರಲ್ಲಿ ತಾವೇ scholarships ಗೆ apply ಮಾಡಿ ಅವನಿಗೆ ತಿಳಿಯದೇ ಅವನ ಪಾಲಿನ ಅವಕಾಶವನ್ನ ಬಳಸಿಕೊಳ್ಳುವ ನೀಚ ನಿಸ್ಸೀಮರೂ ನಮ್ಮೊಳಗೇ, ನಮ್ಮೊಡನೆ ಇರಬಹುದು... ಎಲ್ಲೆಡೆ ತೂತು ಬಿಟ್ಟು ನೀರು ಹೋದ ಜಾಗವನ್ನ ನೆಪ ಮಾತ್ರಕ್ಕೆ ಹುಡುಕೋ ದೊಡ್ಡವರೂ ಸಿಗಬಹುದು...?? 
          ಇದಕ್ಕೆಲ್ಲಾ ಕೊನೆ ಎಂಬುದು ಇಲ್ವಾ? ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯಾನೇ ಇಲ್ವಾ? ಇಂತವರನ್ನು ಸುಮ್ಮನೆ ಬಿಟ್ಟರೆ ತಾಯಿ ಭಾರತ ಮಾತೆಗೂ ತುಂಡು ಬಟ್ಟೆ ಕೊಟ್ಟು ನಿಲ್ಲಿಸದೆ ಬಿಡ್ತಾರ ಇವರು?? ಈ ಶಾಪದ ಪರಿಹಾರಕ್ಕೆ ಕೆಲವು ನನ್ನೊಳಗಿನ ವಿಚಾರಗಳು ಹೀಗಿದೆ..
.
  1. ಆದಷ್ಟೂ ಸರ್ಕಾರಿ ಕಛೇರಿಗಳು ಹಾಗೂ ಜನತೆಯ ನಡುವಿನ ಮದ್ಯವರ್ತಿಗಳನ್ನ ತಡೆಯುವುದು.
  2. ಖಾಸಗಿ ವಲಯಗಳಲ್ಲಿನಂತೆ ಪ್ರತಿ ಸಿಬ್ಬಂದಿಗಳಿಗೂ ದಿನದ ಗುರಿಯನ್ನ(Target) ನೀಡುವುದಲ್ಲದೆ, ತನ್ನಲ್ಲಿ ಬಂದ ದಾಖಲೆಯನ್ನು 24 ಗಂಟೆಯೊಳಗೆ ಪರಾಮರ್ಶಿಸಿ ಹಿಂದಿರುಗಿಸಬೇಕು ಅಥವಾ ಮುಂದಿನ ಅವಶ್ಯ ಕಾರ್ಯಗಳಿಗೆ ಕಳಿಸಬೇಕು ಎನ್ನುವಂತಹ ನಿಲುವಳಿಗಳನ್ನ ಹೊರಡಿಸುವುದು.
  3. ಸರ್ಕಾರಿ ನೌಕರರ ವೇತನ ಭತ್ಯೆಯನ್ನು ಇರುವ ಅವಕಾಶಗಳ ಆಡಿಯಲ್ಲಿ ಹೆಚ್ಚಿಸುವುದು. 
  4. ಭ್ರಷ್ಟಾಚಾರದ ವಿರುದ್ದ ಕಟ್ಟು ನಿಟ್ಟಾದ ಕಾನೂನು ರೀತಿಯ ಕ್ರಮಗಳನ್ನ ಜರುಗಿಸುವುದು.
  5. ಭ್ರಷ್ಟಾಚಾರದ ಎದಿರು ಹೋರಾಡುತ್ತಿರೋ ಲೋಕಾಯುಕ್ತರಿಗೆ ಚೌಕಾಸಿ ಮಾಡದೆ ನಿಭಂದನಾ ಮುಕ್ತ ಅಧಿಕಾರ ಕೊಡುವುದು.
  6. ಬಹುಮುಖ್ಯವಾಗಿ ಲಂಚಮುಕ್ತ ಭಾರತದ ನಿರ್ಮಾಣಕ್ಕೆ ಪ್ರತಿಯೋರ್ವನೂ ತಾನು ಸಿದ್ದನಾಗಿ ನಿಂತು, ಹೋರಾಡೋ ಮನೋಭಾವನೆ ಬೆಳಸಿಕೊಳ್ಳುವುದು.


ಇಂತಹ ಪಿಡುಗಿನ ಎದುರು ಸೆಣಸಾಡೋದು ಸಂತೋಷ್ ಹೆಗಡೆಯವರಂತಹ ಬರಿಯ  ನಿಷ್ಟಾವಂತ ಲೋಕಾಯುಕ್ತರ ಕೆಲಸ ಮಾತ್ರವಲ್ಲ.. ಯುವಶಕ್ತಿ ಮನಸು ಮಾಡಿದರೆ ಆಗದ  ಕೆಲಸವೆಂಬುದಾವುದೂ ಇಲ್ಲ.  ಯಾವ ಕೃಷ್ಣನೂ ನಾವು ಹುಟ್ಟಿಹಾಕಿದ ಮುಳ್ಳಿನ ಮರವನ್ನ ಕಿತ್ತೆಸಿಯೋಕೆ ಅವತಾರ ಎತ್ತಿ ಬರಲಾರ. ಈ ಪರಿಯ ಸಮಸ್ಯೆಗೆ ನಮ್ಮನ್ನೇ ನಾವು ಎಚ್ಚರಿಸಿ, ಎಬ್ಬಿಸಿ, ಎದಿರು ನಿಂತರೆ ಮಾತ್ರ ಈ ಹೆಮ್ಮಾರಿಯ ಬುಡಕ್ಕೆ ಕೊಡಲಿ ಏಟು ಕೊಡಲು ಸಾದ್ಯ. ನವ ಭಾರತ ನಿರ್ಮಾಣದ ಹೊಸ ಕಾರ್ಯಕಲ್ಪಕ್ಕೆ ಜೊತೆ ಸೇರಿ ನಡೆವ ಪಣತೊಡುವ ಸಮಯ ಬಂದಿದೆ. ಹಾಗಾದಲ್ಲಿ ಮಾತ್ರ ಈ ಅಂಕಣದ ಮೊದಲ ಸಾಲು ಸುಳ್ಳಾಗಳು ಸಾದ್ಯ.... 

ಗಡಿಯೊಳಗಿನ ಸೈನಿಕರು ನಾವಾಗುವ...
ತಪ್ಪು ನಡೆ ಸಹಿಸದ ಸಿಡಿಲಾಗುವ...
ತಾಯಿ ಭರತೆಯ ನಗುವ ಉಳಿಸಲು,
ಎತ್ತೆತ್ತಿ ಬರುವ ಮತ್ತೆ ಅವತಾರವ... 

 

- ರೋಹಿತ್

Comments