ಎಥೆನಾಲ್ ಮಿಶ್ರಿತ ಪೆಟ್ರೋಲ್ ಭವಿಷ್ಯವೇನು?
ಪೆಟ್ರೋಲ್ ಹಾಗೂ ಡಿಸೆಲ್ ದರಗಳು ಗಗನಕ್ಕೇರುವ ಸಮಯದಲ್ಲಿ ಚರ್ಚೆಗೆ ಬಂದಿರುವ ಪ್ರಮುಖ ಸಂಗತಿಯೆಂದರೆ ಇವುಗಳಿಗೆ ಪರ್ಯಾಯೋಪಾಯಗಳೇನು? ಇಲೆಕ್ಟ್ರಿಕ್ (ವಿದ್ಯುತ್) ವಾಹನಗಳು, ಬಯೋ ಡಿಸೆಲ್ ಹಾಗೂ ಎಥೆನಾಲ್ ಮಿಶ್ರಿತ ಪೆಟ್ರೋಲ್. ಈಗಾಗಲೇ ಮಾರುಕಟ್ಟೆಯಲ್ಲಿ ಇಲೆಕ್ಟ್ರಿಕ್ ವಾಹನಗಳು ಓಡಾಟ ನಡೆಸುತ್ತಿವೆ. ಆದರೂ ಜನರಿಗೆ ಈ ವಾಹನದ ಮೇಲೆ ಪೂರ್ತಿಯಾಗಿ ನಂಬಿಕೆ ಬಂದಿಲ್ಲ. ಕಾರಣ ಅಲ್ಲಲ್ಲಿ ಚಾರ್ಚ್ ಮಾಡಲು ಇರಿಸಿದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿರುವುದು ಒಂದಾದರೆ, ವಾಹನಗಳನ್ನು ಚಾರ್ಚ್ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದು ಮತ್ತೊಂದು. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ಈಗಾಗಲೇ ಬಹಳಷ್ಟು ಮಾಹಿತಿಗಳು ಸಿಗಲಾರಂಭಿಸಿವೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಭವಿಷ್ಯದ ಇಂಧನದ ಕೊರತೆಯನ್ನು ನೀಗಿಸಬಹುದೇ? ಪರಿಸರದ ರಕ್ಷಣೆ ಸಾಧ್ಯವೇ? ಇದರ ಪರ್ಯಾಯ ಸಮಸ್ಯೆಗಳು ಏನಿರಬಹುದು ಎಂಬೆಲ್ಲಾ ವಿಚಾರಗಳ ಕಿರು ಮಾಹಿತಿ ಇಲ್ಲಿದೆ.
ಎಥೆನಾಲ್ ಎಂದರೇನು? ಎನ್ನುವುದು ಮೊದಲ ಪ್ರಶ್ನೆ. ಇದು ಜೈವಿಕ ಸಂಯುಕ್ತ ಇಥೈಲ್ ಆಲ್ಕೋಹಾಲ್ ಆಗಿದ್ದು ಇದನ್ನು ಬಯೋಮಾಸ್ ನಿಂದ ಉತ್ಪಾದಿಸಲಾಗುತ್ತದೆ. ಇದು ಗ್ಯಾಸೋಲೀನ್ ಗಿಂತಲೂ ಅಧಿಕ ಪ್ರಮಾಣದ ಆಕ್ಟೇನ್ ಸಂಖ್ಯೆಯನ್ನು ಹೊಂದಿದ್ದು, ಪೆಟ್ರೋಲ್ ಗೆ ಮಿಶ್ರ ಮಾಡಿದಾಗ ಅದರಲ್ಲಿನ ಆಕ್ಟೇನ್ ಸಂಖ್ಯೆಯನ್ನು ಸರಿದೂಗಿಸುತ್ತದೆ. ಈ ಕಾರಣದಿಂದ ಅಲ್ಪ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣವು ಪ್ರಯೋಜನಕಾರಿಯಾಗಿದೆ.
ಇತ್ತೀಚೆಗೆ, ವಿಶ್ವ ಪರಿಸರ ದಿನದಂದು ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಥೆನಾಲ್ ಹಾಗೂ ಪೆಟ್ರೋಲ್ ಮಿಶ್ರಿತ ಇಂಧನದ ಬಗ್ಗೆ ಪೂರಕ ಮಾತುಗಳನ್ನು ಆಡಿದ್ದಾರೆ. ಈ ಇಂಧನದಿಂದ ಪರಿಸರಕ್ಕೂ ಲಾಭವಿದೆ ಎಂದಿದ್ದಾರೆ. ಎಥೆನಾಲ್ ಮೊದಲೇ ತಿಳಿಸಿದಂತೆ ಒಂದು ಜೈವಿಕ ಇಂಧನವಾಗಿದೆ. ಅಂದರೆ ನಾವು ಸಾವಯವ ವಸ್ತುಗಳನ್ನು ಸಂಸ್ಕರಿಸುವ ಮೂಲಕ ಪಡೆಯಬಹುದಾದ ಇಂಧನವಾಗಿದೆ. ಭಾರತದಲ್ಲಿ ಎಥೆನಾಲ್ ಅನ್ನು ಪಡೆಯುವ ಪ್ರಮುಖ ವಸ್ತು ಎಂದರೆ ಕಬ್ಬು. ಕಬ್ಬಿನ ಹುದುಗುವಿಕೆ (Fermentation) ಪ್ರಕ್ರಿಯೆಯ ಮೂಲಕ ಎಥೆನಾಲ್ ಅನ್ನು ಪಡೆಯಲಾಗುತ್ತದೆ. ಈ ರೀತಿ ಪಡೆದುಕೊಂಡ ಎಥೆನಾಲ್ ನಲ್ಲಿ ಆಮ್ಲಜನಕದ ಅಂಶವು ಅಧಿಕವಾಗಿದ್ದು ವಾಹನಗಳ ಎಂಜಿನ್ ಗೆ ಸಂಪೂರ್ಣವಾಗಿ ಇಂಧನವನ್ನು ಸಂಯೋಜಿಸಲು ಪ್ರಯೋಜನವಾಗುತ್ತದೆ. ಈ ಕಾರಣದಿಂದಾಗಿ ಎಥೆನಾಲ್ ಅನ್ನು ವಿವಿಧ ಪ್ರಮಾಣದಲ್ಲಿ ಇಂಧನಗಳೊಂದಿಗೆ ಬೆರೆಸಬಹುದಾಗಿದೆ. ಹೀಗೆ ಬೆರೆಸಿ ವಾಹನವನ್ನು ಚಲಾಯಿಸುವಾಗ ವಾಹನವು ಹೊರಬಿಡುವ ಹೊಗೆಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ಇದೊಂದು ಸಸ್ಯಜನ್ಯ ಇಂಧನವಾಗಿರುವ ಕಾರಣ ನವೀಕರಿಸಬಹುದಾದ ಇಂಧನ ಎಂದು ಪರಿಗಣಿಸಬಹುದಾಗಿದೆ.
ನಾವು ಉಪಯೋಗಿಸುವ ಇತರೆ ಇಂಧನಗಳು ಪಳೆಯುಳಿಕೆಗಳ (Fossil) ನಿಧಾನಗತಿಯ ಭೌಗೋಳಿಕ ಪ್ರಕ್ರಿಯೆಯಿಂದಾಗಿ ಉತ್ಪಾದನೆಯಾಗುತ್ತವೆ. ಈ ಕಾರಣದಿಂದ ಇವುಗಳನ್ನು ಪಳೆಯುಳಿಕೆಗಳ ಇಂಧನವೆಂದು ಕರೆಯಲಾಗುತ್ತದೆ. ೨೦೧೪ರ ಸಮಯದಲ್ಲಿ ಭಾರತ ದೇಶದಲ್ಲಿ ಎಥೆನಾಲ್ ಅನ್ನು ಶೇ ೧.೫% ರಷ್ಟು ಮಾತ್ರ ಪೆಟ್ರೋಲ್ ಜೊತೆ ಮಿಶ್ರ ಮಾಡಲಾಗುತ್ತಿತ್ತು. ಕ್ರಮೇಣ ಪ್ರಯೋಗಗಳು ನಡೆದು ಈಗ ಈ ಪ್ರಮಾಣ ಸುಮಾರು ಶೇ. ೮.೫% ಕ್ಕೆ ತಲುಪಿದೆ. ಸಕ್ಕರೆಯನ್ನು ಹೆಚ್ಚಾಗಿ ಉತ್ಪಾದಿಸುವ ರಾಜ್ಯಗಳಿಂದ ಎಥೆನಾಲ್ ಅನ್ನು ಪಡೆಯಲು ಆ ರಾಜ್ಯಗಳಲ್ಲಿ ಎಥೆನಾಲ್ ಘಟಕಗಳನ್ನು ಪ್ರಾರಂಭಿಸುವ ಬಗ್ಗೆ ಪ್ರಧಾನಿಗಳು ಈ ಹಿಂದೆಯೇ ಉಲ್ಲೇಖ ಮಾಡಿದ್ದರು. ಅದೇ ರೀತಿ ಕೇವಲ ಕಬ್ಬು ಮಾತ್ರವಲ್ಲದೇ ಇತರೆ ಕೃಷಿ ತ್ಯಾಜ್ಯಗಳಿಂದಲೂ ಎಥೆನಾಲ್ ಉತ್ಪಾದನೆ ಮಾಡಬಹುದೇ ಎಂಬ ಬಗ್ಗೆಯೂ ಪ್ರಯೋಗಗಳು ನಡೆದಿವೆ. ೨೦೧೩-೧೪ರಲ್ಲಿ ದೇಶೀಯರಿಂದಲೇ ನಾವು ಸುಮಾರು ೩೮ ಕೋಟಿ ಲೀಟರ್ ಎಥೆನಾಲ್ ಅನ್ನು ಖರೀದಿ ಮಾಡಿದ್ದೆವು. ಈಗ ಆ ಖರೀದಿಯ ಸಂಖ್ಯೆ ಸುಮಾರು ೩೨೦ ಕೋಟಿ ಲೀಟರ್ ಗೆ ಏರಿಕೆಯಾಗಿದೆ. ಇದರಿಂದ ನಮಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಒಂದು ಲಾಭದಾಯಕ ಇಂಧನ ಎಂದು ತಿಳಿದು ಬರುತ್ತದೆ.
ಈ ಪ್ರಶ್ನೆ ಹುಟ್ಟಿಕೊಳ್ಳುವುದು ಈ ಮಿಶ್ರಣವನ್ನು ವಾಹನದಲ್ಲಿ ಬಳಸಲು ಅದರ ಇಂಜಿನ್ ಬದಲಾಯಿಸ ಬೇಕಾಗುತ್ತದೆಯೇ? ಎಂಬುದು. ಈಗ ಬಳಕೆಯಲ್ಲಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ಪೆಟ್ರೋಲ್ ವಾಹನಗಳು ಶೇ ೫ ರಿಂದ ೧೦ ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಿ ಚಲಾಯಿಸಬಹುದಾಗಿದೆ. ವಾಹನದ ತಯಾರಿಕಾ ಸಮಯದಲ್ಲೇ ಈ ಬಗ್ಗೆ ಯೋಚಿಸಲಾಗಿತ್ತು ಎನ್ನುತ್ತಾರೆ ಆಟೋಮೊಬೈಲ್ ಕಂಪೆನಿಗಳು. ಆದರೆ ಶೇ ೨೦ರಷ್ಟು ಎಥೆನಾಲ್ ಮಿಶ್ರಣ ಮಾಡುವುದಾದರೆ ವಾಹನದ ರಬ್ಬರ್, ಪ್ಲಾಸ್ಟಿಕ್ ಬಿಡಿಭಾಗಗಳನ್ನು ಹಾಗೂ ಎಂಜಿನ್ ಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಸರಕಾರವು ಭವಿಷ್ಯದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯನ್ನೇ ಮಾನ್ಯ ಮಾಡುವುದಾದರೆ ಅದಕ್ಕೆ ಸರಿಹೊಂದುವ ವಾಹನಗಳನ್ನು ತಯಾರಿಸಲು ವಾಹನ ತಯಾರಿಕಾ ಸಂಸ್ಥೆಗಳು ಸಿದ್ಧವಿದೆ. ಈಗಾಗಲೇ ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳು ಗರಿಷ್ಟ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುತ್ತಿವೆ. ಭಾರತವೂ ಮುಂದೊಂದು ದಿನ ಸ್ವಲ್ಪ ಪ್ರಮಾಣದಲ್ಲಾದರೂ ಎಥೆನಾಲ್ ಮಿಶ್ರಿತ ಇಂಧನ ಬಳಕೆಯನ್ನು ಕಡ್ಡಾಯ ಮಾಡಿಕೊಂಡರೆ ತಕ್ಕ ಮಟ್ಟಿಗೆ ಪರಿಸರ ಸಂರಕ್ಷಣೆಯೂ ಹಾಗೂ ಇಂಧನ ಕೊರತೆಯನ್ನೂ ಸರಿದೂಗಿಸಬಹುದಾಗಿದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ