ಎದೆಯಾಗಿನ ಮಾತು
ಈಗಾಗಲೇ 2021 ರಲ್ಲಿ."ಮರುಳನ ಶಾಯಿರಿ ಲೋಕ "ಎಂಬ ಶಾಯಿರಿ ಸಂಕಲನದ ಮೂಲಕ ಶಾಯಿರಿ ಕವಿಯಂದು ಹೆಸರಾದವರು ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು.ಅವರ "ಮರುಳನ ಶಾಯಿರಿ" ಲೋಕದ ಗುಂಗು ಇನ್ನು ತಲೆಯಿಂದ ಮಾಸದಿರುವಾಗಲೇ,ಈ ಕವಿ ಎರಡನೆಯ ಶಾಯಿರಿ ಸಂಕಲನವನ್ನು ಓದುಗರ ಎದೆಗೆ ಇತ್ತಿದ್ದಾರೆ.ಅವರು ಸದಾ ಶಾಯಿರಿಯನ್ನೇ ಉಸಿರಾಡಿಸುವದಕ್ಜೆ ಇದೊಂದು ನಿದರ್ಶನ. ಕನ್ನಡದಲ್ಲಿ ಶಾಂತರಸ, ಇಟಗಿ ಈರಣ್ಣ ,ಎಸ್ ಜಿ ಸ್ವಾಮಿ , ಅಸಾದುಲ್ಲಾ ಬೇಗ್,ಮೊದಲಾದ ಹಿರಿಯರಿಂದ ಬರೆಯಲು ಶುರು ಹಚ್ಚಿಕೊಂಡು ಈ ಕಾವ್ಯ ಪ್ರಕಾರ ದಲ್ಲಿ ನಂತರದಲ್ಲಿ ಶಹಾಪೂರದ ಡಾ ಗುರುರಾಜ ಅರಕೇರಿ, ಕೃಷ್ಣಮೂರ್ತಿ ಕುಲಕರ್ಣಿ,ಡಾ.ಸಿದ್ದರಾಮ ಹೊನ್ಕಲ್,,ಡಾ.ಮಲ್ಲಿನಾಥ ತಳವಾರ, ನೂರ್ ಅಹ್ಮದ ನಾಗನೂರ, ಮರುಳಸಿದ್ದಪ್ಪ ದೊಡಮನಿ, ಪರಮೇಶ್ವರಪ್ಪ ಕುದರಿ , ಮೊದಲಾದವರು ಶಾಯಿರಿ ಬರೆಯುತ್ತಿದ್ದಾರೆ.
"" ಪರ್ಶಿಯನ್ ಮತ್ತು ಅರೇಬಿಕ್ ಭಾಷೆಯಲ್ಲಿ ಉಗಮ ಗೊಂಡು ಉರ್ದು ಭಾಷೆಯಲ್ಲಿ ಹುಲುಸಾಗಿ ಬೆಳೆದು ನಿಂತ" (ಡಾ ಮಲ್ಲಿನಾಥ ತಳವಾರ ಅವರ ಮಾತು) ಈ ಕಾವ್ಯ ಪ್ರಕಾರವು ಕನ್ನಡದಲ್ಲಿಯೂ ತಕ್ಕಮಟ್ಟಿಗೆ ಬೆಳೆದಿರುವದಕ್ಕೆ ಮರುಳಸಿದ್ದಪ್ಪನವಂಥವರ ಸಂಕಲನಗಳು ಸಾಕ್ಷಿಯಾಗಿ ನಿಲ್ಲುವ ಕಾರ್ಯಮಾಡಿವೆ .ಮರುಳಸಿದ್ದಪ್ಪನವರು .ಈಗಾಗಲೇ ಕವನ ,ಹನಿಗವನ ಕವಿತೆ ಗಳನ್ನು ಬರೆದಿದ್ದರೂ ಅವರಿಗೆ ಈಗ ಶಾಯಿರಿ ಕಾವ್ಯವೇ ಉಸಿರಾಗಿದೆ.
ಹೆಸರೇ ಹೇಳುವಂತೆ ಇದು "ಎದೆಯಾಗಿನ ಮಾತು"" ಸರಿ. ೯೪ ಶಾಯಿರಿಗಳ ಗುಚ್ಛ. ಪ್ರೀತಿಯೊಂದನು ಬಿಟ್ಟು ಇಲ್ಲಿ ಬೇರೇನೂ ಸಿಗಲಾರದು ಅಪರೂಕ್ಕೊಮ್ಮೊಮ್ನೆ ಭಿನ್ನ ವಿಷಯಗಳು ಬಂದರೂ ಅವು ಇಲ್ಲವೆನ್ನುವಷ್ಟು ಕಡಿಮೆ.ತನಗೊಲಿದವಳ ರೂಪವರ್ಣನೆ,ಅವಳ ಪ್ರೀತಿಯ ವರ್ಣನೆ ,ಅವಳು ಕೋಪಗೊಂಡಾಗಿನ ಕೋಪ ವರ್ಣನೆ ,ಅಗಲಿದಾಗಿನ ವಿರಹ ವರ್ಣನೆ ಇವೇ ಮುಂದಾಗಿವೆ. ಅವಳ ದೇಹದ ಒಂದೊಂದು ಅಂಗವೂ ಅವನ ವರ್ಣನೆಗೆ ಮೀಸಲು ಕೂದಲು, ತುಟಿ ,ನಗೆ ಇವುಗಳ ಬಣ್ಣನೆಯೆ ಶಾಯಿರಿಗಳ ವಸ್ತು.." ಪ್ರೀತಿ ಅನ್ನು ಮಧು ಕುಡದಿನಿ, ಅದರ ನಿಶೆನ ಇಳಿಯಾಂಗಿಲ್ಲ" ಎನ್ನುವ ಕವಿ ಅದರ ನಶೆಯಲ್ಲಿಯೆ ಮುಳುಗಿದ್ದಾನೆ.,ಎಲ್ಲ ರೋಗಕ್ಕು ಪ್ರೀತಿಯೆ ಮದ್ದು ಎನ್ನುವ ನಂಬಿಗೆ ಅವನದು.
ನನ್ನ ಬ್ಯಾನಿಗೆ ಎಷ್ಟು ಔಷದ ಹಚ್ಚಿದರೂ
ಅದು ಮಾಯಂಗಿಲ್ಲ
ಪ್ರೀತಿ ಅನ್ನು ಔಷದ ಕುಡಸಿದರ
ಅದು ಹೊಳ್ಳಿ ಬರಂಗಿಲ್ಲ
ಎಂದು ಭದ್ರವಾಗಿ ನಂಬಿದ್ದಾನೆ. ಅವನಿಗೆ ಗೊತ್ತಾಗಿ ಹೋಗಿದೆ.ಪ್ರೀತಿ ಯಾರು ಈಜಿ ಮುಗಿಸಲಾರದ ಸಾಗರ ಎನ್ನುವದು..ಆದ್ದರಿಂದಲೆ ಕವಿ
ಪ್ರೀತಿ ಸಮುದ್ರದ ಆಳ
ಯಾರಿಗೂ ತಿಳಿಯಾಂಗಿಲ್ಲ
ಅದರಾಗ ಮುಳುಗಿದ್ರ
ಮ್ಯಾಲೇಳುದು ಸಾಧ್ಯನ ಇಲ್ಲ
ಎಂದು ಸಾರುತ್ತಾನೆ. ಮುಳುಗಿದವನನ್ನು ಉದ್ದರಿಸುವ ಪ್ರೀತಿಯೆ ಒಮ್ಮೊಮ್ಮೆ ಮುಳುಗಿಸುವ ಭೋರ್ಗರೆವ ಸಾಗರವೂ ಆಗುತ್ತದೆ.ಅವಳ ಪ್ರೀತಿಯ ಅಗಾಧತೆಯ ಅರಿವೂ ಕವಿಗಿದೆ. ಅಂಥ ಸಂದರ್ಭದಲ್ಲಿ ಆಕೆಯ ಪ್ರೀತಿಯನ್ನು
ನಿನ್ನಂತಾಕಿ ಅದು ನನಗ
ಹ್ಯಾಂಗ ಸಿಕ್ಕಿ
ನಾ ಮಾತ್ರಬರದಾಗ ಹುಟ್ಟಿದ ಹಕ್ಕಿ
ನಿನಗರ ಅದೆಂಥ ಪ್ರಿತಿ
ಎದೆಯಾಗ ಹರದೈತಿ ಉಕ್ಕಿ
ಎಂದು ಅವಳ ಪ್ರೀತಿ ಯನ್ನು ಉಕ್ಕಿ ಹರಿಯುವ ನದಿಗೆ ಹೋಲಿಸುತ್ತಾರೆ.ನಿಜ ಪ್ರೀತಿಯೇ ಹಾಗೆ.ಅದನ್ನುಬತಡೆವವರು ಯಾರೂ ಇಲ್ಲ.ಆಗುವ ಮಳೆಹೆ ಓಘ ಬಂದರೆ ಅದನ್ನು ತಡೆಯುವ ಶಕ್ತಿ ಯಾವದು? ಎದೆಯ ಹೊಳೆಯಲ್ಲಿಬುಕ್ಕಿ ಬಹ ಪ್ರವಾಹವನ್ನು ಯಾರೂಬತಡೆಯಲಾರರು ಎಂಬ ವಿಶ್ವಾಸ ಕವಿಯದು.
ಪ್ರೀತಿ ಎಲ್ಲ ಕಾಲಕ್ಕೂ ಖುಷಿಯನ್ನಷ್ಟೇ ಕೊಡದು. ಅಗಲಿಕೆಯಿಂದ ನೋವುಂಟು ಮಾಡುತ್ತದೆ. ಪ್ರೀತಿಸಿದವರು ನೋವು ಅನುಭವಿಸಲೂ ಸಿದ್ದರಿರಲೇಬೇಕು.ಅಂತೆಯೆ ಶಾಯಿರಿ ಕಾವ್ಯ ಇಂಥ ನೋವಿನ ಅಲೆಗಳಿಂದ ತುಂಬಿರುವುದೆ ಹೆಚ್ಚು .. "ಆಕಿ ಇಲ್ಲದ ನೆನಪು ನನ್ನ ಮೆತ್ತಗ ಮಾಡೈತಿ" ಎನ್ನುವ ಕವಿ
ಆಕಿ ನೆನಪಾದ್ರ ಆಕಾಶ
ಎದಿಮ್ಯಾಗ ಬಿದ್ದಂಗಾಕೈತಿ
ಆಲಿ ನೆನಪನ್ಯಾಗ
ನಶೆಖಾನಾದಾಗ ಇರುವಂಗಾಕ್ಜೈತಿ
ಆಲಿ ಇಲ್ಲದ ನೆನಪನ್ಯಾಗ
ನಾ ಮೆತ್ತಗಾದಂಗಾಗತೈತಿ
ಮೆತ್ತಗಾಗು ಎಂಬ ನುಡಿಗಟ್ಟಿಗೆ ಉತ್ತರ ಕರ್ನಾಟಕ ಕನ್ನಡ ಆಡು ನುಡಿಯಲ್ಲಿ "ಬಹಳ ದುಃಖದಿಂದ ಬಳಲು "ಎಂಬ ಅರ್ಥವಿದೆ. ಹೀಗೆ ಬಳಲುವ ಕವಿಯ ಹತ್ತಾರು ಝಲಕುಗಳು ಸಂಕಲನದುದ್ದ ತುಂಬಿವೆ.ಆಡುಮಾತಿನ ಬನಿ,ಗ್ರಾಮ್ಯ ಭಾಷೆಯ ಧ್ವನ್ಯಾತ್ಮಕತೆಯನ್ನು ಮರುಳಸಿದ್ದಪ್ಪ ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ. ಆಕಿ ಬರಲಿ ಬಾರದಿರಲಿ," ಈ ಜೀವ ಇರುತನ ಕಣ್ಣಾಗ ಕಣ್ಣಿಟ್ಟು ಕಾಯುವ " ಪ್ರೀತಿ ಅವನದು." ಗೋರಿ ದಾರಿ ಕರೆದರೂ" ಅವನ ಪ್ರೀತಿ ಕಡಿಮೆಯಾಗಲಾರದು ಇದೇ ಪ್ರೀತಿಯ ಹುಚ್ಚು ಅಲ್ಲವೇ?. ಅವಳಪಡೆಯುವದು ಇಹದ ಈ ಲೋಕದಲ್ಲಿ ಸಾಧ್ಯವಾಗದಿದ್ದರೆ ಕಡೆಗೆ ಆ ಪರಲೋಕಕ್ಕೆ ಹೋಗಿಯಾದರೂ ಅವಳ ಕೈ ಹಿಡಿಯುತ್ತೇನೆ ಎನ್ನುವ ಸಾಲುಗಳಿಗೆ ಏನು ವ್ಯಾಖ್ಯಾನ ಬರೆಯುವದು? ಮೌನದಲಿ ಓದಿ ಅನುಭವಿಸಬೇಕಷ್ಟೇ.
ನನ್ನ ಎದಿ ತುಂಬ
ನಿನ್ನ ಹೆಸರ ಬರೆಸಿನಿ
ಈ ಜೀವ ಇರುತನಾ ನಿನ್ನ ನಿನ್ನ ಉಸಿರಾಗಿರ್ತಿನಿ
ಹೆಸರು ಉಸಿರು ಒಂದಾದರ
ಸ್ವರ್ಗದಾಗ ನಿನ್ನ ಕೈ ಹಿಡಿತೆನಿ
ಹೀಗೆ ಪ್ರತಿ ಸಾಲಲ್ಲೂ ತಮ್ಮ ಎದೆಯ ಪ್ರೀತಿ ಹಂಬಲವನ್ಬೇ ಶಾಯಿರಿಯಾಗಿಸಿದ ಕವಿ ಮರುಳಸಿದ್ದಪ್ಪನವರ ಈ ಸಂಕಲನದ ತುಂಬ ಮನದ ಮಾತುಗಳೇ ಇವೆ.ಪ್ರೀತಿಯಾಚೆಗಿನ ಲೋಕ ಇಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಆದರೂ ಜಗತ್ತಿನಲ್ಲಿ ದ್ವೇಷಕ್ಜೆ ಎಡಯಿಲ್ಲ ಇರುವ ಪ್ರೀತಿಗೆ ಮಾತ್ರ ಎಂಬ ಸಾಮಾಜಿಕ ಕಾಳಜಿಯನ್ನೂ ಕವಿ ತೋರಿಸುತ್ತಾರೆ.
ಎದಿ ತುಂಬಾ ನೋವಿದ್ದರೂ
ಬಾಯಿ ತುಂಬಾ ನಗಬೇಕು
ಹೃದಯದ ಬಡಿತಾ ನಿಂತು ಹೋದರೂ
ನಗತಾ ಹೋಗಬೇಕು
ಇರುವ ಮೂರು ದಿನದ ಬಾಳಿನಾಗ
ಹಗೆ ಬಿಟ್ಟ ಬಿಡಬೇಕು
ನಗೆಯೊಂದೆ ಜಗತ್ತಿನ ಎಲ್ಲನೋವಿಗೆ ಉತ್ತರ ಎನ್ನುವ ಕವಿ " ನಕ್ಜಾಂವ ಗೆದ್ದಾಂವ " ಎಂಬ ಕವಿವಾಣಿಗೆ ಜೈ ಎನ್ನುತ್ತಾರೆ. ಕೆಲವು ಹಿಂದಿನ ಕವಿಗಳ ಸಾಲಿನ ಪ್ರಭಾವದಿಂದ ತಮ್ಮ ಶಾಯಿರಿ ಬರೆಯುತ್ತಾರೆ. ಜಿನದತ್ತ ದೇಸಾಯರ ಹಚ್ಚುದಾದರ ದೀಪ ಹಚ್ಚು ಬೆಂಕಿ ಹಚ್ಚಬ್ಯಾಡ" ಎಂಬ ಚುಟುಕಿನ ಪ್ರಭಾವ
ಇವರ
ಹಚ್ಚುವ ಮನಸಿದ್ರೂ
ಪ್ರೀತಿ ಹಂಚುವ ದೀಪಾ ಹಚ್ಚು
ಬ್ಯಾರೆರ ಎದಿಯಾಗ ಬೆಂಕಿ
ಮಾತ್ರ ಹಚ್ಚಬ್ಯಾಡ
ಎಂಬ ಚುಟುಕಿನ ಮೇಲಾಗಿದೆ. ಅಲ್ಲಿನ ಸಾಲು ಇಲ್ಲಿನ ಸಾಲು ಭಾವ ಭಾ಼ಷೆ ಒಂದೇ ಆಗಿವೆ.ನಿಸರ್ಗದ ಕೆಲವು ವಿಸ್ತರದ ಸತ್ಯಗಳನ್ನು ಹೇಳುವ ಕವಿ " ಆಕಾಶಕ ಕಣ್ಣೀರ ಬಂದ್ರ ಯಾರಿಗೂ ತಡಿಯಾಕಾಂಗಿಲ್ಲ,ಸಮುದ್ರಕ್ಕ ತೆರಿ ಬಂದ್ರ ತಡಿಯಾಕಾಗಂಗಿಲ್ಲ.ಭೂಮಿಗಿ ನಿದ್ದಿ ಬಂದ್ರಾದಕ ಜಾಗಾನ ಇಲ್ಲ" ಎನ್ನುವ ಸಾಲುಗಳಲ್ಲಿ ಅದನ್ನು ಚಿತ್ರಿಸುತ್ತಾರೆ. ವಿಷಯ ವಸ್ತು ಒಂದೆ ಆದಾಗ , ಹೇಳುವ ಶೈಲಿ ಭಾಷೆ ,ಒಂದೇ ಆದಾಗ ಕೆಲವು ಸಾಲು ಪುನರುಕ್ತಆದಂತೆ ಆಗುವದು ಸಹಜ.ಅಂಥ ಭಾವನೆ ಒಂದೆರಡು ಕಡೆ ಬಾರದಿರದು.
ಪ್ರೀತಿ ಅದರ ಸಾವಿರ ಸಾವಿರ ಭಾವಗಳನ್ನು ಎದಿಯಲ್ಲಿ ತುಂಬಿಕೊಂಡ ಈ ಪ್ರೀತಿಯ ರಾಯಭಾರಿ ಕವಿ ಅದನ್ನೆಲ್ಲ "ಎದೆಯ ಮಾತಾ" ಗಿ ಹರಿಸಿದ್ದಾರೆ.ನಮ್ಮೆದೆಗೂ ಆ ಮಾತು ತಾಗಿ ನಮ್ಮೆದೆಗಳೂ ದ್ರವಿಸುತ್ತವೆ.ಅವರ ಈ ಪ್ರೀತಿಯ ಯಾಣ ಮುಂದುವರೆಯಲಿ ಎಂಬ ಬಯಕೆ, ಹಾರೈಕೆ ನನ್ನದೂ ಆಗಿದೆ.
-ಡಾ. ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ, ಸವದತ್ತಿ