ಎದೆಯಾಳದ ಸ್ಪಂದನ

ಎದೆಯಾಳದ ಸ್ಪಂದನ

   40 ವರ್ಷಗಳ ಹಿಂದೆ ಅಂಚೆ ಇಲಾಖೆಯಲ್ಲಿ ನೌಕರಿ ಸಿಕ್ಕಿದ್ದಾಗ ಮೈಸೂರಿನಲ್ಲಿ ಮೂರು ತಿಂಗಳು ತರಬೇತಿ ಪಡೆಯುತ್ತಿದ್ದ ಅವಧಿಯಲ್ಲಿ ತರಬೇತಿ ಗೀತೆಯೆಂದು ನಮಗೆ ಹೇಳಿಕೊಡುತ್ತಿದ್ದ ಗೀತೆ, "ವತನ್ ಕಿ ರಾಹ ಮೇ ವತನ್ ಕಿ ನೌಜವಾನ್ ಶಹೀದ್ ಹೋ" ಎಂಬುದು. ಇದು ಭಗತ್ ಸಿಂಗನ ಕುರಿತಾದ 'ಶಹೀದ್' ಎಂಬ ಹಿಂದಿ ಚಲನಚಿತ್ರದಲ್ಲಿ ಭಗತಸಿಂಗನ ಬಲಿದಾನದ ನಂತರದಲ್ಲಿ ನಡೆದ ಶವಯಾತ್ರೆಯ ದೃಷ್ಯದ ಹಿನ್ನೆಲೆಯಾಗಿ ಮಹಮದ್ ರಫಿ ಮತ್ತು ಮಸ್ತಾನ್ ಹಾಡಿದ್ದ ಹಾಡು. ಪದ ಪದಗಳಲ್ಲಿ ದೇಶಭಕ್ತಿ ಚಿಮ್ಮಿಸುವ ಈ ಹಾಡು ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ್ದು, ಅದನ್ನು ಇಂದಿಗೂ ಗುನುಗುನಿಸುತ್ತಿರುತ್ತೇನೆ. ಇದರ ಸ್ಫೂರ್ತಿಯಿಂದ ರಚಿಸಿರುವ ಹಾಡು ಇದು. ಇದು ಹಿಂದಿ ಗೀತೆಯ ಪದಶಃ ಅನುವಾದವಲ್ಲ.

 

                 ಭಗತಸಿಂಹನ ನೆನಪು

ಭರತಮಾತೆಯ ವರಸುಪುತ್ರರೇ ಜೀವ ಜ್ಯೋತಿಯನುರಿಸಿರಿ |

ಕಾಳ ಕತ್ತಲೆ ದೂರ ಸರಿಸಲು ಜೀವ ಒತ್ತೆಯನಿರಿಸಿರಿ ||ಪ||

 

ನಿನ್ನ ಬದುಕಿನ ತೈಲ ಸುರಿದಿಹೆ ಹಣತೆ ನಿರತವು ಉರಿಯಲು |

ರುಧಿರವಾಗಿದೆ ಜೀವಸೆಲೆಯು ನಾಡತೋಟಕೆ ಭದ್ರ ಬಲವು |

ನಿನ್ನ ಬಾಳಿನ ರಸವ ಹೀರಿ ಅರಳಿ ನಕ್ಕಿದೆ ಕುಸುಮವು || 

 

ಮೈಯ ಕೊಡವಿ ಮೇಲಕೆದ್ದು ವೈರಿಗಳ ಬಡಿದಟ್ಟಿಹೆ |

ಕರಗಳೆ ಕರವಾಳವಾಗಿ ಎದ್ದು ತೊಡೆಯನು ತಟ್ಟಿಹೆ |

ನಾಡಿನೊಳಿತಿಗೆ ಮಿಡಿದು ಮಡಿದಿಹೆ ಧನ್ಯ ನೀ ಅನನ್ಯನೆ ||

 

ಠೇಂಕಾರದ ಹೂಂಕಾರಕೆ ಗಿರಿಯೆ ಗಡಗಡ ನಡುಗಿದೆ |

ಹರಿದ ರಕುತವೆ ಬಣ್ಣದೋಕಳಿ ಚಿತ್ರ ಬಿಡಿಸಿದೆ ನಭದಲಿ |

ನೆಲವದಲ್ಲವು ಅಮರನಾಗು ನಿನ್ನ ನಾಡದು ಮೇಲಿದೆ ||

 

ಪ್ರಾಣಕಿಂತಲು ನಾಡಮಾನವೆ ಹಿರಿದು ಎಂದಿಹ ಧೀರನು |

ತೃಪ್ತ ಭಾವದಿ ನಗೆಯ ಸೂಸುತ ಹೆಜ್ಜೆ ಹಾಕಿಹ ಶೂರನು |

ಕೋಟಿ ತರುಣರ ಎದೆಯ ತಟ್ಟಲಿ ನಿನ್ನದೀ ಬಲಿದಾನವು ||

 

ಧೀರ ಭೂಮಿ ವೀರ ಭೂಮಿ ಪುಣ್ಯ ಭೂಮಿ ಭಾರತ |

ತರುಣರೆಲ್ಲರು ಭಗತರಾಗಲು ದೇಶ ಮೆರೆವುದು ಶಾಶ್ವತ |

ದುಷ್ಟ ಶಕ್ತಿಯ ಮೆಟ್ಟಿ ನಿಲುವ ಶಕ್ತಿ ಬರುವುದು ನಿಶ್ಚಿತ ||

 

ಮೂಲ ಗೀತೆ: ವತನ್ ಕೀ ರಾಹ್ ಮೇ. .

ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ|

ಪುಕಾರ್ ತೀ ಹೈ ಯಹ ಜಮೀನ್ -ಆಸ್ಮಾ(ನ್) ಶಹೀದ್ ಹೋ|| ||ಪ||

 

ಶಹೀದ್ ತೇರೀ ಮೌತ್ ಹಿ ತೇರೆ ವತನ್ ಕೀ ಜಿಂದಗೀ

ತೇರೇ ಲಹೂ ಸೆ ಜಾಗ್ ಉಠೇಗಿ ಇಸ್ ಚಮನ್ ಕೀ ಜಿಂದಗೀ

ಖಿಲೇಂಗೇ ಫೂಲ್ ಉಸ್ ಜಗಹ್ ಪೆ ತು ಜಹಾನ್ ಶಹೀದ್ ಹೋ||  . .ವತನ್ ಕಿ. .

 

ಗುಲಾಮ್ ಉಠ್ ವತನ್ ಕೆ ದುಷ್ಮನೋಂಸೆ ಇಂತಖಾಮ್ ಲೇ

ಇನ್ ಅಪ್ನೆ ದೋನೋ ಬಾಜೂವೋಂ ಸೆ ಖಂಜರೋಂಕಾ ಕಾಮ್ ಲೇ

ಚಮನ್ ಕೇ ವಾಸ್ತೆ ಚಮನ್ ಕೆ ಬಾಗ್‌ಬಾನ್ ಶಹೀದ್ ಹೋ|| . .ವತನ್ ಕಿ. .

 

ಪಹಾಡ್ ತಕ್ ಭೀ ಕಾಂಪನೇ ಲಗೇ ತೇರೇ ಜುನೂನ್ ಸೆ

ತೂ ಆಸ್ಮಾ(ನ್) ಪೆ ಇಂಖಿಲಾಬ್ ಲಿಖ್ ದೆ ಅಪ್ನೆ ಖೂನ್ ಸೆ

ಜಮೀನ್ ನಹೀ ತೇರಾ ವತನ್ ಹೈ ಆಸ್ಮಾನ್ ಶಹೀದ್ ಹೋ||  . .ವತನ್ ಕಿ. .

 

ವತನ್ ಕಿ ಲಾಜ್ ಜಿಸ್ ಕೋ ಥಿ ಅಜೀಝ್ ಅಪ್ನಿ ಜಾನ್ ಸೇ

ವಹ್ ನೌ ಜವಾನ್ ಜಾ ರಹಾ ಹೈ ಆಜ್ ಕಿತ್ನೀ ಶಾನ್ ಸೇ

ಇಸ್ ಏಕ್ ಜವಾನ್ ಕೀ ಖಾಕ್ ಪರ್ ಹರ್ ಏಕ್ ಜವಾನ್ ಶಹೀದ್ ಹೋ|| . .ವತನ್ ಕಿ. .

 

ಹೈ ಕೌನ್ ಖುಷ್‌ನಸೀಬ್ ಮಾ ಕಿ ಜಿಸ್ ಕಾ ಯಹ್ ಚಿರಾಗ್ ಹೈ

ವೊ ಖುಷ್‌ನಸೀಬ್ ಹೈ ಕಹಾಂ ಯಹ್ ಜಿಸ್ಕೆ ಸರ್ ಕಾ ತಾಜ್ ಹೈ

ಅಮರ್ ವೊ ದೇಶ್ ಕ್ಯೋಂ ನ ಹೋ ಕಿ ತು ಜಹಾನ್ ಶಹೀದ್ ಹೋ|| . .ವತನ್ ಕಿ. .

 

ಸಾಂದರ್ಭಿಕ ಮಾಹಿತಿಗಾಗಿ:

         

    ಭಗತ್ ಸಿಂಗ್, ರಾಜಗುರು, ಸುಖದೇವರನ್ನು ಗಲ್ಲಿಗೇರಿಸಿದ ಲಾಹೋರಿನ ಐತಿಹಾಸಿಕ ಜೈಲನ್ನು ಪಾಕಿಸ್ತಾನ 1961ರಲ್ಲಿ ಕೆಡವಿ ಹಾಕಿತು. ಲಾಹೋರ್ ಜೈಲಿನ ಸಮೀಪದ ವೃತ್ತಕ್ಕೆ 1947ರವರೆಗೂ ಭಗತ್ ಸಿಂಗನ ಹೆಸರಿತ್ತು. ಪಾಕಿಸ್ತಾನದ ಉದಯದ ನಂತರ ಭಗತ್ ಸಿಂಗ್ ಮುಸ್ಲಿಮನಲ್ಲವೆಂಬ ಕಾರಣಕ್ಕೆ ಆ ಹೆಸರನ್ನು ಶಾದ್ ಮಾನ್ ಚೌಕವೆಂದು ಬದಲಿಸಲಾಯಿತು. ಭಗತ್ ಸಿಂಗ್ ಮತ್ತು ಅವನ ಸಹಚರರನ್ನು ಕದ್ದು ಮುಚ್ಚಿ ಗಲ್ಲಿಗೇರಿಸಿದ ನಂತರ ಬ್ರಿಟಿಷರು ಅವರ ದೇಹಗಳನ್ನು ಈಗ ಭಾರತದ ಭಾಗವಾಗಿರುವ ಫಿರೋಜಪುರ ಜಿಲ್ಲೆಯ ಗಾಂದಾ ಸಿಂಗಾವಾಲಾ ಎಂಬ ಗ್ರಾಮದಲ್ಲಿ ಸುಟ್ಟು ಹಾಕಿದ್ದರು. ಲಾಹೋರಿನ ಜನರು ಧಾವಿಸಿ ಅರೆಸುಟ್ಟ ದೇಹಗಳ ಅವಶೇಷಗಳು, ಬೂದಿಯನ್ನು ಲಾಹೋರಿಗೆ ತಂದು ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡಿದ್ದು ಇತಿಹಾಸ. ಬ್ರಿಟಿಷರ ದಬ್ಬಾಳಿಕೆಯ ನಡುವೆಯೂ, ಆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದವರ ಸಂಖ್ಯೆ ಐವತ್ತು ಸಾವಿರವಾಗಿತ್ತೆಂದರೆ ಅವನ ಕುರಿತು ಅಲ್ಲಿನವರು ಎಂತಹ ಭಾವನೆ ಹೊಂದಿದ್ದರೆಂದು ಸೂಚಿಸುತ್ತದೆ. 26-03-1931ರಂದು ಹುತಾತ್ಮರ ಗೌರವಾರ್ಥ ಲಾಹೋರ್ ಬಂದ್ ಆಚರಿಸಲಾಗಿತ್ತು. ಇತ್ತೀಚೆಗೆ ಭಗತ್ ಸಿಂಗನ 105ನೆಯ ಹುಟ್ಟುಹಬ್ಬದ ನೆನಪಿನಲ್ಲಿ ಶಾದ್ ಮಾನ್ ಚೌಕಕ್ಕೆ ಭಗತ್ ಸಿಂಗನ ಹೆಸರಿಡಲು ತೀರ್ಮಾನಿಸಲಾಗಿತ್ತು. ಭಗತ್ ಸಿಂಗ್ ಮುಸ್ಲಿಮನಲ್ಲವಾದ್ದರಿಂದ ಅವನ ಹೆಸರನ್ನು ಇಡಬಾರದೆಂದು ಕಟ್ಟರ್ ಮತೀಯವಾದಿ ಸಂಘಟನೆ ಜಮಾ ಉದ್ ದವಾ ನೀಡಿದ ಎಚ್ಚರಿಕೆಗೆ ಮಣಿದ ಪಾಕ್ ಸರ್ಕಾರ ತೀರ್ಮಾನ ಕೈಬಿಟ್ಟಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಇತಿಹಾಸದ ಅವಿಭಾಜ್ಯ ಅಂಗ. ಅವನಂತಹವರ ಬಲಿದಾನವಾಗಿರದಿದ್ದರೆ, ಜಿನ್ನಾನಂತಹವರು ಪಾಕಿಸ್ತಾನ ರಚನೆಗೆ ಒತ್ತಾಯಿಸುವಂತಹ ಸಂದರ್ಭ ಉತ್ಪನ್ನವಾಗುತ್ತಿತ್ತೇ? ಇವರಂತಹ ತರುಣರ ಬಲಿದಾನದ ಲಾಭ ಪಡೆದು ಪಾಕಿಸ್ತಾನದ ರಚನೆಗೆ ಒತ್ತಡ ಬಂದಾಗ ಗಾಂಧೀಜಿಯವರಂತಹ ನಾಯಕಮಣಿಗಳು ಮಣಿದುಬಿಟ್ಟರು. ದುರಂತಕರ ವಿಭಜನೆಯಾಯಿತು. ಅದರ ದುಶ್ಫಲವನ್ನು ನಾವು ಇಂದೂ ಉಣ್ಣುತ್ತಿದ್ದೇವೆ. ಯಾವುದೋ ಹೊರದೇಶದ ಸರ್ವಾಧಿಕಾರಿ ಗಡ್ಡಾಫಿಯ ಹೆಸರನ್ನು ಅವನು ಮುಸ್ಲಿಮನೆಂಬ ಕಾರಣಕ್ಕೆ ಸ್ಟೇಡಿಯಮ್ಮಿಗೆ ಇಡುತ್ತಾರೆ. ಆದರೆ ದೇಶದವನೇ ಆದ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನಿಗೆ ಅವನು ಮುಸ್ಲಿಮನಲ್ಲವೆಂಬ ಕಾರಣಕ್ಕೆ ಅಗೌರವಿಸುತ್ತಾರೆ. ಮಾನವತೆಗೆ, ಇತಿಹಾಸಕ್ಕೆ ಅಪಚಾರ ಮಾಡುವವರು, ಜಾತ್ಯಾತೀತರು ಎಂದು ಕರೆದುಕೊಂಡು ಆ ಪದಕ್ಕೆ ಅವಮಾನ ಮಾಡುವವರು ನಮ್ಮಲ್ಲೂ ಇದ್ದಾರೆ. ಕಟು ವಾಸ್ತವ ಇತಿಹಾಸದ ಸಂಗತಿಗಳ ಕುರಿತು ಮಾತನಾಡಿದರೆ ಕೇಸರೀಕರಣವೆಂಬ ಗುಮ್ಮ ತೋರಿಸಿ, ನೈಜ ಇತಿಹಾಸದ ಮೇಲೆ ಪೊರೆ ಮುಸುಕಿಸುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ. 

-ಕ.ವೆಂ.ನಾಗರಾಜ್.

 

ಚಿತ್ರಗಳು:1.ಭಗತಸಿಂಗನ  ನೆನಪಿನ ಅಂಚೆ ಚೀಟಿ, 2. ಭಗತಸಿಂಗನ ಮರಣ ಪ್ರಮಾಣಪತ್ರ - ಎರಡನ್ನೂ ಅಂತರ್ಜಾಲದಿಂದ ಹೆಕ್ಕಲಾಗಿದೆ.

 

Comments

Submitted by Prakash Narasimhaiya Wed, 02/06/2013 - 10:49

In reply to by kavinagaraj

ಆತ್ಮೀಯ ನಾಗರಾಜರೆ, ಇಂದು ದೇಶ ಭಕ್ತಿ ಮತ್ತು ದೇಶ ಪ್ರೇಮ ಎರಡೂ ಕಾಣದೆ ಸ್ವಾರ್ಥವೇ ಕಾಣುತ್ತಿರುವ ಸಂದರ್ಭದಲ್ಲಿ ದೇಶದ ಮುಂದಿನ ದಿನಗಳನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಆದರೂ, ಒಂದು ಆಶಾಕಿರಣ ಇನ್ನು ಜೀವಂತವಾಗಿದೆ. ಯುಗಪುರುಷ ಹುಟ್ಟಿ ಬಂದು ಧರ್ಮ ಸಂಸ್ಥಾಪನೆ ಮಾಡಬಹುದೆಂಬ ನಂಬುಗೆ ಇದೆ. ಇಂತಹ ನಂಬುಗೆಯನ್ನು ಹೆಚ್ಚು ಮಾಡಲು ಭಗತ ಸಿಂಹನ ಲೇಖನಗಳು ಸಹಕಾರಿ. ಧನ್ಯವಾದಗಳು.
Submitted by sathishnasa Wed, 02/06/2013 - 11:14

"ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನಿಗೆ ಅವನು ಮುಸ್ಲಿಮನಲ್ಲವೆಂಬ ಕಾರಣಕ್ಕೆ ಅಗೌರವಿಸುತ್ತಾರೆ. ಮಾನವತೆಗೆ, ಇತಿಹಾಸಕ್ಕೆ ಅಪಚಾರ ಮಾಡುವವರು, ಜಾತ್ಯಾತೀತರು ಎಂದು ಕರೆದುಕೊಂಡು ಆ ಪದಕ್ಕೆ ಅವಮಾನ ಮಾಡುವವರು ನಮ್ಮಲ್ಲೂ ಇದ್ದಾರೆ. ಕಟು ವಾಸ್ತವ ಇತಿಹಾಸದ ಸಂಗತಿಗಳ ಕುರಿತು ಮಾತನಾಡಿದರೆ ಕೇಸರೀಕರಣವೆಂಬ ಗುಮ್ಮ ತೋರಿಸಿ, ನೈಜ ಇತಿಹಾಸದ ಮೇಲೆ ಪೊರೆ ಮುಸುಕಿಸುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ." ಹಾಗೂ ಇದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ ಎನ್ನಿಸುತ್ತೆ. ಪ್ರಕಾಶ್ ರವರು ಅಂದಂತೆ ಸರಿಹೋಗಬಹುದು ಎನ್ನುವ ಆಶಾ ಕಿರಣದೊಂದಿಗೆ ಇರಬೇಕು ಅಷ್ಟೆ. ಒಳ್ಳಯ ಮಾಹಿತಿಗೆ ಧನ್ಯವಾದಗಳು ನಾಗರಾಜ್ ರವರೇ .....ಸತೀಶ್
Submitted by venkatb83 Fri, 02/08/2013 - 18:55

"ಮಾನವತೆಗೆ, ಇತಿಹಾಸಕ್ಕೆ ಅಪಚಾರ ಮಾಡುವವರು, ಜಾತ್ಯಾತೀತರು ಎಂದು ಕರೆದುಕೊಂಡು ಆ ಪದಕ್ಕೆ ಅವಮಾನ ಮಾಡುವವರು ನಮ್ಮಲ್ಲೂ ಇದ್ದಾರೆ. ಕಟು ವಾಸ್ತವ ಇತಿಹಾಸದ ಸಂಗತಿಗಳ ಕುರಿತು ಮಾತನಾಡಿದರೆ ಕೇಸರೀಕರಣವೆಂಬ ಗುಮ್ಮ ತೋರಿಸಿ, ನೈಜ ಇತಿಹಾಸದ ಮೇಲೆ ಪೊರೆ ಮುಸುಕಿಸುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ. " >>>ಸಕಾಲಿಕ ಯಾವತ್ತೂ ಸಲ್ಲುವ ಬರಹ-ನಾ ಭಗತ್ ಸಿಂಗ್ ಕುರಿತು ಬಂಡ ಚಿತ್ರಗಳ ಬಗ್ಗೆ ಬರೆದ ಸಮಯದಲ್ಲಿ ಬಂದ ನಿಮ್ಮೀ ಬರಹ ಇಷ್ಟ ಆಯ್ತು.. ತನು ಮನ ಧನ ಧಾರೆ ಎರೆದವರಿಗೆ ಇಂದಿನ ಈ ಕೃತಘ್ನ ಜನರನ್ನು ಕಂಡಾಗ ಮೂಡುತ್ತಿದ್ದ ಭಾವನೆಗಳು.... ಪ್ಚ್..! ಶುಭವಾಗಲಿ.. \।